ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಗತಿ ಎಂದರೆ ಇದು!

By Staff
|
Google Oneindia Kannada News

Chengdoಹವಾಯಿ ಚಪ್ಪಲಿ ಇರಬಹುದು ಅಥವಾ ಒಂದು ಥರ್ಮಲ್ ಪವರ್ ಪ್ಲಾಂಟ್ ಆಗಿರಬಹುದು. ಅದರ ಮೇಲೆ ಸಣ್ಣ ಅಕ್ಷರಗಳಲ್ಲಿ "ಮೇಡ್ ಇನ್ ಚೈನಾ" ಎಂದು ಬರೆದಿದ್ದರೆ ನಿಮಗೆ ಏನನಿಸುತ್ತದೆ? ಥಟ್ ಅಂತ ಹೇಳಬೇಕು!!

  • ಮೋಹನ್.ಎಸ್. ಹರಿದಾಸ್, ಅರಕೆರೆ, ಬೆಂಗಳೂರು

ಮೇಡ್ ಇನ್ ಚೈನಾ: ಇವತ್ತು ನಮ್ಮ ಯಂತ್ರಜಗತ್ತಿನಲ್ಲಿ "ಮೇಡ್ ಇನ್ ಚೈನಾ" ಎಂದರೆ ನಾವು ಸ್ವಲ್ಪ ನಂಜುಗಣ್ಣಿನಿಂದ ನೋಡಿ "ಓ ಮೇಡ್ ಇನ್ ಚೈನಾನ" ಎಂದು ಉದಾಸೀನವಾಗಿ ಉದ್ಗರಿಸುತ್ತೇವೆ. ನಮಗೆ ಐರೋಪ್ಯ ರಾಷ್ಟ್ರಗಳ ಉತ್ಪನ್ನಗಳ ಬಗ್ಗೆ ಬಹಳ ಹೆಮ್ಮೆ. "ಮೇಡ್ ಇನ್ ಜರ್ಮನಿ, ಮೇಡ್ ಇನ್ ಇಟಲಿ, ಮೇಡ್ ಇನ್ ಲಂಡನ್" ಇತ್ಯಾದಿ ಪದಗಳು ನಮಗೆ ಬಹಳ ಆಪ್ಯಾಯಮಾನ! "ಮೇಡ್ ಇನ್ ಜಪಾನ್" ಅಂತೂ ಶ್ರೇಷ್ಠತಮ! ಹೀಗೇ ನಾವು ಎಲ್ಲದರಲ್ಲೂ ಮಧ್ವಾಚಾರ್ಯರ ತಾರತಮ್ಯಭಾವವನ್ನು ಲಕ್ಷಣವಾಗಿ ಪ್ರತಿಪಾದಿಸುತ್ತೇವೆ.

ನನಗೂ ಇಂಥದೇ ಮನಃಸ್ಥಿತಿಯಲ್ಲಿ "ಮೇಡ್ ಇನ್ ಚೈನಾ"ಪದ ಸ್ವಲ್ಪ ಕುತೂಹಲ ಹುಟ್ಟಿಸಿತು. ನಮ್ಮ ಕಂಪನಿ ಹೊಸಪೇಟೆಯ ಮತ್ತೊಂದು ಸಂಸ್ಥೆಗಾಗಿ 30ಮೆಗಾವಾಟ್‍ನ ಒಂದು "ಉಷ್ಣ ವಿದ್ಯುತ್ ಸ್ಥಾವರವನ್ನು (ಥರ್ಮಲ್ ಪವರ್ ಪ್ಲಾಂಟ್) ಸ್ಥಾಪಿಸಲು "ಕನ್ಸಲ್‍ಟೆಂಟ್" ಆಗಿ ನಿಯುಕ್ತಗೊಂಡಿತು. ಈ ಉಷ್ಣವಿದ್ಯುತ್ ಸ್ಥಾವರದಲ್ಲಿ ಒಂದು ಬಾಯ್ಲರ್, ಒಂದು ಟರ್ಬೈನ್, ಒಂದು ಜನರೇಟರ್ ಇರುತ್ತದೆ. ಇದನ್ನು ನಮ್ಮ ದೇಶದಲ್ಲೇ ಬಿ.ಎಚ್.ಇ.ಎಲ್ ಎನ್ನುವ ಸರ್ಕಾರೀ ಕಾರ್ಖಾನೆ ತಯಾರಿಸುತ್ತದೆ. ಆದರೆ ನಮ್ಮ ಈ ಬಿ.ಎಚ್.ಇ.ಎಲ್ ನಲ್ಲಿ ತಯಾರಾಗುವ ಈ ಯಂತ್ರಗಳು ಭಾರೀ "ರೇಂಜ್" ನಲ್ಲಿರುತ್ತವೆ. ಅವರಿಗೇ ವಿಪರೀತ ಆರ್ಡರ್ ಇರುವುದರಿಂದಲೂ, ನಮಗೆ ಬೇಕಾದ ಈ ಪುಟ್ಟ 30 ಮೆಗಾವಾಟ್‍ನ ಯಂತ್ರವನ್ನು ತಯಾರಿಸಲು ಅದೂ "ಕಡಿಮೆ ಅವಧಿ ಮತ್ತು ಕಡಿಮೆ ಹಣ" ತತ್ವಕ್ಕೆ ನಮಗೆ ಬಿ.ಎಚ್.ಇ.ಎಲ್ ಹೊಂದುವುದಿಲ್ಲವಾದುದರಿಂದ ನಾವು ನಮ್ಮ ಕತ್ತನ್ನು ಬೇರೆ ರಾಷ್ಟ್ರಗಳತ್ತ ಚಾಚ ಬೇಕಾಯಿತು. ಆಗ ನಮ್ಮ ಕಣ್ಣಂಚಿನ ನೇರಕ್ಕೆ ಹೊಳೆದದ್ದು "ಚೈನಾ"!! ಈ ದೇಶದ ಯಂತ್ರ ತಯಾರಿಕೆಯ ಬಗ್ಗೆ ಗುಸುಗುಸು ಪಿಸಿಪಿಸಿ ಮಾತಿದ್ದರೂ ನಾವು ಕಣ್ಣಾರೆ ನೋಡಿಯೇ ನಿರ್ಧಾರ ಮಾಡೋಣವೆಂದು ಚೆನ್ನೈನ ಪರಿಣತರನ್ನೂ ಕರೆದುಕೊಂಡು ಚೈನಾಕ್ಕೆ ಹಾರಿದೆವು.

ಕಾರ್ಖಾನೆಗಳೋ ಅಥವಾ ಶೋರೂಮ್‍ಗಳೋ: ನಾವು ಬ್ಯಾಂಕಾಕ್ ಮುಖಾಂತರ ಹಾರಿ, ಶಾಂಘಾಯ್‍ನ ಏರ್ಪೋರ್ಟ್ ನಲ್ಲೂ ವಿಶ್ರಮಿಸಿ ಮತ್ತೊಂದು ವಿಮಾನವೇರಿ "ಚಿಂಗ್‍ಡೋ" ಏನ್ನುವ ಪುಟ್ಟ ಸಮುದ್ರತೀರದ ಊರಿಗೆ ಬಂದಿಳಿದಾಗ ನಿಜಕ್ಕೂ ಬೆರಗಿನ ಮೇಲೆ ಬೆರಗು!! ನಮ್ಮ ಮಂಗಳೂರಿನಷ್ಟು ದೊಡ್ಡದಾದ ಈ ನಗರದ ವಿಮಾನನಿಲ್ದಾಣ ಅಂತಾರಾಷ್ಟ್ರೀಯಮಟ್ಟದಂತಿದೆ!! ಇಂಥಾ ವಿಮಾನ ನಿಲ್ದಾಣ ನಮ್ಮ ಬೆಂಗಳೂರಲ್ಲಿ ಇನ್ನೂ ಆಗಿಲ್ಲವಲ್ಲ ಎನ್ನುವ ಒಳಚಿಂತೆ ಇದನ್ನು ನೋಡಿದ ಯಾರಿಗಾದರೂ ಕಾಡದೇ ಬಿಡದು. ಈ ಚಿಂಗ್‍ಡೋವಿನಲ್ಲಿ ವಿಮಾನನಿಲ್ದಾಣವಷ್ಟೇ ಅಲ್ಲ, ಗಗನಚುಂಬಿ ಕಟ್ಟಡಗಳು ಫೈವ್‍ಸ್ಟಾರ್ ಮಾದರಿಯ ಅನೇಕ ಹೊಟೆಲ್‍ಗಳೂ, ಅಚ್ಚುಕಟ್ಟಾದ ಸಮುದ್ರತೀರ, ಸುಂದರ ಉದ್ಯಾನವನಗಳೂ ಎಲ್ಲವೂ ಕಣ್ಣಿಗೆ ಮನೋಹರ!! ನಾವು "ಜಿನಾನ್ ಪವರ್ ಸಪ್ಲೈ" ಕಾರ್ಖಾನೆಯೊಳಗೆ ಕಾಲಿಟ್ಟಾಗ ಇದು ಕಾರ್ಖಾನೆಯೋ ಅಥವಾ ಶೋರೂಮೋ? ಎನ್ನುವ ಅನುಮಾನ ಬರುವಷ್ಟು ಎಲ್ಲವೂ ಅತ್ಯಂತ ಶುಭ್ರ! ನೆಲ, ಯಂತ್ರಗಳು, ಅದರ ಬಿಡಿಭಾಗಗಳು ಅದರದರ ಜಾಗಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿವೆ! ಇದು ನಮಗಾಗಿ ಸಿಂಗರಿಸಿದ ಪರಿಯೇನಲ್ಲ. ಅವರ ರೀತಿಯೇ ಹಾಗೆ! ಕಾರ್ಖಾನೆಯ ಪ್ರವೇಶದಲ್ಲೊಂದು ಹೊರಬರುವ ಮಾರ್ಗದಲ್ಲೊಂದು ಚಿಕ್ಕದಾದ ಹಲವು ಟೇಬಲ್ ಮತ್ತು ಕುರ್ಚಿಗಳಿಂದ ಶೋಭಿತವಾದ ಊಟದ ಮನೆಗಳು! ನಮ್ಮಲ್ಲಿ ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಹೆಣ್ಣುಮಕ್ಕಳಿಗೂ ಒಂದು ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಇಲ್ಲೋ ಬರೀ ಶೌಚಾಲಯವಷ್ಟೇ ಅಲ್ಲ ವಿಶ್ರಮಿಸಲು ಊಟಮಾಡಲು ಎಲ್ಲಕ್ಕೂ ಅಚ್ಚುಕಟ್ಟಾದ ಸ್ಥಳಗಳನ್ನು ಕಂಪನಿ ನಿರ್ಮಿಸಿರುತ್ತದೆ.

ಟರ್ಬನ್ ಬ್ಲೇಡ್‍ಗಳನ್ನು ಯಾರೆಂದರೆ ಅವರು, ಹೇಗೆಂದರೆ ಹಾಗೆ ತಯಾರಿಸುವಂತಿಲ್ಲ. ಅದನ್ನು ಅತಿ ಜಾಗರೂಕತೆಯಿಂದ ಅದರಲ್ಲಿ ಅನುಭವಿಗಳಾದವರು ಮತ್ತು ಪರಿಣತರಾದವರೇ ತಯಾರಿಸಬೇಕು. ನಾವು ಇಲ್ಲಿ ನೋಡಿದ ಎಲ್ಲ ಯಂತ್ರಗಳೂ ಅತ್ಯಂತ ಕರಾರುವಾಕ್ಕಾಗಿ, ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಸಮನಾದ ಯಂತ್ರಗಳಾಗಿದ್ದವು. ಸಣ್ಣ ಕೈಯಳತೆಯ ಬ್ಲೇಡ್‍ನಿಂದ ದೊಡ್ಡಬ್ಲೇಡ್‍ವರೆಗೆ ಎಲ್ಲವನ್ನೂ ಜೋಡಿಸಿಟ್ಟ ರೀತಿಯೇ ಕಲಾತ್ಮಕವಾಗಿತ್ತು. ಇಲ್ಲಿ ಎಲ್ಲ ಕಾರ್ಖಾನೆಗಳ ಒಳಗೂ ಹೀಗೆ ಹೋಗುವುದಾಗಲೀ, ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದಾಗಲೀ ಸಾಧ್ಯವಿಲ್ಲ. ಆದರೆ ನಮಗೆ ಈ ಕಂಪನಿಯೇ ವೀಸಾ ವಗೈರೆಗಳನ್ನು ಅಣಿಮಾಡಿ ಕೊಟ್ಟಿದ್ದರಿಂದ ಕೆಲವು ಕಾರ್ಖಾನೆಗಳನ್ನು ಸಂದರ್ಶಿಸುವುದೂ, ಚಿತ್ರೀಕರಿಸುವುದೂ ಸಾಧ್ಯವಾಯಿತು. "ಜಿನಾನ್" ಗೆ ನಾವು ಹೋದದ್ದು ಒಂದು ಭಾನುವಾರದ ದಿನ. ಆದರೂ ಕೆಲವೇ ಕೆಲಸಗಾರರು ಅತ್ಯಂತ ಶ್ರದ್ಧೆಯಿಂದ ತನ್ಮಯರಾಗಿ ತಮ್ಮತಮ್ಮ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

China Flagಪರಿಣಿತರು ಮತ್ತು ಉದ್ಯೋಗಿಗಳು: ಇಲ್ಲಿಯ ಅತ್ಯಂತ ಹಿರಿಯ ಇಂಜಿನಿರನಿಗೂ ಇಂಗ್ಲೀಷ್ ಬರುವುದಿಲ್ಲ. ಆದರೂ ಅವರಿಗೇನೂ ಕೀಳರಿಮೆಯಿಲ್ಲ. ತಮಗೆ "ಇಂಗ್ಲೀಷ್ ಬರುವುದಿಲ್ಲ, ಹೊರದೇಶದವರೊಂದಿಗೆ ವ್ಯವಹರಿಸುವಿಕೆಗೆ ಇದೊಂದು ಕೊರತೆ" ಎನ್ನುವ ಅರಿವು ಅವರಿಗಿದೆ. ಅದಕ್ಕೆ ಅವರೇ ಇಂಗ್ಲೀಷ್ ಕಲಿತು ತಪ್ಪೋಸರಿಯೋ ಮಾತಾಡಲು ಹೋಗುವುದಿಲ್ಲ. ಇದಕ್ಕೆಂದು ಸರಿಯಾದ ಪರ್ಯಾಯ ಮಾರ್ಗಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಇಂಗ್ಲೀಷ್ ಬರುವ ಕೆಲವು ಪರಿಣಿತರನ್ನು ದುಭಾಷಿಗಳಾಗಿ ಕೆಲಸಮಾಡಲು ನಿಯಮಿಸುತ್ತಾರೆ. ಅವರಲ್ಲಿ ನಾನು ಕಂದ ಬಹಳ ದೊಡ್ದ ಸಕಾರಾತ್ಮಕ ಗುಣವೆಂದರೆ "ತಾವು ತಯಾರಿಸಿದ ಯಂತ್ರಗಳ ಬಗ್ಗೆ ಬಹಳ ಹೆಮ್ಮೆಯನ್ನು ಹೊಂದಿರುವುದು" ಇದು ನಿಜಕ್ಕೂ ಅವರೊಂದಿಗೆ ವ್ಯವಹಾರ ಮಾಡುವವರಿಗೆ ಬಹಳ ಸಂತೋಷವನ್ನು ಕೊಡುತ್ತದೆ.

ಚೈನಾದಲ್ಲಿ ಕಂಪನಿಗಳು ಯಾರೆಂದರೆ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಒಂದು ಕಾರ್ಖಾನೆ ಶುರುಮಾಡುವಾಗ " ತಾವು ತಯಾರಿಸಲಿರುವ ವಸ್ತುವಿನ ವಿವರ, ಅದಕ್ಕೆ ಬೇಕಾಗುವ ಪರಿಣಿತರ ವಿವರ, ದೊಡ್ಡ ಇಂಜಿನಿಯರ್ ನಿಂದ ಅತ್ಯಂತ ಸಣ್ಣ ಕೆಲಸ ನಿಭಾಯಿಸುವ ಉದ್ಯೋಗಿಯವರೆಗೆ" ಎಲ್ಲ ವಿವರಗಳನ್ನೂ ಸರ್ಕಾರಕ್ಕೆ ಕೊಡಬೇಕು. ಸರ್ಕಾರ ಅವರಿಗೆ ಎಲ್ಲ ಉದ್ಯೋಗಿಗಳನ್ನೂ ಸರಬರಾಜು ಮಾಡುತ್ತದೆ. ಮತ್ತು ತಿಂಗಳ ಸಂಬಳವನ್ನೂ ಸರ್ಕಾರವೇ ನೋಡಿಕೊಳ್ಳುವುದರಿಂದ ಕಂಪನಿಯ ಒಡೆಯರು ಸರ್ಕಾರ ನಿಗದಿಪಡಿಸಿದ ಹಣವನ್ನು ಸರ್ಕಾರದ ಖಜಾನೆಗೆ ತುಂಬಿದರಾಯಿತು. ಯಾರಾದರೂ ಒಂದು ವೇಳೆ (ಇದು ತುಂಬಾ ಅಪರೂಪ) ಕೆಲಸ ಚೆನ್ನಾಗಿ ಮಾಡದಿದ್ದರೆ, ಅವರನ್ನು ಹಿಂದಕ್ಕೆ ಸರ್ಕಾರಕ್ಕೇ ಕಳಿಸುವ ಸ್ವಾತಂತ್ರ್ಯ ಕಂಪನಿಗೆ ಇರುತ್ತದೆ!! ಆದ್ದರಿಂದ ಎಲ್ಲರೂ ಅಚ್ಚುಕಟ್ಟಾಗಿಯೇ ಕೆಲಸ ನಿಭಾಯಿಸುತ್ತಾರೆ. ಹೀಗೆ ಎಲ್ಲ ವ್ಯವಸ್ಥೆಗಳೂ, ಎಲ್ಲ ಕೆಲಸಗಳೂ ಸುಸೂತ್ರ!!

ಪುಟ್ಟ ನಗರಗಳೂ ಹಳ್ಳಿಯ ದಾರಿಗಳೂ: ನಾನೇನಾದರೂ "ನಗರಗಳಿಗಿಂತ ಹಳ್ಳಿ ಸುಂದರ! ಹಳ್ಳಿಗಿಂತಾ ಹಳ್ಳಿಯ ದಾರಿ ಸುಂದರ" ಎಂದೇನಾದರೂ ಹೇಳಿದರೆ "ಈತ ಮೊದಲಬಾರಿಗೆ ವಿದೇಶಕ್ಕೆ ಹೋಗಿರಬೇಕು ಅದಕ್ಕೇ ಹೀಗೆ ಹಲುಬುತ್ತಿದ್ದಾನೆ" ಎಂದು ನಿಶ್ಚಯಿಸಿಬಿಡುತ್ತೀರಿ. ಆದರೆ ನಂಬಿ ನಾನು 1982 ನೇ ಇಸವಿಯಿಂದ ಇಲ್ಲಿಯವರೆಗೆ ನನ್ನ ಕಂಪನಿಯ ಕೆಲಸಕ್ಕಾಗಿ ಇಡಿ ವಿಶ್ವವನ್ನೇ ಸುತ್ತಿದ್ದೇನೆ. ಇನ್ನೂ ಸುತ್ತುತ್ತಿದ್ದೇನೆ. ಪಾಶ್ಚ್ಯಾತ್ಯರಾಷ್ಟ್ರಗಳನ್ನು ನೋಡಿದಾಗ ಬೆರಗಾದರೂ ಅದನ್ನು ನಮ್ಮ ದೇಶದ ಜೊತೆ ಹೋಲಿಸಲಾಗುವುದಿಲ್ಲ. ಅವೆಲ್ಲಾ ಶ್ರೀಮಂತ ದೇಶಗಳು!! ಆದರೆ ಚೈನಾ ಹಾಗಲ್ಲ. ಎಲ್ಲೋ ಹತ್ತಿರದ ದಾಯಾದಿಗಳಂತೆ ಸುತ್ತುತ್ತಾರೆ ಮನದಲ್ಲೇ! ನಮ್ಮಂತೇ ಅಧಿಕ ಜನಸಂಖ್ಯೆಯಿಂದ, ಬಡತನದಿಂದ, ಪ್ರಕೃತಿಯ ವಿಕೋಪಗಳಿಂದ, ಶಿಕ್ಷಣದ ಕೊರತೆಗಳಿಂದ ರಾಜಕೀಯ ಏರಿಳಿತಗಳಿಂದ ಬಳಲುತ್ತಿರುವವರು. ಆದರೂ ಅವರಿಗೆ ಅದೆಂಥಾ ದೂರದೃಷ್ಟಿ ಇದೆ, ಎಂಥಾ ಕರ್ತೃತ್ವ ಶಕ್ತಿಯಿದೆ ಎನ್ನುವುದನ್ನು ಚೈನಾ ನೋಡಿಯೇ ತಿಳಿಯಬೇಕು.

ಲೇಖನದ ಮುಂದಿನ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X