ದಲಿತರಿಗೆ ಪೇಜಾವರ ಶ್ರೀಗಳ ಹೊಸ ಆಫರ್

ಪೇಜಾವರರೇ, ನಿಮ್ಮ ದೀಕ್ಷೆಯಾದ 'ಸಾಮಾನ್ಯ" ದೀಕ್ಷೆಯಲ್ಲಿ ಮದ್ಯ ಮತ್ತು ಮಾಂಸ ತಿನ್ನಲು ಅವಕಾಶವಿರುತ್ತದೆ. 'ವಿಶೇಷ" ದೀಕ್ಷೆಯಲ್ಲಿ ಅದೆಲ್ಲವನ್ನೂ ವಿಸರ್ಜಿಸಬೇಕಾಗುತ್ತದೆ. ಅಲ್ಲಾ ಪೇಜಾವರರೇ, ನಿಮ್ಮ ಬ್ರಾಹ್ಮಣ ವರ್ಗದವರು ಯಾರೂ ಮದ್ಯ ಮತ್ತು ಮಾಂಸವನ್ನು ತಿನ್ನುವವರಿಲ್ಲವೇ ? ಅದೆಷ್ಟೋ ಬ್ರಾಹ್ಮಣರು ಇಂದು ಬಾರ್, ನಾನ್‌ವೆಜ್ ಹೋಟೆಲ್‌ಗಳಲ್ಲಿ ಕಾಣಲು ಸಿಗುತ್ತಾರೆ. ಇದು ಹೇಗೆ ಸಾಧ್ಯವಾಯಿತು? ಮೊದಲು ಬ್ರಾಹ್ಮಣರಿಗೆ 'ದೀಕ್ಷೆ" ನೀಡಿ ನಂತರ ದಲಿತರಿಗೆ ದೀಕ್ಷೆ ನೀಡಲು ಮುಂದಾಗಿ.
ಬೌದ್ಧ ಧರ್ಮ ಸ್ವೀಕರಿಸಿದರೂ ಅ ಧರ್ಮದಲ್ಲೂ ದಲಿತರು ಅಸ್ಪೃಶ್ಯತೆಯಿಂದ ಹೊರ ಬರಲಾರಿರಿ ಎಂದು ನೀವು ಹೇಳಿರುವುದು ಯಾವ ಆಧಾರದಲ್ಲಿ ? ಬೌದ್ಧ ಧರ್ಮದಲ್ಲಿ ಎಲ್ಲ ಮತೀಯರಿಗೂ ಪ್ರಾರ್ಥನಾಲಯದ (ವಿಹಾರ) ಒಳಗೆ ಸಮಾನವಕಾಶವಿದೆ. ಅದಲ್ಲದೇ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಮತ್ತು ಕ್ರೂರ ಸಂಪ್ರದಾಯಗಳಿಂದಲೇ ಬೇಸತ್ತು ಬುದ್ಧನು ತಾನೊಂದು ಹೊಸ ಧರ್ಮವನ್ನು ಸ್ಥಾಪನೆ ಮಾಡಲು ಪ್ರೇರಣೆಯಾದುದು.
ದಲಿತರು ಕ್ರೈಸ್ತ , ಇಸ್ಲಾಂ ಧರ್ಮಗಳಿಗೆ ಮತಾಂತರವಾಗಬೇಡಿ ಎಂದು ಹೇಳಿರುವ ಮೂಲಕವೂ ದಲಿತರಿಗೆ 'ಧರ್ಮ ಸ್ವೀಕಾರ"ದಲ್ಲೂ ಸ್ವಾತಂತ್ರ್ಯನೀಡದಿರಲು ಪೇಜಾವರರು ಯತ್ನಿಸುತ್ತಿದ್ದಾರೆ. ನಮ್ಮ ಧರ್ಮದಲ್ಲಿಯೇ ಹಲವಾರು ಕೆಟ್ಟ ಸಂಪ್ರದಾಯಗಳಿದ್ದರೂ ನಾವು ಕ್ರೈಸ್ತ- ಇಸ್ಲಾ ಧರ್ಮವನ್ನು ದೂಷಿಸುವುದು ಸರಿಯಲ್ಲ. ಕ್ರೈಸ್ತ ಧರ್ಮದಲ್ಲಿ ಚರ್ಚ್‌ದೊಳಗೆ ಎಲ್ಲರಿಗೂ ಸಮಾನವಕಾಶವಿದೆ.
ಇಸ್ಲಾಂ ಧರ್ಮದಲ್ಲಿ ಪವಿತ್ರ ಮೆಕ್ಕಾಗೆ ಹಜ್‌ಯಾತ್ರೆಯಲ್ಲಿ ಕಪ್ಪು ಬಿಳಿಯರೆನ್ನುವ ಬೇಧ ಭಾವವಿಲ್ಲದೆ, ಭುಜಕ್ಕೆ ಭುಜ ತಾಗಿ ನಿಲ್ಲುವುದನ್ನು ಇಸ್ಲಾಂ ಧರ್ಮದಲ್ಲಿ ಕಾಣಲು ಸಿದ್ಧವಾಗುತ್ತದೆ. ಆದರೆ ಹಿಂದೂ ಧರ್ಮದ ಎಷ್ಟು ದೇವಸ್ಥಾನದಲ್ಲಿ ಇಂದಿಗೂ ದಲಿತರಿಗೆ ಪ್ರವೇಶಿಸಲು ಬಿಡುತ್ತೀರಿ ? ಅದೆಷ್ಟೋ ಜಾತ್ರೆ ಸಮಾರಂಭಗಳಲ್ಲೂ ದಲಿತರು ದೇವಸ್ಥಾನದಿಂದ ಹೊರ ನಿಂತೇ ಉತ್ಸವ ವೀಕ್ಷಣೆ ಮಾಡುವುದು ಮತ್ತು ಅನ್ನ ಪ್ರಸಾದಗಳಿಂದ ವಂಚಿತರಾಗಿದ್ದಾರೆ.
ಪೇಜಾವರರೇ, ತಾವು ದಲಿತರ ಬಗ್ಗೆ ಮಾತನಾಡಲು ನೈತಿಕ ಹಕ್ಕು ಕಳಕೊಂಡವರಾಗಿದ್ದೀರಿ. ದಯವಿಟ್ಟು ದಲಿತರಿಗೆ, ಇನ್ನಾದರೂ ಸ್ವಾತಂತ್ರ್ಯ ನೀಡಿ. ಬದಲಾಗಿ ಅವರ ಮೇಲೆ ನಿಮ್ಮ 'ದೀಕ್ಷೆ ಭಿಕ್ಷೆ" ಎಂದು ಇನ್ನಷ್ಟು ಶೋಷಣೆಗೊಳಪಡಿಸಲು ಮುಂದಾಗುವುದು ಬೇಡ.












Click it and Unblock the Notifications