₹10 ಕೋಟಿ ವೆಚ್ಚದಲ್ಲಿ ಚಿಕ್ಕಕೆರೆ ಅಭಿವೃದ್ಧಿ: ಪ್ರವಾಸಿ ತಾಣವಾಗುತ್ತಿರುವ ಹೊಸಹೊಳಲು
ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಚಿಕ್ಕಕೆರೆಯನ್ನು ಅಭಿವೃದ್ಧಿಗೊಳಿಸುವ ಮೂಲಕ ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ
ಮಂಡ್ಯ, ಫೆಬ್ರವರಿ 10: ಪ್ರವಾಸಿ ತಾಣ, ದೈವ ಸ್ಥಳ ಹೊಯ್ಸಳ ಶಿಲ್ಪಕಲೆಯ ವಾಸ್ತುವೈಭವದ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇಗುಲವಿರುವ ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಚಿಕ್ಕಕೆರೆಯನ್ನು ಅಭಿವೃದ್ಧಿಗೊಳಿಸುವ ಮೂಲಕ ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಚಿಕ್ಕಕೆರೆ ಅಭಿವೃದ್ಧಿ ಕಾಮಗಾರಿ ಸಕಾಲದಲ್ಲಿ ಮುಗಿದಿದ್ದೇ ಆದರೆ ಒಂದು ಸುಂದರ ಪ್ರವಾಸಿ ತಾಣ ರೂಪುಗೊಳ್ಳುವುದರೊಂದಿಗೆ ನಗರದ ಜಂಜಾಟದಲ್ಲಿ ಸಿಲುಕಿದವರಿಗೆ ಒಂದಷ್ಟು ಸಮಯವನ್ನು ಪ್ರಕೃತಿ ಮಡಿಲಲ್ಲಿ ನೆಮ್ಮದಿಯಾಗಿ ಕಳೆಯಲು ಅವಕಾಶ ದೊರೆಯಲಿದೆ.
ಈಗಾಗಲೇ ಇಲ್ಲಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ತನ್ನದೇ ಮಹಿಮೆ ಮತ್ತು ವಾಸ್ತು ಶಿಲ್ಪದಿಂದ ಪ್ರವಾಸಿಗರು ಹಾಗೂ ಭಕ್ತರನ್ನು ಸೆಳೆಯುತ್ತಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಹೀಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲೆಂದೇ ಇಲ್ಲಿರುವ ಚಿಕ್ಕಕೆರೆಯನ್ನು ಅಭಿವೃದ್ಧಿಗೊಳಿಸಿ ವಿವಿಧ ಸೌಲಭ್ಯವನ್ನು ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ.

ಪ್ರವಾಸಿಗರನ್ನು ಆಕರ್ಷಿಸುವಂತೆ ಚಿಕ್ಕಕೆರೆ ಅಭಿವೃದ್ಧಿ
ಸದ್ಯ ಚಿಕ್ಕಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಕೃತಕ ದ್ವೀಪಗಳು, ಸಂಗೀತ ನೃತ್ಯ ಕಾರಂಜಿ, ಜಾಗಿಂಗ್ ಟ್ರ್ಯಾಕ್, ಉದ್ಯಾನವನ, ಬೋಟಿಂಗ್ ಸೌಲಭ್ಯ, ತಂಗುದಾಣ, ಸುಸಜ್ಜಿತವಾದ ಜಿಮ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಪ್ರವಾಸಿಗರನ್ನು ಆಕರ್ಷಿಸುವುದರೊಂದಿಗೆ ಕೆರೆಯಲ್ಲಿ ನೀರು ಹೆಚ್ಚು ನಿಲ್ಲುವಂತೆ ಮಾಡಿ ನೀರಿನ ಮರುಪೂರಣ ಮಾಡಿ ಹೊಸಹೊಳಲು ಗ್ರಾಮಕ್ಕೆ ಹೊಸ ಸ್ಪರ್ಶವನ್ನು ನೀಡುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗುತ್ತಿದೆ.

ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ ಸಚಿವ ನಾರಾಯಣಗೌಡ
ಕೆ.ಆರ್.ಪೇಟೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಈ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು. ಈಗ ಹತ್ತು ಲಕ್ಷ ರೂ ವಿಶೇಷ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆಯ ಆಶ್ರಯದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ಕೆರೆಯು ಹಿಂದೆ ಹೇಗಿತ್ತೆಂದರೆ ಕೆ.ಆರ್.ಪೇಟೆ ಪಟ್ಟಣದಿಂದ ಹೊಸಹೊಳಲು ಗ್ರಾಮಕ್ಕೆ ಹೋಗುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಚಿಕ್ಕಕೆರೆಯು ಬಯಲು ಮಲವಿಸರ್ಜನೆಯ ತಾಣವಾಗಿ ಕಂಡುಬರುತ್ತಿಲ್ಲದೆ, ಗಬ್ಬೆದ್ದು ನಾರುತ್ತಿತ್ತು.
ಹೊಸಹೊಳಲು ಗ್ರಾಮಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಗ್ರಾಮದ ಜನರು ಗಬ್ಬುವಾಸನೆಯನ್ನು ತಡೆಯಲು ಮೂಗು ಮುಚ್ಚಿಕೊಂಡು ಓಡಾಡುವಂತಹ ವಾತಾವರಣವು ನಿರ್ಮಾಣವಾಗಿತ್ತು. ಇನ್ನು ಹೊಸಹೊಳಲು ಗ್ರಾಮವು ಕೆ.ಆರ್.ಪೇಟೆ ಪುರಸಭೆಯ ಒಂದು ಭಾಗವೇ ಆಗಿದ್ದು ಆರು ವಾರ್ಡುಗಳನ್ನು ಹೊಂದಿದ್ದರೂ ಅಭಿವೃದ್ಧಿ ಕೆಲಸಗಳು ಮಾತ್ರ ಮರೀಚಿಕೆಯಾಗಿತ್ತು.

ಎರಡು ಕೋಟಿ ರೂ ವೆಚ್ಚದಲ್ಲಿ ರಾಜಗೋಪುರ
ಇದೀಗ ಹೊಸಹೊಳಲು ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸಿ ಸಚಿವ ನಾರಾಯಣಗೌಡರು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕೆರೆಯ ಒತ್ತುವರಿದಾರರ ವಿರೋಧದ ನಡುವೆಯೂ ಹತ್ತು ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡಗಡೆ ಮಾಡಿಸಿ ಕಾಮಗಾರಿಯನ್ನು ಆರಂಭಿಸಿದ್ದು ಅದು ಪ್ರಗತಿಯಲ್ಲಿರುವುದರಿಂದ ಗ್ರಾಮದ ಜನರಿಗೆ ಸಂತಸ ತಂದಿದೆ. ಚಿಕ್ಕಕೆರೆಗೆ ಅಭಿವೃದ್ಧಿ ಮಾತ್ರವಲ್ಲದೆ ಇಲ್ಲಿನ ಗ್ರಾಮರಕ್ಷಕ ಶ್ರೀ ಕೋಟೆ ಭೈರವೇಶ್ವರಸ್ವಾಮಿ ದೇವಾಲಯವನ್ನು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜಗೋಪುರದ ಸಮೇತವಾಗಿ ಜೀರ್ಣೋದ್ಧಾರ ಮಾಡಲಾಗುತ್ತಿದೆ.

ಹೊಸಹೊಳಲು ಅಭಿವೃದ್ಧಿಗೆ ಸ್ಥಳೀಯರ ಸಂತಸ
ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಒಂದು ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ ಹಾಗೂ ಆಂಜನೇಯಸ್ವಾಮಿ ದೇವಾಲಯದ ಬಳಿ ಬೃಹತ್ ಹೈಮಾಸ್ಟ್ ದೀಪಗಳನ್ನು ಅಳವಡಿಕೆ, ಗ್ರಾಮದ ರಸ್ತೆಗಳಿಗೆ ಡಾಂಬರೀಕರಣ ನಡೆಸಲಾಗಿದೆ.
ಒಟ್ಟಾರೆ ಹೊಸಹೊಳಲು ಗ್ರಾಮದ ಅಭಿವೃದ್ಧಿ ಗ್ರಾಮದ ಜನರಿಗೆ ಸಂತಸ ತಂದಿದ್ದರೆ, ಕ್ಷೇತ್ರವೊಂದು ಅಭಿವೃದ್ಧಿಯಾಗುತ್ತಿರುವುದು ಪ್ರವಾಸಿಗರಿಗೂ ಅನುಕೂಲವಾಗಲಿದೆ. ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹಲವು ದೇಗುಲಗಳು ಮತ್ತು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಗಮನಸೆಳೆಯುತ್ತಿವೆ. ಇದರ ನಡುವೆ ಅಂದುಕೊಂಡಂತೆ ಎಲ್ಲ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದೇ ಆದರೆ ಹೊಸಹೊಳಲು ಗ್ರಾಮ ಸುಂದರ ಪ್ರವಾಸಿ ತಾಣವಾಗಿ ಗಮನಸೆಳೆಯುವುದರಲ್ಲಿ ಎರಡು ಮಾತಿಲ್ಲ.











Click it and Unblock the Notifications