ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಗಲಾಡಿ ಸಾಹಿತ್ಯದಿಗ್ಗಜರಿಗೆ ಒಂದು ಬಹಿರಂಗ ಪತ್ರ

By Staff
|
Google Oneindia Kannada News


ಕನ್ನಡ ಸಾರಸ್ವತ ಲೋಕಕ್ಕೆ ಏನಾಗಿದೆ? ಚಂಪಾ, ಅನಂತಮೂರ್ತಿ, ದೇ.ಜವರೇಗೌಡ ಸೇರಿದಂತೆ ನಮ್ಮ ನಡುವಿನ ಸಾಹಿತ್ಯ ದಿಗ್ಗಜರು ಯಾಕೆ ಈ ರೀತಿ ಬೀದಿಯಲ್ಲಿ ಬೆತ್ತಲಾಗಿದ್ದಾರೆ? ‘ಕಚ್ಚಾಡುವರನು ಕೂಡಿಸಿ ಒಲಿಸು... ಬಾರಿಸು ಕನ್ನಡ ಡಿಂಡಿಮವಾ...’

  • ಕೇಶವಸುತ
ರಾಜ್ಯದಲ್ಲಿ ಸುವರ್ಣ ಕರ್ನಾಟಕದ ಸಂಭ್ರಮ. ಆದರೆ ಸಾರಸ್ವತ ಲೋಕದ ದಿಗ್ಗಜರು(?) ವೈಯಕ್ತಿಕ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು, ಬೆಕ್ಕು-ನಾಯಿಗಳಂತೆ ಕಿತ್ತಾಡುತ್ತಿದ್ದಾರೆ!

ಕನ್ನಡ ನಾಡು-ನುಡಿಗಿಂತಲೂ ಪರಸ್ಪರ ದ್ವೇಷ ಅಸೂಯೆಗಳೇ ಅವರಿಗೆ ಮುಖ್ಯವಾಗಿವೆ. ಕೇಂದ್ರವನ್ನು ಶಾಸ್ತ್ರೀಯ ಭಾಷೆಗಾಗಿ ಒತ್ತಾಯಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್‌ ನೀಡಿ, ಉಪವಾಸ ಕೂರುವ ದೇ. ಜವರೇಗೌಡರ ಎಚ್ಚರಿಕೆ, ಕೆಲವರಿಗೆ ಬ್ಲಾಕ್‌ಮೇಲ್‌ನಂತೆ ಕಂಡಿದೆ.

ಮೊಸರಿನಲ್ಲಿ ಕಲ್ಲು ಹುಡುಕುವವರಂತೆ, ಪ್ರತಿಯಾಂದರಲ್ಲೂ ಲೋಪ ಹುಡುಕುವ ಪ್ರವೃತ್ತಿ ಸಾರಸ್ವತ ಲೋಕದಲ್ಲಿ ಹೆಚ್ಚುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂಪಾ ಅವರಂತೂ, ಅಧ್ಯಕ್ಷ ಸ್ಥಾನವನ್ನು ರಂಪಾ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತಿದೆ.

ಪ್ರಶಸ್ತಿಯನ್ನು ಕೊಳ್ಳುವ ಮತ್ತು ಪಡೆಯುವ ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಹೇಳಿಕೆಗೊಂದು, ಮರು ಹೇಳಿಕೆ ನೀಡುವುದನ್ನು ಈ ದಿಗ್ಗಜರು ಕನ್ನಡ ಕೆಲಸ ಎಂದು ಭಾವಿಸಿದಂತಿದೆ. ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಲ್ಲ ಎಂದು ಸೂಚ್ಯವಾಗಿ ಜವರೇಗೌಡರು ಗೇಲಿ ಮಾಡುತ್ತಿದ್ದಾರೆ.

ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗಲೂ, ಐದಾರು ಮಂದಿ ಅರ್ಹರಿದ್ದರು ಎನ್ನುವ ಮೂಲಕ ಅನಂತಮೂರ್ತಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಮನೆಯ ಹಿರಿಯರಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ ಅವರು ಪೋಸ್‌ ಕೊಡುತ್ತಿದ್ದಾರೆ.

ಕನ್ನಡ ಸಾಹಿತಿಗಳನ್ನು ಮಸಾಲೆ ದೋಸೆ ಸಾಹಿತಿಗಳೆಂದು ಚಂಪಾ ಗೇಲಿ ಮಾಡುತ್ತಾ, ಎಡಬಿಡಂಗಿ ಅನಂತಮೂರ್ತಿ ಕನ್ನಡಿಗರ ತಲೆ ತಿನ್ನದಿರಲಿ ಎಂಬ ಎಡಬಿಡಂಗಿ ಹೇಳಿಕೆ ಮೂಲಕ ನಾಯಕರಾಗಲು ಪ್ರಯತ್ನಿಸುತ್ತಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿ ಎಂದು ಕೇಂದ್ರದ ಮುಂದೆ ಅಂಗಲಾಚಬೇಕಿಲ್ಲ ಎಂದು ವಿಮರ್ಶಕ ಕಿ.ರಂ. ನಾಗರಾಜ್‌ ವಿಚಾರವನ್ನು ಮತ್ತೊಂದು ದಿಕ್ಕಿಗೆ ಕರೆದೊಯ್ಯುತ್ತಾರೆ.

ಬಂಡಾಯ ಸಾಹಿತ್ಯದ ವಕ್ತಾರರಾಗಿರುವ ಬರಗೂರು ರಾಮಚಂದ್ರಪ್ಪ ದಸರಾ ಉತ್ಸವದಲ್ಲಿ ಅತಿಪ್ರತಿಷ್ಠೆಯನ್ನು ಪ್ರದರ್ಶಿಸುತ್ತಾರೆ. ದೇವರುಗಳಲ್ಲಿ ನಂಬಿಕೆ ಇಲ್ಲದ ಅವರು, ತಮ್ಮ ಹೆಸರನ್ನು(ರಾಮ-ಚಂದ್ರಪ್ಪ)ಬದಲಿಸಿಕೊಳ್ಳಲಿ. ಜಾಲಿಮರವೋ ಅಥವಾ ಕರಿಕಾಗೆ ಎಂದೋ ತಮ್ಮನ್ನು ಗುರ್ತಿಸಿಕೊಳ್ಳಲಿ!

ಕನ್ನಡ ಸಾಹಿತಿಗಳಲ್ಲಿಯೇ ಸಮ್ಮತಿಯಿಲ್ಲ. ವಿಚಾರದಲ್ಲಿ ಸ್ಪಷ್ಟತೆಯಿಲ್ಲ ಎಂದರೆ, ಅವರ ಕನ್ನಡ ಸೇವೆಯಲ್ಲಿ ಸ್ಪಷ್ಟತೆ ಹೇಗೆ ತಾನೇ ಸಿಕ್ಕೀತು?

ರಾಜಕಾರಣಿಗಳನ್ನು ಮೀರಿಸುವಂತೆ ಹೇಳಿಕೆಗಳನ್ನು ನೀಡುವ ಮೂಲಕ ಈ ದಿಗ್ಗಜರು ಬೀದಿಯಲ್ಲಿ ಬೆತ್ತಲಾಗಿದ್ದಾರೆ. ಇನ್ನೂ ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು ‘ವಾಚಕರವಾಣಿ’ ಯಿಂದ ತಮ್ಮ ಬುದ್ಧಿವಂತಿಕೆಯನ್ನು ಆಗಾಗ ಹೊರಬಿಡುತ್ತಿದ್ದಾರೆ.

ಕವಿಗಳ ಕವನ, ಸಾಹಿತಿಗಳ ಸಾಹಿತ್ಯ ಮಾತಾಡಬೇಕು ಎನ್ನುವ ಮಾತಿದೆ. ಅವು ಮಾತಾಡದೇ ಅವರೇ ಮಾತಾಡಲು ನಿಂತರೆ ಎಲ್ಲರಿಗೂ ಅಪಾಯ. ಸಾರ್ವಜನಿಕ ವೇದಿಕೆಗಳನ್ನು, ಮಾಧ್ಯಮಗಳನ್ನು ತಮ್ಮ ಬಾಯಿ ಚಪಲ ತೀರಿಸಿಕೊಳ್ಳಲು ಬಳಸಿಕೊಳ್ಳುವ ಪರಿಪಾಠ ಕೊನೆಯಾಗಲಿ.

ಒಬ್ಬರ ಹುಳುಕನ್ನು ಎತ್ತಿ ಆಡುವ ಸಣ್ಣತನಗಳಿಗೆ ಇತಿಶ್ರೀ ಹಾಡಿ, ಕನ್ನಡ ಪ್ರಜ್ಞೆ ಬೆಳೆಸಲು ಏಕತೆಯಿಂದ ಸಾರಸ್ವತ ಲೋಕ ಎದ್ದು ನಿಲ್ಲಲಿ ಎಂಬ ಆಶಯ ನಮ್ಮದು.

(ಸೂಚನೆ : ವಿಚಾರ ಮಂಡಿಸುವಾಗ ಕೆಲವೆಡೆ ಭಾಷೆ ಸ್ವಲ್ಪ ಹರಿತವಾಗಿದೆ. ಆದರ ಹಿಂದಿರುವುದು ಕನ್ನಡ ಕಳಕಳಿ ಮಾತ್ರ!)

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X