Summer season: ನಂದಿ ಗಿರಿಧಾಮಕ್ಕೆ ಭೇಟಿ ನೀಡುವವರಿಗೆ ಸಿಹಿಸುದ್ದಿ, ನೂತನ ವೇಳಾಪಟ್ಟಿ ಗಮನಿಸಿ
ಬೆಂಗಳೂರು, ಏಪ್ರಿಲ್, 21: ಬೆಂಗಳೂರಿನ ಸಮೀಪದಲ್ಲಿರುವ ನಂದಿ ಬೆಟ್ಟವು ಪ್ರವಾಸಿಗರ ಅಚ್ಚುಮೆಚ್ಚಿನ ಅದ್ಭುತ ತಾಣವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರತಿನಿತ್ಯವೂ ಸಾವಿರಾರು ಜನ ಭೇಟಿ ನೀಡುತ್ತಲೇ ಇರುತ್ತಾರೆ. ಈ ಮೊದಲು ಪ್ರವಾಸಿಗರಿಗೆ ಇಲ್ಲಿ ಬೆಳಗ್ಗೆ 5:30ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಸಮಯ ಬದಲಾವಣೆ ಮಾಡಿದ್ದು, ಬೆಳಗ್ಗೆ 5ರಿಂದ ಸಂಜೆ 7 ಗಂಟೆವರೆಗೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ.
ಕರ್ನಾಟಕ ರಾಜ್ಯದ ಅದ್ಭುತ ತಾಣಗಳಲ್ಲೊಂದಾದ ನಂದಿ ಗಿರಿಧಾಮ ಪ್ರವೇಶ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾಹಿತಿ ನೀಡಿದ್ದಾರೆ.

ಬೇಸಿಗೆ ಹಿನ್ನಲೆಯಲ್ಲಿ ನಂದಿ ಗಿರಿಧಾಮ ಪ್ರವೇಶ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರಸಿದ್ಧ ನಂದಿಗಿರಿಧಾಮದ ಪ್ರವೇಶದ ಅವಧಿಯನ್ನು ಪರಿಷ್ಕರಣೆ ಮಾಡಲಾಗಿದೆ.
ಈ ಹಿಂದೆ ಬೆಳಗ್ಗೆ 5:30 ರಿಂದ ಸಂಜೆ 6 ಗಂಟೆಯವರೆಗೆ ಪ್ರವೇಶಕ್ಕೆ ಅವಕಾಶ ಇತ್ತು. ಇದೀಗ ಬೇಸಿಗೆ ರಜೆ ಪ್ರಾರಂಭವಾಗುತ್ತಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗಾಗಿ ಪ್ರವಾಸಿಗರಿಗೆ ಹೆಚ್ಚಿನ ಕಾಲಾವಕಾಶ ಒದಗಿಸುವ ನಿಟ್ಟಿನಲ್ಲಿ ಮತ್ತು ನಂದಿಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣಾಸಮಿತಿ ಅಧ್ಯಕ್ಷರ ಆದೇಶದ ಮೇರೆಗೆ ಸಮಯವನ್ನು ವಿಸ್ತರಣೆ ಮಾಡಲಾಗಿದೆ ಎಂದರು. ಈ ವಿಸ್ತರಣೆಯು ಸೆಪ್ಟೆಂಬರ್ 30ರವರೆಗೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ರೋಪ್‌ವೇ ನಿರ್ಮಾಣ ಕಾಮಗಾರಿಗೆ ಚಾಲನೆ
ಇನ್ನು ವಿಶ್ವವಿಖ್ಯಾತ ನಂದಿ ಬೆಟ್ಟಕ್ಕೆ ಪ್ಯಾಸೆಂಜರ್ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.
ಈ ವೇಳೆ ಮಾತನಾಡಿದ್ದ ಅವರು, ಅಸಂಖ್ಯಾತ ಪ್ರವಾಸಿಗರ ಬಹುದಶಕಗಳ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಈಗ ಚಾಲನೆ ದೊರೆತಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಶಂಕರ್‌ನಾಗ್ ಅವರು ಪಂಚಗಿರಿ ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಿಸಬೇಕು ಎಂದು ಒತ್ತಾಸೆ ಪಟ್ಟಿದ್ದರು. ಅವರ ಆಶಯ ಕೆಲವೇ ತಿಂಗಳಲ್ಲಿ ಈಡೇರಲಿದೆ ಎಂದಿದ್ದರು.

ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಸುಮಾರು 2.93 ಕಿ.ಮೀ ದೂರದ ರೋಪ್‌ವೇ ಅಭಿವೃದ್ಧಿಪಡಿಸಲಾಗುತ್ತದೆ. ಡೈನಾಮಿಕ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ನಿರ್ಮಾಣ, ವಿನ್ಯಾಸ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT) ಚೌಕಟ್ಟಿನ ಮೇಲೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದರು.
ಐತಿಹಾಸಿಕ ತಾಣ ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿರುವ ನಂದಿ ಬೆಟ್ಟ ಟ್ರಕ್ಕಿಂಗ್, ಸೈಕ್ಲಿಂಗ್ ಮತ್ತು ಪ್ಯಾರಾಗ್ರೆಡಿಂಗ್‌ನಂತಹ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಂತಹ ತಾಣ ತಲುಪಲು ರೋಪ್ ವೇಯ ವೇಗ ಮತ್ತು ಪರಿಸರ ಸ್ನೇಹಿ ಸಾರಿಗೆ ಸೌಲಭ್ಯ, ಅನುಕೂಲ ಕಲ್ಪಿಸುವುದರೊಂದಿಗೆ ತಲುಪುವ ಸಮಯ ಉಳಿಸಲಾಗುತ್ತದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರದೇಶದ ಮೈಮಾನಿಕ ಚಿತ್ರಣ ನೀಡುವುದರ ಜೊತೆಗೆ ಈ ಭಾಗದಲ್ಲಿ ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ.
ರೋಪ್‌ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್ ನಲ್ಲಿ- 480 ದ್ವಿಚಕ್ರ, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್ ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೋರೆಂಟ್, ಮಳಿಗೆಗಳು ಇರುತ್ತವೆ ಎಂದು ತಿಳಿಸಿದ್ದರು.












Click it and Unblock the Notifications