ಕ್ರಿಸ್‌ಮಸ್, ಹೊಸವರ್ಷ: ಡಿಸೆಂಬರ್ 22ರಿಂದ ಕೇರಳಕ್ಕೆ 51 ವಿಶೇಷ ರೈಲುಗಳ ಸಂಚಾರ, ಇಲ್ಲಿದೆ ವಿವರ
ತಿರುವನಂತಪುರಂ, ಡಿಸೆಂಬರ್, 21: ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಹಬ್ಬದ ಸಂಭ್ರಮಾಚರಣೆ ಮಾಡಲು ಬೇರೆ ನಗರದಲ್ಲಿ ಉದ್ಯೋಗ ಬಯಸಿ ಬಂದವರು ತಮ್ಮ ಊರುಗಳತ್ತ ಹೋಗುತ್ತಲೇ ಇದ್ದಾರೆ. ಹಬ್ಬ ಸಮೀಪಿಸುತ್ತಿದಂತೆಯೇ ದಿನದಿಂದ ದಿನಕ್ಕೆ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಮತ್ತೊಂದೆಡೆ ಹೊಸವರ್ಷಕ್ಕೆ ಬೇರೆ ಕಡೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಚ್ಚಾಗಿ ಕೇರಳದ ಕಡೆಗೆ ಹೋಗುವವರೇ ಹೆಚ್ಚಾಗಿದ್ದು, ಆದ್ದರಿಂದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆ 51 ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಡಿಸೆಂಬರ್ 22 ರಿಂದ ಜನವರಿ 2, 2023ರವರೆಗೂ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದೆ.
ಮುಂಬರುವ ಕ್ರಿಸ್‌ಮಸ್-ಹೊಸ ವರ್ಷದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಮಂಗಳವಾರ ಕೇರಳಕ್ಕೆ 51 ವಿಶೇಷ ರೈಲುಗಳನ್ನು ಬಿಡುವುದಾಗಿ ಘೋಷಿಸಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಕೇರಳದ ವಿವಿಧ ಸ್ಥಳಗಳಿಗೆ 17 ವಿಶೇಷ ರೈಲು ಸೇವೆಗಳನ್ನು ದಕ್ಷಿಣ ರೈಲ್ವೆ ಘೋಷಿಸಿದೆ. ಸೂಚಿಸಲಾದ ವಿಶೇಷ ರೈಲುಗಳ ಹೊರತಾಗಿ, ಇತರ ವಲಯ ರೈಲ್ವೆಗಳು ಕೇರಳಕ್ಕೆ ಒಟ್ಟು 34 ರೈಲುಗಳ ಸೇವೆಗಳನ್ನು ನೀಡುವುದಾಗಿ ಸೂಚಿಸಿವೆ. ದಕ್ಷಿಣ ಮಧ್ಯ ರೈಲ್ವೆಯಿಂದ 22 ವಿಶೇಷ ರೈಲುಗಳು, ನೈಋತ್ಯ ರೈಲ್ವೆಯಿಂದ 8 ವಿಶೇಷ ರೈಲುಗಳು ಮತ್ತು ಪೂರ್ವ ಕರಾವಳಿ ರೈಲ್ವೆಯಿಂದ ನಾಲ್ಕು ವಿಶೇಷ ರೈಲುಗಳ ಸೇವೆಯನ್ನು ನೀಡುವುದಾಗಿ ತಿಳಿಸಿವೆ.

ವಿಶೇಷ ರೈಲುಗಳ ಘೋಷಣೆ- ಭಾರತೀಯ ರೈಲ್ವೆ
ಇದರೊಂದಿಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಕೇರಳ ರಾಜ್ಯಕ್ಕೆ ಒಟ್ಟು 51 ವಿಶೇಷ ರೈಲುಗಳು ಸೇವೆ ಸಲ್ಲಿಸಲಿವೆ ಎಂದು ತಿಳಿಸಿದೆ.
ಈ ವಿಶೇಷ ರೈಲುಗಳು ಡಿಸೆಂಬರ್ 22 ರಿಂದ ಜನವರಿ 2, 2023ರವರೆಗೂ ಕಾರ್ಯನಿರ್ವಹಿಸಲಿವೆ ಎನ್ನುವ ಮಾಹಿತಿಯನ್ನು ಇಲಾಖೆ ನೀಡಿದೆ. ಹಬ್ಬಗಳ ಸಮಯದಲ್ಲಿ ಕೇರಳಕ್ಕೆ ಹೆಚ್ಚಿನ ರೈಲುಗಳನ್ನು ಬಿಡುವಂತೆ ಜನರು ಬೇಡಿಕೆಯಿಟ್ಟಿದ್ದರು. ಜನರು ಆಕ್ರೋಶ ವ್ಯಕ್ತಪಡಿಸಿದ ನಂತರ ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಈ ಋತುವಿನಲ್ಲಿ ಹೆಚ್ಚಿನ ರೈಲುಗಳನ್ನು ಬಿಡಲು ಸಚಿವರಿಗೆ ಮನವಿ ಮಾಡಿದ್ದರು. ಈ ವಿಚಾರದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಧ್ಯಸ್ಥಿಕೆವಹಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದರು.

ಸಿಹಿಸುದ್ದಿ ಕೊಟ್ಟ ರೈಲ್ವೆ ಇಲಾಖೆ
ಕ್ರಿಸ್‌ಮಸ್, ಹೊಸ ವರ್ಷದಲ್ಲಿ ಜನರ ದಟ್ಟಣೆಯನ್ನು ತಡೆಯಲು ಈ ವರ್ಷ ಯಾವುದೇ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ಘೋಷಿಸದಿರುವುದು ಕೇರಳಿಗರಿಗೆ ಆಘಾತವಾಗಿದೆ. ಹೊರ ರಾಜ್ಯಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಜನರಿಗೆ ಹೆಚ್ಚಿನ ರೈಲಿನ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತರೂರ್ ಟ್ವೀಟ್ ಮೂಲಕ ಒತ್ತಾಯಿಸಿದ್ದರು. ಬಳಿಮ ಎಚ್ಚೆತ್ತ ಸಚಿವರು ಇದೀಗ ಕ್ರಿಸ್‌ಮಸ್, ಹೊಸ ವರ್ಷದ ಸಂದರ್ಭದಲ್ಲಿ ಜನರ ದಟ್ಟಣೆಯನ್ನು ತಡೆಯಲು ವಿಶೇಷ ರೈಲುಗಳನ್ನು ಬಿಡುವುದಾಗಿ ಘೋಷಿಸಿದ್ದಾರೆ.

ವಿಶೇಷ ರೈಲುಗಳನ್ನ ಘೋಷಿಸಿದ ಕೊಂಕಣ ರೈಲ್ವೆ
ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಕಾರಣದಿಂದ ಕ್ರಿಸ್‌ಮಸ್ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯೂ ಕೂಡ ಕಡಿಮೆಯಿತ್ತು. ಕ್ರಿಸ್‌ಮಸ್ ಆಚರಣೆಗೆ ಸಾಮಾನ್ಯವಾಗಿ ಜನರು ಬೇರೆ ಕಡೆಗೆ ಪ್ರವಾಸ ಮಾಡಲು ಯೋಜನೆ ರೂಪಿಸಿರುತ್ತಾರೆ. ಅದರಲ್ಲೂ ಈ ಬಾರಿ ಕೊರೊನಾ ತಗ್ಗಿದ ಕಾರಣ ಕ್ರಿಸ್‌ಮಸ್‌ಗೆ ತುಂಬಾ ಜನರು ಬೇರೆ ಕಡೆಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಆದ್ದರಿಂದ ಕ್ರಿಸ್‌ಮಸ್ ಉತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ಮಂಗಳೂರು ಜಂಕ್ಷನ್ ಹಾಗೂ ಗುಜರಾತ್‌ನ ಉಧ್ನಾ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧಾರ ಮಾಡಿದೆ. ಮಂಗಳೂರು ಜಂಕ್ಷನ್ ಹಾಗೂ ಗುಜರಾತ್‌ನ ಉಧ್ನಾ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧಾರ ಮಾಡಿದೆ.

ರೈಲು ಸಂಚರಿಸುವ ಮಾರ್ಗಗಳ ವಿವರ
ನಂಬರ್ 09057 ವಿಶೇಷ ರೈಲು, ಉಧ್ನಾದಿಂದ ಡಿಸೆಂಬರ್ 21, 25, 28 ಹಾಗೂ ಜನವರಿ 1ರಂದು (ಬುಧ, ಭಾನುವಾರ) ರಾತ್ರಿ 8ಕ್ಕೆ ಹೊರಟು ಮಂಗಳೂರು ಜಂಕ್ಷನ್‌ಗೆ ಮರುದಿನ ಸಂಜೆ 6:30ಕ್ಕೆ ತಲುಪಲಿದೆ. ನಂಬರ್ 09058 ಮಂಗಳೂರು ಜಂಕ್ಷನ್ - ಉಧ್ನಾ ರೈಲು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್ 22, 26, 29 ಹಾಗೂ ಜನವರಿ 2ರಂದು (ಗುರು, ಸೋಮವಾರ) ಹೊರಟು ಮರುದಿನ ರಾತ್ರಿ 7:25ಕ್ಕೆ ಉಧ್ನಾ ತಲುಪಲಿದೆ. ಒಟ್ಟು ನಾಲ್ಕು ಸೇವೆಗಳಿರುತ್ತವೆ ಎನ್ನುವ ಮಾಹಿತಿಯನ್ನು ನೀಡಿದೆ.
ವಲ್ಸಡ್, ವಾಪಿ, ಫಾಲ್ಗರ್, ವಸಾೖ ರೋಡ್, ಪನ್ವೇಲ್, ರೋಹ, ಖೇಡ್, ಚಿಪ್ಳೂಣ, ಸಂಗಮೇಶ್ವರ ರೋಡ್, ರತ್ನಾಗಿರಿ, ಕಂಕಾವಿಲಿ, ಸಿಂಧೂದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ, ಮಡಗಾಂವ್, ಕಾಣಕೋಥ, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ಗಳಲ್ಲಿ ಈ ವಿಶೇಷ ರೈಲು ನಿಲುಗಡೆ ಆಗಲಿದೆ. ಈ ವಿಶೇಷ ರೈಲು 2 ಟಯರ್ ಎಸಿ ಸೇರಿದಂತೆ ಒಟ್ಟು 24 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications