ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ವೇದಿಕೆ ಗರ್ಜನೆಗೆ ಬೆಚ್ಚಿದ ರೈಲ್ವೆ ಪ್ರಭುಗಳು!

By Staff
|
Google Oneindia Kannada News
  • ವೀರ ಕನ್ನಡಿಗ, ಬೆಂಗಳೂರು.
ಮಾನ್ಯರೇ,

ಕನ್ನಡ ಅಳಿಸಿ ಎಂಬ ರೈಲ್ವೆ ಆದೇಶವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟವು ಫಲಕಾರಿಯಾಗಿದೆ. ಕೇಂದ್ರ ರೈಲ್ವೆ ಸಚಿವರು ಸ್ಪಂದಿಸಿದ್ದಾರೆ.

ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಕೇಂದ್ರ ಸರ್ಕಾರ ‘ಹಿಂದಿ ಸಪ್ತಾಹ’ವನ್ನು ಆಚರಿಸುತ್ತದೆ. ಈ ಆಚರಣೆಯ ಮೂಲ ಉದ್ದೇಶ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವುದು. ಕನ್ನಡವನ್ನು ಅಳಿಸಿ ನೇರವಾಗಿ ಹಿಂದಿಯನ್ನು ಹೇರುವ ಘಟನೆ ಇತ್ತೀಚೆಗೆ ಕೇಂದ್ರದ ರೈಲ್ವೆ ಇಲಾಖೆಯಲ್ಲಿ ನಡೆಯಿತು.

ಕರ್ನಾಟಕದಲ್ಲಿ ಸಂಚರಿಸುವ ಎಲ್ಲ ರೈಲುಗಳಲ್ಲಿರುವ ಕನ್ನಡದ ನಾಮಫಲಗಳನ್ನು ತೆಗೆದು, ಕೇವಲ ಹಿಂದಿ ಹಾಗೂ ಆಂಗ್ಲ ಫಲಕಗಳನ್ನು ಉಳಿಸಬೇಕು. ಆದರೆ ತಮಿಳುನಾಡಿನಲ್ಲಿ ಮಾತ್ರ ತಮಿಳು ಫಲಕಗಳು ಇರತಕ್ಕದ್ದು ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿತು. ಈ ವಿಷಯ 10-12-2006ರಂದು ಪ್ರಕಟವಾದ ತಕ್ಷಣವೇ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸ್ಪಂದಿಸಿದರು.

ಮರುದಿನವೇ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಅಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಕಚೇರಿಗೆ ಮುತ್ತಿಗೆ ಹಾಕಿದರು.

ಕಾರ್ಯಕರ್ತರನ್ನು ಭೇಟಿಯಾದ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಟಿ.ಎ.ನಾರಾಯಣಗೌಡರು, ‘ಕನ್ನಡ ವಿರೋಧಿ ಧೋರಣೆ ಸರಿಪಡಿಸಿಕೊಳ್ಳಲು 36 ಘಂಟೆಗಳ ಗಡುವನ್ನು ನೀಡಿದರು. ನಮ್ಮ ನೆಲದಲ್ಲೇ ಕನ್ನಡದ ಅಳಿವಿಗಾಗಿ ಯತ್ನಿಸುವ ಶಕ್ತಿಗಳು ಎಷ್ಟೇ ದೊಡ್ಡದಾಗಿದ್ದರೂ ಕರ್ನಾಟಕ ರಕ್ಷಣಾ ವೇದಿಕೆ ಅವನ್ನು ದಿಟ್ಟತನದಿಂದ ಮಟ್ಟಹಾಕುತ್ತದೆ’ ಎಂದು ಸಾರಿದರು. ಈ ನಿಟ್ಟಿನಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದರು.

ಇದೇ ದಿನ ರಾಜ್ಯದ ಮೈಸೂರು, ಅರಸೀಕೆರೆ, ಹಾಸನ, ರಾಯಚೂರು, ಕೆ.ಜಿ.ಎಫ್‌, ಕೋಲಾರ, ಗುಲ್ಬರ್ಗ, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಧಾರವಾಡ, ಚಾಮರಾಜನಗರ ಸೇರಿದಂತೆ ನಾನಾ ಕಡೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರೈಲ್ವೆ ಕಚೇರಿಯ ಮುತ್ತಿಗೆ ಕಾರ್ಯಕ್ರಮ ಹಾಗೂ ರೈಲು ತಡೆ ಯಶಸ್ವಿಯಾಗಿ ನಡೆಸಿದರು.

ಅಂದಿನ ಆ ಕಾರ್ಯಕ್ರಮ, ರೈಲ್ವೆ ಇಲಾಖೆಯೂ ಸೇರಿದಂತೆ ಕನ್ನಡ ವಿರೋಧಿ ಧೋರಣೆಯನ್ನು ತೋರುವ ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುವ ಕ್ರಮವಾಗಿತ್ತು. ಹೀಗೆ ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ ಮಾಡಿದ ಹೋರಾಟ ನಾಡಿನ ಕನ್ನಡಿಗರನ್ನು ಜಾಗೃತಗೊಳಿಸಿ ಎಲ್ಲೆಡೆ ತೀವ್ರ ಪ್ರತಿಭಟನೆಗೆ ಕಾರಣವಾಯಿತು.

ಈ ಕನ್ನಡಿಗರ ಧ್ವನಿಗೆ ಪ್ರತಿಧ್ವನಿಯಾಗಿ ಸಂಸತ್ತಿನಲ್ಲಿ ನಮ್ಮ ಸಂಸದರು ಪಕ್ಷಭೇದ ಮರೆತು ಕೊರಳೆತ್ತಿದರು. ಹೋರಾಟಗಳು ತೀವ್ರಗೊಂಡ ರೀತಿಯನ್ನು ಆಲಿಸಿ ರೈಲ್ವೆ ಇಲಾಖೆ ಆದೇಶವನ್ನು ಹಿಂಪಡೆಯಿತು. ಇದು ಕನ್ನಡ ನಾಡಿಗೆ, ಕನ್ನಡ ಜನತೆಗೆ ದೊರೆತ ಜಯ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಂದ ಪ್ರತಿಫಲ.

ಇದು ಕೇವಲ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತೆ. ದೊಣ್ಣೆಯನ್ನು ಕೈಲಿಟ್ಟುಕೊಂಡು ಹಿಂದಿ ಸಾಮ್ರಾಜ್ಯಶಾಹಿಗಳು ನಿಂತಿದ್ದಾರೆ. ಕನ್ನಡಿಗರು ಜಾಗೃತರಾಗಬೇಕು, ಹಿಂದಿ ಹೇರಿಕೆಯಿಂದ ಆಗುತ್ತಿರುವ ತೊಂದರೆಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ‘ಭಾರತೀಯ ಅಧಿಕೃತ ಭಾಷಾ ಕಾಯ್ದೆ’ಯು ಹಿಂದಿ ರಾಜಭಾಷೆಯೆಂದು ಕನ್ನಡಿಗರ ದಿಕ್ಕು ತಪ್ಪಿಸುತ್ತಿದೆ.

ಎಲ್ಲಿಯವರೆಗೂ ಕನ್ನಡಿಗರು ಸ್ವಾಭಿಮಾನಿಗಳಾಗಿ ಹಿಂದಿ ಹೇರಿಕೆಯನ್ನು ವಿರೋಧಿಸುವುದಿಲ್ಲವೋ, ಅಲ್ಲಿಯವರೆಗೂ ಕನ್ನಡಕ್ಕೆ ಇಂತಹ ಅನ್ಯಾಯಗಳು ತಪ್ಪಿದಲ್ಲ. ಭಾರತ ದೇಶವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ, ಆಯಾ ನೆಲದಲ್ಲಿ ಅಲ್ಲಿನ ಭಾಷೆಯೇ ಸಾರ್ವಭೌಮ ಎಂದು ಸಂವಿಧಾನದಲ್ಲಿ ಸ್ಪಷ್ಟಪಡಿಸಿದ್ದರೂ, ಕೇಂದ್ರ ಸರ್ಕಾರ ಎಲ್ಲೆಡೆ ಹಿಂದಿ ಹೇರುತ್ತಾ ಭಾರತದ ಒಕ್ಕೂಟ ವ್ಯವಸ್ಥೆಗೆ ಅಗೌರವ ತೋರುತ್ತಿರುವುದು ಮಾತ್ರ ಖಂಡನೀಯ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X