• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಒಂದು ರೋಮಾಂಚಕ ಚಾರಣ...

By Staff
|
  • ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು

sampiges@hotmail.com

Sampige Srinivasಬಿಳಿಗಿರಿರಂಗನ ಬೆಟ್ಟದಲ್ಲಿ ಎರಡು ವರುಷದ ಹಿಂದೆ ನಾನು ಅನುಭವಿಸಿದ ಒಂದು ರೋಮಾಂಚಕ ಸನ್ನಿವೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾವು ಐದು ಜನ ಸ್ನೇಹಿತರು ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸತ್ತು ಯಾವುದಾದರೂ ಒಂದು ಪ್ರಾಕೃತಿಕ ಸ್ಥಳಕ್ಕೆ ಪ್ರವಾಸ ಹೋಗಲು ಯೋಜನೆ ಹಾಕಿದೆವು.

ಬೆಂಗಳೂರಿನಿಂದ ಒಂದು ದಿನದಲ್ಲಿ ಹೋಗಿ ಬರಬಹುದಾದ ಸುಂದರ ಪ್ರಾಕೃತಿಕ ಸ್ಥಳಗಳನ್ನು ಯೋಚಿಸಿ ಬಿಳಿಗಿರಿರಂಗನ ಬೆಟ್ಟವೇ ಸರಿಯಾದ ಸ್ಥಳ ಎಂದು ನಿರ್ಧರಿಸಿ ಅಲ್ಲಿಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು. ಬೆಂಗಳೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಕನಕಪುರ, ಕೊಳ್ಳೇಗಾಲ ಮಾರ್ಗವಾಗಿ ಸುಮಾರು 175 ಕಿ. ಮೀ ಆಗುತ್ತದೆ.

ನಮ್ಮ ಮನೆಯ ಹತ್ತಿರದ ಉಡುಪಿ ಗಾರ್ಡನ್‌ನಲ್ಲಿ ಬೆಳಗಿನ ಉಪಹಾರವನ್ನು ಸೇವಿಸಿ ಕನಕಪುರ ರಸ್ತೆಯ ಕಡೆಗೆ ನನ್ನ ಬಿಳಿಯ ಮಾರುತಿ ವ್ಯಾನಿನಲ್ಲಿ ಸವಾರಿ ಹೊರಟಾಗ ಏಳೂವರೆ ಗಂಟೆಯಾಗಿತ್ತು. ಕಗ್ಗಲೀಪುರವನ್ನು ದಾಟಿದಮೇಲೆ ಕನಕಪುರ ರಸ್ತೆಯ ನಿಜವಾದ ನೋಟ ಸಿಗುತ್ತದೆ. ಇಕ್ಕೆಲಗಳಲ್ಲೂ ಸುಂದರವಾದ ಹಸಿರು ಮನಸ್ಸಿಗೆ ರೋಮಾಂಚನ ನೀಡುತಿತ್ತು. ಎಡಕ್ಕೆ ಬನ್ನೇರುಘಟ್ಟ ಅರಣ್ಯ ಪ್ರದೇಶ ಬಲಕ್ಕೆ ರಾಮನಗರದ ಬೆಟ್ಟ ಶ್ರೇಣಿಗಳು ದೂರದಲ್ಲಿ ಕಾಣಿಸುತ್ತಿದ್ದವು. ಕನಕಪುರವನ್ನು ದಾಟಿ ಮಳವಳ್ಳಿಯ ಕಡೆ ಹೊರಟೆವು. ಮಳವಳ್ಳಿಯಲ್ಲಿ ನಾವು ಕೊಳ್ಳೇಗಾಲದ ದಾರಿಯನ್ನು ಹಿಡಿದು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ದಾರಿಯಲ್ಲಿ ಶಿವನಸಮುದ್ರದ ಕಾವೇರಿ ದ್ವೀಪವನ್ನು ಹಾದು ಹೋಗಬೇಕು. ಇಲ್ಲಿ ನಾವು ಕಾವೇರಿಯ ನಿಸರ್ಗ ರಮಣೀಯ ದೃಶ್ಯವನ್ನು ಆನಂದಿಸಿ ನಮ್ಮ ಕ್ಯಾಮರ ಕಣ್ಣಿನಲ್ಲಿ ಸೆರೆ ಹಿಡಿದು ಕೊಳ್ಳೇಗಾಲವನ್ನು ಸೇರಿದಾಗ ಮಧ್ಯಾಹ್ನ 1 ಗಂಟೆ ಆಗಿತ್ತು. ಆಲ್ಲಿ ಶಾಂತಿಸಾಗರ ಹೋಟೆಲ್ಲಿನಲ್ಲಿ ಊಟ ಮಾಡಿ ಬಿಳಿಗಿರಂಗನ ಬೆಟ್ಟಕ್ಕೆ ನಮ್ಮ ಪ್ರಯಾಣ ಮುಂದುವರಿಸಿದೆವು.

Biligiri Rangana Hillsಕೊಳ್ಳೇಗಾಲದಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವುದಕ್ಕೆ ಎರಡು ಮಾರ್ಗಗಳಿವೆ ಒಂದು ಯೆಳಂದೂರು ಪಟ್ಟಣಕ್ಕೆ ಹೋಗಿ ಅಲ್ಲಿಂದ ಎಡಕ್ಕೆ ತಿರುಗುವ ದಾರಿಯಲ್ಲಿ ಹೋದರೆ ಬಿಳಿಗಿರಿರಂಗನ ಬೆಟ್ಟಕ್ಕೆ 20 ಕಿ.ಮೀ ಅಗುತ್ತೆ. ಯೆಳಂದೂರಿನಿಂದ ಚಾಮರಾಜನಗರದ ಮೂಲಕ ಬಿಳಿಗಿರಿರಂಗನ ಬೆಟ್ಟಕ್ಕೆ ಮತ್ತೊಂದು ದಾರಿಯಿದೆ. ಚಾಮರಾಜನಗರದಿಂದ ಬೆಟ್ಟಕ್ಕೆ 40 ಕಿ.ಮೀ ಆಗುತ್ತದೆ. ಚಾಮರಾಜನಗರದ ದಾರಿ ಸ್ವಲ್ಪ ದೂರವಾದರೂ ಅಲ್ಲಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಮಾರ್ಗ ರಮಣೀಯವಾದ, ಕಡಿದಾದ ಘಟ್ಟದ ದಾರಿ. ಈ ದಾರಿಯಲ್ಲಿ ಮೊದಲು ಕೆ. ಗುಡಿ ಎನ್ನುವ ಸ್ಥಳ ಸಿಗುತ್ತದೆ. ಇಲ್ಲಿ ಕರ್ನಾಟಕ ಸರ್ಕಾರದ ಜಂಗಲ್‌ ಲಾಡ್ಜಸ್‌ ಮತ್ತು ರಿಸಾರ್ಟ್ಸ್‌ ಇದೆ.

ನಾವು ಯೆಳಂದೂರಿನಿಂದ ಬಿಳಿಗಿರಿಗೆ ನೇರವಾಗಿ ಪ್ರಯಾಣ ಮಾಡಿದೆವು. ಈ ದಾರಿ ಬಹಳ ಸುಂದರವಾದ ಸುಲಭದ, ಹತ್ತಿರದ ದಾರಿ. ಬೆಟ್ಟದ ಕಾಡಿನ ರಸ್ತೆ ಶುರುವಾಗುವ ಸ್ಥಳದಲ್ಲಿ ಅರಣ್ಯ ಇಲಾಖೆಯವರ ಚಿಕ್‌ಪೋಸ್ಟ ಸಿಗುತ್ತದೆ. ಅಲ್ಲಿ ನಮ್ಮ ಹೆಸರನ್ನು ನೋಂದಾಯಿಸಿ ಮುಂದುವರಿದೆವು. ಈ ದಾರಿಯಲ್ಲಿ ಸಾಂಬಾರ್‌ ಜಿಂಕೆ, ನವಿಲು, ಕಾಡೆಮ್ಮೆ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿ ಹೆಚ್ಚಾಗಿ ಇರುವ ಆನೆಗಳು ಕಾಣಸಿಗುತ್ತವೆ. ನಾವು ಸುಮಾರು 3ಘಂಟೆಗೆ ಬಿಳಿಗಿರಿರಂಗನ ಬೆಟ್ಟ ತಲುಪಿದೆವು. ಬಿಳಿಗಿರಿಯನ್ನು ಶ್ವೇತಾದ್ರಿಯೆಂದೂ ಕರೆಯುತ್ತಾರೆ. ಆಲ್ಲಿ ಎತ್ತರವಾದ ಗಿರಿಶೃಂಗದಲ್ಲಿರುವ ಪುರಾತನ ದೇವಸ್ಥಾನದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ದರ್ಶನ ಮಾಡಿ, ಅಲ್ಲಿಂದ ಕಾಣುವ ಬಿಳಿಗಿರಿರಂಗನಬೆಟ್ಟದ ಗಿರಿಶ್ರೇಣಿಯ ರಮಣೀಯವಾದ ನಿಸರ್ಗ ಸೌಂದರ್ಯವನ್ನು ಸವಿದು, ನಮ್ಮ ಕ್ಯಾಮೆರದಲ್ಲಿ ಆ ದೃಶ್ಯಗಳನ್ನು ಸೆರೆಹಿಡಿದು ಕೆ. ಗುಡಿಯ ಕಡೆ ಹೊರಟೆವು.

ಕೆ. ಗುಡಿಗೆ ಹೋಗುವ ದಾರಿ ಹೆಚ್ಚು ದಟ್ಟವಾದ ನಿತ್ಯಹರಿದ್ವರ್ಣದ ಹಾಗೂ ಉದುರೆಲೆ ಕಾಡು. ಅದು ಆನೆಗಳು ಓಡಾಡುವ ತಾಣವೆಂದು ಸಾಕ್ಷಿಹೇಳುವ ಆನೆಗಳ ಹೆಜ್ಜೆ ಗುರುತು, ಲದ್ದಿಗಳು ನಮಗೆ ರಸ್ತೆಯಲ್ಲಿ ಕಾಣಿಸಿದವು. ದಾರಿಯಲ್ಲಿ ಒಂದೆರಡು ಕೆರೆಗಳು ಕಾಡಿನ ಹಿನ್ನೆಲೆಯಲ್ಲಿ ನೋಡಲು ರಮಣೀಯವಾಗಿದ್ದವು. ಈ ನೀರಿನ ಸೆಲೆಗಳ ಸಮೀಪ ಆನೆಗಳು, ಕಾಡೆಮ್ಮೆ, ಜಿಂಕೆ ಇತ್ಯಾದಿ ಕಾಡು ಪ್ರಾಣಿಗಳು ಬರುತ್ತಿರುತ್ತವೆ. ಕ್ಯಾತೇ ದೇವರಗುಡಿಯನ್ನು ಕೆ. ಗುಡಿ ಎಂದು ಕರೆಯುತ್ತಾರೆ. ಆಲ್ಲಿ ಜಂಗಲ್‌ ಲಾಡ್ಜಸ್‌ ಮತ್ತು ರಿಸಾರ್ಟ್ಸ್‌ನಲ್ಲಿ ಪ್ರವಾಸಿಗರಿಗೆ ತಂಗಲು ಗುಡಿಸಲಿನ ಆಕಾರದ ಕಾಟೇಜ್‌ಗಳು ಹಾಗೂ ಸುಸಜ್ಜಿತವಾದ ಕೋಣೆಗಳೂ ಇವೆ. ಆದರೆ ಅಲ್ಲಿ ತಂಗಲು ಬೆಂಗಳೂರಿನಲ್ಲಿರುವ ಜಂಗಲ್‌ ಲಾಡ್ಜಸ್‌ ಮತ್ತು ರಿಸಾರ್ಟ್ಸ್‌ನವರ ಕಛೇರಿಯಲ್ಲಿ ಮೊದಲೇ ಸ್ಥಳ ಕಾಯ್ದಿರಿಸಬೇಕು. ಆದ್ದರಿಂದ ನಾವು ಸ್ವಲ್ಪ ಹೊತ್ತು ಅಲ್ಲಿ ವಿಶ್ರಮಿಸಿಕೊಂಡು ಬೇರೆ ದಾರಿ ಕಾಣದೆ ಬೆಂಗಳೂರಿಗೆ ವಾಪಸ್‌ ಹೊರಟೆವು.

ಕೆ. ಗುಡಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ವಾಪಸ್‌ ಹೋಗುವಾಗ ದಾರಿಯಲ್ಲಿ ನಮಗೊಂದು ಕಾಡು ಹಾದಿ ಕಾಣಿಸಿತು. ಆಗ ಸಂಜೆ 5:30 ರ ಸಮಯವಿದ್ದಿರಬೇಕು. ಆದು ದೊಡ್ಡಸಂಪಿಗೆ ಮರಕ್ಕೆ ಹೋಗುವ ದಾರಿ ಎಂದು ಒಂದು ಫಲಕದಲ್ಲಿ ಬರೆದಿರುವುದು ಕಣ್ಣಿಗೆ ಬಿತ್ತು. ಆದರೆ ದಾರಿಗೆ ಅಡ್ಡಲಾಗಿ ಅರಣ್ಯ ಇಲಾಖೆಯವರು ಗೇಟನ್ನು ಮುಚ್ಚಿದ್ದರು. ಆದು ಕಾಲು ದಾರಿಯ ಜೊತೆಗೆ ಅರಣ್ಯ ಇಲಾಖೆಯ ಜೀಪುಗಳು ಓಡಾಡುವ ದಾರಿಯೂ ಆಗಿತ್ತು. ಇಷ್ಟು ದೂರ ಬಂದು ಸುಮ್ಮನೇ ಹೋಗುವ ಬದಲು ಬಿಳಿಗಿರಿರಂಗನ ಬೆಟ್ಟದ ಪ್ರಸಿದ್ಧ ದೊಡ್ಡಸಂಪಿಗೆ ಮರವನ್ನು ನೋಡಿಕೊಂಡೇ ಬರೋಣವೆಂದು ನಿರ್ಧರಿಸಿದೆವು. ಆದರೆ ಕಾಡುದಾರಿಯಲ್ಲಿ ಹೋಗಲು ಅರಣ್ಯ ಇಲಾಖೆಯವರ ಹಾಗು ಎಸ್‌.ಟಿ.ಫ್‌ ಪೋಲೀಸರ ಅನುಮತಿ ಪಡೆಯಬೇಕೆಂದು ನಮಗೆ ಆಗ ತಿಳಿದಿರಲಿಲ್ಲ!

ಹೌದು ಅದು ವೀರಪ್ಪನ್‌ ಕಾಲ. ಬಿಳಿಗಿರಿರಂಗನ ಬೆಟ್ಟದ ದಟ್ಟವಾದ ಕಾಡು ಹಾಗೂ ದೊಡ್ಡಸಂಪಿಗೆ ಮರ ಪ್ರದೇಶ, ಕಾಡುಗಳ್ಳ ವೀರಪ್ಪನ್‌ಗೆ ಪ್ರಿಯವಾದ ತಾಣವಾಗಿತ್ತು. ಅಲ್ಲಿಗೆ ಅವನ ತಂಡ ಬಹಳ ಸಲ ಬಂದು ಹೋಗಿತ್ತು ಎಂದು ಸ್ಥಳೀಯರು ತಿಳಿಸಿದ್ದರು. ಜೊತೆಗೆ ದೊಡ್ಡಸಂಪಿಗೆ ಮರಕ್ಕೆ ಹೋಗುವ ಕಾಡುದಾರಿ ಹೆಚ್ಚಾಗಿ ಕಾಡು ಪ್ರಾಣಿಗಳು ಸಂಚರಿಸುವ ಜಾಗ ಕೂಡ. ಏನೋ ಮೊಂಡು ಧೈರ್ಯ ಮಾಡಿ ನಾನು ಮತ್ತು ನನ್ನ ಸ್ನೇಹಿತರು ಮಾರುತಿ ವ್ಯಾನನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕಾಡುದಾರಿಯಲ್ಲಿ ದೊಡ್ಡಸಂಪಿಗೆ ಮರಕ್ಕೆ ಚಾರಣ ಹೊರಟೆವು.

ದಾರಿಯಲಿ ಹೋಗುವಾಗ ಬಿಳಿಗಿರಿ ಕಾಡುಗಳಲ್ಲಿ ನೆಲೆಸಿರುವ ಸೋಲಿಗರು ಎದುರಾದರು. ದೊಡ್ಡಸಂಪಿಗೆ ಮರ ಅಲ್ಲಿಂದ ಏಳೆಂಟು ಕಿಲೋಮೀಟರ್‌ ದೂರ ಇದೆ ಎಂದು ಹೇಳಿದರು. ಸೂರ್ಯನು ಮುಳುಗುವ ಸಮಯವಾಗುತ್ತಿದ್ದರಿಂದ ಕಾಡಿನ ದಾರಿಯಲ್ಲಿ ನಾವು ನಡೆದಂತೆ ಬೆಳಕು ಕ್ಷೀಣಿಸುತ್ತಿತ್ತು. ಮುಗಿಲೆತ್ತರದ ಮರಗಳ ರಾಶಿಯನ್ನು ಸೀಳಿಕೊಂಡು ಕಾಡುದಾರಿ ಸಾಗಿತ್ತು. ಎಷ್ಟು ನಡೆದರೂ ದೊಡ್ಡಸಂಪಿಗೆ ಮರ ಸಿಗಲಿಲ್ಲ. ಈಗಾಗಲೇ ಬಹಳ ದೂರ ಕ್ರಮಿಸಿದ್ದರಿಂದ ಮತ್ತೆ ಹಿಂತಿರುಗಲೂ ಮನಸ್ಸಾಗಲಿಲ್ಲ. ಸ್ವಲ್ಪದೂರ ಸಾಗಿದ ಮೇಲೆ ಒಂದು ಕವಲು ದಾರಿ ಸಿಕ್ಕಿತು. ಆಲ್ಲಿ ಒಂದು ಮರದಲ್ಲಿ ದೊಡ್ಡಸಂಪಿಗೆಗೆ ಎಡಕ್ಕೆ ದಾರಿ ಎಂದು ಚಿಕ್ಕದಾಗಿ ಬರೆದಿರುವುದು ಕಾಣಿಸಿತು. ಸರಿಯೆಂದು ಆ ದಾರಿಯಲ್ಲಿ ಹೊರಟೆವು. ನಾವು ಹೋಗುತ್ತಿರುವ ಹಾದಿ ಇದ್ದಕಿದ್ದಂತೆ ಇಳಿಜಾರಗುತ್ತ ಬಂತು. ಕೊನೆಗೆ ಕಾಲು ದಾರಿ ಕೊನೆಯಾಗಿ ಕೆಲವು ಮೇಟ್ಟಿಲುಗಳು ಕಾಣಿಸಿದವು. ದೂರದಲ್ಲಿ ನಮ್ಮ ಗುರಿಯಾದ ದೊಡ್ಡ ಸಂಪಿಗೆ ಮರ ಕಾಣಿಸಿತು. ನಿಜಕ್ಕೂ ಬಹಳ ದೊಡ್ಡದಾದ ಸಂಪಿಗೆ ಮರ. ಆಂತಹ ದೊಡ್ಡ ಸಂಪಿಗೆ ಮರವನ್ನು ಈ ಹಿಂದೆ ನಾವು ಎಲ್ಲೂ ನೋಡಿರಲಿಲ್ಲ. ಆ ಮರಕ್ಕೆ ಸಾವಿರಾರು ವರುಷ ವಯಸ್ಸಾಗಿದೆ ಎಂದು ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಮೆಟ್ಟಿಳಿಲಿದು ದೊಡ್ಡ ಸಂಪಿಗೆ ಮರದ ಬಳಿ ಬಂದಾಗ ನಿಜಕ್ಕೂ ನಾವು ಅಷ್ಟು ಹೊತ್ತು ಸವೆಸಿದ ಹಾದಿಯ ದಣಿವು ಮರೆತುಹೋಗಿತ್ತು.

ದೊಡ್ಡ ಸಂಪಿಗೆ ಮರದ ಬುಡದ ಪಕ್ಕದಲ್ಲೇ ಒಂದು ಸಣ್ಣ ಝರಿ/ನೀರಿನ ಹಳ್ಳ ಹರಿಯುತ್ತಿತ್ತು. ನಾವು ಆ ಸಣ್ಣ ಹಳ್ಳದ ನೀರನ್ನು ಮನಸ್ಸಿಗೆ ತೃಪ್ತಿಯಾಗುವವರೆಗೆ ಕುಡಿದು ನಮ್ಮ ದಣಿವಾರಿಸಿಕೊಂಡೆವು. ಆ ತೊರೆಯ ನೀರು ಬಹಳ ತಿಳಿಯಗಿ, ತಂಪಾಗಿ, ಸಿಹಿಯಾಗಿತ್ತು. ಅಲ್ಲಿ ನೀರಿನ ಸೆಲೆ ಇರುವುದರಿಂದಲೇ ವೀರಪ್ಪನ್‌ ತಂಡ ಅಲ್ಲಿಗೆ ಭೇಟಿ ನೀಡುತ್ತಿತ್ತೋ ಏನೋ. ನಾವು ಆ ಹಳ್ಳವನ್ನು ದಾಟಿ ದೊಡ್ಡಸಂಪಿಗೆ ಮರದ ಬುಡದಲ್ಲಿ ಇದ್ದ ಶಿವಲಿಂಗವನ್ನು ಹಾಗು ಸೋಲಿಗರು ಇಟ್ಟಿದ್ದ ದೇವರುಗಳ ಚಿತ್ರಗಳಿಗೆ ನಮಸ್ಕರಿಸಿದೆವು. ಈ ದೊಡ್ಡಸಂಪಿಗೆ ಮರ ಸೋಲಿಗರಿಗೆ ಬಹಳ ಪೂಜ್ಯನೀಯ. ಅವರು ಬಿಳಿಗಿರಿರಂಗನ ಬೆಟ್ಟದಲ್ಲಿರುವ ದೊಡ್ಡಸಂಪಿಗೆ ಮರಕ್ಕೆ ದೈವೀಭಾವನೆಯಿಂದ ನಡೆದುಕೊಳ್ಳುತ್ತಾರೆ.

ನಮಗೆಲ್ಲ ಆ ಪರಿಸರದಲ್ಲಿ ಆಗಾಗ ಕಾಡು ಪ್ರಾಣಿಗಳ, ಪಕ್ಷಿಗಳ ಕೂಗು ಬಿಟ್ಟರೆ ಸಂಪೂರ್ಣ ನಿಶ್ಯಬ್ಧ ವಾತಾವರಣ, ಶುದ್ದ ಗಾಳಿ ಇವೆಲ್ಲ ಒಂದು ರೀತಿಯ ಅನಿರ್ವಚನೀಯ ಅನುಭವ ನೀಡಿತ್ತು. ನಾವು ಅಲ್ಲಿಗೆ ಹೋದಾಗ ಆ ಪ್ರದೇಶದಲ್ಲಿ ನಾವು ಐದು ಜನರನ್ನು ಬಿಟ್ಟು ಬೇರೆ ಯಾರು ಇರಲಿಲ್ಲ. ಜೊತೆಗೆ ವೀರಪ್ಪನ್‌ ಕಾರ್ಯಕ್ಷೇತ್ರವೆಂದು ಹಾಗೂ ಆನೆಗಳ ಓಡಾಟ ಅಲ್ಲಿ ಹೆಚ್ಚು ಎಂದು ತಿಳಿದಿದ್ದರಿಂದ ನಮಗೆಲ್ಲ ಸ್ವಲ್ಪ ಭಯವಿತ್ತು. ಕತ್ತಲಾಗುತ್ತಿದ್ದರಿಂದ ಬೇಗ ಅಲ್ಲಿಂದ ಹೊರಟೆವು.

ದೊಡ್ಡ ಸಂಪಿಗೆ ಮರದಿಂದ, ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆಗೆ ಹಿಂತಿರುಗುವಾಗ ನಡೆದ ರೋಮಾಂಚಕ ಘಟನೆಯನ್ನು ನಾವು ನಮ್ಮ ಜೀವನದಲ್ಲಿ ಎಂದೂ ಮರೆಯಲು ಸಾದ್ಯವಿಲ್ಲ. ದೊಡ್ಡಸಂಪಿಗೆ ಮರದಿಂದ ವಾಪಸ ಹೊರಾಟಾಗ ಸಂಜೆ 6:50 ಇರಬೇಕು. ಕಾರ್ಗತ್ತಲು ಕವಿದಿತ್ತು. ನಮ್ಮ ಕಣ್ಣಿಗೆ ಆಗಸದಲ್ಲಿ ನಕ್ಷತ್ರಗಳ ಚಿತ್ತಾರ ಮಾತ್ರ ಕಾಣಿಸುತ್ತಿತ್ತು. ಸುತ್ತ ಏನಿದೆ ಎಂದು ಗೊತ್ತಾಗದಷ್ಟು ಕತ್ತಲು. ಹೀಗೆ ಸಾಗುತ್ತಿರುವಾಗ ಸ್ವಲ್ಪ ದೂರದಲ್ಲಿ ಏನೋ ಚಲಿಸಿದ ಹಾಗೆ ಶಬ್ಧವಾಯಿತು. ಕಾಡೆಮ್ಮೆಗಳ ಹಿಂಡೊಂದು ಕಾಲುದಾರಿಯಲ್ಲಿ ನಿಂತಿತ್ತು. ನಾವು ಹತ್ತಿರ ಬರುವಷ್ಟರಲ್ಲಿ ಕಾಡೆಮ್ಮೆಗಳು ಹೆದರಿ ಕಾಲುದಾರಿಯನ್ನು ರಬಸದಿಂದ ದಾಟಿ ಪಕ್ಕದ ಪೊದೆಗಳಲ್ಲಿ ಅಡಗಿ ಕೊಂಡವು. ಎಲ್ಲಿ ನಮ್ಮ ಮೇಲೆ ಅವು ಎರಗುತ್ತವೊ ಎಂದು ಬೀತಿಯಿಂದ ಓಡಿದೆವು.

ನಾವು ಇನ್ನು ಮುಂದೆ ಹೋಗುತ್ತಿದ್ದಾಗ ತಕ್ಷಣ ನಮ್ಮೆಲ್ಲರ ಎದೆ ಬಡಿತ ನಿಲ್ಲಿಸುವಂತ ಶಬ್ಧ ಕೇಳಿಸಿತು. ಆನೆಯೊಂದು ಹತ್ತಿರದಲ್ಲೆಲ್ಲೋ ಘೀಳಿಟ್ಟ ಶಬ್ಧ! ನಾವು ಐದೂ ಜನ ನಿಂತಲ್ಲೆ ಸ್ತಬ್ಧವಾದೆವು. ಆನೆ ಅಲ್ಲೇ ಹತ್ತಿರದಲ್ಲೇ ಎಲ್ಲೊ ಇರಬೇಕು, ಅದರ ಕಣ್ಣಿಗೆ ಬಿದ್ದರೆ ನಮ್ಮ ಕತೆ ಮುಗಿಯಿತು ಎಂದು ಹೆದರಿ ಸ್ವಲ್ಪ ಹೊತ್ತು ಕದಲದೆ ಅಲ್ಲೇ ನಿಂತೆವು. ನಂತರ ಚೇತರಿಸಿಕೊಂಡು ಓಡಲಿಕ್ಕೆ ಶುರು ಮಾಡಿದೆವು. ಹಾಗೇ ಎದ್ದು ಬಿದ್ದು ಓಡಿ ಇನ್ನೇನು ನಾವು ನಿಲ್ಲಿಸಿದ್ದ ಬಿಳಿ ಮಾರುತಿ ವ್ಯಾನು ಕಣ್ಣಿಗೆ ಬಿದ್ದಾಗ ಅಂತೂ ಬಚಾವದೆವು ಎಂದು ಕೊಳ್ಳುವಷ್ಟರಲ್ಲಿ ನಮ್ಮೆದುರಿಗೆ ದೂರದಲ್ಲಿ ಒಂದು ಕಪ್ಪು ಬಣ್ಣದ ವಾಹನ ಒಂದು ನಿಂತಿರುವುದು ಕಾಣಿಸಿತು. ಅದರ ಮುಂದೆ ಮೂರುನಾಲ್ಕು ಜನ ಕೈಯಲ್ಲಿ ಏ.ಕೆ 47 ಬಂದೂಕುಗಳನ್ನು ಹಿಡಿದು ನಮ್ಮೆಡೆಗೆ ಗುರಿಯಿಟ್ಟು ನಿಂತಿದ್ದರು! ನಮ್ಮ ಎದೆ ಝಲ್ಲೆಂದಿತು. ಅವರು ಮತ್ಯಾರಲ್ಲ ವೀರಪ್ಪನ್ನನ್ನು ಹಿಡಿಯಲು ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಗಸ್ತು ಹೊಡೆಯುತ್ತಿದ್ದ ಎಸ್‌.ಟಿ.ಫ್‌ ಪೋಲಿಸರು!

ಆ ಕತ್ತಲಿನಲ್ಲಿ ನಮ್ಮ ಬಿಳಿಯ ಮಾರುತಿ ವ್ಯಾನನ್ನು ನೋಡಿ ಯಾರು ಇಂತಹ ನಿಷಿದ್ಧ ಪ್ರದೇಶದಲ್ಲಿ ಹೋಗಿರಬಹುದು ಎನ್ನುವ ಸಂದೇಹದಿಂದ ಅಲ್ಲೇ ಕಾಯುತ್ತ ನಿಂತಿದ್ದರು. ನಾವು ಅವರ ಕಣ್ಣಿಗೆ ಬಿದ್ದಾಗ ವೀರಪ್ಪನ್‌ ಕಡೆಯವರು ಇರಬಹುದು ಎನ್ನುವ ಸಂದೇಹದಿಂದ ನಮ್ಮೆಡೆಗೆ ಏ.ಕೆ. 47 ಬಂದೂಕುಗಳನ್ನು ಗುರಿಯಿಟ್ಟು ನಿಂತಿದ್ದರು. ಹೆಚ್ಚು ಕಮ್ಮಿಯಾಗಿದ್ದರೆ ನಾವು ಐದೂ ಜನ ಅಂದು ಎಸ್‌.ಟಿ.ಫ್‌ ಪೋಲಿಸರ ಗುಂಡಿಗೆ ಬಲಿಯಾಗುತ್ತಿದ್ದೆವು.

ನಾನು ದೂರದಿಂದಲೇ ಅವರಿಗೆ ಸಂಶಯ ಹೋಗಲಾಡಿಸಲು ನಾವು ಬೆಂಗಳೂರಿನಿಂದ ಬಂದಿದ್ದೇವೆ. ದೊಡ್ಡ ಸಂಪಿಗೆ ಮರ ನೋಡಲಿಕ್ಕೆ ಹೋಗಿದ್ದೆವು ಅಂತ ಕೂಗಿ ಹೇಳಿದೆ. ನಾವು ಎಸ್‌.ಟಿ.ಫ್‌ ಫೊಲಿಸರ ವ್ಯಾನ್‌ ಹತ್ತಿರ ಬಂದಾಗ ಅವರು ನಮ್ಮ ಜನ್ಮ ಜಾಲಾಡಿದರು. ಬಿಳಿಗಿರಿರಂಗನ ಪ್ರದೇಶದ ದೊಡ್ಡ ಸಂಪಿಗೆ ಮರದ ಕಾಡು ನಿಷಿದ್ಧ ಪ್ರದೇಶವಾಗಿದ್ದರಿಂದ ನಾವು ಅಲ್ಲಿಗೆ ಹೋಗಿದ್ದು ಅವರನ್ನು ಕೆರಳಿಸಿತ್ತು. ಅಕಸ್ಮಾತ್‌ ವೀರಪ್ಪನ್‌ ತಂಡ ಅಲ್ಲಿ ಏನಾದರೂ ಸಿಕ್ಕಿ ನಾವು ಅವನ ಬಲೆಗೆ ಬಿದ್ದಿದ್ದರೇ ಅಥವಾ ವೀರಪ್ಪನ್‌ ಕಡೆಯವರು ಇರಬಹುದು ಎಂದು ಎಸ್‌.ಟಿ.ಫ್‌ ಪೋಲೀಸರು ತಪ್ಪುತಿಳಿದು ಗುಂಡು ಹಾರಿಸಿದ್ದರೆ ಆಗುತ್ತಿದ್ದ ಪರಿಣಾಮದ ಬಗ್ಗೆ ಕೋಪದಿಂದ ನಮಗೆಲ್ಲಾ ಚೆನ್ನಾಗಿ ಬೈದರು. ನಮ್ಮನ್ನು ಬಿಳಿಗಿರಿರಂಗನ ಬೆಟ್ಟದ ಎಸ್‌.ಟಿ.ಫ್‌ ಕ್ಯಾಂಪ್‌ ಇರುವಲ್ಲಿಗೆ ಕರೆದೊಯ್ದು ನಮ್ಮ ಹೆಸರು, ವಿಳಾಸ, ಗುರುತಿನ ದಾಖಲೆಗಳನ್ನು ಪರಿಶೀಲಿಸಿ ಮತ್ತೊಮ್ಮೆ ಇಂತಹ ಕೆಲಸ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದರು. ಅಂತು ಬದುಕಿದೆವು ಎಂದು ಕೊಂಡು ಮಾರುತಿ ವ್ಯಾನನ್ನು ಹತ್ತಿ ಬೆಂಗಳೂರಿನ ಕಡೆ ಹೊರಟಾಗ ಎರಡು ದೊಡ್ಡ ಸಲಗಗಳು ಬಿಳಿಗಿರಿಯ ಕಾಡಿನ ರಸ್ತೆಯಲ್ಲಿ ನಮ್ಮ ದಾರಿಗೆ ಅಡ್ಡಲಾಗಿ ನಿಂತಿದ್ದವು. ನಾನು ವ್ಯಾನನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಆನೆಗಳು ಪಕ್ಕಕ್ಕೆ ಹೋಗುವುದನ್ನೇ ಕಾದು ನಂತರ ಯೆಳಂದೂರು, ಕೊಳ್ಳೇಗಾಲ, ಮಳವಲ್ಲಿ, ಕನಕಪುರ ಮಾರ್ಗವಾಗಿ ಬೆಂಗಳೂರನ್ನು ಸುರಕ್ಷಿತವಾಗಿ ಸೇರಿದಾಗ ರಾತ್ರಿ ಎರಡು ಗಂಟೆಯಾಗಿತ್ತು!

ನಾವು ಅನುಭವಿಸಿದ್ದು ಒಂದು ರೋಮಾಂಚಕ ಕನಸಿನ ಹಾಗೆ ನಡೆದು ಹೋಗಿತ್ತು. ಇಂದಿಗೂ ಆ ಆನೆಯ ಘೀಳು ನನ್ನ ಕಿವಿಗಳಲ್ಲಿ ಮಾರ್ದನಿಸುತ್ತಿದೆ ಮತ್ತು ಎಸ್‌.ಟಿ.ಫ್‌ ಪೋಲಿಸರು ಏ.ಕೆ 47 ಬಂದೂಕು ಹಿಡಿದು ನಮ್ಮೆಡೆಗೆ ಗುರಿಯಿಟ್ಟು ನಿಂತಿರುವ ದೃಶ್ಯ ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತಿದೆ.

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more