ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸಿಗರೆಂಬ ಅತಿಥಿಗಳ ರೂಪದಲ್ಲಿ ಅಪಾಯ ಬರುತ್ತಿದೆ! ?

By Staff
|
Google Oneindia Kannada News

?
ಎಲ್ಲರನ್ನೂ ಸ್ವಾಗತಿಸುವ ಭರದಲ್ಲಿ ಕನ್ನಡಿಗರು, ಮುಂದಿನ ಅಪಾಯಗಳನ್ನು ಯೋಚಿಸುತ್ತಿಲ್ಲ. ನಮ್ಮ ಮನೆಯಲ್ಲಿ ನಮಗೇ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಒಂದು ವಾದ. ವಲಸೆ ಸಮಸ್ಯೆಯೇ ಅಲ್ಲ ಎನ್ನುವುದು ಇನ್ನೊಂದು ವಾದ. ಸಂಪಿಗೆ ಶ್ರೀನಿವಾಸ್‌ರ ಲೇಖನಕ್ಕೆ ಓದುಗರ ಪ್ರತಿಸ್ಪಂದನ. ಓದುಗರ ಸಂದೇಹಗಳಿಗೆ, ಶ್ರೀನಿವಾಸ್‌ರ ಮಾರುತ್ತರ.

ಸಂಪಿಗೆ ಶ್ರೀನಿವಾಸ ಅವರಿಗೆ ನಮಸ್ಕಾರ!

ಈ ಹಿಂದೆ ನಿಮ್ಮ -ರಾಷ್ಟ್ರೀಯ ಮಾಧ್ಯಮದಲ್ಲಿ... ಲೇಖನ ಓದಿ, ಮೆಚ್ಚಿ, ನನ್ನ ಅನಿಸಿಕೆಗಳನ್ನು ನಿಮಗೆ ತಿಳಿಸಿದ್ದೆ. ಕನ್ನಡದ ಪರ ದನಿಯೆತ್ತುತ್ತಿರುವುದು ಅತ್ಯಂತ ಅಭಿನಂದನಾರ್ಹದ ಸಂಗತಿ.

ಈ ಬಾರಿಯ ‘ವಲಸೆ ಸಮಸ್ಯೆ..’ ಲೇಖನ ಓದಿದಾಗ ನಿಮ್ಮ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಾಗುತ್ತಿಲ್ಲ. ಭಾರತದ ಪ್ರಜೆ ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ ಬದುಕುವ ಅವಕಾಶವಿದೆ ಮತ್ತು ನಮ್ಮಲ್ಲಿ ಹೊಟ್ಟೆಪಾಡಿಗಾಗಿ ಬರುವ ಕೂಲಿ ಕಾರ್ಮಿಕರನ್ನು ಬದುಕಲು ಅವಕಾಶ ಮಾಡಿಕೊಡಬೇಕು.

ಬೇಕಿದ್ದರೆ, ನಿಮಗೆ ಗೊತ್ತಿದ್ದರೆ ಹೊಸತರಲ್ಲಿ ಅವರ ಭಾಷೆಯಲ್ಲಿ ಮಾತನಾಡಿಸಿ ಸಹಕರಿಸುವುದೂ ತಪ್ಪಲ್ಲ. ಕ್ರಮೇಣ ಅವನು ಕನ್ನಡ ಕಲಿಯಲೇ ಬೇಕು ಎನ್ನುವದು ಸರಿ. ಕನ್ನಡಿಗರು ಹಲವು ಮಂದಿ ಮುಂಬೈ, ಚೆನ್ನೈ, ಆಂಧ್ರದ ಹಲವಾರು ಪ್ರದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವವನ್ನೂ ಆಚರಿಸುತ್ತಾರೆ. ಆದರೆ ಅವರಿಂದ ಅಲ್ಲಿನ ಭಾಷೆಗೆ, ಅಲ್ಲಿನ ಜನರ ಜೀವನಶೈಲಿಗೆ ಯಾವುದೇ ತೊಂದರೆಯಾಗಿಲ್ಲ. ಅವರ ಭಾಷೆಯನ್ನು ಕಲಿತು ಅವರೊಡನೆ ಬೆರತು ಬದುಕುತ್ತಿದ್ದಾರೆ. ವಲಸೆಯನ್ನು ತಡೆಯುವುದೆಂದರೆ ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಬದುಕಲು ನೆಲೆಸುವುದನ್ನು ತಡೆಯುವುದು. ಇಂತಹ ಕಾರ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಕೋರುವುದೂ ಸಹ ತಪ್ಪು. ಅಲ್ಲಿಗೆ ಭಾರತೀಯತೆಯ ಕಲ್ಪನೆಯೇ ನುಚ್ಚುನೂರು.

ನಮ್ಮಲ್ಲಿ ಹಲವಾರು ವರ್ಷಗಳಿಂದ ಪರಭಾಷಿಗರು ಇದ್ದರೂ ಕನ್ನಡತನಕ್ಕೆ ಯಾವುದೇ ತೊಂದರೆ ಇರಲಿಲ್ಲ. ನನ್ನ ಹಲವಾರು ಮಲಯಾಳಿ,ತಮಿಳು, ತೆಲುಗಿನ ಸ್ನೇಹಿತರು ನಿರರ್ಗಳವಾಗಿ ಕನ್ನಡ ಮಾತಾಡಬಲ್ಲರು. ಕಾರಣ ಇಷ್ಟೇ ಅವರು ಓದಿದ್ದು ಕನ್ನಡಿಗರ ಜೊತೆಯಲ್ಲಿ ಮತ್ತು ಅವರ ಪೋಷಕರಿಗೆ ಇಂಗ್ಲೀಷ್‌ ವ್ಯಾಮೋಹವಿರಲಿಲ್ಲ. ಹೆಚ್ಚಿನವರು ಆಂಗ್ಲ ಮಾಧ್ಯಮದಲ್ಲಿ ಓದಿದವರಲ್ಲ. ಈ ದಿನ ಕನ್ನಡಿಗರ ಮಕ್ಕಳೇ ಕನ್ನಡತನವನ್ನು ಉಳಿಸಿಕೊಳ್ಳದಿರಲು ಕಾರಣ ಅವರ ಇಂಗ್ಲೀಷ್‌ ವ್ಯಾಮೋಹವೇ ಹೊರತು ಅವರ ಜೀವನಶೈಲಿ ಮತ್ತು ವಿಚಾರಗಳು ತಮಿಳು, ತೆಲುಗಿನಿಂದ ಪ್ರಭಾವಿತವಾಗಿಲ್ಲ. ಇಂದು ವಲಸೆ ಬರುತ್ತಿರುವವರಲ್ಲಿ ಹೆಚ್ಚಿನವರು ಮಾಹಿತಿತಂತ್ರಜ್ಞಾನ ಉದ್ಯೋಗಾಕಾಂಕ್ಷಿಗಳು ಎಂದಿರಿ ಸರಿ. ಇವರು ವಿದ್ಯಾವಂತರು. ಸಮಸ್ಯೆ ಇದಲ್ಲ ಅಥವಾ ತೆಲುಗು,ತಮಿಳಿನ ಕೂಲಿ ಕಾರ್ಮಿಕರಲ್ಲ. ಈ ವಿದ್ಯಾವಂತರು ಮತ್ತು ನಮ್ಮ ಕನ್ನಡ ನಾಡಿನ ’ವಿದ್ಯಾವಂತರಿಗೆ’ ಇಂಗ್ಲೀಷ್‌ ಗೊತ್ತಿದೆ. ಕೇವಲ ಗೊತ್ತಿದ್ದರೂ ಸಮಸ್ಯೆ ಇರುತ್ತಿರಲಿಲ್ಲ. ಈವತ್ತು ಜಗತ್ತಿನಲ್ಲಿ ಬದುಕಬೇಕೆಂದರೆ ಇಂಗ್ಲಿಷೊಂದೇ ಮಾರ್ಗ ಎನ್ನುವ ಭ್ರಮೆ ಇದೆ ಮತ್ತು ಆ ದಿಕ್ಕಿನಲ್ಲಿ ತಮ್ಮತನವನ್ನು ಮರೆಯುತ್ತಿದ್ದಾರೆ. ಅದು ಸಮಸ್ಯೆ.

ಇಪ್ಪತ್ತು, ಮೂವತ್ತು, ಐವತ್ತು ವರ್ಷಗಳಿಂದ ಕರ್ನಾಟಕದಲ್ಲಿರುವ, ’ಬೆಂಗಳೂರಿನಲ್ಲಿರುವ’ ಪರ ಊರಿನವರಿಗೆ ಕನ್ನಡಬರುತ್ತದೆ. ಬಾರದಿರುವ ಕೆಲವರೂ ಇರಬಹುದು. ಅವರದು ಅಪರಾಧ ಎನ್ನಬಹುದು. ಇತ್ತಿಚಿನ ಹತ್ತು ವರ್ಷಗಳಿಂದ ಇರುವವರಿಗೆ ಬರುವುದೇ ಇಲ್ಲ, ಕಲಿತೇ ಇಲ್ಲ. ಕಲಿಯುವ ಅವಶ್ಯಕತೆಯೂ ಇಲ್ಲದಂತೆ ಮಾಡಿದೆ ಇಂಗ್ಲೀಷು. ಅಂತಹವರ ಮಕ್ಕಳಿಗೂ ಕನ್ನಡ ಕಲಿಯುವ ಪ್ರಮೇಯವೇ ಇಲ್ಲ. ಕಾರಣ- ಕಾನ್ವೆಂಟುಗಳು!. ಕನ್ನಡ ಪರ ಸಂಘಟನೆಗಳ ಪ್ರಮುಖ ಟಾರ್ಗೆಟ್‌ ಆಗಬೇಕಿರುವುದು ಈ ಕಾನ್ವೆಂಟುಗಳು.

ಮಾಹಿತಿತಂತ್ರಜ್ಞಾನದಿಂದ ಉಂಟಾಗಿರುವ ಸಮಸ್ಯೆ- ಜಾಗತಿಕರಣದ ಹೆಸರಿನಲ್ಲಿ ಈ ಆಂಗ್ಲಮಯ ವಾತಾವರಣದ ಸೃಷ್ಠಿ (ನನ್ನ ಪ್ರಕಾರ ಇದೊಂದೇ). ಕನ್ನಡಿಗರು ಕನ್ನಡಿಗರಾಗಿಯೇ ಉಳಿಯಲು ನಮ್ಮ ಹೋರಾಟ ಇರಬೇಕಾದದ್ದು ನಮ್ಮ ಕನ್ನಡತನದ ವಿಚಾರಗಳನ್ನು ಸುಡುವ ವಿಷಯಗಳ ವಿರುದ್ಧವೇ ಹೊರತು ಇಲ್ಲಿ ಬದುಕಲು ಬಂದ ಜನರ ವಿರುದ್ಧವಲ್ಲ. ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತ ಅವರದನ್ನು ಆಚರಿಸುತ್ತ ನಮ್ಮೊಡನೆ ’ನಮ್ಮವರಾಗಿ’ ಸಹಬಾಳ್ವೆ ನಡೆಸಬೇಕಾದದ್ದು ಅವರ ಕರ್ತವ್ಯ. ಅವರು ಹಾಗೆ ನಡೆದುಕೊಳ್ಳುವಂತೆ ಮಾಡಬೇಕದದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಯೋಚನೆ, ಉಪಾಯಗಳು ಸಾಗಬೇಕಿದೆ. ಲಕ್ಷಗಟ್ಟಲೆ ಡೊನೇಶನ್‌ ಪೀಕುವ, ಕನ್ನಡ ಮಾತಾಡಿದರೆ ದಂಡ ವಿಧಿಸುವ ಈ ಕಾನ್ವೆಂಟುಗಳಿಗೆ ಕನ್ನಡವನ್ನು ಪ್ರಥಮ ತರಗತಿಯಿಂದ ಕಡ್ಡಾಯವಾಗಿ ಕಲಿಸುವಂತೆ ಹೇಳಿ ಕಲ್ಲು ಹೊಡೆಯಿರಿ.

ಇಂಗ್ಲಿಷನ್ನು ಕಲಿಯೋಣ. ಅದು ಕೇವಲ ಒಂದು ಭಾಷೆ ಎಂದು ಕಲಿಯೋಣ. ಆದರೆ ಮನೆಯಲ್ಲಿ ಮಕ್ಕಳೊಡನೆ ಇಂಗ್ಲೀಷು ಬೇಡ. ಆಫೀಸಿನಲ್ಲಿ ಅವಶ್ಯಕತೆ ಇದ್ದಷ್ಟು ಇಂಗ್ಲೀಷಿರಲಿ. ತರಕಾರಿ ಕೊಳ್ಳುವಾಗ, ಹೋಟೆಲಿನಲ್ಲಿ ತಿಂಡಿ ತಿನ್ನುವಾಗ ಇಂಗ್ಲಿಷು ಪಾಂಡಿತ್ಯದ ಪ್ರದರ್ಶನ ಬೇಡ (ಹೆಚ್ಚಿನವರು ಪೆಕ್ರು ಪೆಕ್ರಾಗಿ ತಪ್ಪು ಇಂಗ್ಲಿಷೇ ಮಾತಾಡುವುದು). ಯಾವಾಗಲಾದರೊಮ್ಮೆ ಬೇರೆಯ ಭಾಷೆಯ ಒಳ್ಳೆಯ ಸಿನೆಮಾ ನೋಡೋಣ ಆದರೆ ಮನೆಯಲ್ಲಿ ಕನ್ನಡ ವಾಹಿನಿ ಜಾರಿಯಲ್ಲಿರಲಿ. ಕನ್ನಡ ಸಿನಿಮಾಗಳನ್ನು ಆಸ್ಥೆಯಿಂದ ಮೊದಲ ವಾರವೇ ನೋಡೋಣ.

ಇನ್ನು ‘ಕನ್ನಡಿಗರು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು’ ಎನ್ನುವುದು ತೀರ ಬಾಲಿಶ ಹೇಳಿಕೆ ಎನಿಸಿತು.

ಕನ್ನಡಿಗರು ಯಾರದರು ಮನೆಯಲ್ಲಿ ತಮಿಳು, ತೆಲುಗು ಮಾತಾಡಲು ಶುರುಮಾಡಿದ್ದಾರೇನು? ತಮಿಳಿನ ಕೂಲಿಯವರನ್ನಿಟ್ಟುಕೊಂಡೊಡನೆ ತಮಿಳು ಪತ್ರಿಕೆ ತರಿಸಿ ಓದುತ್ತಾರೇನು?. ಒಟ್ಟಿನಲ್ಲಿ ಕನ್ನಡಿಗರ ಕನ್ನಡತನವನ್ನು ಕೊಳ್ಳುತ್ತಿರುವುದು ಇಂಗ್ಲೀಷಲ್ಲದೆ ಮತ್ಯಾವ ಭಾಷೆಯೂ ಅಲ್ಲ. ಮತ್ಯಾವ ರಾಜ್ಯದ ಜನರೂ ಅಲ್ಲ. ಒಮ್ಮೆ ಈ ಇಂಗ್ಲಿಷಿನ ಮುಸುಕನ್ನು ಸರಿಸಿ. ಕನ್ನಡ ತಾನೇ ತಾನಾಗಿ ಉಳಿಯುತ್ತದೆ. ಕನ್ನಡಿಗರಲ್ಲೂ, ಕನ್ನಡನಾಡಿನ ಪರ ಊರಿನವರಲ್ಲೂ.

-ವಿಕ್ರಮ್‌ ಹತ್ವಾರ್‌, ಊರು?

*

ಸಂಪಿಗೆಯವರಿಗೆ ನಮಸ್ಕಾರ.

ನಿಮ್ಮ ಲೇಖನಗಳನ್ನು ಬಹಳ ದಿನಗಳಿಂದ ಓದುತ್ತಿದ್ದೇನೆ. ಮೊದಲ ಬಾರಿ, ನನ್ನ ಮತ್ತು ನಿಮ್ಮ ಅಭಿಪ್ರಾಯಗಳು ಹೊಂದಿಕೊಳ್ಳುತ್ತಿಲ್ಲ.

ಕನ್ನಡಿಗರು ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತರೆ ನಮ್ಮ ಮುಂದಿರುವ ಪ್ರಶ್ನೆ ಪರಿಹಾರ ಆಗುತ್ತೆ ಅಂತ ನನಗಂತೂ ಅನ್ನಿಸಿಲ್ಲ. ಸುಮ್ಮನೆ, ಕೈಲಾಗದವನು ಮೈ ಪರಚಿಕೊಂಡ ಹಾಗೆ ಆಗುತ್ತೆ ಅಷ್ಟೆ.

ಆದರೆ, ನನಗೆ ಬೇರೆ ಸೂಕ್ತ ಪರಿಹಾರ ತೋಚುತ್ತಿಲ್ಲ. ನನ್ನೊಬ್ಬ ಗೆಳೆಯ - ಕನ್ನಡಿಗನೇ - ಸ್ವಾಭಿಮಾನಿ ಕನ್ನಡಿಗನೇ - ಅವನ ಆಫೀಸಿನಲ್ಲಿ ಒಂದು ಕಸ ಗುಡಿಸುವ ಕೆಲಸಕ್ಕೆ ಕನ್ನಡಿಗರೇ ಬೇಕು ಎಂದು - 2 ತಿಂಗಳು ಹುಡುಕಿದರೂ ಅವನಿಗೆ ಸಿಗಲಿಲ್ಲ. (ಇದು 8-10 ವರ್ಷದ ಹಿಂದಿನ ಮಾತು) ಆದ್ದರಿಂದ ನೀವು ತಿಳಿಸಿದ ಕಾರಣವನ್ನು ನಾನು ಒಪ್ಪುತ್ತೇನೆ, ಆದರೆ ಪರಿಹಾರವನ್ನಲ್ಲ...

ಕನ್ನಡಿಗರು ವಲಸೆ ಹೋಗುವುದು ಕಡಿಮೆ ಅಂತ ನಾನು ಸ್ನೇಹಿತ ವೆಂಕಟೇಶ್‌ ಪ್ರಸಾದ್‌ ಅವರೊಡನೆ ಮಾತುಕತೆಯಲ್ಲಿ ಹೇಳಿದೆ. ಅವರು ಹೇಳಿದ ಉತ್ತರ ಸರಿಯಾಗಿಯೆ ಇತ್ತು - ’’ನಮ್ಮಲ್ಲೇ ಸಂಪನ್ಮೂಲಗಳು ಇರುವಾಗ ನಾವು ಯಾಕೆ ವಲಸೆ ಹೋಗಬೇಕು, ಅಲ್ಲವೆ?’’ ನೀವು ಹೇಳಿದ ಕಾರಣ ಇದಕ್ಕೂ ಅನ್ವಯಿಸಬಹುದು ಅನ್ನಿಸುತ್ತೆ.

ನಾವು - ಪ್ರತಿಯೊಬ್ಬ ಕನ್ನಡಿಗನೂ - ಇನ್ನೊಬ್ಬ ಕನ್ನಡಿಗನಿಗೆ ಕೆಲಸ ಕೊಡಿಸುವ ಎಲ್ಲ ಅವಕಾಶಗಳ ಬಗ್ಗೆ ಗಮನವಿತ್ತು ಕಾರ್ಯ ಪ್ರವೃತ್ತರಾಗಬೇಕು ಎಂದು ನನ್ನ ಭಾವನೆ. ಆ ದಿಸೆಯಲ್ಲಿ ಏನಾದರೂ ಪ್ರಯತ್ನಗಳನ್ನು ನಡೆಸಲು ಸಾಧ್ಯವೆ? ಮೊದಲು ಪ್ರತಿ ತಿಂಗಳು ಒಬ್ಬನಿಗೆ ಕೆಲಸ ತೋರುವ ಯೋಜನೆ ಮಾಡಬಹುದೇನೋ ?

-ಯು.ಎನ್‌.ಶೆಟ್ಟಿ, ಯೂ.ಎಸ್‌.ಎ

*

ಸಂಪಿಗೆಯವರೇ,

ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಕಣ್ಣು ತೆರೆಸುವ ಲೇಖನ. ನೀವು ತಿಳಿಸಿರುವಂತೆ ಕನ್ನಡಿಗರು ತಮ್ಮ ಮಕ್ಕಳಲ್ಲಿ ಕನ್ನಡಾಭಿಮಾನ ತುಂಬುವುದು ಒಂದಾದರೆ, ಮತ್ತೊಂದು ಮುಖದ ಬಗ್ಗೆ ಲೇಖನದಲ್ಲಿ ಹೇಳೇ ಇಲ್ಲ. ಲೇಖನದಲ್ಲಿರುವಂತ ನಮ್ಮಲ್ಲಿನ ಹಲವಾರು ಒಳ್ಳೆಯ ಕಾರಣಕ್ಕೆ ಪರಭಾಷಿಕರ ವಲಸೆ ಹೆಚ್ಚಾಗಿದೆ. ಇದನ್ನು ತಪ್ಪಿಸಲೂ ಸಂವಿಧಾನದಲ್ಲಿ ಅವಕಾಶವಿಲ್ಲದ್ದರಿಂದ ಉಳಿದಿರುವ ಒಂದೇ ಮಾರ್ಗ ಅವರಿಗೆ ಕನ್ನಡ ಕಲಿಸಿ ಕನ್ನಡಿಗರನ್ನಾಗಿ ಮಾಡುವುದು. ಇದನ್ನು ಎಲ್ಲ ಕನ್ನಡಿಗರೂ ಅರಿತು ಆ ವಾತಾವರಣ ನಿರ್ಮಾಣ ಮಾಡುವುದಲ್ಲದೆ, ನಮ್ಮ ಕರ್ನಾಟಕ ಸರ್ಕಾರ ಇದಕ್ಕಾಗಿ ವಿಶೇಷ ಯೋಜನೆ ಹಾಕಿಕೊಳ್ಳಬೇಕು.

ಪರಭಾಷಿಕರ ಕನ್ನಡ ಕಲಿಸಲು ಶಾಲೆಗಳು, ಕಡ್ಡಾಯ ಕನ್ನಡ ನಾಮಫಲಕ, ಜಾಹೀರಾತಿನಲ್ಲಿ ಕನ್ನಡ, ಅತ್ಯಂತ ಪ್ರಭಾವೀ ಮಾಧ್ಯಮಗಳಾದ ಟೀ.ವಿ, ರೇಡಿಯೋನಲ್ಲಿ ಕರ್ನಾಟಕದಲ್ಲಿ ಕನ್ನಡ ಕಾರ್ಯಕ್ರಮಗಳು, ಕನ್ನಡ ಕಲಿ ಕಾರ್ಯಕ್ರಮಗಳು ಟಿ.ವಿಯಲ್ಲಿ, ರೇಡಿಯೋ, ಅಂಚೆ ಮೂಲಕ ಹೀಗೆ ನಾನಾ ಕಡೆ ಹಮ್ಮಿಕೊಳ್ಳಬೇಕಾಗಿದೆ.

ಇದರ ಬಗ್ಗೆಯೂ ಲೇಖನ ಸಾಕಷ್ಟು ಬೆಳಕು ಬೀರುವಂತಾಗಲಿ.

-ವೆಂಕಟೇಶ, ಯು. ಎಸ್‌. ಎ.

*
ನಮಸ್ಕಾರ ಶ್ರೀನಿವಾಸರವರಿಗೆ,

ಕನ್ನಡದ ಸ್ಥಿತಿಗತಿಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರ. ಬಹಳ ಸಂತೋಷವಾಯಿತು, ನಿಮ್ಮ ಲೇಖನ ಓದಿ.

- ಬಿ.ಎನ್‌. ರಾಜ, ಬೆಂಗಳೂರು.

*
ನಮಸ್ಕಾರ ಶ್ರೀನಿ ಅವರಿಗೆ,

ನಿಮ್ಮ ಲೇಖನ ಓದಿದೆ. ಕನ್ನಡಿಗರ ಜನಸಂಖ್ಯೆ ಮತ್ತು ಸಮಸ್ಯೆಗಳಿಗೆ ಇರುವ ಸಾಮ್ಯವನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದೀರ. ನಿಮಗೆ ಧನ್ಯವಾದಗಳು.

-ರಾಮ್‌ ಅಗರ, ಬೆಂಗಳೂರು

*
ನಮಸ್ಕಾರ ಸಂಪಿಗೆ ಶ್ರೀನಿವಾಸ ರವರಿಗೆ,

ನಿಮ್ಮ ಈ ಅಂಕಣ ನಿಜವಾಗಲೂ ತುಂಬಾ ಸೊಗಸಾಗಿದೆ ಮತ್ತು ನಿವ್ಮ್ಮ ಕಾಳಜಿಯೂ ಕೂಡ ಅತ್ಯುತ್ತಮವಾದದ್ದು. ನೀವು ಸಂಗ್ರಹಿಸಿರುವ ಮಾಹಿತಿ ನಿಜಕ್ಕೂ ನಾವು ಕನ್ನಡಿಗರು ಎಚ್ಚೆತ್ತು ಕನ್ನಡಿಗರ ಸಂಖ್ಯೆ ಅಂದರೆ ಮಕ್ಕಳನ್ನು ಹೆಚ್ಚಿಸಬೇಕು, ಇಲ್ಲದಿದ್ದಲ್ಲಿ ಖಂಡಿತ ನಾವು ಇಲ್ಲಿಂದ ಪಲಾಯನ ಮಾಡಬೇಕಾದ ದಿನ ದೂರವಿಲ್ಲ.

ನನ್ನದೊಂದು ಮನವಿ... ಈ ವಲಸೆ ಬರುವ ಜನಗಳಿಗೆ ರಾಜಕಾರಣಿಗಳೂ ತುಂಬಾ ಸಹಾಯ ಮಾಡುವುದರಿಂದ ವಲಸೆ ಜಾಸ್ತಿಯಾಗಿದೆ. ಅವರು ಓಟ್‌ ಬ್ಯಾಂಕ್‌ಗಾಗಿ ಫ್ರೀ ಸೈಟುಗಳನ್ನ ಕೊಡೋದ್ರಿಂದ ಬರುವವರ ಸಂಖ್ಯೆ ಜಾಸ್ತಿ ಆಗುತ್ತೆ ಹೊರತು ಕಮ್ಮಿ ಆಗೊಲ್ಲ. ಆದ್ದರಿಂದ ನನಗೆ ಅನಿಸಿದ್ದನ್ನ ನಾನು ನಿಮಗೆ ತಿಳಿಸುತ್ತಿದ್ದೇನೆ. ಇದು ಸರಿಯೋ ತಪ್ಪೋ ನೋಡಿ ಪಾಲಿಸುವ ಕೆಲಸ ಮಾಡಲು ಸಾದ್ಯವಾ?

ನಮ್ಮ ಘನ ಸರ್ಕಾರದಿಂದ ಆಗಬೇಕಾದ ಕೆಲವು ಮುಖ್ಯ ವಿಷಯಗಳು..

1. ಪರರಾಜ್ಯದಿಂದ ಬರುವ ಜನರಿಗೆ ರೇಶನ್‌ ಕಾರ್ಡ ಕೊಡದೆ ಇರುವುದು.

2. ಪರರಾಜ್ಯದಿಂದ ಬರುವ ಜನರಿಗೆ ಇಲ್ಲಿ ಗ್ರೂಪ್‌ ಡಿ ನೌಕರಿ ಬಿಟ್ಟು ಬೇರೆ ಕೆಲಸ ಕೊಡದೇ ಇರುವುದು.

3. ಯಾವ ಸರ್ಕಾರಿ ಕೆಲಸವನ್ನು ಕೊಡದೆ ಇರುವುದು.

4. ಮತ ಚಲಾವಣೆ ಕನ್ನಡಿಗರಿಗೆ ಮಾತ್ರ ಎಂದು ಶಾಸನ ಮಾಡುವುದು.

5. ಬೇರೆ ಭಾಷೆಯ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವುದು.

6. ಸುಂಕ ವಸೂಲಾತಿಯಲ್ಲಿ ಬೇರೆ ಭಾಷಿಕರಿಗೆ ಶೇ. 30 ಹೆಚ್ಚು ಕಟ್ಟುವಂತೆ ಮಾಡುವುದು.

7. ಬೇರೆ ರಾಜ್ಯದಿಂದ ಬರುವ ಜನಗಳಿಗೆ ಅಂತಾರಾಷ್ಟ್ರೀಯ ಲೆವೆಲ್‌ನಲ್ಲಿ ಪಾಸ್‌ಪೋರ್ಟ ವೀಸಾ ಇರೊ ಹಾಗೆ ಅಂತಾರಾಜ್ಯ ವೀಸಾ ಅಂತಾ ಕೊಡುವುದು. ಒಬ್ಬನಿಗೆ ಒಂದು ವರ್ಷ ಇರಲು ಮಾತ್ರ ಅವಕಾಶ ಕಲ್ಪಿಸುವುದು. ನಂತರ ಅವನು ಸ್ವಂತ ರಾಜ್ಯಕ್ಕೆ ವಾಪಸ್‌ ಹೋಗುವುದು.

ಈ ಮೇಲ್ಕಂಡ ವಿಷಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೇ ನಿಜವಾಗಲೂ ನಮ್ಮ ಕನ್ನಡಿಗರಿಗೆ ಸಹಾಯ ಮಾಡಿದ ಹಾಗೆ ಆಗುತ್ತದೆ. ನೀವೇನಂತೀರಿ ಶ್ರೀನಿವಾಸ್‌?

ತಮ್ಮ ಹಿತೈಷಿ,

-ಹೇಮರಾಜು, ಬೆಂಗಳೂರು

*
Hai Srini,

Your artical is very good... adre idanna navu ella kannadagarigoo gottaguvante madbeku...
I will do my level best by forwarding your mail to some groups.

Kiran, Bengaluru@

*
ಪ್ರತಿಕ್ರಿಯೆಗಳಿಗೆ ಲೇಖಕರ ಸ್ಪಷ್ಟನೆ :

ವಲಸೆ ಬಗೆಗಿನ ನನ್ನ ಲೇಖನದ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಧನ್ಯವಾದಗಳು.

ವಿಕ್ರಮ್‌ ಅವರು ಹೇಳುವಂತೆ ಆಂಗ್ಲ ಭಾಷೆಯಿಂದ ಕನ್ನಡ, ಕನ್ನಡಿಗರ ಮೇಲೇ ಆಗುತ್ತಿರುವ ದುಷ್ಪರಿಣಾಮ ಖಂಡಿತ ನಿಜ. ಅದನ್ನು ಒಪ್ಪುತ್ತೇನೆ. ಆದರೆ ಈ ಆಂಗ್ಲ ಭಾಷೆಯ ಪ್ರಭಾವ ಕನ್ನಡಿಗರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ಎಲ್ಲಾ ಭಾಷೆಗಳಿಗೂ ಇದರಿಂದ ಹೊಡೆತ ಬಿದ್ದಿದೆ. ಆದರೆ ನಾನು ಈ ಲೇಖನದಲ್ಲಿ ಹೇಳಲು ಹೊರಟಿರುವುದು ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ವಿಶೇಷವಾದ ಈ ವಲಸೆ ಸಮಸ್ಯೆಯನ್ನು. ಕರ್ನಾಟಕದಲ್ಲಿನ ಈ ಸಮಸ್ಯೆ ನೆರೆಯ ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಲ್ಲಿ ಯಾಕೆ ಇಲ್ಲ? ಅಲ್ಲಿ ಆಯಾ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಜೊತೆಗೆ ಅಲ್ಲಿನವರಿಗೆ ತಮ್ಮ ನಾಡು-ನುಡಿಯ ಮೇಲಿನ ಅಭಿಮಾನವೂ ಹೆಚ್ಚಿದೆ. ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ಯಾಕೆ ಹೀಗೆ ಎನ್ನುವುದನ್ನು ಈ ಲೇಖನದಲ್ಲಿ ವಿಶ್ಲೇಷಿಸಿದ್ದೇನೆ.

ಕನ್ನಡಿಗರು ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತರೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ನಾನು ಹೇಳಿರುವುದು ಉಮೇಶ ಅವರಿಗೆ ಸರಿಕಂಡಿಲ್ಲ. ಆದರೆ ಇದು ಇಂದಿನ ಪರಿಸ್ಥಿತಿಯಲ್ಲಿ ವಾಸ್ತವವಾಗಿದೆ ಎಂದು ನನ್ನ ಅನಿಸಿಕೆ. ಕನ್ನಡಿಗರ ಸಂಖ್ಯೆ ಬೇರೇ ಭಾಷಿಕರಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ಜೊತೆಗೆ ಬರಿಮಕ್ಕಳನ್ನು ಹೆತ್ತರಷ್ಟೇ ಸಾಲದು ಅವರಿಗೆ ಕನ್ನಡದ ಬಗ್ಗೆ ಹೆಮ್ಮೆಯನ್ನು, ಅಭಿಮಾನವನ್ನೂ ಮೂಡಿಸಬೇಕಾಗಿರುವುದೂ ಅಷ್ಟೇ ಸತ್ಯ.

ಇನ್ನು ವಲಸೆ ಬಗ್ಗೆ ಬಹಳ ಜನರಲ್ಲಿ ಬಿನ್ನಾಭಿಪ್ರಾಯವಿದೆ. ನಾನು ಭಾರತದಲ್ಲಿ ವಲಸೆಯನ್ನು ನಿಯಂತ್ರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಅಭಿಪ್ರಾಯಹೊಂದಿರುವ ಗುಂಪಿಗೆ ಸೇರಿದ್ದೇನೆ. ಹಿರಿಯ ಸಾಹಿತಿಗಳಾದ ಜಿ.ನಾರಾಯಣ, ಡಾ ಚಿದಾನಂದ ಮೂರ್ತಿಗಳು, ಡಾ ಪಿ.ವಿ. ನಾರಾಯಣ ಅವರು ವಲಸೆ ನಿಯಂತ್ರಣದ ಅವಶ್ಯಕತೆ ಬಗ್ಗೆ ಮಾತನಾಡಿದ್ದಾರೆ. ಅವರ ಚಿಂತನೆಗಳಿಂದ ನಾನು ಪ್ರೇರಿತನಾಗಿದ್ದೇನೆ. ಕರ್ನಾಟಕದಲ್ಲಿನ ಸಮಸ್ಯೆಗೆ ಅಂತರರಾಜ್ಯ ವಲಸೆಯೇ ಬಹುಮಟ್ಟಿಗೆ ಕಾರಣ ಎನ್ನುವುದು ಕಟುಸತ್ಯ. ಕನ್ನಡ ನಾಡಿಗೆ ವಲಸೆಯನ್ನು ನಿಯಂತ್ರಿಸದಿದ್ದರೆ ಮುಂದೆ ಆಗುವ ಪರಿಣಾಮ ಬೆಚ್ಚಿಬೀಳಿಸುವಹಾಗಿದೆ. ಕನ್ನಡ ಶಕ್ತಿಕೇಂದ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಪ್ರಕಟಿಸಿರುವ ಕನ್ನಡ, ಕನ್ನಡಿಗ, ಕರ್ನಾಟಕ ಎನ್ನುವ ಪುಸ್ತಕವನ್ನು ಎಲ್ಲರೂ ಒಮ್ಮೆ ಓದಬೇಕೆಂದು ನನ್ನ ವಿನಂತಿ.

ವಲಸೆಯಿಂದ ಕನ್ನಡ ಸಂಸ್ಕೃತಿಯ ಮೇಲೇ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಹಿಂದೆ ದಟ್ಸ ಕನ್ನಡದಲ್ಲೇ ನನ್ನ ಒಂದು ಲೇಖನ ಪ್ರಕಟವಾಗಿತ್ತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ವಂದನೆಗಳು.
-ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X