ಮಲೆನಾಡಿನ ಮನೆಯಲ್ಲಿ ಮಳೆಗಾಲದ ಮೂರು ದಿನ-ಇದು ಹೋಮ್ ಸ್ಟೇ ಅನುಭವ

Posted By:
Subscribe to Oneindia Kannada

'ಅಮ್ತಿ ಹೋಂ ಸ್ಟೇ'-ಗುಡ್ಡೇಕೇರಿ ಎಂಬ ಊರಿನಲ್ಲಿ ಬಚ್ಚಿಟ್ಟುಕೊಂಡಂತಿರುವ ಸೊಗಸಾದ ಹೋಂ ಸ್ಟೇ. ಸಸ್ಯಾಹಾರಿಗಳಿಗಾಗಿ ಹೇಳಿ ಮಾಡಿಸಿದಂತಿರುವ ಇದರ ಮಾಲೀಕರು ಕೆ.ಎಸ್.ಶ್ರೀಧರ್. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ 23 ಕಿ.ಮೀ. ದೂರದಲ್ಲಿದೆ. ಈ ಸ್ಥಳದಿಂದ ಅಂದರೆ ಗುಡ್ಡೇಕೇರಿಯಿಂದ ಆಗುಂಬೆಗೆ ಎಂಟೇ ಕಿಲೋಮೀಟರ್.

ಎಂಜಿನಿಯರಿಂಗ್ ಓದಿಕೊಂಡು, ಸದ್ಯಕ್ಕೆ ಕೃಷಿ ಮಾಡುತ್ತಿರುವ ಶ್ರೀಧರ್ ಅವರಿಗೆ ಮಲೆನಾಡಿನ ಪರಿಸರವನ್ನು, ಸೊಗಸಾದ-ಸವಿಯಾದ ಊಟವನ್ನು ಪರಿಚಯಿಸುವುದರಲ್ಲೂ ಸಂತೋಷವಿದೆ. ಮೂರ್ನಾಲ್ಕು ವರ್ಷದ ಹಿಂದೆ ಅಡಿಕೆಗೆ ಕೊಳೆ ರೋಗ ಬಂದು ನಷ್ಟವಾಗಿ ಹೋಯಿತು. ಆಗ ಪರ್ಯಾಯವಾಗಿ ಏನಾದರೂ ಮಾಡುವ ಅನಿವಾರ್ಯಕ್ಕೆ ಸಿಕ್ಕಿಕೊಂಡಿವಿ. ಆಗ ಹೊಳೆದದ್ದೇ ಈ ಹೋಮ್ ಸ್ಟೇ ಎನ್ನುತ್ತಾರೆ ಶ್ರೀಧರ್.[ಬಿಸಿಲ ನಾಡು ಕೊಪ್ಪಳ ಜಿಲ್ಲೆಯ ಕಬ್ಬರಗಿ ಜಲಪಾತ]

ಹಾಗಂತ ಇದು ಅವರ ಪುರ್ಣ ಪ್ರಮಾಣದ 'ವ್ಯವಹಾರ'ವೇ ಏನಲ್ಲ. ಶುದ್ಧ ಸಸ್ಯಾಹಾರಿ ಅಡುಗೆ, ಯಾವುದೇ ಕಾರಣಕ್ಕೂ ಮದ್ಯಪಾನಕ್ಕೆ ಅವಕಾಶವಿಲ್ಲ, ಅಡಿಕೆ ಕೊಯ್ಲಿನ ವೇಳೆ ಅತಿಥಿಗಳಿಗೆ ಅವಕಾಶ ಸಾಧ್ಯವಿಲ್ಲ.. ಹೀಗೆ ಕೆಲ ನಿಬಂಧನೆಗಳು ಕೂಡ ಇವೆ. ಮನೆಯಲ್ಲಿ ನಿತ್ಯ ಅಗ್ನಿಹೋತ್ರ ಮಾಡುವ ಅವರಿಗೆ ದುಡ್ಡಿಗಾಗಿ ಎಲ್ಲದರಲ್ಲೂ ರಾಜಿಯಾಗುವುದು ಇಷ್ಟವಿಲ್ಲ.

ಮಲೆನಾಡಿನ ಅಡುಗೆ

ಮಲೆನಾಡಿನ ಅಡುಗೆ

ಹೋಮ್ ಸ್ಟೇಯಲ್ಲಿ ಮಾಡುವುದು ಮಲೆನಾಡಿನ ಅಡುಗೆಯನ್ನೇ. ತಂಬುಳ್ಳಿ, ಕಾಯಿರಸ, ಪತ್ರೊಡೆ, ಇನ್ನು ಆಯಾ ಕಾಲಕ್ಕೆ ದೊರೆಯುವ ಸಹಜವಾಗಿ ಬೆಳೆದ ಸೊಪ್ಪು-ಸದೆಯ ಸಾರು, ಹುಳಿ, ಚಟ್ನಿಯ ರುಚಿ ನೋಡಬೇಕೆಂದರೆ ಇಲ್ಲಿ ಕನಿಷ್ಠ ಮೂರು ದಿನ ಇರಲೇಬೇಕು ಬಿಡಿ. ಇನ್ನು ಮಳೆ ಇಷ್ಟಪಡುವವರಾದರೆ ಜೂನ್ ನಿಂದ ಅಗಸ್ಟ್ ವರೆಗಿನ ವೇಳೆಯಲ್ಲಿ ಇಲ್ಲಿಗೆ ಹೋದರೆ ಬಿಸಿ ಊಟ, ತಣ್ಣಗಿನ ಮಳೆ, ನೋಡುತ್ತಾ ನಿಂತು ಕಳೆದುಹೋದವೇನೋ ಎಂಬಂಥ ಸ್ಥಳಗಳನ್ನು ಅನುಭವಿಸಬಹುದು.

ಎಷ್ಟೊಂದು ಸ್ಥಳವಿದೆ!

ಎಷ್ಟೊಂದು ಸ್ಥಳವಿದೆ!

ಈ ಹೋಮ್ ಸ್ಟೇಯಿಂದ ಹತ್ತಿರದಲ್ಲೇ ನೋಡುವಂಥ ಹಲವು ಸ್ಥಳಗಳಿವೆ. ಆಗುಂಬೆ ಸೂರ್ಯಾಸ್ತಮಾನದ ಸ್ಥಳ, ಕುಂದಾದ್ರಿ, ಜೋಗಿಗುಂಡಿ, ಬರ್ಕಣ, ಸಿಬಲಗುಡ್ಡೆ, ಶೃಂಗೇರಿ, ಸಿರಿಮನೆ ಜಲಪಾತ, ಭೀಮನ ಕಟ್ಟೆ, ಕುಪ್ಪಳಿ...ಓಹ್ ಎಷ್ಟೊಂದು ಸ್ಥಳಗಳಿವೆ ಗೊತ್ತಾ? ಆದರೆ ಒಂದೇ ದಿನದಲ್ಲಿ ನೋಡ್ತೀವಿ ಅಂತ ಮಾತ್ರ ಅಂದುಕೊಳ್ಳಬೇಡಿ.

ಸಪಾಟು ರಸ್ತೆ, ಸಲೀಸಾದ ಪ್ರಯಾಣ ಅಲ್ಲ

ಸಪಾಟು ರಸ್ತೆ, ಸಲೀಸಾದ ಪ್ರಯಾಣ ಅಲ್ಲ

ಏಕೆಂದರೆ ಕೆಲವು ಕಡೆ ಗುಡ್ಡ ಏರಬೇಕು, ಹಳ್ಳದಲ್ಲಿ ಇಳಿಯಬೇಕು...ತೀರಾ ಸಪಾಟು ರಸ್ತೆ. ಸಲೀಸಾದ ಪ್ರಯಾಣ ಅಂದುಕೊಂಡು ಕೆಲವರು ಹೋಗಿ ಆ ನಂತರ ಲೆಕ್ಕ ತಪ್ಪಿದ ಉದಾಹರಣೆಗಳೂ ಇವೆ. ಅದರೆ ಅಮ್ತಿ ಹೋಮ್ ಸ್ಟೇಯ ತೊಟ್ಟಿ ಮನೆಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತು, ಚೆನ್ನಾಗಿ ಊಟ ಮಾಡಿ, ಕಣ್ತುಂಬ ನಿದ್ದೆ ಮಾಡಿ ಹೋದವರೂ ಇದ್ದಾರೆ.

ನಕ್ಷತ್ರ ಎಣಿಸಬಹುದು

ನಕ್ಷತ್ರ ಎಣಿಸಬಹುದು

ಬಿಎಸ್ ಎನ್ ಎಲ್ ನೆಟ್ ವರ್ಕ್ ಬಿಟ್ಟು ಮತ್ತೊಂದು ದೊರೆಯುವುದಿಲ್ಲ. ಕೆಲವು ಸಲ ಅದೂ ಸಿಗಲ್ಲ. ಟಿವಿ ಇಲ್ಲ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರು ಸೀರೆಯುಟ್ಟ ಚೆಲುವೆಯಂತೆ ಕಾಣುವ ಭೂಮಿ, ತಂಪಾದ-ಮಾಲಿನ್ಯ ಇಲ್ಲದ ಗಾಳಿ, ಅಂಗಳದ ಹಸಿರು ಹಾಸಿಗೆ ತಲೆ ಕೊಟ್ಟು ಮಲಗಿದರೆ ಎಲ್ಲಿದ್ದವೋ ಇಷ್ಟೊಂದು ನಕ್ಷತ್ರ ಎನಿಸುವಂಥ ಅನುಭೂತಿ ಬೇಕೆಂದರೆ ಇಲ್ಲಿಗೆ ಭೇಟಿ ನೀಡಬೇಕು.

ವೈದ್ಯಕೀಯ ಸಸ್ಯ ರಕ್ಷಣೆ

ವೈದ್ಯಕೀಯ ಸಸ್ಯ ರಕ್ಷಣೆ

ಈಚೆಗೆ ಮನೆ ಎದುರಿನ ತೋಟದ ಬಳಿಯಲ್ಲೇ ವೈದ್ಯಕೀಯ ಸಸ್ಯಗಳ ರಕ್ಷಣೆಯನ್ನೂ ಮಾಡಲಾಗುತ್ತಿದೆ. ನಡೆದಾಡುವುದಕ್ಕೆ ಒಂದು ಪಥವೂ ಇದೆ. ಆಯಾ ಕಾಲಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಅಪರೂಪದ ಹಕ್ಕಿಗಳನ್ನು ಕಣ್ಣು ತುಂಬಿಕೊಳ್ಳಬಹುದು. ಮನೆಯಲ್ಲಿ ಇರುವುದು ಶ್ರೀಧರ್, ಅವರ ತಾಯಿ ನಾಗರತ್ನ ಮತ್ತು ಪತ್ನಿ ರಾಗಿಣಿ.

ವೆಬ್ ಸೈಟ್ ವಿಳಾಸ, ಫೋನ್ ನಂಬರ್

ವೆಬ್ ಸೈಟ್ ವಿಳಾಸ, ಫೋನ್ ನಂಬರ್

ಸಹಜವಾದ ಅರಿಶಿನ, ಪಾಲಿಶ್ ಇಲ್ಲದ ಅಕ್ಕಿ ಇತರ ವಸ್ತುಗಳು ಬೇಕಿದ್ದರೆ, ಶ್ರೀಧರ್ ಅವರು ನಂಬಿಕಸ್ಥರಿಂದ ಅದನ್ನು ಖರೀದಿಗೆ ಕೊಡಿಸುತ್ತಾರೆ. ಎಷ್ಟು ಮಂದಿ ಇಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಇದೆ? ಒಬ್ಬರಿಗೆ, ಒಂದು ದಿನಕ್ಕೆ ಎಷ್ಟು ಹಣ ತೆಗೆದುಕೊಳ್ತಾರೆ? ಅಡ್ವಾನ್ಸ್ ಕೊಡಬೇಕಾ? ಎಷ್ಟು ಮುಂಚಿತವಾಗಿ ತಿಳಿಸಬೇಕು? ಇಂಥ ಪ್ರಶ್ನೆಗಳಿಗೆ ಉತ್ತರ ಬೇಕು ಅಂದರೆವೆಬ್ ಸೈಟ್ ವಿಳಾಸ-http://amthihomestay.com. ಮೊಬೈಲ್ ಸಂಖ್ಯೆ 9482029664.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amthi home stay in Guddekeri, here visitors can enjoy the host of malenadu. Food will be served in Malenadu style. Nature at its best here. Visitors can visit various places in and around Amthi homestay.
Please Wait while comments are loading...