• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಸ್ನೇಹಿ ದೇಶ ಭೂತಾನ್ ಎಂಬ ಭೂ ಲೋಕದ ಸ್ವರ್ಗ

By ಡಿ.ಜಿ.ಮಲ್ಲಿಕಾರ್ಜುನ
|

ನಿಮ್ಮ ಶ್ವಾಸಕೋಶವನ್ನು ಶುದ್ಧಗೊಳಿಸಿಕೊಳ್ಳಬೇಕೆ, ಹಾಗಿದ್ದರೆ ನಮ್ಮ ದೇಶಕ್ಕೆ ಬನ್ನಿ' ಎನ್ನುತ್ತದೆ ಭೂತಾನ್ ದೇಶದ ಪ್ರವಾಸೋದ್ಯಮ ಇಲಾಖೆ. ಭಾರತದ ಗಡಿ ದೇಶಗಳಾದ ಬಾಂಗ್ಲಾದೇಶ, ಬರ್ಮಾ, ನೇಪಾಳ, ಚೀನಾ, ಪಾಕಿಸ್ತಾನ-ಈ ಎಲ್ಲವುಗಳ ಮಧ್ಯೆ ಭೂತಾನ್ ಆಪ್ತಬಂಧುವಿನಂತಿರುವ ರಾಷ್ಟ್ರ.

ಮ್ಯಾರೀಡ್ ಟು ಭೂತಾನ್' ಪುಸ್ತಕ ಬರೆದಿರುವ ಲಿಂಡಾ ಲೀಮಿಂಗ್, ಭೂತಾನ್ ಪ್ರತ್ಯೇಕತೆಯನ್ನು ಒಂದೇ ಪದದಲ್ಲಿ ಬಣ್ಣಿಸಲು ಯಾರಾದರೂ ಕೇಳಿದರೆ 'ಸೌಜನ್ಯ' ಎನ್ನುತ್ತೇನೆ ಎಂದಿದ್ದಾರೆ. ಒಳ್ಳೆಯತನವನ್ನೇ ಮೈಗೂಡಿಸಿಕೊಂಡಿರುವ ಶಾಂಗ್ರೀಲಾ'(ಸ್ವರ್ಗ) ಎಂಬ ಬಣ್ಣನೆಗೆ ಒಳಗಾದ ಅದ್ಭುತ ದೇಶ ಭೂತಾನ್.[ಸಂತುಷ್ಟ ಜನರಿರುವ ಭೂತಾನ್ ಪ್ರವಾಸಕ್ಕೆ ಹೋಗೋಣ ಬನ್ನಿ...]

ಪ್ರಪಂಚದಲ್ಲೇ ಅತ್ಯಂತ ಸಂತುಷ್ಟ ಜನರಿರುವ ದೇಶ ಎನ್ನುವುದು ಭೂತಾನ್ ನ ಅಗ್ಗಳಿಕೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಸಾಕಷ್ಟು ಉಳಿಸಿಕೊಂಡಿದೆ. ಎಲ್ಲ ದೇಶಗಳೂ ತಮ್ಮ ಪ್ರಗತಿಯನ್ನು ತಲಾದಾಯದಲ್ಲಿ ಅಳೆದರೆ, ಭೂತಾನ್ ತನ್ನ ಪ್ರಗತಿಯನ್ನು ರಾಷ್ಟ್ರೀಯ ಸಂತಸ ಸೂಚ್ಯಂಕದಲ್ಲಿ (ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್) ಕಾಣುತ್ತದೆ.

ಎಂಟನೇ ಶತಮಾನದಲ್ಲಿ ಬೌದ್ಧ ಸಂತ ಗುರು ಪದ್ಮಸಂಭವ (ಗುರು ರಿಂಪೋಚೆ) ಮೂಲಕ ಭೂತಾನ್ ಗೆ ಆಗಮಿಸಿದ ಬೌದ್ಧ ಧರ್ಮ ಹಾಗೂ ಅದಕ್ಕೂ ಹಿಂದೆ ಇದ್ದ ಆಚಾರ, ನಂಬಿಕೆ, ಸಂಸ್ಕೃತಿ, ವಾಸ್ತುಶಿಲ್ಪ -ಇವೆಲ್ಲವೂ ಈಗಿನ ತಂತ್ರಜ್ಞಾನದೊಂದಿಗೆ ಮಿಳಿತಗೊಂಡು ಭೂತಾನಿಗರ ನೆಮ್ಮದಿ, ಸಂತಸ, ಮನೋಲ್ಲಾಸವನ್ನು ಹೆಚ್ಚಿಸಿದೆ.[ಭೂತಾನ್ ಮಕ್ಕಳ ಮುಗ್ಧತೆ, ಪ್ರೀತಿ ಮತ್ತು ಬಿಡಿ ಚಿತ್ರಗಳು]

ಭಾರತದ ಮಿತ್ರ

ಭಾರತದ ಮಿತ್ರ

ಭೂತಾನ್ ಮತ್ತೊಂದು ಟಿಬೆಟ್ ಆಗಬಹುದಾಗಿದ್ದನ್ನು ತಪ್ಪಿಸಿಕೊಂಡು ರಾಜಪ್ರಭುತ್ವವುಳ್ಳ ರಾಷ್ಟ್ರವಾಯಿತು. ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿತು. ದೈತ್ಯ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವಿನ ತಿಕ್ಕಾಟದಲ್ಲಿ, ಪಕ್ಕದ ಗೂರ್ಖಾಲ್ಯಾಂಡ್ ಗುದ್ದಾಟ, ಈಶಾನ್ಯ ರಾಜ್ಯಗಳಿಂದ ನುಗ್ಗಿಬರುವ ದಂಗೆಕೋರರನ್ನು ಹತ್ತಿಕ್ಕಿಕೊಂಡು ತನ್ನತನವನ್ನು ಉಳಿಸಿಕೊಂಡಿರುವುದು ಕೇವಲ ತಾಕತ್ತಿನಿಂದಲ್ಲ, ಅದು ಸಾಧ್ಯವಾಗಿರುವುದು ಭೂತಾನ್ ನ ಆತ್ಮಸಂಯಮದಿಂದ. ತನ್ನದೇ ಆದ ವೇಗದಲ್ಲಿ ಬದಲಾವಣೆಗೆ ಪಕ್ಕಾಗುತ್ತಲೇ ತನ್ನತನವನ್ನು ಕಾಯ್ದುಕೊಂಡು ಬೆಳೆಯುತ್ತಿರುವ ಭೂತಾನ್ ನಲ್ಲಿ ವಿಶೇಷ ಶಕ್ತಿಯಿದೆ. ಜುಲೈ 2012 ರಲ್ಲಿ ಭಾರತದ ವಿದ್ಯುತ್ ಗ್ರಿಡ್ ಹಾಳಾದಾಗ ಭೂತಾನ್ ವಿದ್ಯುಚ್ಛಕ್ತಿಯನ್ನು ಭಾರತಕ್ಕೆ ಸರಬರಾಜು ಮಾಡಲು ಪ್ರಾರಂಭಿಸಿತು. ಭೂತಾನ್ ನ ಡ್ಯಾಮ್ ಗಳಲ್ಲಿ ಸಂಗ್ರಹವಾಗುವ ನೀರು ಹರಿದು ಬರುವುದು ಚೀನಾದಿಂದ ಮತ್ತು ಜಲವಿದ್ಯುತ್ ಘಟಕಗಳನ್ನು ಕಟ್ಟಿಕೊಟ್ಟಿದ್ದು ಭಾರತ.

ಪುಟ್ಟ ದೇಶದಲ್ಲಿ ಅದೆಷ್ಟು ಸೌಂದರ್ಯ

ಪುಟ್ಟ ದೇಶದಲ್ಲಿ ಅದೆಷ್ಟು ಸೌಂದರ್ಯ

ಪ್ರಪಂಚದ ನಕ್ಷೆಯಲ್ಲಿ ಭೂತಾನ್ ಪುಟ್ಟ ಬಿಂದುವಿನಂತಿದೆ. ಸರಿಯಾಗಿ ಅಳೆದರೆ ಪೂರ್ವದಿಂದ ಪಶ್ಚಿಮಕ್ಕೆ 300 ಕಿಮೀ, ಉತ್ತರದಿಂದ ದಕ್ಷಿಣಕ್ಕೆ 200 ಕಿ.ಮೀ ಅಷ್ಟೇ ಅದರ ವಿಸ್ತಾರ. ಆದರೆ ಪ್ರಕೃತಿ ಸೌಂದರ್ಯ, ಸಂಪ್ರದಾಯ, ಸಂಸ್ಕೃತಿ, ಆಚಾರ- ವಿಚಾರಗಳಲ್ಲಿ ಬಹಳ ಸಮೃದ್ಧವಾದ ದೇಶವಾಗಿದೆ. ಎಂಟನೇ ಶತಮಾನದಲ್ಲಿ ಭಾರತದಿಂದ ಟಿಬೆಟ್ ಮೂಲಕ ಹೋದ ಬೌದ್ಧ ಸಂತ ಗುರು ಪದ್ಮಸಂಭವ(ಗುರು ರಿಂಪೋಚೆ) ಅಲ್ಲಿ ಧರ್ಮ ಪ್ರಚಾರ ಮಾಡಿದ್ದು, ಈಗಲ್ಲಿ ಪ್ರಬಲವಾಗಿ ಬೆಳೆದಿದೆ.

ಎತ್ತರದ ಪ್ರದೇಶ

ಎತ್ತರದ ಪ್ರದೇಶ

`ದ ಲಾಸ್ಟ್ ಶಾಂಗ್ರೀಲಾ', `ಡ್ರುಕ್‍ಯುಲ್ ಅಥವಾ ಲ್ಯಾಂಡ್ ಆಫ್ ದ ಪೀಸ್‍ಫುಲ್ ಥಂಡರ್ ಡ್ರಾಗನ್', `ಸದರ್ನ್ ವ್ಯಾಲಿ ಆಫ್ ಮೆಡಿಸಿನಲ್ ಹಬ್ರ್ಸ್' ಎಂದೆಲ್ಲಾ ಕರೆಸಿಕೊಂಡಿರುವ ಭೂತಾನ್ ಸಹ ನೇಪಾಳದಂತೆಯೇ ಮೂರು ಕಡೆಗಳಿಂದಲೂ ಭಾರತದಿಂದ ಸುತ್ತುವರೆದಿರುವ ದೇಶ. 'ಭೂತಾಂತ' ಅಂದರೆ ಟಿಬೆಟ್ ನ ಕೊನೆಯ ಪ್ರದೇಶ ಎಂಬುದರಿಂದ ಭೂತಾನ್ ಪದ ಬಂದಿದೆ ಎನ್ನುತ್ತಾರಾದರೂ ಸಂಸ್ಕೃತದಲ್ಲಿ 'ಭೂ' ಅಂದರೆ ಭೂಮಿ, 'ಉತ್ಥಾನ್' ಅಂದರೆ ಎತ್ತರ ಹಾಗಾಗಿ ಎತ್ತರದ ಪ್ರದೇಶ ಎಂಬರ್ಥವೂ ಇದೆ. ಭೂತಾನ್ ರಾಷ್ಟ್ರೀಯ ಭಾಷೆಯಾದ ಝೋಂಕಾದಲ್ಲಿ `ಡ್ರುಕ್‍ಯುಲ್' ಎಂದು ತಮ್ಮ ದೇಶವನ್ನು ಕರೆದುಕೊಳ್ಳುತ್ತಾರೆ. ಹದಿನೇಳನೆ ಶತಮಾನದಲ್ಲಿ ಡ್ರುಕ್ ಸಂತ ಶಬ್‍ದ್ರುಂಗ್ ನಗವಾಂಗ್ ನಾಮ್ಗೈಲ್ ಭೂತಾನ್ ನ ಎಲ್ಲ ಪ್ರದೇಶಗಳನ್ನೂ ಒಗ್ಗೂಡಿಸಿದಾಗ ಆ ನಾಡನ್ನು `ಡ್ರುಕ್‍ಯುಲ್' ಎನ್ನಲಾಯಿತು.

ಹಿಂದಿ ಚಿತ್ರಗಳ ಪ್ರಭಾವ

ಹಿಂದಿ ಚಿತ್ರಗಳ ಪ್ರಭಾವ

ಭಾರತದ ಈಶಾನ್ಯ ದಿಕ್ಕಿಗಿರುವ ಭೂತಾನ್ ದೇಶದ ಉತ್ತರಕ್ಕೆ ಟಿಬೆಟ್, ಚೀನಾ ಇದ್ದರೆ, ಪಶ್ಚಿಮ ಹಾಗೂ ದಕ್ಷಿಣಕ್ಕೆ ಸಿಕ್ಕಿಂ, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶವಿದೆ. ಭೂತಾನ್ ನಲ್ಲಿ ಒಟ್ಟು ಇಪ್ಪತ್ತು ಜಿಲ್ಲೆಗಳಿವೆ. ಭೂತಾನ್ ತನ್ನ ವಾಸ್ತುಶಿಲ್ಪ ಹಾಗೂ ಸಂಸ್ಕೃತಿಯನ್ನು ಕಾಯ್ದುಕೊಂಡಿದ್ದರೂ ಆಧುನಿಕತೆ ಮತ್ತು ತಂತ್ರಜ್ಞಾನದಿಂದಾಗಿ ಭಾರತೀಯ ಟಿವಿ ಧಾರಾವಾಹಿಗಳು ಮತ್ತು ಹಿಂದಿ ಚಲನಚಿತ್ರಗಳ ಪ್ರಭಾವ ಬಹಳಷ್ಟಿದೆ. ಅಲ್ಲಿನ ಬಹುತೇಕರು ಭಾರತೀಯ ಶಿಕ್ಷಣವನ್ನು ಪಡೆದವರಾಗಿದ್ದಾರೆ. 1999ರಲ್ಲಿ ಭೂತಾನ್ ಗೆ ಟಿ.ವಿ ಪ್ರವೇಶಿಸಿತು. ಈಗ ಇಂಟರ್ ನೆಟ್ ಮತ್ತು ಮೊಬೈಲ್ ಸಾಮಾನ್ಯವಾಗಿದೆ.

ಭಾರತೀಯರಿಗೆ ಕಡಿಮೆ ಖರ್ಚು

ಭಾರತೀಯರಿಗೆ ಕಡಿಮೆ ಖರ್ಚು

1974ರವರೆಗೂ ವಿದೇಶಿ ಪ್ರವಾಸಿಗರಿಗೆ ತನ್ನ ಬಾಗಿಲನ್ನು ಮುಚ್ಚಿತ್ತು ಭೂತಾನ್. ಆ ನಂತರ ವಿದೇಶಿಯರಿಗೆ ಅನುಮತಿ ಸಿಕ್ಕರೂ ಅವರಿಗೆ ಭೂತಾನ್ ಸುತ್ತಾಟ ಖರ್ಚು ತರುವ ಸಂಗತಿ! ಭಾರತೀಯರು, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದವರನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ವಿದೇಶಿಯರು ಪ್ರತಿದಿನ 250 ಡಾಲರ್ ಪಾವತಿಸಬೇಕು.

ಭಾಷೆ, ವಾಸ್ತುಶಿಲ್ಪ

ಭಾಷೆ, ವಾಸ್ತುಶಿಲ್ಪ

ಭೂತಾನ್ ರಾಷ್ಟ್ರೀಯ ಭಾಷೆ ಝೋಂಕಾ. ಅದರ ಲಿಪಿಯನ್ನು ಚೋಕೀ ಎನ್ನುತ್ತಾರೆ. ಶಾಲೆಗಳಲ್ಲಿ ಇಂಗ್ಲಿಷ್ ಕೂಡ ಕಲಿಸುತ್ತಾರೆ. ನೇಪಾಳಿ ಭಾಷೆಯನ್ನು ಹೊರತುಪಡಿಸಿ 24 ಭಾಷೆಗಳು ಅಲ್ಲಿ ಬಳಕೆಯಲ್ಲಿವೆ. ವಾಸ್ತು ಶಿಲ್ಪಕಲೆಯಲ್ಲಿ ಸಾಂಪ್ರದಾಯಿಕತೆಯನ್ನು ಕಾಯ್ದುಕೊಂಡು, ಎಲ್ಲೆಡೆಯೂ ಒಂದೇ ರೀತಿ ಕಟ್ಟಡಗಳನ್ನು ಕಟ್ಟಿರುವುದರಿಂದ ನೋಡಲು ಸುಂದರವಾಗಿರುತ್ತವೆ. ಕಟ್ಟಡ ಕಟ್ಟುವಾಗ ಮಣ್ಣನ್ನೇ ಹೆಚ್ಚು ಬಳಸುತ್ತಾರೆ. ಮರಗಳನ್ನು ಕೊರೆದು ಕಿಟಕಿ ಹಾಗೂ ಮಾಡುಗಳಿಗೆ ಬಳಸುವರು. ಸೀಮಿತ ಬಣ್ಣಗಳನ್ನು ಬಳಸಿ ಪೇಂಟ್ ಮಾಡಿದರೂ ನೋಡಲು ಸೊಗಸಾಗಿರುತ್ತದೆ.

ಭಾರತದ ಕರೆನ್ಸಿ ಪಡೆಯುತ್ತಾರೆ

ಭಾರತದ ಕರೆನ್ಸಿ ಪಡೆಯುತ್ತಾರೆ

ಭೂತಾನ್ ನಲ್ಲಿ ಭಾರತೀಯ ರುಪಾಯಿ ಮತ್ತು ಭೂತಾನಿ ನ್ಯೂ ಮೌಲ್ಯ ಸಮಾನವಿದೆ. ಹೀಗಾಗಿ ಖರೀದಿ ಮಾಡುವಾಗ ಭೂತಾನಿ ನ್ಯೂ ಬದಲು ಭಾರತೀಯ ರುಪಾಯಿಯನ್ನು ನೀಡಬಹುದು. ಅಲ್ಲಿ ಅಂಗಡಿಯವರು ಎರಡನ್ನೂ ಸ್ವೀಕಾರ ಮಾಡುತ್ತಾರೆ. ಕೆಲವೊಮ್ಮೆ ಹಣಕಾಸಿನ ವ್ಯವಹಾರದಲ್ಲಿ ಅವರ ಕರೆನ್ಸಿ ಮತ್ತು ನಮ್ಮ ಕರೆನ್ಸಿ ಮಿಶ್ರಣವಾಗುವುದೂ ಉಂಟು.

ಹೆಣ್ಣುಮಕ್ಕಳಿಗೆ ಪ್ರಾಶಸ್ತ್ಯ

ಹೆಣ್ಣುಮಕ್ಕಳಿಗೆ ಪ್ರಾಶಸ್ತ್ಯ

ಭೂತಾನ್ ನಲ್ಲಿ ಸ್ತ್ರೀ ಕುಟುಂಬ ವ್ಯವಸ್ಥೆಯಿದೆ. ಬಹುಪಾಲು ಪ್ರೇಮ ವಿವಾಹಗಳಾದರೂ ಮದುವೆಯ ನಂತರ ಗಂಡು ಅತ್ತೆ ಮನೆಗೆ ಬಂದು ವಾಸಿಸುವುದು ಅಲ್ಲಿನ ವಿಶೇಷ. ಭೂತಾನಿ ಸ್ತ್ರೀಯರು ಸರ್ವ ಸ್ವತಂತ್ರರು. ಮನೆಯ ಆದಾಯ ಹೆಂಗಸರ ದುಡಿಮೆಯಿಂದಲೇ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಹಾಗಾಗಿ ಹೆಚ್ಚಿನ ಸ್ತ್ರೀಯರು ಹೊಟೆಲ್, ಅಂಗಡಿ ನಡೆಸುವುದು, ಟ್ಯಾಕ್ಸಿ ಚಲಾಯಿಸುವುದು, ಗದ್ದೆಯಲ್ಲಿ ದುಡಿಯುವುದು ಕಾಣಬಹುದು. ಅಲ್ಲಿ ಹೆಣ್ಣುಮಕ್ಕಳು ಧೈರ್ಯಶಾಲಿಗಳು. ವ್ಯಾಪಾರ ವ್ಯವಹಾರವನ್ನು ಹೆಣ್ಣುಮಕ್ಕಳೇ ನೋಡಿಕೊಳ್ಳುತ್ತಾರೆ. ಮುಕ್ತವಾಗಿ ಪ್ರವಾಸಿಗಳ ಜೊತೆ ಮಾತಿಗಿಳಿಯುತ್ತಾರೆ. ಅಲ್ಲಿ ಹೆಣ್ಣು ಭ್ರೂಣ ಹತ್ಯೆ ಇಲ್ಲವೇ ಇಲ್ಲ. ವರದಕ್ಷಿಣೆ ಇಲ್ಲ. ಲೈಂಗಿಕ ಕಿರುಕುಳ ಅಪರೂಪದಲ್ಲಿ ಅಪರೂಪ. ಹೆಣ್ಣು ಮಗು ಜನಿಸಿದರೆ ಪೋಷಕರು ಸಂತಸಪಡುತ್ತಾರೆ. ಅಲ್ಲಿ ಮಹಿಳೆಯರಿಗೆ ಸಿಕ್ಕಿರುವ ಮತ್ತೊಂದು ವಿಶೇಷ ಸ್ಥಾನಮಾನವೆಂದರೆ ಆಸ್ತಿ- ಸಂಪತ್ತುಗಳ ಉತ್ತರಾಧಿಕಾರ. ತಂದೆಯ ಮನೆಯ ಹಕ್ಕು ಮಗಳಿಗೆ ದೊರೆಯುತ್ತದೆ. ಗಂಡು ತನ್ನ ಸ್ವಂತ ಜೀವನವನ್ನು ಅಪ್ಪನ ಆಸ್ತಿಯ ಹಂಗಿಲ್ಲದೆ ಮಾಡಿಕೊಳ್ಳಬೇಕು. ಹೆಚ್ಚಾಗಿ ಗಂಡು ತನ್ನ ಹೆಂಡತಿಯ ಮನೆಯಲ್ಲೇ ಜೀವನ ಸಾಗಿಸಬೇಕಾಗುತ್ತದೆ. ನಗರಗಳಲ್ಲಿ ಪ್ರೇಮ ವಿವಾಹ ಸಾಮಾನ್ಯವಾದರೂ ಹಳ್ಳಿಗಳಲ್ಲಿ ಸಾಂಪ್ರದಾಯಿಕ ವಿವಾಹಗಳು ನಡೆಯುತ್ತವೆ.

ರಾಷ್ಟ್ರೀಯ ಉಡುಪು - ಬಣ್ಣದ ಬೆಡಗು

ರಾಷ್ಟ್ರೀಯ ಉಡುಪು - ಬಣ್ಣದ ಬೆಡಗು

ಭೂತಾನಿಗರ ರಾಷ್ಟ್ರೀಯ ಉಡುಪು ವಿಶೇಷವಾದದ್ದು. ಪುರುಷರ ದಿರಿಸಿಗೆ `ಘೋ' ಎನ್ನುತ್ತಾರೆ. ಅದೊಂದು ರೀತಿಯ ನಿಲುವಂಗಿ. ಮೊಣಕಾಲಿನ ತನಕದ ಬಟ್ಟೆ ಮತ್ತು ಸೊಂಟಕ್ಕೆ ಬೆಲ್ಟ್. ಅದಕ್ಕೆ `ಕೆರ' ಅನ್ನುವರು. ಉದ್ದನೆಯ ಸಾಕ್ಸ್ ಮತ್ತು ಶೂಗಳನ್ನು ಧರಿಸುತ್ತಾರೆ. ಮಹಿಳೆಯರದ್ದು `ಕಿರಾ'. ಅದು ಒಂದು ರೀತಿಯ ಟಾಪ್ ಮತ್ತು ಉದ್ದ ಲಂಗದ ರೀತಿ ಇದೆ. ಅವರು ಧರಿಸುವ ಕಿರಾ ಹೆಚ್ಚಾಗಿ ಅಲ್ಲಿನ ಕೈ ಕೆಲಸದಿಂದಲೇ ತಯಾರಾಗುವಂತಹದ್ದು. ಹಾಗಾಗಿ ಬೆಲೆಯೂ ಹೆಚ್ಚು. ಕೆಲವೊಮ್ಮೆ ಉತ್ತಮ ಬಟ್ಟೆ ತಯಾರಿಸಲು 15 ತಿಂಗಳು ಬೇಕಾಗುತ್ತದೆಯಂತೆ.ಭೂತಾನ್ ಕಾನೂನಿನ ಪ್ರಕಾರ ಎಲ್ಲ ಸರ್ಕಾರಿ ನೌಕರರು ರಾಷ್ಟ್ರೀಯ ಉಡುಪನ್ನೇ ಧರಿಸಿಕೊಂಡು ನೌಕರಿಗೆ ಹೋಗಬೇಕು. ನಾಗರಿಕರೂ ಕೂಡ ಶಾಲೆ, ಸರಕಾರಿ ಕಚೇರಿಗಳಿಗೆ ಬರುವಾಗ ರಾಷ್ಟ್ರಿಯ ಉಡುಪನ್ನೇ ಧರಿಸಿ ಬರಬೇಕು.

ಝೋಂಗ್ ಎಂದು ಕರೆಯುವ ಅಲ್ಲಿನ ಸರಕಾರಿ ಆಡಳಿತ ಕೇಂದ್ರಕ್ಕೆ ಹೋಗುವ ಪುರುಷರು `ಘೋ' ಮೇಲೆ `ಕಬ್ನೇ' ಎಂದು ಕರೆಯುವ ಮೂರು ಮೀಟರ್ ಉದ್ದದ ಶಾಲುವಿನಂತಿರುವ ಬಟ್ಟೆಯನ್ನು ಹೊದ್ದುಕೊಂಡಿರಬೇಕು. ಎಡ ತೋಳಿನ ಮೇಲಿಂದ ಸಾಗಿ ಸೊಂಟವನ್ನು ಬಳಸಿ ಕಟ್ಟುತ್ತಾರೆ. ಮಹಿಳೆಯರು `ರಾಚು' ಎಂದು ಕರೆಯುವ ನಾಲ್ಕಿಂಚು ಅಗಲದ ನೇಯ್ದ ಬಣ್ಣದ ಬಟ್ಟೆಯನ್ನು ಎಡ ಭುಜದ ಮೇಲೆ ಹಾಕಿಕೊಳ್ಳಬೇಕು. ಪುರುಷರು ಧರಿಸುವ ಕಬ್ನೇ ಬಣ್ಣದಿಂದ ಅವರ ಸ್ಥಾನಮಾನವನ್ನು ಗುರುತಿಸಬಹುದು.

ಊಟ-ತಿಂಡಿ ಬಗ್ಗೆ ಒಂದಿಷ್ಟು..

ಊಟ-ತಿಂಡಿ ಬಗ್ಗೆ ಒಂದಿಷ್ಟು..

ಶೇಕಡಾ ನೂರರಷ್ಟು ಸಾವಯವ ಕೃಷಿ ಪ್ರಧಾನವಾದ ಭೂತಾನ್ ನ ಪ್ರಮುಖ ಆಹಾರ ಅಕ್ಕಿ, ಗೋದಿ, ಜೋಳ. ಮಾಂಸ ಮತ್ತು ತರಕಾರಿಗಳನ್ನು ಒಣಗಿಸಿ ಉಪ್ಪು, ಮೆಣಸು ಹಾಕಿ ಸೂಪ್ ಮಾಡಿ ಕುಡಿಯುತ್ತಾರೆ. ಭೂತಾನೀಯರು ನಮ್ಮ ಬೈರ್ ನೆಲ್ಲು ಅಕ್ಕಿಯಂಥ ಕೆಂಪಕ್ಕಿ ಅನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಎಮಾದಶಿ (ಎಮಾ ಅಂದರೆ ಮೆಣಸಿನಕಾಯಿ, ದಶಿ ಅಂದರೆ ಚೀಸ್), ಕೆವಾದಶಿ (ಕೆವಾ ಅಂದರೆ ಆಲೂಗಡ್ಡೆ), ಮಶ್ರೂಮ್ ದಶಿ ಅಲ್ಲಿನ ಬಹುಮುಖ್ಯ ತಿನಿಸುಗಳು.

ಭೂತಾನೀಯರು ಎಷ್ಟು ಖಾರದ ಖಾದ್ಯಗಳನ್ನು ತಯಾರಿಸುತ್ತಾರೆ ಎಂದರೆ ಮೆಣಸಿನ ಕಾಯಿಗೆ ಸ್ವಲ್ಪ ತರಕಾರಿ ಸೇರಿಸಿ ಖಾದ್ಯ ತಯಾರಿಸುತ್ತಾರೆ. ಖಾರದ ಮೆಣಸಿನಕಾಯಿಯನ್ನು ಅವರು ಬಹುಮುಖ್ಯ ತರಕಾರಿ ಎಂದು ಭಾವಿಸಿದ್ದಾರೆ! ಸೂಜ ಎಂಬ ಬಟರ್ ಟೀ ಕೂಡಾ ಅಲ್ಲಿನ ವಿಶೇಷ ಪಾನೀಯ. ಟೀ ತಯಾರಿಸಲು ಬಿದಿರಿನ ಅಥವಾ ಮರದ ಪರಿಕರವನ್ನು ಬಳಸುತ್ತಾರೆ. ಯಾಕ್ ಚೀಸ್, ಉಪ್ಪು ಹಾಗೂ ಸ್ವಲ್ಪವೇ ಸ್ವಲ್ಪ ಹಾಲು ಬೆರೆಸಿ ತಯಾರಿಸುವ ಈ ಪಾನೀಯಕ್ಕೆ ವಿಶೇಷ ಟೀ ಎಲೆಗಳನ್ನು ಬಳಸುವರು.

ಭೂತಾನ್ ನಲ್ಲಿ ಬೆಳೆಯುವ ತರಕಾರಿ, ಹಣ್ಣುಗಳೆಲ್ಲವೂ ಸಾವಯವ. ರೈತರ ಉತ್ಪನ್ನಗಳನ್ನು ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡಲು ಅನುಕೂಲವಾಗುವಂತೆ ಅಲ್ಲಿನ ಸರಕಾರ ದಾರಿಯುದ್ದಕ್ಕೂ ತಂಗುದಾಣಗಳನ್ನು ನಿರ್ಮಿಸಿದೆ. ಮಧ್ಯವರ್ತಿಗಳಿಲ್ಲದೆ ರೈತ ತನ್ನ ಉತ್ಪನ್ನಗಳನ್ನು ಮಾರಾರಾಟ ಮಾಡುವ ವ್ಯವಸ್ಥೆ ಅದು. ಅಲ್ಲಿ ಮಾರಾಟಕ್ಕಿರುವ ಸೇಬು, ಲಿಚಿ, ಪೀಚ್, ಚೆರ್ರಿ ಮುಂತಾದ ಹಣ್ಣುಗಳು ಬಲು ರುಚಿ. ಬೆಣ್ಣೆ, ಚೀಸ್ ಗಳನ್ನೂ ಎಲೆಯಲ್ಲಿ ಸುತ್ತಿ ಮಾರಾಟಕ್ಕಿಟ್ಟಿರುತ್ತಾರೆ. ಅಲ್ಲಿನ ಥಂಡಿ ವಾತಾವರಣಕ್ಕೆ ಶೀತಲ ಯಂತ್ರದ ಅಗತ್ಯವೇ ಅವರಿಗಿಲ್ಲ! ಅಂದಹಾಗೆ ಆ ತಾಜಾ ತರಕಾರಿಗಳನ್ನು ನೋಡುವುದೇ ಒಂದು ಸೊಗಸು.

ಹಬ್ಬ ಉತ್ಸವಗಳು

ಹಬ್ಬ ಉತ್ಸವಗಳು

ಭೂತಾನ್ ನಲ್ಲಿ ಹಬ್ಬ- ಆಚರಣೆಗಳು ಬಲು ಪ್ರಸಿದ್ಧ. ವಿದೇಶಿ ಪ್ರವಾಸಿಗರು ಹಬ್ಬಗಳ ದಿನಗಳಲ್ಲಿ ಹೆಚ್ಚಾಗಿ ಬರುತ್ತಾರೆ. ಭೂತಾನಿಗರು ಸುಗ್ಗಿ ಕಾಲದಲ್ಲಿ ವರ್ಣಮಯ ಉಡುಪು, ಮುಖವಾಡಗಳನ್ನು ಧರಿಸಿ ಹಾಡು ಕುಣಿತಗಳಿಂದ ದೇವರನ್ನು ಆರಾಧಿಸುತ್ತಾರೆ. ನಗರದ ವಿವಿದೆಡೆ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸುತ್ತಾರೆ.

ಭೂತಾನ್ ನಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚು ಉತ್ಸವಗಳನ್ನು ನಡೆಸುತ್ತಾರೆ. ಪುನಾಖಾ, ಥಿಂಪು, ತ್ರಶಿಗಂಗ್, ಪಾರೋ, ಭೂಮ್ತಾಂಗ್, ಮೊಂಗರ್, ತ್ರೋಂಗ್ಸಾ ಮುಂತಾದ ನಗರಗಳ ಝೋಂಗ್ (ಆಡಳಿತ ಕೇಂದ್ರ ಕಚೇರಿಯಿರುವ ಕಟ್ಟಡ) ಗಳಲ್ಲಿ ಉತ್ಸವಗಳನ್ನು ನಡೆಸುತ್ತಾರೆ. ಆ ದಿನಗಳಲ್ಲಿ ಸರಕಾರಿ ರಜೆಯನ್ನು ನೀಡಲಾಗುತ್ತದೆ. ಆಗೆಲ್ಲ ರಸ್ತೆಗಳು ಪ್ರವಾಸಿಗರಿಂದ ತುಂಬಿರುತ್ತವೆ.

ಧಾರ್ಮಿಕ ಮುಖವಾಡ ನೃತ್ಯ, ಧಾರ್ಮಿಕ ನೃತ್ಯ, ಮುಖವಾಡ ಹಾಕದ ನೃತ್ಯ ಮುಂತಾದ ಹಲವು ಜಾನಪದ ನೃತ್ಯ ಪ್ರಕಾರಗಳು ಆಕರ್ಷಕವಾಗಿರುತ್ತವೆ.

ಹವಾಮಾನ

ಹವಾಮಾನ

ಫೆಬ್ರವರಿಯಿಂದ ಸೆಪ್ಟೆಂಬರ್ ತನಕ ಭೂತಾನ್ ಪ್ರವಾಸಕ್ಕೆ ಹವಾಮಾನ ಚೆನ್ನಾಗಿರುತ್ತದೆ. ಆದರೆ ರಾತ್ರಿ ವೇಳೆ ಚಳಿಯಿರುತ್ತದೆ. ಪ್ರತಿ ಹೋಟೆಲಲ್ಲೂ ಹೀಟರ್ ಅಳವಡಿಸಿರುತ್ತಾರೆ. ಮೇ ತಿಂಗಳಿನಿಂದ ಮಳೆ ಪ್ರಾರಂಭವಾಗುತ್ತದೆ. ಆದರೆ ಮಳೆ ಯಾವಾಗ ಬೇಕಾದರೂ ಬರುವ ಕಾರಣ ಪ್ರವಾಸಿಗರು ಕ್ಯಾಪ್ ಮತ್ತು ಕೊಡೆಯನ್ನು ಆ ಸಮಯದಲ್ಲಿ ಹೊಂದಿದ್ದರೆ ಒಳ್ಳೆಯದು. ರಾಜಧಾನಿ ಥಿಂಪು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಫೆಬ್ರವರಿಯಿಂದ ಸೆಪ್ಟೆಂಬರ್ ನಡುವೆ ಹೋಗಿ ಬರಬಹುದು.

ಭೂತಾನ್ ಸೇನೆ

ಭೂತಾನ್ ಸೇನೆ

ಭೂತಾನ್ ಮಿಲಿಟರಿಯಲ್ಲಿ ಸುಮಾರು 16 ಸಾವಿರ ಸೈನಿಕರಿದ್ದಾರೆ. ಅವರೆಲ್ಲ ಭಾರತೀಯ ಸೇನೆಯಿಂದ ತರಬೇತಿ ಪಡೆದವರು. ಅವರಲ್ಲಿ ರಾಯಲ್ ಬಾಡಿಗಾರ್ಡ್ ಮತ್ತು ರಾಯಲ್ ಭೂತಾನ್ ಪೊಲೀಸ್ ಸಹ ಇದ್ದಾರೆ. ಆದರೆ ವಾಯು ಸೇನೆ ಇಲ್ಲ. ಅಲ್ಲಿ ಅಪರಾಧ ಪ್ರಕರಣಗಳು ಬಲು ಕಡಿಮೆ. 2012ರಲ್ಲಿ ಥಿಂಪು ಟೆಕ್ ಪಾರ್ಕ್ ಪ್ರಾರಂಭಿಸಲಾಯಿತು. ಅಂತರ್ಜಾಲದ ಮೂಲಕ ಆಧುನಿಕತೆಯತ್ತ ಭೂತಾನ್ ಹೆಜ್ಜೆಯಿರಿಸಿದೆ. ಅಲ್ಲಿ ಸಿಮೆಂಟ್, ಸ್ಟೀಲ್ ತರಹದ ದೊಡ್ಡ ಕಂಪನಿಗಳೂ ಇವೆ.

ರಫ್ತು

ರಫ್ತು

ವಿದ್ಯುತ್, ಜಿಪ್ಸಮ್, ಏಲಕ್ಕಿ, ಮರ, ಸಿಮೆಂಟ್, ಹಣ್ಣು, ಕರಕುಶಲ ವಸ್ತುಗಳನ್ನು ಭೂತಾನ್ ರಫ್ತು ಮಾಡುತ್ತದೆ. ಗುಜರಾತ್ ನ ಅಮುಲ್ ಹಾಲಿನ ಉತ್ಪನ್ನಗಳು ಮಾತ್ರ ಭೂತಾನ್ ಎಲ್ಲೆಡೆ ಕಂಡುಬರುತ್ತವೆ. ಪ್ರಾಕೃತಿಕ ಸೌಂದರ್ಯ ಮತ್ತು ಸಂಪತ್ತನ್ನು ಉಳಿಸಿಕೊಳ್ಳಲು ಭೂತಾನ್ ಆರ್ಥಿಕ ಲಾಭಗಳಿಗೆ ಹೆಚ್ಚಾಗಿ ಮಹತ್ವ ನೀಡಿಲ್ಲ. ವಿಶ್ವದಲ್ಲೇ ಶೇಕಡಾ 72 ರಷ್ಟು ವನಸಂಪತ್ತನ್ನು ಹೊಂದಿರುವ ಏಕೈಕ ರಾಷ್ಟ್ರವಿದು.

ವಿದ್ಯೆ

ವಿದ್ಯೆ

ಪ್ರತಿ ವರ್ಷ ಎರಡು ಸಾವಿರಕ್ಕೂ ಹೆಚ್ಚು ಭೂತಾನಿ ಯುವಕ- ಯುವತಿಯರು ಭಾರತದ ವಿಶ್ವವಿದ್ಯಾಲಯಗಳಲ್ಲಿ ಓದಲು ಬರುತ್ತಾರೆ. ಭಾರತ ಸರಕಾರವೂ ವಿದ್ಯಾರ್ಥಿವೇತನವನ್ನು ನೀಡಿ ಅವರನ್ನು ಪ್ರೋತ್ಸಾಹಿಸುತ್ತಿದೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿದ್ಯಾರ್ಥಿ ವೇತನವನ್ನು ದ್ವಿಗುಣಗೊಳಿಸಿದರು. ಹೀಗಾಗಿ ಭಾರತದಲ್ಲಿ ಓದುವ ಭೂತಾನಿಗರ ಸಂಖ್ಯೆ ಇನ್ನೂ ಹೆಚ್ಚಲಿದೆ. ಭಾರತಕ್ಕಷ್ಟೇ ಅಲ್ಲ, ಅಲ್ಲಿನ ವಿದ್ಯಾರ್ಥಿಗಳು ಬ್ರಿಟನ್, ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೂ ಹೋಗುತ್ತಾರೆ. ಸಂತಸದ ಸಂಗತಿ ಎಂದರೆ ವಿದೇಶಕ್ಕೆ ಓದಲು ಹೋಗುವ ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಹಿಂತಿರುಗಿ, ತಮ್ಮ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಗುನಗುತಾ ನಲಿ

ನಗುನಗುತಾ ನಲಿ

ಆಧುನಿಕತೆಯೊಂದಿಗೆ ಆಧ್ಯಾತ್ಮಿಕತೆಯನ್ನೂ ಮೈಗೂಡಿಸಿಕೊಂಡಿರುವುದರಿಂದ ಭೂತಾನ್ ಜನರ ಮುಖದಲ್ಲಿ ಸದಾ ನಗು ಮತ್ತು ಪ್ರಶಾಂತತೆಯನ್ನು ಕಾಣಬಹುದು. ಅದುವೇ ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯದ ರಹಸ್ಯ. ಬುದ್ಧನ ತತ್ವಗಳನ್ನು ಅಳವಡಿಸಿಕೊಂಡಿರುವ ಅವರದ್ದು ಮಾತು ಕಡಿಮೆ. ಅವರು ಅಂತರ್ಮುಖಿಗಳು, ಸಹಾಯ ಮಾಡಲಾಗದಿದ್ದರೆ ತೊಂದರೆಯನ್ನು ಮಾಡಬಾರದೆಂಬ ಧೋರಣೆ, ಸಂತಸವೆಂಬುದು ಹೊರಗೆಲ್ಲಿಂದಲೋ ಬರುವುದಲ್ಲ, ನಮ್ಮೊಳಗೆ ಹುಟ್ಟುಬೇಕು ಮತ್ತು ನಮ್ಮ ಸಂತಸಕ್ಕೆ ಬೇರೆ ಯಾರೋ ಕಾರಣರಲ್ಲ ನಾವೇ ಕಾರಣರು ಎಂಬ ಸತ್ಯವನ್ನು ಮನಗಂಡವರು. ಭೂತಾನ್ ಗೆ ತನ್ನದೇ ಪ್ರಪಂಚ. ಯಾರ ಹಂಗೂ ಅವರಿಗಿಲ್ಲ. ಉಳಿದ ಪ್ರಪಂಚದ ಅಗತ್ಯವೂ ಅವರಿಗಿಲ್ಲ. ಆದರೆ ಪ್ರಪಂಚಕ್ಕೆಲ್ಲಾ ಭೂತಾನ್ ಮತ್ತು ಅಲ್ಲಿನವರ ಮನಸ್ಥಿತಿಯ ಅತ್ಯಗತ್ಯವಿದೆ.

English summary
Bhutan-A country to visit for it's beauty, clean air, loving people. Here D.G.Mallikarjun, traveller-photographer writes interesting facts about Bhutan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more