ಎಸ್ಸೆಸ್ಸೆಲ್ಸಿ : ಹೇಗೆ ಮರೆಯಲಿ ಆ ದಿನ? ಆ ಕ್ಷಣ?
ಇಲ್ಲಿರುವ ಅನಿಸಿಕೆಗಳೂ ಮೂರು : ಭಾವನೆಗಳೂ ನೂರು
ಮಾನ್ಯರೇ,
ಎಸ್‌ಎಸ್‌ಎಲ್‌ಸಿ ಪಾಸಾಗಿದ್ದ ಹೊಸತು. ಒಂದು ಸಲ ಬೆಂಗಳೂರಿಗೆ ನಾನು ಬಂದಿದ್ದೆ. ಅಲ್ಲಿಯೇ ನನ್ನಣ್ಣ ಪುಟ್ಟದೊಂದು ಕೆಲಸ ಮಾಡುತ್ತಿದ್ದ. ಬರುತ್ತಿದ್ದ ಸಂಬಳ ನಾಲ್ಕಂಕೆ ತಲುಪಿರಲಿಲ್ಲ. ಅವನಿಗೆ ತಮ್ಮ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದಾನೆ ಅನ್ನುವುದೇ ದೊಡ್ಡ ಖುಷಿ.
ಆವತ್ತು ಭಾನುವಾರ ಅವನಿಗೆ ಕೆಲಸದ ರಜೆ. ಬೆಂಗಳೂರಿನ ತ್ರಿಭುವನ್ ಟಾಕೀಸ್‌ನಲ್ಲಿ ಸಿನಿಮಾ ತೋರಿಸಿದ. ಮಸಾಲೆ ದೋಸೆ ಕೊಡಿಸಿದ. ನಂತರ ಎಚ್‌ಎಂಟಿ ಶೋ ರೂಂಗೆ ಕರೆದೊಯ್ದ.
ಯಾವುದು ಬೇಕೋ ತಗೋ ಎಂದ. ನಾನು 300-400 ರೂಪಾಯಿ ವಾಚುಗಳ ನೋಡುತ್ತಿದ್ದೆ. ನನಗೆ ವಾಚಿಗಿಂತಲೂ ಅವುಗಳ ಬೆಲೆಯೇ ದಿಗಿಲು ಮೂಡಿಸಿತ್ತು. ಅವನು 668 ರೂಪಾಯಿಯ HMT Quartz ಗಡಿಯಾರ ಕೈಯಲ್ಲಿ ಹಿಡಿದು ಹೇಗಿದೆ ಅಂದ. ನಾನು ಇಷ್ಟೊಂದು ರೂಪಾಯಿದು ಬೇಡ ಅಂದೆ. ಆದರೆ ಆ ವಾಚನ್ನೇ ಅವನು ಪ್ಯಾಕ್ ಮಾಡಿಸಿದ.
ಆ ವಾಚು ಈಗಲೂ ನನ್ನ ಕೈಯಲ್ಲಿದೆ. ಅದನ್ನು ನೋಡಿದಾಗಲೆಲ್ಲ ನನ್ನಣ್ಣ ನೆನಪಾಗುತ್ತಾನೆ. ಕೋಟಿ ರೂಪಾಯಿ ಕೊಟ್ಟರೂ ನಾನು ಆ ವಾಚನ್ನು ಯಾರಿಗೂ ಕೊಡುವುದಿಲ್ಲ.
- ಪಿ.ಎಚ್.ವಿಶ್ವನಾಥ್, ಮೈಸೂರು.












Click it and Unblock the Notifications