Patla Betta: ಪ್ರವಾಸಿಗರ ಗಮನಕ್ಕೆ.... ಹಾಸನದ ಪಟ್ಲ ಬೆಟ್ಟಕ್ಕೆ ಪ್ರವೇಶ ನಿಷೇಧ
ಹಾಸನ ಜುಲೈ 11: ಹಾಸನದ ಪಟ್ಲ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಮುಖ ಸೂಚನೆಯೊಂದನ್ನು ಅರಣ್ಯ ಇಲಾಖೆ ನೀಡಿದೆ. ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ನಡೆದ ಗಲಾಟೆಯಿಂದಾಗಿ ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.
ಹಾಸನದಲ್ಲಿ ಸದ್ಯ ಜೋರು ಮಳೆಯಾಗುತ್ತಿದೆ. ಎಲ್ಲೆಡೆ ಹಚ್ಚಹಸಿರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಣ್ಣ ಜಲಪಾತದಂತೆ ಹರಿಯುವ ನೀರು, ಅತ್ಯಾಕರ್ಷಕ ನೋಟ ಹಾಸನದತ್ತ ಜನರನ್ನು ಸೆಳೆಯುತ್ತಿದೆ. ಆದರೆ ಇತ್ತೀಚೆಗೆ ಪ್ರವಾಸಿ ತಾಣಗಳಲ್ಲಿ ಅದರಲ್ಲೂ ಜಲಪಾತಗಳಲ್ಲಿ ಪ್ರವಾಸಿಗರು ಹುಟ್ಟಾಟ ಮೆರೆಯುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಕೆಲ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಹೌದು... ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ಗಲಾಟೆ ನಡೆದಿತ್ತು. ಇದರಿಂದಾಗಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಲ್ಲದೆ ಇಲ್ಲಿಗೆ ಪ್ರವೇಶಿಸಲು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ತರಲು ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆಯಲ್ಲಿ ತೀರ್ಮಾನಿಸಿವೆ. ಪಟ್ಲ ಬೆಟ್ಟ ಸಕಲೇಶಪುರ ಪಟ್ಟಣದಿಂದ 40ಕಿಮೀ ದೂರದಲ್ಲಿದೆ. ಇಲ್ಲಿಗೆ ಸದ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಕೆಲ ದಿನಗಳ ಹಿಂದೆ ಪ್ರವಾಸಿಗರು ತಮ್ಮ ಸ್ವಂತ ವಾಹನದಲ್ಲಿ ಬೆಟ್ಟಕ್ಕೆ ಪ್ರವೇಶ ಮಾಡಿದ್ದರು ಎಂಬ ಕಾರಣಕ್ಕೆ ಸ್ಥಳೀಯರು ಹಲ್ಲೆ ಮಾಡಿದ್ದರು.

ಪಟ್ಲ ಬೆಟ್ಟದ ಪ್ರದೇಶದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯ ವಾಹನಗಳ ಚಾಲಕರ ನಡುವೆ ಜಗಳ ಸಾಮಾನ್ಯವಾಗಿರುತ್ತದೆ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. ಸ್ಥಳೀಯರಿಗೆ ಹೆದರಿ ಈವರೆಗೂ ಯಾರೂ ಕೂಡ ದೂರು ದಾಖಲಿಸಿರಲಿಲ್ಲ. ಆದರೀಗ ಈ ಘಟನೆಯಿಂದಾಗಿ ನಾಲ್ವರು ಸ್ಥಳೀಯರ ವಿರುದ್ಧ ದೂರು ದಾಖಲಾಗಿದೆ.
ಈ ಘಟನೆ ಬಳಿಕ ಅರಣ್ಯ ಇಲಾಖೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ. ಪಟ್ಲ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಿಳಿಸಿದ್ದಾರೆ. ಇದಕ್ಕಾಗಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ನಂತರ ಸುಲಭವಾಗಿ ಪ್ರವಾಸಿಗರಿಗೆ ಬೆಟ್ಟಕ್ಕೆ ಹೋಗುವ ಅವಕಾಶ ಸಿಗಲಿದೆ ಎಂದು ಅವರು ಹೇಳಿದರು.
ಪ್ರವಾಸಿಗರ ಹುಚ್ಚಾಟದ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದಾರೆ. ಬೆಟ್ಟದ ತುದಿಗೆ ತಮ್ಮ ವಾಹನವನ್ನು ತೆಗೆದುಕೊಂಡು ಹೋಗಿ ಗಿರಿಧಾಮವನ್ನು ಪ್ರವಾಸಿಗರು ಹಾಳು ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಪಟ್ಲ ಗ್ರಾಮದ ರವಿಕುಮಾರ್ ಹೇಳಿದ್ದಾರೆ.












Click it and Unblock the Notifications