ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಮತ್ತೊಂದು ಗುಡ್‌ನ್ಯೂಸ್
ಇನ್ನೇನು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಭಕ್ತರು ಯಾತ್ರೆ ಕೈಗೊಳ್ಳಲಿದ್ದಾರೆ. ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ದೇಶದ ವಿವಿಧೆಡೆಯಿಂದ ಬರುವ ಹಿನ್ನೆಲೆ ಅಲ್ಲಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಅಲ್ಲಿ ಇನ್ನು ಮುಂದೆ ಸ್ಪಾಟ್ ಬುಕಿಂಗ್ ಇರಲ್ಲ ಎನ್ನುವ ವಿಚಾರ ಭಕ್ತರಿಗೆ ಬೇಸರ ಉಂಟು ಮಾಡಿತ್ತು. ಇದೀಗ ಭಕ್ತರಿಗಾಗಿ ಅಲ್ಲಿ ವಿಶೇಷ ಸೌಕರ್ಯವೊಂದನ್ನು ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುದ ಕೇರಳ ಮುಜರಾಯಿ ಸಚಿವ ವಿ.ಎನ್.ವಾಸವನ್, ಶಬರಿಮಲೆಯಲ್ಲಿ ಇನ್ಮುಂದೆ ಸ್ಪಾಟ್ ಬುಕಿಂಗ್ ಇರೋದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಆದರೂ ಶಬರಿಮಲೆಗೆ ಬರೋ ಯಾವ ಭಕ್ತನೂ ದರ್ಶನದಿಂದ ಮಿಸ್ ಆಗಲು ಚಾನ್ಸೇ ಇಲ್ಲ ಎಂದು ಗುಡ್‌ನ್ಯೂಸ್ ಕೂಡ ಕೊಟ್ಟಿದ್ದಾರೆ.

ಇದೀಗ ಸ್ಪಾಟ್ ಬುಕಿಂಗ್ ಬದಲಿಗೆ ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಅಕ್ಷಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕೇರಳ ಸರ್ಕಾರ ಮಾಹಿತಿ ನೀಡಿದೆ. ಸ್ಪಾಟ್ ಬುಕಿಂಗ್ ಬದಲಿಗೆ ಭಕ್ತರ ದರ್ಶನಕ್ಕೆ ಬುಕಿಂಗ್ ಸ್ಲಾಟ್ಸ್‌ಗಳನ್ನು ಈ ಅಕ್ಷಯ ಕೇಂದ್ರಗಳ ಮೂಲಕ ಪಡೆಯಬಹುದು ಎಂದಿದ್ದಾರೆ.
ಶಬರಿಮಲೆ ಸಮೀಪವಿರುವ ಇಡತಾವಳಂ ಸ್ಥಳದಲ್ಲಿ ಕೇರಳ ಸರ್ಕಾರವೇ ಈ ಅಕ್ಷಯ ಕೇಂದ್ರಗಳನ್ನು ಸ್ಥಾಪಿಸಲಿದೆ. ದೂರದಿಂದ ಬರುವ ಭಕ್ತರಿಗೆ ಬುಕಿಂಗ್ ಸ್ಲಾಟ್ಸ್ ಪಡೆಯಲು ಈ ಕೇಂದ್ರಗಳು ನೆರವಾಗಲಿವೆ. ಅಕ್ಷಯ ಕೇಂದ್ರಗಳು ಸಾಮಾನ್ಯ ಸೇವಾ ಕೇಂದ್ರಗಳಾಗಿದ್ದು, ಸರ್ಕಾರದ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ವ್ಯವಸ್ಥೆ ಎನ್ನಲಾಗಿದೆ.
ಇನ್ನು ಪ್ರತಿದಿನವೂ ಶಬರಿಮಲೆಗೆ ಹೆಚ್ಚು ಭಕ್ತಾದಿಗಳು ಬಂದು ದಟ್ಟಣೆಯಾಗುವುದನ್ನು ತಡೆಯಲು ವಿಶೇಷ ನಿಯಮ ಜಾರಿ ಮಾಡಲಾಗಿದೆ. ಇನ್ನು ಮುಂದೆ ಶಬರಿಮಲೆಯಲ್ಲಿ ಒಂದು ದಿನಕ್ಕೆ 80,000 ಭಕ್ತಾದಿಗಳಿಗೆ ಮಾತ್ರವೇ ಪ್ರವೇಶ ನೀಡಲಾಗುವುದು ಎಂದು ಸಚಿವ ವಿ.ಎನ್.ವಾಸವನ್ ಹೇಳಿದ್ದಾರೆ.

ಈ ಹಿಂದೆ ಏನಾಗಿತ್ತು?: ಶಬರಿಮಲೆಯಲ್ಲಿ ದರ್ಶನಕ್ಕೆ ಇದ್ದ ಸ್ಪಾಟ್ ಬುಕಿಂಗ್ ವ್ಯವಸ್ಥೆಯನ್ನು ರದ್ದು ಮಾಡುವುದಾಗಿ ಕೇರಳ ಸರ್ಕಾರ ಘೋಷಿಸಿತ್ತು. ಸ್ಪಾಟ್ ಬುಕಿಂಗ್ ಬದಲಿಗೆ ಕೇವಲ ಆನ್‌ಲೈನ್ ಬುಕಿಂಗ್ ಮೂಲಕವೇ ದರ್ಶನಕ್ಕೆ ಅನುವು ಮಾಡಿಕೊಡಲು ಪ್ಲ್ಯಾನ್ ಮಾಡಿತ್ತು. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಕಳೆದ ವರ್ಷ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಭಾರಿ ಅವ್ಯವಸ್ಥೆ ಉಂಟಾಗಿತ್ತು. ಭಕ್ತರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈ ಹಿನ್ನೆಲೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿತ್ತು.
ಈ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಜಾರಿಯಾದರೆ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಕೂಡ ವಾರ್ನ್ ಮಾಡಿತ್ತು. ಹಾಗಾಗಿ ಎಲ್ಲೆಡೆಯೂ ಸ್ಪಾಟ್‌ಬುಕಿಂಗ್ ಜೊತೆಗೆ ಆನ್‌ಲೈನ್ ವ್ಯವಸ್ಥೆ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಎಲ್ಲ ಭಕ್ತರಿಗೆ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ ಎಂಬ ಕಾರಣಕ್ಕೆ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕೇರಳ ಸರ್ಕಾರವು ಸ್ಪಾಟ್ ಬುಕಿಂಗ್ ಬದಲಿಗೆ, ಬುಕಿಂಗ್ ಸ್ಲಾಟ್ಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.












Click it and Unblock the Notifications