Vande Bharat; ಬಳ್ಳಾರಿ-ಬೆಂಗಳೂರು ನಡುವೆ ರೈಲಿಗೆ ಬೇಡಿಕೆ
ಬಳ್ಳಾರಿ, ಜುಲೈ 17; ವಂದೇ ಭಾರತ್ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ಕರ್ನಾಟಕದಲ್ಲಿ ಸದ್ಯ ಎರಡು ರೈಲುಗಳು ಸಂಚಾರ ನಡೆಸುತ್ತಿವೆ. ಇನ್ನೂ ಹಲವು ಮಾರ್ಗದಲ್ಲಿ ರೈಲು ಓಡಿಸುವಂತೆ ರೈಲ್ವೆ ಇಲಾಖೆಯನ್ನು ಒತ್ತಾಯಿಸಲಾಗುತ್ತಿದೆ. ಈಗ ಬಳ್ಳಾರಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲಿಗಾಗಿ ಬೇಡಿಕೆ ಇಡಲಾಗಿದೆ.
ಹುಬ್ಬಳ್ಳಿ ಅಥವ ವಿಜಯಪುರದಿಂದ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂದು ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ. ಮಹೇಶ್ವರ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರವನ್ನು ಬರೆದಿರುವ ಅವರು ಬಳ್ಳಾರಿ ರೈಲ್ವೆ ಇಲಾಖೆಯ ಕೋಟ್ಯಾಂತರ ರೂಪಾಯಿ ಆದಾಯ ತಂದು ಕೊಡುತ್ತದೆ. ವಿಶ್ವಮಟ್ಟದಲ್ಲಿಯೂ ಪ್ರವಾಸಿಗರನ್ನು ಆಕರ್ಷಿಸುವ ಬಳ್ಳಾರಿ-ವಿಜಯನಗರ ಜಿಲ್ಲೆಗೆ ವಂದೇ ಭಾರತ್ ರೈಲು ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೇಳಾಪಟ್ಟಿ ಹೇಗಿರಬೇಕು?; ಬಳ್ಳಾರಿ-ಬೆಂಗಳೂರು ಸಂಪರ್ಕ ಕಲ್ಪಿಸುವಂತೆ ಹುಬ್ಬಳ್ಳಿ ಅಥವ ವಿಜಯಪುರದಿಂದ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂಬುದು ಬೇಡಿಕೆಯಾಗಿದೆ. ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲಾ ಕೇಂದ್ರಗಳಾಗಿವೆ. ಇಲ್ಲಿಂದ ರಾಜಧಾನಿ ಬೆಂಗಳೂರು ಸಂಪರ್ಕಿಸಲು ರೈಲು ಸೇವೆ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಹುಬ್ಬಳ್ಳಿ ಅಥವ ವಿಜಯಪುರದಿಂದ ಮುಂಜಾನೆ 4 ಗಂಟೆಯ ಸಮಯದಲ್ಲಿ ವಂದೇ ಭಾರತ್ ರೈಲು ಹೊರಡಬೇಕು. ಹೊಸಪೇಟೆಗೆ 5.30ಕ್ಕೆ, ಬಳ್ಳಾರಿಗೆ 6.30ಕ್ಕೆ ಬರಬೇಕು. ಬಳಿಕ ಗುಂತಕಲ್, ಅನಂತಪುರ, ಯಲಹಂಕ ಮೂಲಕ ಸಂಜೆಯ ವೇಳೆಗೆ ಬೆಂಗಳೂರು ನಗರ ತಲುಪುವಂತೆ ವಂಏ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ. ಮಹೇಶ್ವರ ಸ್ವಾಮಿ ಪತ್ರದಲ್ಲಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ವಿಶ್ವವಿಖ್ಯಾತ ಪ್ರವಾಸಿ ತಾಣಗಳು. ಪ್ರತಿ ವರ್ಷ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಹಂಪಿ ವೀಕ್ಷಣೆಗೆ ಬರುತ್ತಾರೆ. ವಂದೇ ಭಾರತ್ ರೈಲು ಆರಂಭಿಸಿದರೆ ಪ್ರವಾಸಿಗರು ಬೆಂಗಳೂರು ತಲುಪಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಬಳ್ಳಾರಿಯನ್ನು ರಾಜಧಾನಿ ಬೆಂಗಳೂರು ಸಂಪರ್ಕಿಸಲು ವಿಮಾನ ಸೇವೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಬಸ್‌ಗಿಂತ ರೈಲು ಸಂಚಾರ ಆರಂಭಿಸಿದರೆ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದು ಪ್ರಧಾನಿ ಮತ್ತು ರೈಲ್ವೆ ಸಚಿವರಿಗೆ ಪತ್ರದಲ್ಲಿ ವಿವರಣೆ ಕೊಟ್ಟಿದ್ದಾರೆ.
ಬೆಂಗಳೂರು ಸಂಪರ್ಕಿಸುವ ವಂದೇ ಭಾರತ್ ರೈಲಿನಿಂದ ಕರ್ನಾಟಕ ಮಾತ್ರವಲ್ಲ ರೈಲು ಆಂಧ್ರ ಪ್ರದೇಶದ ಮೂಲಕ ಸಂಚಾರ ನಡೆಸುವುದರಿಂದ ಎರಡೂ ರಾಜ್ಯಗಳ ಜನರಿಗೆ ಅನುಕೂಲವಾಗಲಿದೆ. ಯಲಹಂಕ ರೈಲು ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣ ಹತ್ತಿರವಿರುವುದರಿಂದ ಹಲವು ಅನುಕೂಲಗಳಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಬೆಳಗಿನ ರೈಲು ಇಲ್ಲ; ಹುಬ್ಬಳ್ಳಿಯಲ್ಲಿ ನೈಋತ್ಯ ವಲಯದ ಪ್ರಧಾನ ಕಚೇರಿ ಇದೆ. ಬಳ್ಳಾರಿ ನೈಋತ್ಯ ವಲಯದ ಕೊನೆಯ ನಿಲ್ದಾಣವಾಗಿದೆ. ಶಿವಮೊಗ್ಗ-ಬೆಂಗಳೂರು ನಡುವೆ ನಿತ್ಯ ಎರಡು ರೈಲು ಇದೆ. ಹುಬ್ಬಳ್ಳಿ-ಬೆಂಗಳೂರು ನಡುವೆ ರೈಲುಗಳಿವೆ. ಆದರೆ ಬಳ್ಳಾರಿ-ಬೆಂಗಳೂರು ನಗರದ ನಡುವೆ ಹಗಲಿನ ರೈಲು ಇಲ್ಲ ಎಂದು ಪತ್ರದಲ್ಲಿ ವಿವರಣೆ ಕೊಡಲಾಗಿದೆ.
ಮೈಸೂರು-ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲು ಆರಂಭಿಸಲಾಗಿದೆ. ಇದೇ ಮಾದರಿಯಲ್ಲಿ ಬಳ್ಳಾರಿ-ಬೆಂಗಳೂರು ಸಂಪರ್ಕಿಸಲು ವಂದೇ ಭಾರತ್ ರೈಲು ಆರಂಭಿಸಿ ಎಂದು ಬೇಡಿಕೆ ಇಡಲಾಗಿದೆ.
ಕರ್ನಾಟಕದಲ್ಲಿ ಸದ್ಯ ಎರಡು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡುತ್ತಿದೆ. ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಬೆಳಗಾವಿ, ಬೆಂಗಳೂರು-ಕಲಬುರಗಿ ಮತ್ತು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಸದ್ಯ ಬೇಡಿಕೆ ಇದೆ.












Click it and Unblock the Notifications