ಚಾರ್‌ಧಾಮ್ ಯಾತ್ರೆಗೆ ಸಹಾಯಧನ; ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರು, ಡಿಸೆಂಬರ್ 06; ಕರ್ನಾಟಕ ಸರ್ಕಾರ ಮಾನಸ ಸರೋವರ ಯಾತ್ರೆಯಂತೆಯೇ ಚಾರ್‌ಧಾಮ್ ಯಾತ್ರೆಗೆ ಸಹ ಸಹಾಯಧನವನ್ನು ನೀಡಲಿದೆ. ಈ ಸಹಾಯಧನ ಪಡೆಯಲು ಆಸಕ್ತರು ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ಈ ಕುರಿತು ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ. 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಚಾರ್‌ಧಾಮ್ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ. 20,000ಗಳಂತೆ ಸರ್ಕಾರದ ಸಹಾಯಧನವನ್ನು ನೀಡಲಾಗುತ್ತದೆ.
ಆನ್‌ಲೈನ್ ಮೂಲಕ ಅಥವ ಖುದ್ದಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅನುದಾನದ ಲಭ್ಯತೆಗೆ ಅನುಗುಣವಾಗಿಅನುದಾನವನ್ನು ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಡಿಸೆಂಬರ್ 31ರ ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಹಾಕಲು ಅರ್ಹತೆಗಳು: ಅರ್ಜಿಗಳನ್ನು ಸಲ್ಲಿಸುವ ಯಾತ್ರಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು. 45ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಯಾತ್ರಾರ್ಥಿಯು ಕಡ್ಡಾಯವಾಗಿ, ಬದರಿನಾಥ್, ಕೇದಾರ್‌ನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಕ್ಷೇತ್ರಗಳಿಗೆ ಭೇಟಿ ನೀಡಿರಬೇಕು. ಯಾತ್ರಾರ್ಥಿಯು ಆನ್‌ಲೈನ್ ಮತ್ತು ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಯಾತ್ರಾರ್ಥಿ ಈ ಲಿಂಕ್ ಬಳಕೆ ಮಾಡಬೇಕು. http://karnemaka.kar.nic.in/yatrabenefit

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಯಾತ್ರಾರ್ಥಿ ಅಪ್‌ಲೋಡ್ ಮಾಡಿರುವ ದಾಖಲೆಗಳ ಪ್ರತಿಗಳನ್ನು ಖುದ್ದಾಗಿ ಅಥವ ಅಂಚೆ ಮೂಲಕ ಕಛೇರಿಗೆ ಸಲ್ಲಿಸತಕ್ಕದ್ದು.
ಒದಗಿಸಬೇಕಾದ ದಾಖಲೆಗಳು
* ಒಂದು ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)
* ಆಧಾರ್ ಗುರುತಿನ ಚೀಟಿ
* ಚುನಾವಣಾ ಗುರುತಿನ ಚೀಟಿ
* ರದ್ದು ಪಡಿಸಿದ ಚೆಕ್ ಹಾಳೆ
* ಪಾಸ್ ಪುಸ್ತಕದ ಮೊದಲ ಪುಟದ ನಕಲು ಪ್ರತಿ
* 20 ರೂ. ಗಳ ಛಾಪಾ ಕಾಗದದಲ್ಲಿ ಸ್ಮ-ದೃಢೀಕರಣ
* ಯಾತ್ರೆ ಕೈಗೊಳ್ಳುವ ಮುನ್ನ ನೋಂದಾಯಿಸಿಕೊಂಡ ಪ್ರತಿ ಪತ್ರ
* ಯಾತ್ರೆ ಮುಗಿದ ನಂತರ ಉತ್ತರಖಾಂಡ ಪುವಾಸೋದ್ಯಮ ಇಲಾಖೆಯ ವತಿಯಿಂದ ನೀಡಲಾದ ಪ್ರಮಾಣ ಪತ್ರ (ಕಡ್ಡಾಯವಾಗಿ 4 ಧಾಮಗಳು ನಮೂದಾಗಿರತಕ್ಕದ್ದು).
ಆಸಕ್ತರು ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪರ್ಕಿಸಲು ಕೋರಿದೆ.
ಹಿಂದೂಗಳ ಕನಸು; ಜೀವನದಲ್ಲಿ ಒಮ್ಮೆಯಾದರೂ ಪವಿತ್ರವಾದ ಚಾರ್‌ಧಾಮ್ ಯಾತ್ರೆಯನ್ನು ಕೈಗೊಳ್ಳಬೇಕು ಎಂಬುದು ಹಿಂದೂಗಳ ಕನಸು. ಉತ್ತರಾಖಂಡದ 4 ಪವಿತ್ರ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವುದನ್ನು ಚಾರ್‌ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ.
ಚಾರ್‌ಧಾಮ್ ಯಾತ್ರೆಯಲ್ಲಿ ಯಮನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿವೆ. ಈ ದೇವಾಲಯಗಳನ್ನು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ದೇವಾಲಯಗಳನ್ನು ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬುದು ನಂಬಿಕೆಯಾಗಿದೆ.
ಯಾತ್ರಾರ್ಥಿಗಳು ಚಾರ್‌ಧಾಮ್ ಯಾತ್ರೆಯನ್ನು ಯಮನೋತ್ರಿಯಿಂದ ಆರಂಭಿಸುತ್ತಾರೆ. ಯಮುನಾ ನದಿಯ ಉಗಮ ಸ್ಥಾನವಾದ ಯಮನೋತ್ರಿ ಹಿಮಾಲಯದ ಅತಿ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಚಾರ್‌ಧಾಮ್‌ಗಳ ಪೈಕಿ ಅತ್ಯಂತ ಮೇಲ್ಭಾಗದಲ್ಲಿ ಇದು ಇದೆ.












Click it and Unblock the Notifications