ಪ್ರವಾಸಿಗರೇ ಗಮನಿಸಿ: ಕೊಡಗು ಜಿಲ್ಲೆಯ ಎಲ್ಲಾ ಗಾಜಿನ ಸೇತುವೆ ಬಂದ್
ಮಡಿಕೇರಿ, ಜೂನ್ 30: ಕೊಡಗು ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಸುರಿಯುತ್ತಿದೆ, ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಏರಿದೆ. ಕೊಡಗಿಗೆ ಆಗಮಿಸಿದ ಜನರು ಗಾಜಿನ ಸೇತುವೆಯಲ್ಲಿ ಅಡ್ಡಾಡಿ ಹೊಸ ಅನುಭವ ಪಡೆಯಬೇಕು ಎಂದು ಅಂದುಕೊಂಡಿದ್ದರೆ ನಿರಾಸೆ ಖಂಡಿತ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಗಾಜಿನ ಸೇತುವೆಗಳನ್ನು ಸೆಪ್ಟೆಂಬರ್ 15ರ ತನಕ ಬಂದ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿಕೇರಿ ತಾಲೂಕಿನಲ್ಲಿ ಅಬ್ಬಿ ಫಾಲ್ಸ್‌ಗೆ ಹೋಗುವ ರಸ್ತೆಯ ಹೆಬ್ಬಟಗೇರಿ ಗ್ರಾಮದ ನಂದಿ ಮೊಟ್ಟೆಯಲ್ಲಿ 4 ತಿಂಗಳ ಹಿಂದೆ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ 2ನೇ ಗಾಜಿನ ಸೇತುವೆ ಇದಾಗಿದೆ.
ಆದರೆ ಬುಧವಾರ ಈ ಗಾಜಿನ ಸೇತುವೆ ಕೆಳಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಗಾಜಿನ ಸೇತುವೆಗೆ ಅಳವಡಿಕೆ ಮಾಡಿರುವ ಕಂಬಗಳು ಸಹ ಕುಸಿಯುವ ಭೀತಿಯಲ್ಲಿದೆ. ಆದ್ದರಿಂದ ಗಾಜಿನ ಸೇತುವೆ ಮೇಲೆ ಪ್ರವಾಸಿಗರು ನಡೆಯಲು ಆತಂಕಪಡಬೇಕಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಗಾಜಿನ ಸೇತುವೆ ಕಾಮಗಾರಿಗಳನ್ನು ಸೆಪ್ಟೆಂಬರ್ 15ರ ತನಕ ನಿಲ್ಲಿಸಬೇಕು, ಈಗಿರುವ ಗಾಜಿನ ಸೇತುವೆಗಳನ್ನು ಬಂದ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ಥಳೀಯ ಆಡಳಿತದಿಂದ ವರದಿ: ನಂದಿ ಮೊಟ್ಟೆಯಲ್ಲಿ ನಾಲ್ಕು ತಿಂಗಳ ಹಿಂದೆ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಇದಕ್ಕೆ ಭೂ ಪರಿವರ್ತನೆ ಮಾಡುವ ಕುರಿತು ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂಬ ಆರೋಪವಿದೆ. ಈ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯಿತು.
ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳದೇ ಗಾಜಿನ ಸೇತುವೆಯ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿದ್ದು ಹೇಗೆ?. ಸುರಕ್ಷತಾ ಕ್ರಮಗಳನ್ನು ಪಾಲಿಸದೇ, ಸ್ಥಳೀಯ ಆಡಳಿತದ ಎನ್‌ಒಸಿ ಇಲ್ಲದೇ ಕಾರ್ಯ ನಿರ್ವಹಣೆ ಆರಂಭಿಸಿದ್ದು ಹೇಗೆ?, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ಇದು ಬರಲಿಲ್ಲವೇ?. ಈ ಕುರಿತು ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈಗ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ. ಪ್ರವಾಸಿಗರು ಮಳೆಗಾಳಲದಲ್ಲಿ ಜಿಲ್ಲೆಗ ಆಗಮಿಸಿ, ಗಾಜಿನ ಸೇತುವೆ ಮೇಲೆ ಸಂಚಾರ ನಡೆಸಿ, ಅಪಾಯಗಳು ಉಂಟಾದರೆ ಸ್ಥಳೀಯ ಗ್ರಾಮ ಪಂಚಾಯಿತಿಯೇ ಹೊಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೆಡಿಪಿ ಸಭೆಯು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್. ಭೋಸರಾಜು ಅಧ್ಯಕ್ಷತೆಯಲ್ಲಿ ಜುಲೈ 6ರಂದು ನಡೆಯಲಿದೆ. ಈ ಸಭೆಯಲ್ಲಿಯೂ ಸಹ ಗಾಜಿನ ಸೇತುವೆ ವಿಚಾರವಾಗಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಕೊಡಗು ಜಿಲ್ಲೆಯಲ್ಲಿ ಖಾಸಗಿಯವರು ನಿರ್ಮಿಸಿರುವ ಗಾಜಿನ ಸೇತುವೆಗಳು ಕೊಡಗು ಪ್ರವಾಸೋದ್ಯಮಕ್ಕೆ ಮತ್ತಷ್ಟು ಜನರನ್ನು ಆಕರ್ಷಿಸುತ್ತಿವೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಗಾಜಿನ ಸೇತುವೆಯಲ್ಲಿ ನಡೆದಾಡಿ, ಪ್ರಕೃತಿಯ ಸೌಂದರ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರಿಂದಾಗಿ ಗಾಜಿನ ಸೇತುವೆ ನೋಡಲು ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ.
ಕೊಡಗು ಜಿಲ್ಲೆಯ ಗಾಜಿನ ಸೇತುವೆಗಳಿಗೆ ಪಕ್ಕದ ರಾಜ್ಯವಾದ ಕೇರಳ ಸ್ಪೂರ್ತಿಯಾಗಿದೆ. ಕೇರಳದ ವಯನಾಡಿನಲ್ಲಿ ಪ್ರವಾಸೋದ್ಯ ಕ್ಷೇತ್ರಕ್ಕೆ ಗಾಜಿನ ಸೇತುವೆ ಮತ್ತಷ್ಟು ಮೆರಗು ತಂದಿದೆ. ಅಲ್ಲಿಂದ ಸ್ಪೂರ್ತಿ ಪಡೆದು ಕೇರಳದ ತಂತ್ರಜ್ಞರಿಂದಲೇ ಕೊಡಗಿನಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. ಇದು ಪ್ರವಾಸಿಗರನ್ನು ಸೆಳೆಯಲು ಸಹ ಯಶಸ್ವಿಯಾಗಿದೆ.
ಜಿಲ್ಲೆಯ ಹೋಂಸ್ಟೇ, ರೆಸಾರ್ಟ್‍ಗಳು ಕಾಫಿ ತೋಟದ ನಡುವೆ ಗಾಜಿನ ಸೇತುವೆ ನಿರ್ಮಾಣ ಮಾಡಿವೆ. ಇದರ ಮೇಲೆ ನಡೆಯಲು, ಪ್ರಕೃತಿ ಸೌಂದರ್ಯ ಸವಿಯಲು ಪ್ರವೇಶ ಶುಲ್ಕವನ್ನು ಪಾವತಿಸಬೇಕಿದೆ. ಆದರೆ ಮಳೆಗಾಲದಲ್ಲಿ ಭೂ ಕುಸಿತ ಉಂಟಾದರೆ ಸೇತುವೆಗಳ ಸುರಕ್ಷತೆ ಬಗ್ಗೆ ಪ್ರಶ್ನೆಯನ್ನು ಮಾಡುವಂತಾಗಿದೆ.












Click it and Unblock the Notifications