ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಾ... ದಿನಗಳು ತುಂಬುತ್ತಿವೆ... ನೀನು ಅಣ್ಣ ಯಾವಾಗ ಬರ್ತೀರಮ್ಮಾ?

By Staff
|
Google Oneindia Kannada News

;?
( ಇಂತಿಪ್ಪ ಪತ್ರ ಬರೆಯುವ ಕಲೆ ನಶಿಸುತ್ತಿರುವುದರ ಬಗ್ಗೆ ಕನ್ನಡಿಗರು ಇಮೇಲ್‌ನಲ್ಲಿ, ಚಾಟ್‌ನೊಳಗೆ, ಟೆಲಿಕಾನ್‌ಫರೆನ್ಸ್‌ ಮೂಲಕ ಸಾಕಷ್ಟು ಚರ್ಚೆ-ಚಿಂತನೆ ನಡೆಸಿದ್ದರು, ನಡೆಸುತ್ತಾ ಇದ್ದಾರೆ. ಆದರೆ ಏಕೋ ಏನೋ ಏನೂ ಪ್ರಯೋಜನವಾದಂತಿಲ್ಲ. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ಒಂದು ಕಾಗದ ಅಥವಾ ಇನ್‌ಲ್ಯಾಂಡ್‌ಲೆಟರ್‌ ಬರೆದು ಜಮಾನ ಆಗಿಹೋಯಿತು. ಯಾಕೆಂದರೆ, ಇಂಟರ್‌ನೆಟ್‌ ಉದ್ಯಮದಲ್ಲಿರುವ ನಾನು ಪೋಸ್ಟ್‌ ಆಫೀಸ್‌ ಪರವಾಗಿ ವರ್ತಿಸುವುದು www.oneindia.comಕಂಪನಿ ಧ್ಯೇಯೋದ್ದೇಶಗಳಿಗೆ ವ್ಯತಿರಿಕ್ತವಾಗುತ್ತದೆ. ಆದರೂ ಸ್ವಲ್ಪ ರಿಸ್ಕ್‌ ತೆಗೆದುಕೊಂಡು ಈ ಬರಹವನ್ನು ಪ್ರಕಟಿಸುತ್ತಿದ್ದೇನೆ.

ಸನ್ಮಾನ್ಯ ಅಜಿತ್‌ ಹೆಗಡೆ ಶಿರಸಿಯವರು. ಸದ್ಯ ಕೆಲಸದ ನಿಮಿತ್ತ ಆಫ್ರಿಕಾಗೆ ಹೋಗಿದ್ದಾರೆ. ಅಲ್ಲಿನ ನೀರವತೆಯನ್ನು ಅನುಭವಿಸುತ್ತಾ ಪತ್ರ ಬರೆಯುವ ಕಲೆ ಬಗ್ಗೆ ಬರಹ ತಂತ್ರಾಂಶದಲ್ಲಿ ಕೀ ಮಾಡಿ ಇ-ಮೇಲ್‌ ಅಟ್ಯಾಚ್‌ಮೆಂಟ್‌ ಮೂಲಕ ನನಗೆ ಲೇಖನ ಕಳಿಸಿಕೊಟ್ಟಿದ್ದಾರೆ.

ಹೆಗಡೆಯವರ ಕಳಕಳಿಯ ಪತ್ರ ಓದುವಂಥವರಾಗಿ. ತನ್ಮೂಲಕ ನೀವೆಲ್ಲರೂ ಪತ್ರ ಬರೆಯುವ ಪರಿಪಾಠವನ್ನು ಜೀವಂತವಾಗಿ ಇಡುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ಯಾವುದಕ್ಕೂ ನನ್ನ ಕಚೇರಿ ವಿಳಾಸ ಬರೆದಿಟ್ಟುಕೊಂಡಿರಿ- ಶಾಮ್‌, ಸಂಪಾದಕ : ದಟ್ಸ್‌ಕನ್ನಡ ಡಾಟ್‌ ಕಾಂ, 17/1 , ಶಾಂತಿಶ್ರೀ ಕಾಂಪ್ಲೆಕ್ಸ್‌, ರೂಪೇನ ಅಗ್ರಹಾರ, ಹೊಸೂರು ರಸ್ತೆ, ಬೆಂಗಳೂರು-560068.)

  • ಅಜಿತ್‌ ಹೆಗಡೆ, ಜೋಹಾನ್ಸ್‌ಬರ್ಗ್‌.
    [email protected]
ಆಪ್ತಮಿತ್ರರಿಗೆ ಮನೆಯವರಿಗೆ ಇ-ಮೇಲ್‌ ಕಳಿಸುವಾಗಲೆಲ್ಲ ನನ್ನ ಕಾಡುವ ಪ್ರಶ್ನೆಯೆಂದರೆ ‘ಎಲ್ಲಿ ಹೋಯಿತು ಆ ನಮ್ಮ ಓಲೆ ಬರೆಯುವ ಹವ್ಯಾಸ ?’. ಕಂಪ್ಯೂಟರ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾದ ಮೇಲೆ ಈ ‘ಹಾರ್ಡ್‌ ಕಾಪಿ’ ಪತ್ರ ವನ್ನು ‘ ಸಾಫ್ಟ್‌ ಕಾಪಿ’ ಇ-ಮೇಲ್‌ ಗಳು ಆಕ್ರಮಿಸಿಕೊಂಡು ಬಿಟ್ಟಿವೆ.

ಮಿತ್ರರೇ, ಎಷ್ಟೇ ನಮ್ಮ ತಂತ್ರಜ್ಞಾನ ಮುಂದುವರಿದು ಜಗತ್ತೇ ಒಂದು ಪುಟ್ಟ ಹಳ್ಳಿಯಂತಾದರೂ ನನಗಂತೂ ಆ ಕೈ ಬರಹದ 2 ರೂಪಾಯಿಯ ಅಂತರ್ದೇಶಿ ಪತ್ರವೇ ಮನ ಮುಟ್ಟುತ್ತದೆ. ಗೌರವಪೂರ್ವಕವಾಗಿ ತಂದೆಯನ್ನು ‘ತೀರ್ಥರೂಪ ತಂದೆಯವರಿಗೆ ... ’ ಎಂದು ಬರೆಯುವ ಪತ್ರ ಹೋಗಿ ‘ಹಾಯ್‌ು ಡ್ಯಾಡಿ’ ಇ-ಮೇಲ್‌ ದಿನಗಳು ಬಂದಿವೆ. ಎಷ್ಟೊಂದು ಕೃತ್ರಿಮತೆ ಅನಿಸುತ್ತೆ ಅಲ್ಲವೇ? ಪ್ರೀತಿ - ಪ್ರಣಯದಲ್ಲಿ ಮುಳುಗಿರುವವರಿಗಂತೂ ಪತ್ರ ಒಂದು ವರದಾನ. ಈಗಿನ ಇ-ಗ್ರೀಟಿಂಗ್‌ಗಳು, ಚಾಟಿಂಗ್‌ ಇತ್ಯಾದಿಗಳಲ್ಲಿ ಪ್ರೀತಿಯ ಬುಗ್ಗೆ ಉಕ್ಕಿ ಹರಿದರೂ ನಲ್ಲ/ನಲ್ಲೆಯ ಒಂದೇ ಒಂದು ಪುಟದ ಪ್ರೇಮ-ಪತ್ರದ ಮುಂದೆ ಇವೆಲ್ಲ ನಗಣ್ಯ. ಪತ್ರದಲ್ಲಿ ಸಿಗುವ ಆ ಒಂದು ರೀತಿಯ ಆತ್ಮೀಯತೆ, ಗಾಢ ಅನುಬಂಧವನ್ನು ಈಗಿನ ಇ-ಮಾತುಕತೆಗಳು ಕೊಡಲಾರವು.

ನಲ್ಲ/ನಲ್ಲೆಯ ಕೋಳಿಕಾಲು, ಗುಬ್ಬಿಕಾಲು(!) ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದುವ ಸುಖ ಈಗಿನ ಯಾವ ಫಾಂಟ್‌ಗಳೂ ಕೊಡಲು ಅಶಕ್ಯ. ಬಣ್ಣಬಣ್ಣದ ಸಂಗೀತಮಯ ಪ್ರಣಯಭರಿತ ಗ್ರೀಟಿಂಗ್‌ ಕಾರ್ಡ್‌ಗಳು ಇನ್‌-ಬಾಕ್ಸ್‌ ನಲ್ಲಿ ತುಂಬಿ ತುಳುಕುತ್ತಿದ್ದರೂ, ರಾತ್ರಿಯ ಆ ನೀರವತೆಯಲ್ಲಿ ಹಾಸಿಗೆ ಮೇಲೆ ಹೊರಳಾಡುತ್ತ ಪ್ರೇಮ-ಪತ್ರ ಓದುವುದರಲ್ಲೇ ಏನೋ ಸಂತೃಪ್ತಿ ಇದೆ. ಹಳೆಯ ಶಾಯಿ ಪೆನ್ನಿನಲ್ಲಿ ಪತ್ರ ಬರೆಯುವಾಗ ಶಾಯಿಯೆಲ್ಲ ಚೆಲ್ಲಿ ಅಕ್ಷರಗಳು ಒಂದಕ್ಕೊಂದು ಸೇರಿ ಆಗುವ ಅಸಂಬದ್ಧ ಶಬ್ದಗಳ ಕಲ್ಪನೆಯೇ ಎಷ್ಟೊಂದು ಸುಂದರ ಅಲ್ಲವೇ?

ಕನ್ನಡ ಲಿಪಿಯನ್ನು ಕಂಪ್ಯೂಟರ್‌ನಲ್ಲಿ ಈಗ ಕಾಣಬಹುದಾದರೂ ಈ ಸುಂದರ ಪತ್ರಗಳಲ್ಲಿರುವ ನವಿರಾದ ಸಂಬಂಧವನ್ನು ಅವು ಸೃಷ್ಟಿಸಲಾರವು. ಓಲೆಯ ಉಬ್ಬು ತಗ್ಗು ಅಕ್ಷರಗಳ ಮೇಲೆ ಕೈ ಆಡಿಸುವ ಸುಖ ಕಂಪ್ಯೂಟರ್‌ ಮಾನಿಟರ್‌ನಲ್ಲಿ ಇಲ್ಲ ಅಲ್ಲವೇ? ಬನ್ನಿ ಮಿತ್ರರೇ ತಡ ಏಕೆ? ನಮ್ಮ ಆಪ್ತರಿಗೆ ಅಪರೂಪಕ್ಕೆ ಒಮ್ಮೆ ಆದರೂ ನಾಲ್ಕು ವಾಕ್ಯದ ಪತ್ರ ಬರೆಯೋಣ. ತುಂಬಾ ದಿನಗಳ ನಂತರ ಆತ್ಮೀಯರ ಕೈ ಬರಹ ನೋಡಿ ಅವರಲ್ಲಿ ಆನಂದಭಾಷ್ಪ ಸುರಿದರೂ ಆಶ್ಚರ್ಯವಿಲ್ಲ.

ನೀವು ಪತ್ರ ಬರೀತೀರೇನು?


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X