ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಬ್ಜಿತ್ ಗೆ ಕ್ಷಮಾದಾನ ಕೇಳಬೇಕೆ ಬೇಡವೆ?

By Staff
|
Google Oneindia Kannada News

Bharat Sastry
'ಪಾಕ್ ಎಂಬ ಕಾದ ಕಬ್ಬಿಣ ಬಡಿಯಲು ಇದು ಸಕಾಲ' ಕುರಿತ ಆನಂದರಾಮ ಶಾಸ್ತ್ರಿ ಲೇಖನ ಓದಿದೆ. ನನ್ನ ಕೆಲವು ಅನಿಸಿಕೆಗಳನ್ನು ವಾಚಕರ ಜತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಶಾಸ್ತ್ರೀ ಅವರ ಲೇಖನದ ಆಶಯವನ್ನು ನಾನು ಅಲ್ಲಗಳೆಯಲು ಪ್ರಯತ್ನಿಸುತ್ತಿಲ್ಲ. ಆದರೆ ಲೇಖನ ಯಾವುದೇ ನಿಖರ ಸಂದೇಶ ನೀಡುತ್ತಿಲ್ಲವಲ್ಲ ಎಂಬ ವಿಷಾದವಿದೆ.

* ಭರತ್ ಶಾಸ್ತ್ರಿ

ಸರಬ್ಜಿತ್ ಮತ್ತು ಅಫ್ಜಲ್ ಗುರು ಇಬ್ಬರ ಪ್ರಕರಣಗಳ ನಡುವೆ ಇರುವ ಸಾಮ್ಯ ಕೇವಲ ಮರಣದಂಡನೆ. ಮೂಲಭೂತ ವ್ಯತ್ಯಾಸ, ಅಫ್ಜಲ್ ಭಾರತದ ಪ್ರಜೆಯಾಗಿದ್ದು, ಭಾರತದ ಸರ್ಕಾರದ, ಸಂವಿಧಾನದ ಮತ್ತು ಸಾರ್ವಭೌಮತ್ವದ ವಿರುದ್ಧ ಯುದ್ಧವನ್ನು ಸಾರಿದ್ದು, ಭಾರತದ ನೆಲದ ಕಾನೂನಿನ ಪ್ರಕಾರ ಮರಣದಂಡನೆಯನ್ನು ವಿಧಿಸಲಾಗಿದೆ. ಆದರೆ ಭಾರತದ ಪ್ರಜೆಯಾದ ಸರಬ್ಜಿತ್ ಗೆ ಪಾಕಿಸ್ತಾನದ ಕಾನೂನಿನ ಪ್ರಕಾರ, ಅದೆಷ್ಟೇ ದೋಷಪೂರ್ಣವಾಗಿರಲಿ, ಗೂಢಚರ್ಯೆ, ಮತ್ತು ಲಾಹೋರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂಬುದನ್ನು ಮರೆಯಬಾರದು. ವಸ್ತುಸ್ಥಿತಿ ಹೀಗಿರುವಾಗ ಎರಡೂ ಪ್ರಕರಣಗಳನ್ನು ಮುಖಾಮುಖಿಯಾಗಿಟ್ಟು ಚರ್ಚಿಸುವುದು ತಪ್ಪಾಗುತ್ತದೆ.

ತನ್ನ ಪ್ರಜೆಯೊಬ್ಬನಿಗೆ, ಬೇರೊಂದು ದೇಶದಲ್ಲಿ, ಅಲ್ಲಿಯ ಕಾನೂನಿನ ಪ್ರಕಾರ ನೀಡಲಾದ ಶಿಕ್ಷೆಯನ್ನು ಪರಿವರ್ತಿಸಲು ರಾಜತಾಂತ್ರಿಕವಾಗಿ ಕೋರಲು, ನೆನಪಿಡಿ, ಕೋರಲು ಮಾತ್ರ, ಭಾರತಕ್ಕೆ ಯಾವ ನಿರ್ಬಂಧವೂ ಇಲ್ಲ. ಆದರೆ ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ ಅಫ್ಜಲ್ ಗುರುವಿನ ಪ್ರಕರಣವನ್ನು ಎತ್ತಿ ಹಿಡಿದರೆ, ಭಾರತಕ್ಕೆ ರಾಜತಾಂತ್ರಿಕವಾಗಿ ತನ್ನ ಆಂತರಿಕ ವಿಷಯದಿಂದ ಹೊರಗೆ ಇರುವಂತೆ ಪಾಕಿಸ್ತಾನಕ್ಕೆ ಹೇಳಲು ಯಾವುದೇ ಅಡೆ ತಡೆಗಳಿಲ್ಲ. ಅಫ್ಜಲ್ ಗುರುವಿಗೆ ಭಾರತದ ಸಂವೈಧಾನಿಕ ಪದ್ಧತಿಯಲ್ಲಿ, ವಕೀಲರ (ಅದೂ ಒಬ್ಬ ಕಾಶ್ಮೀರಿ ಹಿಂದು ವಕೀಲೆ!) ನೆರವು ದೊರೆತಿದ್ದು, ಲಭ್ಯವಿದ್ದ ಎಲ್ಲ ಸಾಕ್ಷ್ಯಾಧಾರಗಳ ಪ್ರಕಾರ ಸಂಸತ್ತಿನ ಮೇಲೆ ದಾಳಿಯ ಪ್ರಕರಣದಲ್ಲಿ ಈತನ ಮುಖ್ಯ ಪಾತ್ರವಿರುವುದು ಸ್ಪಷ್ಟವಾಗಿದೆ. ಇದರ ಆಧಾರದ ಮೇಲೆ ದೇಶದ ಅತ್ಯುನ್ನತ ನ್ಯಾಯಾಲಯ ಕೆಳಗಿನ ಕೋರ್ಟುಗಳು ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಇದನ್ನು ಭಾರತ ತನ್ನ ವಾದದಲ್ಲಿ ಸ್ಪಷ್ಟವಾಗಿ ಹೇಳುವ ಹಕ್ಕನ್ನು ಹೊಂದಿದೆ.

ಭಾರತಕ್ಕೆ ತನ್ನ ನೆಲದಲ್ಲಿ ಪಾಕಿಸ್ತಾನದಿಂದ ಪ್ರೇರಿತವಾದ ಮುಸ್ಲಿಮ್ ಭಯೋತ್ಪಾದನೆಯನ್ನು ಹತ್ತಿಕ್ಕಲು ಮಾಡಲೇಬೇಕಿರುವ ಕೆಲಸಗಳು ಹಲವು. ತಮ್ಮ ಲೇಖನದಲ್ಲಿ ಹೇಳಿದಂತೆ ಹಿಂದು - ಮುಸ್ಲಿಮ್ ಸಾಮರಸ್ಯ, ಸರ್ಕಾರ ಮತ್ತು ಮಾಧ್ಯಮಗಳಿಂದ ಭಾರತೀಯ ಮುಸ್ಲಿಮರ 'ಪಾಸಿಟಿವ್ ಔಟ್ ಲುಕ್' ಪ್ರಚುರಪಡಿಸುವ ಕೆಲಸಕ್ಕೆ ಪ್ರಯತ್ನ ಆಗಬೇಕಿರುವುದೇನೋ ನಿಜ. ಆದರೆ ಸ್ವತಃ ಮುಸ್ಲಿಮ್ ಸಮುದಾಯಕ್ಕೆ ಈ ವಿಷಯದಲ್ಲಿ ಯಾವುದೇ ಹೊಣೆಯಿಲ್ಲವೆ? ಒಂದು ಸಮಾಧಾನಕರ ಸಂಗತಿಯೆಂದರೆ ಭಾರತೀಯ ಮುಸ್ಲಿಮರು ತಮಗೆ ಭಾರತವನ್ನು ಬಿಟ್ಟರೆ ಬೇರೆ ಗತಿಯಿಲ್ಲವೆಂಬುದನ್ನು ತಡವಾಗಿಯಾದರೂ ಅರಿತುಕೊಳ್ಳುತ್ತಿದ್ದಾರೆ. ಮುಂಬೈ ದಾಳಿಯಲ್ಲಿ ಸತ್ತ ಪಾಕಿಸ್ತಾನಿ ಭಯೋತ್ಪಾದಕರಿಗೆ, ಮುಂಬೈನ ಮುಸ್ಲಿಮರು ಅಂತ್ಯಕ್ರಿಯೆ ನಡೆಸಲು ಸ್ಮಶಾನದಲ್ಲಿ ಹೂಳಲು ಒಪ್ಪದಿದ್ದುದು ಈ ನಿಟ್ಟಿನಲ್ಲಿ ಒಂದು ಹೊಸ ಅಪೇಕ್ಷಣೀಯ ಬೆಳವಣಿಗೆ. ಮುಸ್ಲಿಮ್ ಸಮುದಾಯದಲ್ಲಿ ಇಂತಹ ನಿಲುವನ್ನು ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು ಮಾಡಬೇಕು.

ಕಾಶ್ಮೀರದ ವಿಷಯವಾಗಿ ಹೇಳುವುದಾದರೆ, ಕಳೆದ ಎರಡು ದಶಕಗಳಿಂದ ಭಯೋತ್ಪಾದಕರ, ಪ್ರತ್ಯೇಕತಾವಾದಿಗಳ ಬೆದರಿಕೆ, ಪ್ರತಿಭಟನೆಗಳ ನಡುವೆಯೂ ನಡೆದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು, ಕಾಶ್ಮೀರವನ್ನು ನಾವು ಬಿಂಬಿಸುವ ಮುಖ್ಯ ಕಾರಣವಾಗಬೇಕು. ಭಾರತೀಯ ಸೇನೆಯನ್ನು ಅತಿರೇಕಗಳಿಗೆ ದೂಷಿಸುವ ಮೊದಲು ಕಾಶ್ಮೀರದ ಜನತೆ, ಅಲ್ಲಿ ಸೇನೆಯ ಕಾರ್ಯಾಚರಣೆ ಏಕೆ ಪ್ರಾರಂಭವಾಯಿತೆಂದು ಯೋಚಿಸಲಿ, ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಪೋಲಿಸರ ಅನುಭವ ಮತ್ತು ಕ್ಷಮತೆಯ ಮಿತಿಯನ್ನು ಮೀರಿದ ಪ್ರಕರಣಗಳಲ್ಲಿ ಸೇನಾ ಕಾರ್ಯಾಚರಣೆ ಅನಿವಾರ್ಯವೆಂಬುದನ್ನು ಕಾಶ್ಮೀರದ ಜನತೆ ಅರಿತು ಕೊಂಡರೆ ಉತ್ತಮ.

ಭಯೋತ್ಪಾದನೆಯ ಮೂಲಕಾರಣಕ್ಕೆ ಬರುವುದಾದರೆ, ಕೇವಲ ರಾಜಕಾರಣಿಗಳನ್ನು ಪಕ್ಷಾತೀತವಾಗಿ ದೂರಿದರೆ ಫಲವಿಲ್ಲ. ಕಾಶ್ಮೀರದ ಮೇಲೆ ಮೊಟ್ಟ ಮೊದಲ ಬಾರಿಗೆ ದಾಳಿಯಾದಾಗ, ನಮ್ಮ ಸೇನೆಗೆ ಸಂಪೂರ್ಣ ಕಾರ್ಯಾಚರಣೆ ಮಾಡಲು ಅವಕಾಶ ನೀಡದೆ, ಸಂಯುಕ್ತ ರಾಷ್ಟ್ರ ಸಂಸ್ಥೆಗೆ ದಾಳಿಯ ವಿಷಯವನ್ನು ಎತ್ತಿ ಒಯ್ದವರು ಯಾರು? ಯುದ್ಧ ಸ್ಥಂಭನವನ್ನು ಕಾಶ್ಮೀರವನ್ನು ಸಂಪೂರ್ಣವಾಗಿ ಆಕ್ರಮಕಾರರಿಂದ ತೆರವು ಮಾಡದೆ, ಜಾರಿಗೆ ತರಲು ಒಪ್ಪಿದವರು ಯಾರು? ಆಡಳಿತಕ್ಕೆ ಬರಲು ಮುಸ್ಲಿಮರ ಓಲೈಕೆಯನ್ನು ರಾಜಕೀಯ ಅಸ್ತ್ರವಾಗಿ ಇದುವರೆಗೆ ವ್ಯವಸ್ಥಿತವಾಗಿ ಬಳಸಿಕೊಂಡವರು ಯಾರು? ಶಿಮ್ಲಾ ಒಪ್ಪಂದದ ಸಮಯದಲ್ಲಿ ಮಂಡಿಯೂರಿದ್ದ ಪಾಕಿಸ್ತಾನಕ್ಕೆ ತನ್ನ ಸ್ಥಾನವನ್ನು ಸರಿಯಾಗಿ ತೋರಿಸಿಕೊಡದವರು ಯಾರು? ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಯಲ್ಲಿ ತೊಡಗಿದ್ದಾಗ, ಅದನ್ನು ನಿರ್ನಾಮ ಮಾಡಲು ಸಹಕಾರ ನೀಡುವುದಕ್ಕೆ ಇಸ್ರೇಲ್ ಮುಂದೆ ಬಂದಾಗ ದೇಶದ, ವಿದೇಶದ ಮುಸ್ಲಿಮರ, ಕಮ್ಯುನಿಸ್ಟರ ವಿರೋಧ ಕಟ್ಟಿ ಕೊಳ್ಳಲು ಇಚ್ಛಿಸದೆ, ನಿರಾಕರಿಸಿದವರು ಯಾರು? ಎಂಬ ಎಲ್ಲ ಅಸೌಖ್ಯಕಾರಿ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಕಳೆದ ಅರವತ್ತು ವರ್ಷಗಳಲ್ಲಿ, ಕೇವಲ ಹನ್ನೆರಡನೇ ಒಂದರಷ್ಟು ಕಾಲ, ಅದೂ 20-25 ಕ್ಷೇತ್ರೀಯ ಪಕ್ಷಗಳ ಕಾಲೆಳೆಯುವ ಸಮರ್ಥನೆಯ ಜತೆ ಆಳ್ವಿಕೆ ಮಾಡಿದ ತಥಾಕಥಿತ ಹಿಂದು ರಾಜಕೀಯ ಪಕ್ಷದಿಂದಲೂ ಹೆಚ್ಚಿನ ಸಾಧನೆಯ ನಿರೀಕ್ಷೆಯನ್ನು ಜನಸಾಮಾನ್ಯರು ಇಟ್ಟುಕೊಳ್ಳುವಂತೇನೂ ಇರಲಿಲ್ಲ, ಹಾಗೂ ಇಲ್ಲ.

ರಾಜಕೀಯ ಇಚ್ಛಾಶಕ್ತಿಯ ವಿಷಯಕ್ಕೆ ಬರುವುದಾದರೆ, ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು 3 ಪಟ್ಟು ಹೆಚ್ಚಿಸಿದ ಅಮೆರಿಕಕ್ಕೆ ರಾಜತಾಂತ್ರಿಕವಾಗಿ ತನ್ನ ಅಸಮ್ಮತಿಯನ್ನು ಸೂಚಿಸುವ, ಮತ್ತು ಇದರಿಂದಾಗಿ ಉಭಯ ದೇಶಗಳ ನಡುವೆ ಇರುವ ಸಂಬಂಧದ ಮೇಲೆ ಆಗುವ ಪರಿಣಾಮಗಳನ್ನು ಸಮರ್ಥವಾಗಿ ಅಮೆರಿಕೆಗೆ ತಿಳಿಸುವ ಶಕ್ತಿ ನಮ್ಮ ಪ್ರಸಕ್ತ ಸರ್ಕಾರಕ್ಕೆ ಇದೆಯೇ? ಹಾಗೆ ನೋಡಿದರೆ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅವರಿಗೆ ಇದರ ಮೇಲೆ ಹತೋಟಿಯಿಲ್ಲ. ಸಂಸತ್ತಿನ ಮೇಲೆ ನಡೆದ ದಾಳಿಯನ್ನು ನೆಪವಾಗಿಟ್ಟುಕೊಂಡು ಒಂದು ವರ್ಷ ಕಾಲ ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಸೈನ್ಯದ ಆಂತರಿಕ ತುಮುಲ ಹೆಚ್ಚಿಸಿ ಏನೂ ಮಾಡದೆ ಸುಮ್ಮನೆ ಅಮೆರಿಕದ ಅನುಮತಿಗೆ ಕಾಯುತ್ತಿದ್ದ ಮಾನ್ಯ ವಾಜಪೇಯಿಯವರ ಸರಕಾರ ಸಾಧಿಸಿದ್ದಾದರೂ ಏನು?

ಇದಕ್ಕೆ ಪರಿಹಾರವೆಂದರೆ, ಭಾರತ ದೇಶವನ್ನು, ಭಾರತೀಯ ಸಮಾಜವನ್ನು ಆಂತರಿಕವಾಗಿ ಸದೃಢವಾಗಿ, ಮತ್ತು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಸಬಲವಾಗಿ ಸೂಕ್ತ ನೀತಿಗಳ ಆಧಾರದಿಂದ ಮಾಡಬೇಕು. ಆಗ ಭಾರತ ಹೇಳುವ ಮಾತಿಗೆ ಶಕ್ತಿ ಬರುತ್ತದೆ.

ದುಃಖದ ವಿಷಯವೆಂದರೆ ವಾದ - ಪ್ರತಿವಾದಗಳ ತಾಕಲಾಟದಲ್ಲಿ, ಕೋರ್ಟ್ ಪ್ರಕರಣಗಳಲ್ಲಿ, ಮಾನವೀಯ ಹೊಳಹುಗಳು ಕಳೆದು ಹೋಗುತ್ತವೆ. ನಡೆಯುತ್ತಿರುವ ರಾಜಕೀಯ ಮತ್ತು ರಾಜತಾಂತ್ರಿಕ ಕೈ-ಮೇಲಾಟದಲ್ಲಿ ಸರಬ್ಜಿತ್ ನ ಬಂಧುಗಳ ನೆನಪು ಹಿಂದು ಪರ ಸಂಘಟನೆಗಳ ಪರವಾದ ಭಾವುಕರಿಗೆ ಬಾಧಿಸಿದರೆ, ಅಫ್ಜಲ್ ಗುರುವಿನ ಜಾತ್ಯತೀತ ಮತ್ತು ಮುಸ್ಲಿಮ್ ಸಂಘಟನೆಗಳ ಪರವಿರುವ ಭಾವುಕರಿಗೆ ಬಾಧಿಸುತ್ತವೆ. ಇಲ್ಲಿ ಎಲ್ಲರೂ ಹೃದಯದಿಂದಲೇ ಚಿಂತಿಸುತ್ತಿದ್ದಾರೆಯೇ ಹೊರತು, ಮಿದುಳಿಗೆ ಚಿಂತಿಸುವ ಕೆಲಸ ಕೊಡುತ್ತಲೇ ಇಲ್ಲ.

ಸರಬ್ಜಿತ್ ಪ್ರಕರಣಕ್ಕೆ ಹತ್ತಿರದ ಹೋಲಿಕೆಯಿರುವುದು, ನವೆಂಬರ್ 26ರ ಮುಂಬೈ ದಾಳಿಯ ಪ್ರಕರಣ. ಅರೆಮನಸ್ಸಿನಿಂದ ಅಜ್ಮಲ್ ಕಸಬ್ ತನ್ನ ಪ್ರಜೆಯೆಂದು ಒಪ್ಪಿದ ಪಾಕಿಸ್ತಾನ, ಲಭ್ಯವಿರುವ ಸಾಕ್ಷ್ಯಾಧಾರಗಳ ಎದಿರು, ಪಾರದರ್ಶಕವಾದ ಭಾರತೀಯ ನ್ಯಾಯದಾನ ಪ್ರಕ್ರಿಯೆಯಲ್ಲಿ ಮರಣದಂಡನೆ ದೊರೆತರೆ ಕ್ಷಮಾದಾನಕ್ಕೆ ಕೋರುವ ಅವಕಾಶಗಳು ಕಡಿಮೆಯಿವೆ. ಹಾಗಿದ್ದೂ ಕೇಳಿದಲ್ಲಿ ಭಾರತಕ್ಕೆ ಸಂದಿಗ್ಧ ಪರಿಸ್ಥಿತಿ ಒದಗಬಹುದು. ಈ ನಿಟ್ಟಿನಲ್ಲಿ, ಭಾರತದ ರಾಜತಾಂತ್ರಿಕರು ಹೆಚ್ಚಿನ ಜಾಗರೂಕತೆಯನ್ನು, ಜಾಣ್ಮೆಯನ್ನು ಪ್ರದರ್ಶಿಸಬೇಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X