Yadgir Vande Bharat: ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸಸಪ್ರೆಸ್ ಹೆಚ್ಚುವರಿ ನಿಲುಗಡೆಗೆ ಅವಕಾಶ
ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ. ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
ಯಾದಗಿರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಆಗಮನ/ನಿರ್ಗಮನದ ವೇಳಾಪಟ್ಟಿ ಈ ಕೆಳಗಿನಂತಿವೆ.

1. ಜುಲೈ 27 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ರಾತ್ರಿ 9:44 ಗಂಟೆಗೆ ಆಗಮಿಸಿ, 9:45ಕ್ಕೆ ಹೊರಡಲಿದೆ.
2. ಜುಲೈ 28ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 22231 ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ಬೆಳಿಗ್ಗೆ 5:54ಕ್ಕಯ ಬಂದು, 5:55ಕ್ಕೆ ಹೊರಡಲಿದೆ.
ಈ ಹೆಚ್ಚುವರಿ ನಿಲುಗಡೆಯು ಯಾದಗಿರಿಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.

ಕಲಬುರಗಿಯಿಂದ ಬೆಂಗಳೂರಿಗೆ ಕಳೆದ ಮಾ.12 ರಂದು ಸಂಚಾರ ಆರಂಭಿಸಿದ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದರೂ ನಿಲುಗಡೆ ಮಾಡದೆ ಸಂಚಾರ ನಡೆಸಿತ್ತು. ಅಂದಿನಿಂದ ಇಂದಿನವರೆಗೂ ಯಾದಗಿರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡದೇ ಸಂಚಾರ ಮಾಡುತ್ತಿದೆ.
ಆದರೆ ರೈಲು ಸಂಚಾರ ಆರಂಭಗೊಂಡಾಗಿನಿಂದಲೂ ಯಾದಗಿರಿಯಲ್ಲು ರೈಲು ನಿಲುಗಡೆ ಮಾಡಬೇಕೆಂದು ಜಿಲ್ಲೆಯ ಜನರು, ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಒತ್ತಾಯ ಮಾಡುತ್ತಲೇ ಬಂದಿದ್ದು,ಕೊನೆಗೂ ಒತ್ತಾಯ, ಒತ್ತಡ ಹಾಗೂ ಹೋರಾಟಕ್ಕೆ ಇಲಾಖೆ ಸ್ಪಂದಿಸಿದೆ.
ಯಾದಗಿರಿಯಲ್ಲಿ ರೈಲು ನಿಲುಗಡೆ ಮಾಡಲು ರೈಲ್ವೆ ಬೋರ್ಡ್‌ನ ಜಂಟಿ ನಿರ್ದೇಶಕ ವಿವೇಕ ಕುಮಾರ ಸಿನ್ಹಾ ಅವರು ಆದೇಶಿಸಿದ್ದಾರೆ ಎಂದು ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಏ. 5 ರಂದು ಪ್ರಕಟಣೆ ಹೊರಡಿಸಿ ಚುನಾವಣೆಗಾಗಿ ಸುಳ್ಳು ಹೇಳಿದ್ದರು. ಆದರೆ, ಯಾದಗಿರಿಯಲ್ಲಿ ವಂದೇ ಭಾರತ ರೈಲು ನಿಲುಗಡೆ ಆಗಿರಲಿಲ್ಲ.
ಆಗ ರಾಜಾ ಅಮರೇಶ್ವರ ನಾಯಕ ಚುನಾವಣೆಯಲ್ಲಿ ಜನರ ಮತ ಸೆಳೆಯಲು ಸುಳ್ಳು ಹೇಳಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿನ ಅಭಿವೃದ್ಧಿ ವೇದಿಕೆ ಗ್ರೂಪ್ ನಲ್ಲಿ ರೈಲ್ವೆ ಇಲಾಖೆ ಹಾಗೂ ನಾಯಕರು ಚುನಾವಣೆಯ ವೇಳೆಯಲ್ಲಿ ಯಾದಗಿರಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದ್ದರು. ಯಾದಗಿರಿಯಲ್ಲಿ ವಂದೇ ಭಾರತ ರೈಲು ಜು. 20ರಿಂದ ನಿಲುಗಡೆ ಸಂಬಂಧ ಆದೇಶ ಹೊರಡಿಸಲಾಗಿದೆ. ಆದರೆ, ರೈಲ್ವೆ ಬೋರ್ಡ್ ಇನ್ನೂ ಒಪ್ಪಿಕೊಂಡಿರಲಿಲ್ಲ.
ಈಗ ದಕ್ಷಿಣ ಮಧ್ಯ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ.












Click it and Unblock the Notifications