ತುಕ್ಕು ಹಿಡಿಯುತ್ತಿರುವ ಅಬ್ಬಿ ಜಲಪಾತದ ತೂಗುಸೇತುವೆ: ಪ್ರವಾಸಿಗರೇ ಎಚ್ಚರ!
ಮಡಿಕೇರಿ, ಜುಲೈ 10: ಕೊಡಗಿನ ಮಡಿಕೇರಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ಮಡಿಕೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನೀರು ಹರಿದು ಹೋಗಿ ಅಬ್ಬಿ ಜಲಪಾತದಲ್ಲಿ ಧುಮುಕುತ್ತಿರುವುದರಿಂದ ಜಲಧಾರೆಯ ಸುಂದರ ಲೋಕವೊಂದು ಸೃಷ್ಟಿಯಾಗುತ್ತಿದೆ. ಅದರಲ್ಲೂ ಕುಂಭದ್ರೋಣ ಮಳೆ ಸುರಿದಾಗ ಜಲಪಾತದ ಭೋರ್ಗರೆತ ಮುಗಿಲು ಮುಟ್ಟುವುದಲ್ಲದೆ, ನೋಡುಗರ ಎದೆಯೂ ಝಲ್ಲೆನ್ನುತ್ತದೆ ಈ ದೃಶ್ಯವನ್ನು ಜಲಪಾತದ ಬಳಿಯ ತೂಗುಸೇತುವೆ ಮೇಲೆ ನಿಂತು ನೋಡುವುದು ಕಣ್ಣಿಗೆ ಹಬ್ಬವಾಗುತ್ತದೆ.
ಅಬ್ಬಿ ಜಲಪಾತವನ್ನು ವೀಕ್ಷಿಸಲು ಅನುಕೂಲವಾಗುವಂತೆ ತೂಗು ಸೇತುವೆಯನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇದರಿಂದ ಜಲಪಾತವನ್ನು ಪ್ರವಾಸಿಗರು ನೆಮ್ಮದಿಯಿಂದ ವೀಕ್ಷಿಸಲು ಸಾಧ್ಯವಾಗಿದೆ. ಮೊದಲು ತೂಗುಸೇತುವೆ ಇಲ್ಲದ ಕಾಲದಲ್ಲಿ ಕೆಲವರು ನದಿ ನೀರಿಗೆ ಇಳಿದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಇನ್ನು ಕೆಲವರು ಜಲಪಾತದ ತುತ್ತ ತುದಿಗೆ ಹೋಗುವ ಹುಚ್ಚು ಸಾಹಸ ಮಾಡುತ್ತಿದ್ದರು. ಯಾವಾಗ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಹೋಯಿತೋ ಆಗ ಜಿಲ್ಲಾಡಳಿತ ತೂಗುಸೇತುವೆ ನಿರ್ಮಿಸಿ ಅದರ ಮೇಲೆ ನಿಂತು ನೋಡಲು ಅವಕಾಶ ಮಾಡಿಕೊಟ್ಟಿತು.

ಈಗ ಯಾವುದೇ ಕಾಲದಲ್ಲಿಯೂ ಅಬ್ಬಿ ಜಲಪಾತದ ಸೌಂದರ್ಯವನ್ನು ಸವಿಯಲು ಅನುಕೂಲವಾಗಿದ್ದು. ಮಳೆಗಾಲದಲ್ಲಿಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೂಗುಸೇತುವೆ ಮೇಲೆ ನಿಂತು ವೀಕ್ಷಿಸಿ, ಖುಷಿ ಪಡುತ್ತಿದ್ದಾರೆ. ಸದ್ಯ ಮುಂಗಾರು ಆರಂಭದಿಂದಲೂ ಉತ್ತಮವಾಗಿ ಮಳೆ ಸುರಿಯುತ್ತಿರುವ ಕಾರಣ ಬೇಸಿಗೆಯಲ್ಲಿ ಬಿಸಿಲಿಗೆ ಸೊರಗಿ ಹೋಗಿದ್ದ ಜಲಪಾತಗಳೆಲ್ಲವೂ ಭೋರ್ಗರೆದು ಧುಮುಕುತ್ತಿವೆ. ಅದರಂತೆ ಅಬ್ಬಿ ಜಲಪಾತವೂ ಧುಮ್ಮಿಕ್ಕುತ್ತಿದ್ದು, ಇದರ ಸೌಂದರ್ಯವನ್ನು ವೀಕ್ಷಿಸಲು ಮಳೆಯನ್ನು ಲೆಕ್ಕಿಸದೆ ಜನ ಧಾವಿಸುತ್ತಿರುವುದು ಕಂಡು ಬರುತ್ತಿದೆ.
ತುಕ್ಕು ಹಿಡಿಯುತ್ತಿರುವ ತೂಗು ಸೇತುವೆ
ಈ ನಡುವೆ ಬಿಸಿಲು, ಮಳೆ, ಗಾಳಿಯ ಹೊಡೆತಕ್ಕೆ ಸಿಲುಕಿ ತೂಗುಸೇತುವೆ ತುಕ್ಕು ಹಿಡಿಯಲಾರಂಭಿಸಿದ್ದು, ಸಕಾಲದಲ್ಲಿ ಇದರ ದುರಸ್ತಿಿಗೊಳಿಸಿ ನಿರ್ವಹಣೆ ಮಾಡಬೇಕಾಗಿದೆ. ಈ ಹಿಂದೆ 2017ರಲ್ಲಿ ದುಸ್ಥಿಿತಿಗೊಳಗಾಗಿದ್ದ ತೂಗು ಸೇತುವೆಯನ್ನು ಸುಸ್ಥಿತಿಗೊಳಿಸುವ ಕೆಲಸವಾಗಿತ್ತು. ಇದೀಗ ಮತ್ತೆ ತೂಗುಸೇತುವೆ ತುಕ್ಕು ಹಿಡಿದಿದ್ದು ಇದನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಶಿಥಿಲಾವಸ್ಥೆಸಗೆ ಸಾಗುವ ಸಾಧ್ಯತೆಯಿದೆ. ಈಗಾಗಲೇ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಈ ಬಗ್ಗೆ ಆರೋಪಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ.

ಕೊಡಗಿನ ಮಟ್ಟಿಗೆ ಪಟ್ಟಣಕ್ಕೆ ಸಮೀಪದಲ್ಲಿ ಮತ್ತು ರಸ್ತೆ ಸೌಕರ್ಯ ಹೊಂದಿರುವ ಕೆಲವೇ ಕೆಲವು ಜಲಪಾತಗಳ ಪೈಕಿ ಅಬ್ಬಿಜಲಪಾತ ಒಂದಾಗಿದ್ದು, ಇದು ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಜಲಪಾತವಾಗಿ ಗಮನಸೆಳೆಯುತ್ತಿದೆ. ಮಡಿಕೇರಿಗೆ ಆಗಮಿಸುವ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ತೆರಳದೆ ತಮ್ಮ ಊರಿಗೆ ಹಿಂತಿರುಗುವುದಿಲ್ಲ. ಹೀಗಾಗಿ ಜಲಪಾತದ ಬಳಿ ನಿರ್ಮಿಸಿರುವ ತೂಗುಸೇತುವೆ ದುಸ್ಥಿತಿಗೀಡಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಆದ್ಯ ಕರ್ತವ್ಯವಾಗಿದೆ.
ಮುಂಗಾರಿನಲ್ಲಿ ಅಬ್ಬಿಯ ಆರ್ಭಟ ಜೋರು
ಇನ್ನು ಅಬ್ಬಿ ಜಲಪಾತದ ಬಗ್ಗೆ ಹೇಳಬೇಕೆಂದರೆ ಮುಂಗಾರಿನಲ್ಲಿ ಇದರ ಆರ್ಭಟ ಜೋರಾಗಿರುತ್ತದೆ. ಈ ಸಮಯದಲ್ಲಿ ಕೆಂಬಣ್ಣದೊಂದಿಗೆ ಭೋರ್ಗರೆದರೆ ಮಳೆ ಕಡಿಮೆಯಾಗುತ್ತಿದ್ದಂತಯೇ ಶ್ವೇತಧಾರೆಯಾಗಿ ಧುಮ್ಮಿಕ್ಕುತ್ತದೆ. ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಜಲಪಾತ ಇದಾಗಿದೆ. ಇದನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ಜಲಪಾತದತ್ತ ಹೋಗಬಹುದು.

ವಾಹನ ನಿಲುಗಡೆ ಸ್ಥಳದಿಂದ ಸ್ವಾಗತ ಕಮಾನನ್ನು ದಾಟಿ ತೋಟಗಳ ನಡುವಿನ ಹಾದಿಯಲ್ಲಿ ಸಾಗಿ ಬಳಿಕ ಮೆಟ್ಟಿಲು ಇಳಿದು ಮುನ್ನಡೆದರೆ ಜಲಪಾತದ ಸನಿಹಕ್ಕೆ ತೆರಳಬಹುದಾಗಿದೆ. ಮಳೆಗಾಲದಲ್ಲಿ ಇದರ ಆರ್ಭಟ ಸುತ್ತಮುತ್ತಲಿನ ಪ್ರಶಾಂತತೆಯನ್ನು ಸೀಳಿಕೊಂಡು ಕಿವಿಗೆ ಅಪ್ಪಳಿಸುತ್ತದೆ. ಈ ಜಲಪಾತವು ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುತ್ತದೆ. ನೆರವಂಡ ನಾಣಯ್ಯ ಎಂಬುವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿರುವ ಅಬ್ಬಿ ಜಲಪಾತವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನಿಟ್ಟು ಜೆಸ್ಸಿ ಫಾಲ್ಸ್ ಎಂದು ಬ್ರಿಟೀಷರು ಕರೆದಿದ್ದರಂತೆ.
ಜಲಪಾತದ ಬಳಿ ಜಿಗಣೆಗಳ ಹಾವಳಿ
ಜಲಪಾತದ ಸುತ್ತಮುತ್ತಲಿನ ಜನ ಇದನ್ನು ಮಡಿಕೇರಿ ತೊರೆ, ಮುತ್ತಾರ್ ಮುಟ್ಟು ತೊರೆ ಎಂದು ಕರೆಯುತ್ತಿದ್ದರಂತೆ. ಕೊಡವ ಭಾಷೆಯಲ್ಲಿ 'ಅಬ್ಬಿ'ಎಂದರೆ ತೊರೆ ಎಂದರ್ಥ ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ. ಕೊಡಗಿಗೆ ಪ್ರವಾಸಿಗರನ್ನು ಸೆಳೆಯುವಲ್ಲಿ ಅಬ್ಬಿ ಜಲಪಾತದ ಪಾತ್ರವೂ ಹೆಚ್ಚಾಗಿದೆ. ಮಳೆಗಾಲದಲ್ಲಿ ಇಲ್ಲಿಗೆ ತೆರಳುವುದು ಅಷ್ಟೊಂದು ಒಳ್ಳೆಯದಲ್ಲ. ಜಿಗಣೆಗಳು ದಾಳಿ ಮಾಡಬಹುದು. ಮಳೆಗಾಲದ ನಂತರದ ದಿನಗಳಲ್ಲಿ ಅಬ್ಬಿ ಜಲಪಾತದತ್ತ ತೆರಳಿದರೆ ಉತ್ತಮ.












Click it and Unblock the Notifications