ಕೊಡಗು; ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತನೆ, ಎಚ್ಚರಿಕೆ
ಮಡಿಕೇರಿ, ಜೂನ್ 04: ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಜೊತೆ ಕೆಟ್ಟದಾಗಿ ವರ್ತಿಸಿದರೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕೆ. ರಾಮರಾಜನ್ ಮಾತನಾಡಿ, "ಜಿಲ್ಲೆಯ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜೊತೆಗೆ ಸೌಜನ್ಯ, ವಿನಯದಿಂದ ನಡೆದುಕೊಳ್ಳಬೇಕು, ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದರೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಹಲವಾರು ವಿಚಾರಗಳ ಕುರಿತು ಚರ್ಚೆ; ಕೆ. ರಾಮರಾಜನ್, "ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತಾಗಬೇಕು" ಎಂಂದು ಮನವಿ ಮಾಡಿದರು.
"ಪೊಲೀಸ್ ಇಲಾಖೆಯಿಂದ ಮುಂದಿನ 10 ದಿನದೊಳಗೆ ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ಪ್ರವಾಸಿ ಫಲಕ ಅಳವಡಿಸಲಾಗುವುದು. ಹಾಗೆಯೇ ಮುಖ್ಯ ಹೆದ್ದಾರಿಗಳಲ್ಲಿಯೂ ಸಹ ಸೂಚನಾ ಫಲಕ ಅಳವಡಿಸಲಾಗುವುದು. ಕೊಡಗು ಜಿಲ್ಲೆಗೆ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಂತವರನ್ನು ಯಾವ ರೀತಿ ಕಾಣಬೇಕು ಎಂಬುದು ತಿಳಿದಿರಬೇಕು. ಅದನ್ನು ಬಿಟ್ಟು ಪ್ರವಾಸಿಗರ ಜೊತೆ ಕೆಟ್ಟದಾಗಿ ವರ್ತಿಸಿದರೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿದೆ" ಎಂದರು.

ವಾಹನಗಳ ಕಿತ್ತಾಟ; ಹಳದಿ ಮತ್ತು ಬಿಳಿ ಬಣ್ಣ ಫಲಕದ ವಾಹನಗಳ ನಡುವಿನ ಕಿತ್ತಾಟ ನಿಲ್ಲಬೇಕು. ಕೊಡಗು ಜಿಲ್ಲೆಗೆ ಕೆಟ್ಟ ಹೆಸರು ಬರದಂತೆ ನಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ಹೋಮ್ ಸ್ಟೇಗಳಿಗೆ ಕಾಲಮಿತಿಯಲ್ಲಿ ಎನ್‍ಒಸಿ ನೀಡಲಾಗುತ್ತಿದೆ. ಗಾಂಜಾ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಜೊತೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದರು.
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮಾತನಾಡಿ, "ಜಿಲ್ಲೆಯಲ್ಲಿ ಇತ್ತೀಚೆಗೆ ಅಬ್ಬಿಫಾಲ್ಸ್ ಬಳಿ ಪ್ರವಾಸಿಗರ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು" ಎಂದರು.
"ಅಬ್ಬಿ ಜಲಪಾತದ ಬಳಿಯ ವಾಹನ ನಿಲುಗಡೆಗೂ, ಬಸ್ ನಿಲುಗಡೆಗೂ ಒಂದೂವರೆ ಕಿ. ಮೀ. ದೂರವಿದೆ. ಪದೇ ಪದೇ ವಾಹನ ನಿಲುಗಡೆ ವಿಷಯದಲ್ಲಿ ಕದನ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೇಳಿದರು. ಡೀನ್ ಬೋಪಣ್ಣ ಅವರು ಮಾತನಾಡಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಎಂ. ಬಿ. ದೇವಯ್ಯ ಮಾತನಾಡಿ, "ಅಬ್ಬಿಜಲಪಾತಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು" ಎಂದು ಸಲಹೆ ಮಾಡಿದರು. ಜೊತೆಗೆ ಖಾಸಗಿ ವಾಹನಗಳಿಗೆ ವೇಗದ ಮಿತಿ ಅಳವಡಿಸಬೇಕು ಎಂದರು.
ಕರ್ನಲ್ ಒಬ್ಬರು ಮಾತನಾಡಿ, "ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಇತ್ತೀಚೆಗೆ ಪ್ರವಾಸಿ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದೆ. ಆ ನಿಟ್ಟಿನಲ್ಲಿ ವಾಹನ ಪಾರ್ಕಿಂಗ್ ದರವನ್ನು ಹೆಚ್ಚಿಸಬೇಕು" ಎಂದು ಸಲಹೆ ಮಾಡಿದರು.
ಸೋಮವಾರಪೇಟೆಯ ಮಲ್ಲೇಶ್ ಮಾತನಾಡಿ, "ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ಎಂದರೆ ಬರೀ ರಾಜಾಸೀಟು, ಅಬ್ಬಿ ಜಲಪಾತ, ಮಾಂದಲ್ ಪಟ್ಟಿ ಮಾತ್ರವಲ್ಲ, ಸೋಮವಾರಪೇಟೆ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳು ಇದ್ದು, ಅವುಗಳನ್ನು ಸಹ ಅಭಿವೃದ್ಧಿ ಪಡಿಸಬೇಕಿದೆ" ಎಂದು ಮನವಿ ಮಾಡಿದರು.
ಮೊಂತಿ ಗಣೇಶ್ ಮಾತನಾಡಿ, "ಪ್ರವಾಸಿ ತಾಣಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದಲೇ ಎಲ್ಲಾ ರೀತಿಯ ಮೂಲಸೌಲಭ್ಯ ಕಲ್ಪಿಸುವುದು, ಜೊತೆಗೆ ಹೊಣೆಗಾರಿಕೆ ನಿರ್ವಹಿಸಬೇಕು" ಎಂದು ಸಲಹೆ ಕೊಟ್ಟರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, "ಅಬ್ಬಿ ಜಲಪಾತದಲ್ಲಿ 4 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ 16 ರಿಂದ 18 ಸಾವಿರ ರೂ. ಶುಲ್ಕ ಸಂಗ್ರಹವಾಗುತ್ತಿದೆ" ಎಂದು ಮಾಹಿತಿ ನೀಡಿದರು.












Click it and Unblock the Notifications