ಪ್ರವಾಸ್ಯೋದ್ಯಮ ಪಟ್ಟಿಗೆ ರಾಜ್ಯದ ಹೊಸ ಅದ್ಭುತ ತಾಣ ಸೇರ್ಪಡೆ-ತಲುಪುವುದೇಗೆ?-ಮಾರ್ಗಗಳ ವಿವರ
Karnataka's Longest Glass Bridge: ದಕ್ಷಿಣ ಕರ್ನಾಟಕದ ಪ್ರವಾಸೋದ್ಯಮ ಪಟ್ಟಿಗೆ ಮತ್ತೊಂದು ಅದ್ಭುತ ತಾಣವೊಂದು ಸೇರ್ಪಡೆಯಾಗಿದೆ. ಹಾಗಾದರೆ ಆ ತಾಣ ಯಾವುದು, ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಂಜಿನ ನಗರಿ ಅಂತಲೇ ಹೆಸರುವಾಸಿಯಾಗಿರುವ ಕೊಡಗು ಅತ್ಯದ್ಭುತ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಇದೀಗ ಇಲ್ಲಿನ ಹೊಸ ತಾಣವೊಂದು ರಾಜ್ಯದ ಪ್ರವಾಸೋದ್ಯಮ ಪಟ್ಟಿಗೆ ಸೇರ್ಪಡೆಯಾಗಿದೆ. ಕೊಡಗಿನಲ್ಲಿ ಅಚ್ಚಹಸಿರಿನ ಕಾನನದ ನಡುವೆ ಕಳೆದ ವರ್ಷವಷ್ಟೇ ಆರಂಭಿಸಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಇಡೀ ದಕ್ಷಿಣ ಭಾರತದ ಗಮನ ಸೆಳೆದಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ.

ಈ ಬ್ರಿಡ್ಜ್ ಅನ್ನು ಅಚ್ಚಹಸಿರಿನ ನಡುವೆ ಇರುವ ಒಂದು ರೆಸ್ಟೋರೆಂಟ್ ಬಳಿ ನಿರ್ಮಾಣ ಮಾಡಲಾಗಿದೆ. ಇದನ್ನು ವ್ಯವಹಾರದ ಉದ್ದೇದಿಂದ ನಿರ್ಮಾಣ ಮಾಡಲಾಗಿತ್ತು, ಇದರ ಮೇಲೆ ಹೋಗುವ ಪ್ರವಾಸಿಗರಿಗೆ ಇಂತಿಷ್ಟು ಶುಲ್ಕ ಪಾವತಿಸಬೇಕು ಎನ್ನುವ ನಿಯಮ ಆಗಲೇ ಇತ್ತು. ಇದೀಗ ದಿನಕಳೆಯುತ್ತಿದ್ದಂತೆ ಈ ತಾಣದತ್ತ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಈ ಮೂಲಕ ಇದು ಪ್ರಸಿದ್ಧಿ ಪಡೆಯುತ್ತಾ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಥಾನ ಪಡೆದುಕೊಂಡಿದೆ.
ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್‌ಗೆ ತಲುಪುವುದೇಗೆ?: ಮಡಿಕೇರಿ ಹೊರವಲಯದ ಅಬ್ಬಿಫಾಲ್ಸ್‌ಗೆ ಹೋಗುವ ರಸ್ತೆಯಲ್ಲಿ ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಮಡಿಕೇರಿಯಿಂದ ಸುಮಾರು 5 ಕಿಲೋ ಮೀಟರ್ ಹೋದರೆ, ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಇರುವ ನಂದಿಮೊಟ್ಟೆ ಎಂಬ ಸ್ಥಳದಲ್ಲಿ ಈ ಅತೀ ದೊಡ್ಡ ಗ್ಲಾಸ್ ಬ್ರಿಡ್ಜ್ ಕಾಣಸಿಗುತ್ತದೆ.
ವಿಶ್ವದ ಗಮನ ಸೆಳೆಯುತ್ತಿದೆ ಈ ಸ್ಕೈವಾಕ್ ಬ್ರಿಡ್ಜ್: 180 ಮೀಟರ್ ಉದ್ದ, 5 ಮೀಟರ್ ಅಗಲ, 250 ಅಡಿ ಎತ್ತರದಲ್ಲಿರುವ ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ನೋಡುಗರನ್ನು ತನ್ನತ್ತ ಆಯಸ್ಕಾಂತದಂತೆ ಆಕರ್ಷಿಸುತ್ತಲೇ ಇದೆ. ಕೊಡಗಿನ ಈ ಸ್ವಾಭಾವಿಕ ಪ್ರಕೃತಿ ಸೌಂದರ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ಇಲ್ಲಿನ ವೀವ್ ಪಾಯಿಂಟ್‌ಗಳಲ್ಲಿಯೇ ನಿಂತು ಇಲ್ಲಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ಬೆಟ್ಟದ ಇಕ್ಕೆಲಗಳ ನಡುವೆ ಇದೀಗ ಖಾಸಗಿಯವರಿಂದ ನಿರ್ಮಾಣ ಆಗಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಇದೀಗ ರಾಜ್ಯ ಪ್ರವಾಸೋದ್ಯಮ ಪಟ್ಟಿಗೆ ಸೇರಿದ್ದು, ಅಚ್ಚಹಸಿರಿನ ಪ್ರಕೃತಿ ನಡುವೆ ಇರುವ ಈ ಪಾರದರ್ಶಕ ಗಾಜಿನ ಮೇಲೆ ನಡೆಯುತ್ತಾ ಪ್ರವಾಸಿಗರು ರೋಮಾಂಚಕ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ.
ವಿಶೇಷತೆ ಏನು?: ಸುಮಾರು 15 ಟನ್ ಭಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್ ಮೇಲೆ ಒಂದು ಬಾರಿಗೆ 30 ರಿಂದ 35 ಜನ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಚಳಿಗಾಲ, ಮಳೆಗಾಲ ಅಷ್ಟೇ ಅಲ್ಲದೆ, ಬೇಸಿಗೆ ಕಾಲದ ಪ್ರತಿನಿತ್ಯ ಬೆಳಗ್ಗೆ ಇದರ ಮೇಲೆ ಹೋದರೆ ಸಾಕು ಸ್ವರ್ಗದಷ್ಟೇ ಅನುಭವ ಆದಂತಾಗಲಿದೆ.
ದೇಶದ ಅತೀ ದೊಡ್ಡ ಸ್ಕೈವಾಕ್ ಬ್ರಿಡ್ಜ್ ಎಲ್ಲಿದೆ?: ಕೇರಳದ ವಯನಾಡಿನಲ್ಲಿ ಖಾಸಗಿಯಾಗಿ ನಿರ್ಮಾಣವಾಗಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ದೇಶದಲ್ಲಿಯೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇದನ್ನು ಹೊರತುಪಡಿಸಿದರೆ, ನಂತರದ ಸ್ಥಾನದಲ್ಲಿ ಕೊಡನಲ್ಲಿ ನಿರ್ಮಾಣವಾಗಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಇದೆ. ಇದು ದೇಶದಲ್ಲಿಯೇ ಎರಡನೇ ಅತೀ ದೊಡ್ಡದು ಎಂಬ ಖ್ಯಾತಿಯನ್ನು ಗಳಿಸಿದ್ದು, ಪ್ರತಿನಿತ್ಯವೂ ಸಾವಿರಾರರು ಪ್ರವಾಸಿಗರು ಭೇಟಿ ನೀಡಿ, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಲೇ ಇದ್ದಾರೆ. ನೀವು ಕೂಡ ಕೊಡಗಿನ ಕಡೆಗೆ ಹೋದರೆ ಈ ತಾಣಕ್ಕೆ ಭೇಟಿ ನೀಡುವುದನ್ನು ಮರೆಯದಿರಿ.












Click it and Unblock the Notifications