BMTC: ಈ ಮಾರ್ಗಗಳ ನಡುವೆ 10 ವಜ್ರ ಎಸಿ ಬಸ್‌ಗಳ ಸಂಚಾರ, ಸಮಯ, ಮಾರ್ಗಗಳ ವಿವರ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 04: ಬೆಂಗಳೂರಿನ ಜನರ ಜೀವನಾಡಿಯಾದ ಬಿಎಂಟಿಸಿ ಬಸ್ ಸೇವೆಯನ್ನು ಈಗಾಗಲೇ ಹಲವೆಡೆ ಕಲ್ಪಿಸಲಾಗಿದೆ. ಆದರೂ ಬೆಂಗಳೂರು ಇನ್ನು ವಿಸ್ತಾರವಾಗುತ್ತಲೇ ಇದ್ದು, ಈ ಬಸ್‌ಗಳ ಅವಶ್ಯಕತೆ ತುಂಬಾ ಇದೆ. ಹಾಗೆಯೇ ಇದೀಗ ಬಿಎಂಟಿಸಿಯಿಂದ ಅತ್ತಿಬೆಲೆ-ಹೊಸಕೋಟೆ ನಡುವೆ ವಜ್ರ ಹವಾನಿಯಂತ್ರಿತ ಬಸ್‌ಗಳ ಸಂಚಾರ ಭಾನುವಾರ (ಡಿಸೆಂಬರ್ 04) ಆರಂಭವಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಸ್ ಸಂಚಾರಕ್ಕೆ ಅತ್ತಿಬೆಲೆ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಚಾರ ಹೆಚ್ಚಳ ಮಾಡಲಾಗುವುದು. ಅತ್ತಿಬೆಲೆಗೆ ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.

ಈ ವೇಳೆ ಆನೇಕಲ್ ಶಾಸಕ ಬಿ.ಶಿವಣ್ಣ, ಬಿಎಂಟಿಸಿ ಕಲಾ ಕೃಷ್ಣಸ್ವಾಮಿ, ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ, ಕೇಂದ್ರೀಯ ಮತ್ತು ಪೂರ್ವ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗೀಯ ಸಂಚಾರ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈಗಾಗಲೇ ಈ ಮಾರ್ಗದಲ್ಲಿ 37 ಸಾಮಾನ್ಯ ಬಸ್‌ಗಳು 300 ಟ್ರಿಪ್‌ಗಳು, ಇದರ ಜೊತೆಗೆ ಇನ್ಮುಂದೆ 10 ಬಸ್‌ಗಳು ಪ್ರತಿದಿನ 57 ಟ್ರಿಪ್ ಸಂಚಾರ ಮಾಡಲಿವೆ.
ಈ ಮಾರ್ಗಗಳಲ್ಲಿ ವಜ್ರ ಬಸ್‌ಗಳ ಸಂಚಾರ
ವೋಲ್ವೋ ಬಸ್‌ಗಳು ಇಂಡ್ಲಬೆಲೆ, ಬಿದರಗುಪ್ಪೆ, ಮೇಡಹಳ್ಳಿ, ಬಿಲ್ಲಾಪುರ, ಸರ್ಜಾಪುರ, ಸೋಮಾಪುರ, ಯೆಮರೆ, ದೊಮ್ಮಸಂದ್ರ, ಹೆಗ್ಗೊಂಡಹಳ್ಳಿ, ಗುಂಜೂರು, ವರ್ತೂರು, ವರ್ತೂರು ಕೋಡಿ, ವೈಟ್‌ಫೀಲ್ಡ್ ಅಂಚೆ ಕಚೇರಿ, ಹೋಪ್ ಫಾರ್ಮ್, ಕಾಡುಗೋಡಿ, ಬೆಳತ್ತೂರು, ಸೀಗೇಹಳ್ಳಿ, ಕಾಜಿ ಸೊನ್ನೆನಹಾಳ್, ಹೊಸಕೋಟೆ ಕೋಡಿ ಮತ್ತು ಹೊಸಕೋಟೆ ಪ್ರೌಢಶಾಲೆ ಮಾರ್ಗವಾಗಿ ಈ ಬಸ್‌ಗಳು ಸಂಚಾರ ಮಾಡಲಿವೆ.
ವಜ್ರ ಬಸ್‌ಗಳ ಸಂಚಾರ ಸಮಯಗಳ ವಿವರ
ಎರಡೂ ದಿಕ್ಕಿನಲ್ಲಿ ಮೊದಲ ಬಸ್ ಬೆಳಗ್ಗೆ 6 ಗಂಟೆಗೆ ಮತ್ತು ಕೊನೆ ಬಸ್ ರಾತ್ರಿ 9:20 ಕ್ಕೆ ಪ್ರಾರಂಭ ಆಗುತ್ತದೆ. ಅತೀ ಅಧಿಕ ಬೇಡಿಕೆಯಿರುವ ಸಮಯದಲ್ಲಿ 10-25 ನಿಮಿಷಗಳಲ್ಲಿ ಬಸ್ ಲಭ್ಯ ಆಗಲಿದೆ. ಉಳಿದ ಸಮಯದಲ್ಲಿ 45-90 ನಿಮಿಷಗಳಿಗೊಂದು ಬಸ್ ಸಿಗಲಿವೆ. ಹಿಂದೆ ಈ ಮಾರ್ಗದಲ್ಲಿ ಸಾಮಾನ್ಯ (ಬೆಂಗಳೂರು ಸರಿಗೆ) ಬಸ್‌ಗಳನ್ನು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದು, 37 ಹವಾನಿಯಂತ್ರಿತವಲ್ಲದ ಬಸ್‌ಗಳು ದಿನಕ್ಕೆ 300 ಟ್ರಿಪ್‌ಗಳನ್ನು ಮಾಡುತ್ತಿದ್ದವು ಎನ್ನಲಾಗಿದೆ.
ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್
ಸಾರಿಗೆ ವಿಭಾಗಗಳಲ್ಲಿ ಬೆಂಗಳೂರಿನ ಜೀವನಾಡಿಯಾಗಿರುರುವ ಬಿಎಂಟಿಸಿ ಆಗಾಗ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ಹಾಗಯೇ ಇದೀಗ ತಿಂಗಳಿಗೆ 1,200 ರೂಪಾಯಿಗೆ ವಿದ್ಯಾರ್ಥಿಗಳು ಈಗ ಬಿಎಂಟಿಸಿಯ ಸಾಮಾನ್ಯ ಹಾಗೂ ವಜ್ರ (ವಿಮಾನ ನಿಲ್ದಾಣವಲ್ಲದ, ಎಸಿ ವೋಲ್ವೋ) ಬಸ್ ಸೇವೆಗಳಲ್ಲಿ ಎಷ್ಟು ಬಾರಿ ಬೇಕಾದರೂ ಪ್ರಯಾಣ ಮಾಡಬಹುದಾಗಿದೆ.
ವಿದ್ಯಾರ್ಥಿಗಳು ವಜ್ರ ಪಾಸ್‌ಗಳನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. www.mybmtc.karnataka.gov.inನಿಂದ ವಿದ್ಯಾರ್ಥಿ ಬಸ್ ಪಾಸ್ ಅರ್ಜಿಯನ್ನು ಮುದ್ರಿಸಿ ಅದನ್ನು ಭರ್ತಿ ಮಾಡಿ ಮತ್ತು ಅವರ ಶಾಲೆ/ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳು ದೃಢೀಕರಿಸಿದ ಪಾಸ್ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಈ ಕೆಳಗಿನ ಯಾವುದೇ ಸ್ಥಳಗಳಲ್ಲಿ ಅಗತ್ಯವಿರುವ ಶುಲ್ಕವನ್ನು ಪಾವತಿಸಬೇಕು. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಬನಶಂಕರಿ ಟಿಟಿಎಂಸಿ, ಶಿವಾಜಿನಗರ ಬಸ್ ನಿಲ್ದಾಣ, ಕೆಂಗೇರಿ ಬಸ್ ಟರ್ಮಿನಲ್, ವೈಟ್‌ಫೀಲ್ಡ್ ಟಿಟಿಎಂಸಿ, ಕಾಡುಗೋಡಿ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೆಬ್ಬಾಳ್, ಎಲೆಕ್ಟ್ರಾನಿಕ್ಸ್ ಸಿಟಿ (ಡಿಪೋ 19), ಯಲಹಂಕ ಹಳೆಯ ಬಸ್ ನಿಲ್ದಾಣ, ಮತ್ತು ಸರ್ಜಾಪುರ ಬಸ್ ನಿಲ್ದಾಣ ಗಳಲ್ಲಿ ಅಗತ್ಯವಿರುವ ಶುಲ್ಕ ಪಾವತಿಸಿ ಪಡೆಯಬಹುದು.












Click it and Unblock the Notifications