Vande Bharat; ಬೆಂಗಳೂರು-ಚೆನ್ನೈ ನಡುವಿನ ರೈಲಿನ ವೇಗ ಹೆಚ್ಚಳ
ವಂದೇ ಭಾರತ್ ರೈಲು ಕೆ. ಆರ್. ಪುರ-ಜೋಲಾರಪಟ್ಟಿ ನಡುವೆ ಗಂಟೆಗೆ 110 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುತ್ತಿದೆ. ಜೂನ್ ಬಳಿಕ ಇದು 130 ಕಿ. ಮೀ. ವೇಗದಲ್ಲಿ ಸಾಗಲಿದೆ.
ಬೆಂಗಳೂರು, ಫೆಬ್ರವರಿ 08; ಪ್ರಧಾನಿ ನರೇಂದ್ರ ಮೋದಿ 2022ರ ನವೆಂಬರ್‌ನಲ್ಲಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಈ ರೈಲು ಸೇವೆಗೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ.
ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಬೆಂಗಳೂರು ಮೂಲಕ ಸಾಗುತ್ತದೆ. ನಗರದಲ್ಲಿ ಕೆ. ಎಸ್. ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಈ ರೈಲು ನಿಲುಗಡೆ ಇದೆ. ಆದ್ದರಿಂದ ಬೆಂಗಳೂರು-ಚೆನ್ನೈ ಪ್ರಯಾಣಿಕರಿಗೂ ಸಹಕಾರಿಯಾಗಿದೆ. ಈ ರೈಲು ಕೈಗಾರಿಕಾ ತಾಣ ಚೆನ್ನೈ ಮತ್ತು ಸಾಫ್ಟ್‌ವೇರ್ ನವೋದ್ಯಮ ತಂತ್ರಜ್ಞಾನದ ತಾಣವಾದ ಬೆಂಗಳೂರು ಸಂಪರ್ಕಿಸುತ್ತದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಲಯ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸುವ ಮೂಲಕ ಜನರ ಸಮಯ ಉಳಿತಾಯ ಮಾಡಿ, ಇನ್ನಷ್ಟು ಜನರನ್ನು ಸೆಳೆಯಲು ಮುಂದಾಗಿದೆ. ಇದಕ್ಕಾಗಿ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು, ಅವು ಚುರುಕಿನಿಂದ ಸಾಗಿವೆ.
ಕೆ. ಆರ್. ಪುರ-ಜೋಲಾರಪಟ್ಟಿ ನಡುವಿನ 125 ಕಿ. ಮೀ. ಮಾರ್ಗದಲ್ಲಿ ರೈಲ್ವೆಯು ವಿವಿಧ ಕಾಮಗಾರಿಯನ್ನು ಕೈಗೊಂಡಿದೆ. ಈ ಕಾಮಗಾರಿ ಜೂನ್ ವೇಳೆಗೆ ಅಂತ್ಯಗೊಳ್ಳುವ ನಿರೀಕ್ಷೆ ಇದ್ದು, ಬಳಿಕ ವಂದೇ ಭಾರತ್ ರೈಲುಗಳ ವೇಗ ಮತ್ತಷ್ಟು ಹೆಚ್ಚಾಗಲಿದೆ. ಬೆಂಗಳೂರು-ಮೈಸೂರು ಮಾರ್ಗದಲ್ಲಿಯೂ ತಿರುವುಗಳನ್ನು ಕಡಿಮೆ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ.

110 ರಿಂದ 130 ಕಿ. ಮೀ. ವೇಗದಲ್ಲಿ ಸಂಚಾರ
ಬೆಂಗಳೂರು ವಲಯದ ಮ್ಯಾನೇಜರ್ ಶ್ಯಾಮ್ ಸಿಂಗ್ ಕಾಮಗಾರಿಗಳ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ನಾವು ವಿವಿಧ ಹಂತದಲ್ಲಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಈಗ ರೈಲು ಕೆ. ಆರ್. ಪುರ-ಜೋಲಾರಪಟ್ಟಿ ನಡುವೆ ಗಂಟೆಗೆ 110 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುತ್ತಿದೆ. ಹಳಿ ಸೇರಿದಂತೆ ಈಗ ಕೈಗೊಂಡಿರುವ ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲು ಸಾಧ್ಯವಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ಜೂನ್ ವೇಳೆಗೆ ಕಾಮಗಾರಿ ಪೂರ್ಣ
ಶ್ಯಾಮ್ ಸಿಂಗ್ ಅವರ ಪ್ರಕಾರ, "ಈಗ ಕೈಗೊಂಡಿರುವ ತಿರುವುಗಳನ್ನು ಕಡಿಮೆ ಮಾಡುವುದು, ಹೆಚ್ಚಿನ ಜನಸಂದಣಿ ಪ್ರದೇಶದಲ್ಲಿ ಬೇಲಿ ಅಳವಡಿಕೆ, ಹಳಿಗಳ ಇತರ ಕೆಲಸಗಳು ಜೂನ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
"ಈ ಕಾಮಗಾರಿ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೆಂಗಳೂರು-ಚೆನ್ನೈ ಮಾರ್ಗದ ಸಂಚಾರದ ಅವಧಿ ಕಡಿಮೆಯಾಗಲಿದೆ. ಆದರೆ ಎಷ್ಟು ಕಡಿಮೆಯಾಗಲಿದೆ? ಎಂದು ಈಗ ಅಂದಾಜಿಸಲು ಸಾಧ್ಯವಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ
2022ರ ನವೆಂಬರ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ಸಿಕ್ಕಿದೆ. ಮೈಸೂರು-ಕೆ. ಎಸ್. ಆರ್. ಬೆಂಗಳೂರು ಮತ್ತು ಕೆ. ಎಸ್. ಆರ್. ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಾವಿರಾರು ಜನರು ಸಂಚಾರ ನಡೆಸುತ್ತಿದ್ದಾರೆ. ದೇಶದ ಸೆಮಿ ಹೈಸ್ಪೀಡ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈಲು ನಂಬರ್ 20607 ಕೆ. ಎಸ್. ಆರ್. ಬೆಂಗಳೂರು-ಮೈಸೂರು ನಡುವಿನ ಸೀಟುಗಳು ನವೆಂಬರ್‌ನಲ್ಲಿ ಶೇ 53ರಷ್ಟು ಭರ್ತಿಯಾಗಿತ್ತು. ಆದರೆ ಜನವರಿ 2023ರಲ್ಲಿ ಇದು ಶೇ 51ಕ್ಕೆ ಕುಸಿತ ಕಂಡಿದೆ. ಆದೇ ರೈಲು ನಂಬರ್ 20608 ಮೈಸೂರು-ಕೆ. ಎಸ್. ಆರ್. ಬೆಂಗಳೂರು ರೈಲು ನವೆಂಬರ್‌ನಲ್ಲಿ ಶೇ 36ರಷ್ಟು ಭರ್ತಿಯಾಗಿತ್ತು. 2023ರ ಜನವರಿಯಲ್ಲಿ ಇದು ಶೇ 43ಕ್ಕೆ ಏರಿಕೆಯಾಗಿದೆ.

ಬೆಂಗಳೂರು-ಮೈಸೂರು ವೇಗ ಹೆಚ್ಚಳ
ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ರೈಲಿನ ವೇಗ ಗಂಟೆಗೆ 100 ಕಿ. ಮೀ. ಇದೆ. ಅಧಿಕಾರಿಗಳು ವೇಗದ ಕುರಿತು ಅಧ್ಯಯನ ನಡೆಸಿದಾಗ ತಿರುವುಗಳು ಕಾರಣ ಎಂಬುದು ತಿಳಿದುಬಂದಿದೆ. ಆದ್ದರಿಂದ ತಿರುವುಗಳನ್ನು ಕಡಿಮೆ ಮಾಡಿ ರೈಲಿನ ವೇಗವನ್ನು ಗಂಟೆಗೆ 110 ಕಿ. ಮೀ. ಮಾಡುವ ಚಿಂತನೆ ನಡೆದಿದೆ. ಈ ಮಾರ್ಗದಲ್ಲಿ 38 ತಿರುವುಗಳಿವೆ, ಆದರೆ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ತಿರುವುಗಳನ್ನು ತೆರವು ಮಾಡಲು ಸಾಧ್ಯವಿಲ್ಲ.
ಮೈಸೂರು-ಬೆಂಗಳೂರು ನಡುವೆ ನವೆಂಬರ್‌ನಲ್ಲಿ 6,499 ಪ್ರಯಾಣಿಕರು, ಡಿಸೆಂಬರ್‌ನಲ್ಲಿ 12,982 ಪ್ರಯಾಣಿಕರು, 2023ರ ಜನವರಿಯಲ್ಲಿ 11,623 ಜನರು ಸಂಚಾರ ನಡೆಸಿದ್ದಾರೆ. ಕೆ. ಎಸ್. ಆರ್. ಬೆಂಗಳೂರು-ಮೈಸೂರು ನಡುವೆ ನವೆಂಬರ್‌ನಲ್ಲಿ 9,592, ಡಿಸೆಂಬರ್‌ನಲ್ಲಿ 19,069 ಮತ್ತು ಜನವರಿ 2023ರಲ್ಲಿ 13,770 ಜನರು ಪ್ರಯಾಣ ಮಾಡಿದ್ದಾರೆ.












Click it and Unblock the Notifications