Vande Bharat Express: ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು
ಮಂಗಳೂರು, ಅಕ್ಟೋಬರ್ 20: ಕರ್ನಾಟಕದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಗುವ ನಿರೀಕ್ಷೆ ಇದೆ. ಈಗಾಗಲೇ ಎರಡು ವಂದೇ ಭಾರತ್ ರೈಲುಗಳು ಮಂಗಳೂರಿನಿಂದ ಸಂಚಾರವನ್ನು ನಡೆಸುತ್ತಿವೆ. ಮಂಗಳೂರು-ಮುಂಬೈ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂದು ಸಂಸದ ಬ್ರಿಜೇಶ್ ಚೌಟ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆದು ಮನವಿಯನ್ನು ಮಾಡಿದ್ದಾರೆ.
ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲಿನ ಸಂಚಾರ ಅತ್ಯಗತ್ಯವಾಗಿದೆ. ಇದರಿಂದಾಗಿ ಎರಡೂ ನಗರಗಳ ನಡುವಿನ ಸಂಚಾರದ ಸಮಯ ಉಳಿತಾಯವಾಗಲಿದೆ. ಬಂದರು ನಗರಿ ಮಂಗಳೂರು, ವಾಣಿಜ್ಯ ನಗರಿ ಮುಂಬೈ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ಸಂಸದರು ವಿವರಣೆ ನೀಡಿದ್ದಾರೆ.

ಪ್ರವಾಸೋದ್ಯಮ, ಶಿಕ್ಷಣ, ವಾಣಿಜ್ಯ ವಹಿವಾಟಿಗೆ ಮಂಗಳೂರು-ಮುಂಬೈ ನಡುವಿನ ವಂದೇ ಭಾರತ್ ರೈಲು ಸಹಾಯಕವಾಗಲಿದೆ. ಸದ್ಯ ಎರಡು ನಗರದ ನಡುವೆ ಸಂಚಾರ ನಡೆಸಲು 17 ರಿಂದ 19 ಗಂಟೆ ಬೇಕಿದೆ. ಎರಡು ನಗರದ ನಡುವೆ ವಂದೇ ಭಾರತ್ ರೈಲು ಆರಂಭಿಸಿದರೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಸಂಸದರು ಪತ್ರವನ್ನು ಬರೆದಿದ್ದಾರೆ.
ವಾಣಿಜ್ಯ ವಹಿವಾಟು ಹೆಚ್ಚಿದೆ: ಸಂಸದರು ಬಂದರು ನಗರಿ ಮಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಎರಡೂ ನಗರದ ವಾಣಿಜ್ಯ ಚಟುವಟಿಕೆಗಳಿಗೆ ಸಹಾಯಕವಾಗಲಿದೆ. ಇದರಿಂದಾಗಿ ದಕ್ಷಿಣ ಕನ್ನಡಕ್ಕೆ ಉದ್ಯಮಿಗಳನ್ನು ಸೆಳೆಯಲು, ಉದ್ಯೋಗ ಸೃಷ್ಟಿಗೆ ಸಹ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದ್ದಾರೆ.
ವಿದ್ಯಾರ್ಥಿಗಳು, ಉದ್ಯಮಿಗಳು, ಹಿರಿಯ ನಾಗರಿಕರು, ಪ್ರವಾಸಕ್ಕೆ ಬರುವವರು ಎರಡು ನಗರದ ನಡುವೆ ಸಂಚಾರ ನಡೆಸಲು ತಾಸುಗಟ್ಟಲೇ ಪ್ರಯಾಣ ಮಾಡಬೇಕಿದೆ. ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಎರಡು ನಗರದ ನಡುವಿನ ಸಂಚಾರದ ಅವಧಿ ಕಡಿತಗೊಳ್ಳಲಿದೆ ಎಂದು ಜನರಿಗೆ ಸಹಾಯಕವಾಗಲಿದೆ ಎಂದು ಸಂಸದರು ಹೇಳಿದ್ದಾರೆ.
ಸದ್ಯ ಮಂಗಳೂರು-ಮಡಗಾಂವ್ ಮತ್ತು ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಆದ್ದರಿಂದ ಮಂಗಳೂರು ನಗರಕ್ಕೆ ಎರಡು ವಂದೇ ಭಾರತ್ ರೈಲುಗಳಿವೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ರಾಜ್ಯದಲ್ಲಿ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದೆ. ಇದರಲ್ಲಿ ಬೆಂಗಳೂರು-ಮಂಗಳೂರು-ಕಾರವಾರ, ಬೆಂಗಳೂರು-ಮಂಗಳೂರು ಮಾರ್ಗ ಸೇರಿದೆ ಎಂಬ ಮಾಹಿತಿ ಇದೆ. ಮಂಗಳೂರು-ಮುಂಬೈ ಮಾರ್ಗದಲ್ಲಿ ರೈಲು ಓಡಿಸುವ ಪ್ರಸ್ತಾವನೆ ಕರ್ನಾಟಕದಿಂದ ಇಲ್ಲ. ಮಹಾರಾಷ್ಟ್ರ ರಾಜ್ಯ ಬೇರೆ ರೈಲ್ವೆ ವಲಯದ ಜೊತೆ ಸೇರಿ ಈ ರೈಲು ಸೇವೆಯನ್ನು ಆರಂಭಿಸಬಹುದು. ಇದಕ್ಕೆ ಮೊದಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಬೇಕಿದೆ.
ಭಾರತೀಯ ರೈಲ್ವೆ ಡಿಸೆಂಬರ್ ಅಥವ 2025ರ ಜನವರಿಯಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಸೇವೆ ಆರಂಭಿಸಲು ತಯಾರಿ ನಡೆದಿದೆ. ಈ ಮಾದರಿ ರೈಲನ್ನು ಬೆಂಗಳೂರು-ಮುಂಬೈ ನಡುವೆ ಓಡಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಓಡಿಸುವ ಪ್ರಸ್ತಾವನೆಗೆ ಇಲಾಖೆ ಒಪ್ಪಿಗೆ ಕೊಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications