ಸುಖಕರ ಪ್ರಯಾಣಕ್ಕೆ ಪ್ರಯಾಣಿಕರಿಗೆ ಕೆಲ ಸೂಚನೆಗಳು
ಬೆಂಗಳೂರು, ನ.05 : ಹೊಸದಾಗಿ ಮದುವೆಯಾದ ಮದುಮಕ್ಕಳಿಗೆ ಮೊದಲ ದೀಪಾವಳಿಯನ್ನು ವಧುವಿನ ತವರಲ್ಲಿ ಆಚರಿಸುವ ಸಂಭ್ರಮ. ಅಪ್ಪ ಅಮ್ಮಂದಿರನ್ನು ಊರಲ್ಲಿಯೇ ಬಿಟ್ಟು ವರ್ಷಪೂರ್ತಿ ಕೆಲಸದಲ್ಲಿ ಮುಳುಗಿದ ಮಕ್ಕಳಿಗೆ ದೀವಳಿಗೆಯನ್ನು ತಮ್ಮ ಊರಿನಲ್ಲಿಯೇ ಆಚರಿಸಬೇಕೆಂಬ ಹಂಬಲ. ದೀವಾವಳಿ ಇನ್ನು ನಾಲ್ಕಾರು ದಿನ ಇದೆ ನಂತರ ಬಸ್ ಅಥವ ರೈಲು ಟಿಕೆಟ್ ಬುಕ್ ನಂತರ ಮಾಡಿಸಿದರಾಯ್ತೆಂದು ಬಿಟ್ಟರೆ ನೀವು ಕೆಟ್ಟಿರಿ.
ಬಸ್ ಅಥವ ರೈಲಿನಲ್ಲಿ ಟಿಕೆಟ್‌ನ್ನು ಕಾಯ್ದಿರಿಸುವುದು ಹೋಗಲಿ ಬಸ್ಸಲ್ಲಿ ನಿಲ್ಲಲಿಕ್ಕೂ ನಿಮಗೆ ಸ್ಥಳ ಸಿಗಲಿಕ್ಕಿಲ್ಲ. ಟಿಕೆಟ್‌ನ್ನು ಈಗಲೇ ಕಾಯ್ದಿರಿಸಬೇಕೆಂದು ಬಸ್ ನಿಲ್ದಾಣಕ್ಕೆ ಹೋದರೆ ಎಲ್ಲ ಸೀಟುಗಳೂ ಬುಕ್ಕಾಗಿಬಿಟ್ಟಿವೆ. ಗತ್ಯಂತರವಿಲ್ಲದೇ ದೀಪಾವಳಿಯನ್ನು ಬೆಂಗಳೂರಿನಲ್ಲಿಯೇ ಆಚರಿಸುವ ಸನ್ನಿವೇಶ ಎದಿರಾಗಿದೆ.
ದೀಪಾವಳಿಯ ಮೊದಲ ದಿನವೇ ಅಂದರೆ ಗುರುವಾರದಂದು ಅನೇಕ ಕಂಪನಿಗಳು ರಜಾ ಘೋಷಿಸಿದ್ದಾರೆ. ಶುಕ್ರವಾರ ಒಂದು ದಿನಕ್ಕೂ ರಜಾ ಚೀಟಿ ಬರೆದಿಟ್ಟರೆ ಭರ್ತಿ ನಾಲ್ಕು ದಿನ ಊರಿನಲ್ಲಿ ಅಮ್ಮ ಬಡಿಸಿದ ಹೋಳಿಗೆ ತುಪ್ಪ ಜಡಿದು ಬರುವ ಸುಯೋಗ. ಆದರೆ ಮಾಡುವುದೇನು? ಹದಿನೈದು ದಿನಗಳಿಂದಲೇ ಎಲ್ಲಿಯೂ ಟಿಕೆಟ್ಟು ಸಿಗುತ್ತಿಲ್ಲ. ಗಂಟೆಗಟ್ಟಲೇ ಕ್ಯೂನಲ್ಲಿ ನಿಂತರೂ ಸೀಟು ಸಿಗತ್ತದೆಂಬ ಖಾತರಿಯೂ ಇಲ್ಲ.
ಆದರೆ ನಿರಾಶರಾಗುವ ಕಾರಣವಿಲ್ಲ. ಇದನ್ನು ಮನಗಂಡಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಚ್ಚುವರಿ 600 ಬಸ್‌ಗಳನ್ನು ಬಿಟ್ಟಿದೆ. ಮೈಸೂರಿನ ಕಡೆ ಹೋಗುವವರಿಗಾಗಿ ಮೈಸೂರು ರಸ್ತೆಯಲ್ಲಿರುವ ನಿಲ್ದಾಣದಿಂದ ಇನ್ನೂ 200 ಬಸ್‌ಗಳನ್ನು ಸೇವೆಗೆ ನಿಯೋಜಿಸಿದೆ.
ಶಾಂತಿನಗರ ಬಸ್ ನಿಲ್ದಾಣದಿಂದ 100 ಹೆಚ್ಚುವರಿ ಬಸ್‌ಗಳನ್ನು ಸಂಸ್ಥೆ ನಿಯೋಜಿಸಿದೆ. ಕೊನೆ ಕ್ಷಣದಲ್ಲಿ ಯಾವುದೇ ಗೊಂದಲಕ್ಕೊಳಗಾಗದಿರಲು ಮೊದಲೇ ಸೀಟನ್ನು ಕಾಯ್ದಿರಿಸಿಬಿಡಿ. ಜನರ ಅನುಕೂಲಕ್ಕಾಗಿ 105 ಟಿಕೆಟ್ ಬುಕಿಂಗ್ ಕೌಂಟರುಗಳನ್ನು ಸಾರಿಗೆ ಸಂಸ್ಥೆ ತೆರೆದಿದೆ.
ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿ ಬೇಕೆಂದರೆ ಅಥವ ಸೀಟುಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಬೇಕೆಂದರೆ ಈ ತಾಣಕ್ಕೆ ಭೇಟಿ ನೀಡಿ : http://ksrtc.in/
ರೈಲಿನ ಮುಖಾಂತರ ಪಯಣಿಸಬಯಸುವ ಪ್ರಯಾಣಿಕರು http://www.southernrailway.org/ ತಾಣದಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಪ್ರಯಾಣಿಕರಿಗೆ ಕೆಲ ಸೂಚನೆಗಳು
- ಟಿಕೆಟ್‌ನ್ನು ಮೊದಲೇ ಕಾಯ್ದಿರಿಸಿದ್ದರೆ ಯಾವ ಬಸ್ಸು ಯಾವ ನಿಲ್ದಾಣದಿಂದ ಹೊರಡುತ್ತದೆ ಎಂಬುದನ್ನು ಮೊದಲೇ ಕೇಳಿ ತಿಳಿದುಕೊಳ್ಳಿ.
- ನಿಲ್ದಾಣದಲ್ಲಿ ವಿಪರೀತ ಜನದಟ್ಟಣೆಯಿರುವುದರಿಂದ ನಿಮ್ಮ ಲಗೇಜು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಗಮನವಿರಲಿ.
- ಬುಧವಾರ ಸಾಯಂಕಾಲದಿಂದಲೇ ಜನ ಊರಿಗೆ ತೆರಳಲು ಪ್ರಾರಂಭಿಸುವುದರಿಂದ ಬಸ್ ನಿಲ್ದಾಣ ತಲುಪುವ ರಸ್ತೆಗಳು ಜಾಮ್‌ಪ್ಯಾಕ್ ಆಗುವುದು ಸಹಜ. ಆದ್ದರಿಂದ ಸಾಕಷ್ಟು ಮೊದಲೇ ನಿಲ್ದಾಣ ತಲುಪುವ ವ್ಯವಸ್ಥೆ ಮಾಡಿಕೊಳ್ಳಿ.
- ಕಚೇರಿಯಿಂದ ಹೊರಡುವವರು ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಎರಡು ಮೂರು ಗಂಟೆ ಮೊದಲೇ ಕಚೇರಿ ಬಿಡುವುದು ಒಳಿತು.
ನಿಮ್ಮ ಪ್ರಯಾಣ ಸುಖಕರವಾಗಿರಲಿ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications