ಪತ್ರಗಳು : ಪ್ರತ್ಯೇಕ ತುಳುನಾಡಿಗೆ ಕನ್ನಡಿಗರ ಕಿಡಿ
ಆಂಧ್ರ ಪ್ರದೇಶವನ್ನು ಒಡೆದು ತೆಲಂಗಾಣ ರಾಜ್ಯವನ್ನಾಗಿ ಮಾಡಿದ ಬೆನ್ನಹಿಂದೆಯೇ, ಅದೇ ರೀತಿ ಕರ್ನಾಟಕವನ್ನು ವಿಭಜಿಸಿ ತುಳುನಾಡನ್ನು ಪ್ರತ್ಯೇಕಿಸಬೇಕು ಎಂಬ ಕೂಗಿಗೆ ಪ್ರತಿಭಟನೆಯ ಪ್ರತಿಕೂಗು ಎದ್ದಿದೆ. ಕೊಡಗು ರಾಜ್ಯವನ್ನಾಗಿಸಬೇಕು, ಹೈದರಾಬಾದ್ ಕರ್ನಾಟಕವನ್ನು ರಾಜ್ಯದಿಂದ ಪ್ರತ್ಯೇಕಿಸಬೇಕು ಎಂಬ ಹಳೆಯ ಆಗ್ರಹದ ನಡುವೆ ತುಳುನಾಡಿನ ಆಗ್ರಹಕ್ಕೆ ಕನ್ನಡಿಗರು ಕಿಡಿಕಿಡಿಯಾಗಿದ್ದಾರೆ.
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡಬೇಕು ಎಂದು ಕೇಳುತ್ತಿರುವವರೇ ಸುಮ್ಮನಿರುವಾಗ ನಿಮ್ಮದೇನು ಎಂದು ತುಳುನಾಡಿನ ಬಗ್ಗೆ ಸ್ವರ ಎತ್ತರಿಸಿದವರಿಗೆ ಕನ್ನಡಿಗರು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ತುಳುನಾಡಿನ ಬಗ್ಗೆ ಕನ್ನಡಿಗರು ಯಾವತ್ತೂ ಮಲತಾಯಿ ಧೋರಣೆ ತಳೆದಿಲ್ಲ. ಅಲ್ಲದೆ ತುಳುನಾಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಪ್ರಾಕೃತಿಕವಾಗಿ ಸಾಕಷ್ಟು ಸಂಮೃದ್ಧವಾಗಿಯೇ ಇದೆ.
ಹೀಗಿರುವಾಗ ಪ್ರತ್ಯೇಕ ತುಳುನಾಡು ಬೇಕೆಂಬುದು ಅಪಹಾಸ್ಯದ ಪರಮಾವಧಿ. ದಯವಿಟ್ಟು ಕರ್ನಾಟಕವನ್ನು ಒಡೆದು ಚೂರುಚೂರು ಮಾಡಬೇಡಿ ಎಂದು ಹೇಳಿರುವ ಓದುಗರು, ಹೀಗೇನಾದರೂ ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುವವರು ನೀವೇ ಎಂದು ಎಚ್ಚರಿಸಿದ್ದಾರೆ. ಇದರ ಜೊತೆಗೆ, ತುಳು ಭಾಷೆ ವಿನಾಶದ ಅಂಚಿನಲ್ಲಿದೆ, ಕನ್ನಡದಿಂದ ಅದಕ್ಕೆ ಯಾವತ್ತೂ ಅಪಾಯ ತಪ್ಪಿದ್ದಲ್ಲ ಎಂಬ ಮಾತು ಕೂಡ ಕೇಳಿಬಂದಿದೆ.

ಅಖಂಡ ಕರ್ನಾಟಕವಾಗಿಯೇ ಕರ್ನಾಟಕ ಉಳಿಯಲಿ
ಕನ್ನಡ ಒಂದು ಅಸಾಮಾನ್ಯ ಭಾಷೆಯಾಗಿದೆ. ತುಳುವನ್ನಾಗಲಿ ಅಥವಾ ಕೊಡವ ಭಾಷೆಯನ್ನಾಗಲಿ ಕನ್ನಡಿಗರು ಯಾವತ್ತೂ ಕೀಳಾಗಿ ಕಂಡಿಲ್ಲ ಹಾಗು ಕಾಣುವುದೂ ಇಲ್ಲ. ಉಡುಪಿ, ಧರ್ಮಸ್ಥಳ, ಕೊಲ್ಲೂರು ಮತ್ತು ಮಂಗಳೂರು ಕನ್ನಡಿಗರ ಮನದ ಭಾಗಗಳೇ ಆಗಿವೆ. ಕರ್ನಾಟಕವನ್ನು ಒಡೆಯುವ ಯತ್ನ ಮಾಡಬೇಡಿ. ಉತ್ತರ ಕರ್ನಾಟಕ ಕರಾವಳಿಗಿಂತ ಹಿಂದುಳಿದಿದೆ, ಅದನ್ನು ನೋಡಿ. ದಕ್ಷಿಣ ಕನ್ನಡದವರು ಬೆಂಗಳೂರನ್ನು ಬಿಟ್ಟು ಹೋಗಲಿಕ್ಕೆ ಆಗುವುದೆ? ಯಾರೋ ಒಬ್ಬ ಹಿಂದಿನ ಮಂತ್ರಿ ಕಲ್ಯಾಣ ಕರ್ನಾಟಕ ಮಾಡಿ ತನ್ನ ಕಲ್ಯಾಣ ಮಾಡುವುದಾಗಿ ಹೇಳಿದ್ದ. ತೆಲಂಗಾಣದವರು ಸಹ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ. ದೊಡ್ಡ ರಾಜ್ಯಗಳು ಯಾವಾಗಲೂ ಪಾಲಿಟಿಕಲಿ ಪವರಫುಲ್ ಆಗಿರುತ್ತವೆ. ಆದ್ದರಿಂದ ಇಂತಹ ಯೋಚನೆಗಳನ್ನು ಕೈಬಿಡಿ. ಅಖಂಡ ಕರ್ನಾಟಕವಾಗಿಯೇ ಕರ್ನಾಟಕ ಉಳಿಯಲಿ. ಜೈ ಕರ್ನಾಟಕ ಮಾತೆ.
ನಂದೀಶ್ ಸಿ.

ಹರಿಕೃಷ್ಣ ಪುನರೂರು ಅವರಿಗೆ ಕೆಲ ಪ್ರಶ್ನೆಗಳು
ನಾನು ಮಂಗಳೂರು ಕನ್ನಡಿಗ ಹಾಗು ತುಳು ಭಾಷಿಕ. ಯಾವುದೇ ಕಾರಣಕ್ಕೂ ಕರ್ನಾಟಕ ವಿಭಜನೆ ಆಗಲು ಬಿಡಲ್ಲ. ನಾನು ಹರಿಕೃಷ್ಣ ಪುನರೂರು ಅವರಿಗೆ ಕೆಲವು ಪ್ರಶ್ನೆಗಳನ್ನೂ ಕೇಳಬಯಸುತ್ತೇನೆ.
1) ಬೆಂಗಳೂರಿನಲ್ಲಿ ಸುಮಾರು 50,000 ಮಂಗಳೂರು ಜನರು ತಮ್ಮ ಹೊಟ್ಟೆ ಪಾಡಿನ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವೆರಲ್ಲರಿಗೂ ಕೆಲಸ ನೀವು ಕೊಡಿಸುತ್ತೀರಾ?
2) ತುಳುನಾಡು ರಾಜ್ಯ ಆದರೆ ಸರಕಾರ ನಡೆಸಲು ಆದಾಯ ಯಾವುದರಿಂದ ಬರುತ್ತದೆ? ಸ್ವಲ್ಪ ವಿವರಿಸಿ ಹೇಳಿ.
3) ಕೇವಲ 2 ಲೋಕಸಭಾ ಸ್ಥಾನಗಳಿಂದ ಏನನ್ನೂ ಪಡೆಯೋಕ್ಕೆ ಅಸಾಧ್ಯ. ಏನಾದರು ಸವಲತ್ತು ಸಿಗಬೇಕಾದರೆ ಉಳಿದ ಲೋಕಸಭಾ ಸದಸ್ಯರ ನೆರವು ಅಗತ್ಯ.
4) ತುಳುನಾಡು ರಾಜ್ಯಕ್ಕೋಸ್ಕರ ನಿಮ್ಮ ಜೀವನವನ್ನು ಅರ್ಪಿಸಲು ತಯಾರಿದ್ದೀರ?
5) ತೆಲಂಗಾಣ ಹೋರಾಟದಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ನಮ್ಮಲ್ಲಿ ಯಾರು ತಯಾರಾಗಿದ್ದಾರೆ?
6) ಅಷ್ಟಕ್ಕೂ ಶಿಕ್ಷಣದಲ್ಲಿ ಉಡುಪಿ ದಕ್ಷಿಣ ಕನ್ನಡವೇ ಮುಂದೆ ಇದೆ. ಮಳೆ ಚೆನ್ನಾಗಿ ಆಗುತ್ತ ಇದೆ. ಜನಜೀವನ ಚೆನ್ನಾಗಿದೆ. ಯಾವುದರ ಕೊರತೆ ಇದೆಯೋ ಅದರ ಬಗ್ಗೆ ಹೋರಾಟ ಮಾಡಿ.
ಇತಿ ಮಂಗಳೂರಿಗ, ಜೈ ಕರ್ನಾಟಕ, ರಘು

ಪ್ರತಿ ಮನೆಯನ್ನೂ ಪ್ರತ್ಯೇಕ ರಾಜ್ಯ ಮಾಡಿಬಿಡಿ
ಸಕ್ಕತ್ ತಮಾಷೆಯಾಗಿದೆ ಹರಿಕೃಷ್ಣರವರ ಮಾತು. ಸುಮ್ಮನೆ ಎಲ್ಲ ಜಿಲ್ಲೆಗಳನ್ನೂ ಒಂದೊಂದು ರಾಜ್ಯವನ್ನಾಗಿ ಮಾಡಿ ಬಿಡಿ. ಆಮೇಲೆ ಎಲ್ಲ ತಾಲೂಕುಗಳನ್ನೂ ಒಂದೊಂದು ರಾಜ್ಯವನ್ನಾಗಿ ಮಾಡಿ. ಆಮೇಲೆ ಇದ್ದೆ ಇದೆಯಲ್ಲ ಪ್ರತಿ ಹಳ್ಳಿ ಹಾಗೂ ಪ್ರತಿ ಮನೆಯನ್ನು ಒಂದೊಂದು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದು.. ಹಹಹ...
ವಿಜಯ್

ಕನ್ನಡದಿಂದ ತುಳುವಿಗೆ ಯಾವಾಗಲೂ ಅಪಾಯ
ಜೈ ತುಳುನಾಡು! ಸ್ವತಂತ್ರ ಭಾರತದಲ್ಲಿ ತುಳುನಾಡನ್ನು ತುಂಡರಿಸಿ ಕರ್ನಾಟಕ ಮತ್ತು ಕೇರಳಕ್ಕೆ ಹಂಚಲಾಗಿದೆ. (ಒಡೆದು ಆಳುವ ನೀತಿ) ಈ ಮೂಲಕ ತುಳುನಾಡಿನಲ್ಲಿ ತುಳು ಭಾಷೆಯುಸೊರಗುತ್ತಿದೆ ಮತ್ತು ಯುನೆಸ್ಕೋ ಪಟ್ಟಿ ಮಾಡಿರುವ ಜಾಗತಿಕ ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ತುಳು ಭಾಷೆಯು ಸೇರಿದೆ. ಈ ಮೂಲಕ ಅಪಾಯದ ಕರೆಗಂಟೆ ಬಾರಿಸಲಾರಂಭಿಸಿದೆ. ಕನ್ನಡದಿಂದ ತುಳುವಿಗೆ ಯಾವಾಗಲೂ ಅಪಾಯ!
ಯತೀಶ್ ಕುಮಾರ್

ಆರೋಗ್ಯವಂತ ತಾಯಿಯನ್ನು ಅಂದಗೆಡಿಸಬೇಡಿ
ಪ್ರಪಂಚದ ಹಳೆಯ ರಾಜ್ಯ ಕರ್ನಾಟಕ ಇಂತಹ ರಾಜ್ಯವನ್ನು ದಯವಿಟ್ಟು ಭಾಗ ಮಾಡಬೇಡಿ. ಎಲ್ಲ ಭಾಗಗಳು ಸೇರಿಯೇ ಕರ್ನಾಟಕ ಆಗಿರುವುದು. ಇದನ್ನು ಇಬ್ಭಾಗಿಸುವ ಕೆಲಸ ಅಸಾಧ್ಯವೇ ಸರಿ. ಆರೋಗ್ಯವಂತ ತಾಯಿಯನ್ನು ಅಂದಗೆಡಿಸಬೇಡಿ. ಮಾತೃ ನೆಲಕ್ಕೆ ನಾವೆಲ್ಲರೂ ಒಕ್ಕೊರಲಿನಿಂದ ದುಡಿಯೋಣ. ಎಂದಿಗೂ ಕನ್ನಡ ನಾಡು ಒಂದೇ ಆಗಿರಲಿ. ನಾವೆಲ್ಲರೂ ಜೊತೆಯಾಗಿಯೇ ಮುಂದೆಯೂ ಇರೋಣ.
ನವೀನ್ ಕುಮಾರ್

ಕರ್ನಾಟಕದಿಂದ ಮತಿಹೀನ ಕೆಲಸ ಬೇಡ
ಸ್ವಾಮಿ ಹರಿಕೃಷ್ಣ ಪುನರೂರುರವರೆ, ದಯಮಾಡಿ ಇಂತ ಹೋರಾಟವನ್ನು ನಿಲ್ಲಿಸಿ. ಕೆಲವು ಮತಿಹೀನರು ಆಂಧ್ರ ವಿಭಜಿಸಿದ್ದಾರೆ. ಆದರೆ ಕರ್ನಾಟಕದವರು ನಾವು ಆ ಕೆಲಸ ಮಾಡುವುದು ಬೇಡ. ಸಮಗ್ರ ಕರ್ನಾಟಕದ ಹಿತ ಚಿಂತನೆ ಇರಲಿ.
ಸುಬ್ರಮಣ್ಯ ಜರ್ಮನಿ












Click it and Unblock the Notifications