ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಏಕೆ?

By Super
|
Google Oneindia Kannada News

ಪ್ರಾಥಮಿಕ ಶಿಕ್ಷಣದಲ್ಲಿ ಆಂಗ್ಲ ಭಾಷೆ ಕಲಿಸದಿರುವುದು ದಲಿತರನ್ನು ಶೋಷಿಸುವ ಆಧುನಿಕ ಪರಿ ಎನ್ನುವುದು ಸಾಹಿತಿ ದೇವನೂರು ಮಹಾದೇವ ಅವರ ಅನಿಸಿಕೆ. ಮಾತೃಭಾಷೆಗೆ ಮೊದಲ ಸ್ಥಾನ ನೀಡಬೇಕೆನ್ನುವುದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಂಪಾ ಅವರ ಒತ್ತಾಯ. ಒಂದನೇ ತರಗತಿಯಿಂದ ಆಂಗ್ಲಭಾಷೆ ಕಲಿಸುವ ಸರ್ಕಾರದ ಚಿಂತನೆಗೆ ರಾಜ್ಯದಲ್ಲಿ ಪರ-ವಿರೋಧ ವಾದಗಳು ತಲೆಎತ್ತಿವೆ. ಈ ಮಧ್ಯೆ ಸರ್ಕಾರದ ವಿರುದ್ಧ ಕ.ಸಾ.ಪ. ಗೋಕಾಕ್‌ ಮಾದರಿಯ ಚಳವಳಿಯನ್ನು ಮಂಗಳವಾರ(ಜೂ.14)ದಿಂದ ಆರಂಭಿಸಿದೆ.

ಒಂದೆಡೆ ನಾಡು, ಭಾಷೆ, ಸಂಸ್ಕೃತಿಗಳಿಗೆ ಎದುರಾಗಿರುವ ಆಪತ್ತಿನ ನಿವಾರಣೆಯ ಬಯಕೆ, ಮತ್ತೊಂದೆಡೆ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮ ಮಕ್ಕಳು ಯಶಸ್ವಿಯಾಗಲು ಪೂರಕವಾದ ಓದು, ವಿದ್ಯೆಯನ್ನು ಅವರಿಗೆ ಒದಗಿಸಬೇಕೆಂಬ ಹಂಬಲ. ಆಯ್ಕೆಯ ಅನಿವಾರ್ಯತೆ ಇದ್ದಾಗ ಎರಡನೆಯದಕ್ಕೇ ನಮ್ಮ ಪ್ರಾಮುಖ್ಯತೆ.

ಸರಳವಾಗಿ ಚಿಂತಿಸೋಣ. ನಮ್ಮ ಮನೆಯ ಮಾತು ಕನ್ನಡ. ನಮ್ಮ ಮಗು ಹುಟ್ಟಿದ ಕ್ಷಣದಿಂದ, ಅದನ್ನುದ್ದೇಶಿಸಿ ನಾವು ಆಡುವ ಮುದ್ದಿನ ನುಡಿಗಳು, ಹಾಡುವ ಲಾಲಿ ಹಾಡುಗಳು ಕನ್ನಡದಲ್ಲಿಯೇ ಇರುತ್ತವೆ. ನಾವು ಅದರೊಡನೆ ಸಂಭಾಷಿಸುವುದು ಕೂಡಾ ಕನ್ನಡದಲ್ಲಿ.

ಹುಟ್ಟಿದ ಪುಟ್ಟ ಮಗುವಿಗೆ ಯಾವುದೇ ವಿಷಯ ಅರ್ಥವಾಗುವುದು... ನೋಡುವುದರಿಂದ, ನೋಡಿದ್ದನ್ನು ಕೇಳುವುದರಿಂದ, ಕೇಳಿದ್ದನ್ನು ಅನುಕರಿಸುವುದರಿಂದ. ಹೀಗಾಗಿ, ದಿನನಿತ್ಯ ತಾನು ಕೇಳುವ ಮಾತೃಭಾಷೆಯ ಮೂಲಕ ತನ್ನ ಸುತ್ತ ಮುತ್ತಲಿನ ಪ್ರಪಂಚವನ್ನು ಮಗು ಅರ್ಥೈಸಿಕೊಳ್ಳುತ್ತಾ ಬೆಳೆಯುತ್ತದೆ.

ಬದುಕಿನ ಮೊದಲ ಪಾಠ ಮನೆಯಲ್ಲಿಯೇ ತಾನೆ? ಈ ಪಾಠವನ್ನು ಮಗು, ತಾಯಿ ತಂದೆಯರನ್ನು, ಮನೆಯ ಇತರೆ ಸದಸ್ಯರನ್ನೂ, ಅವರ ನಡವಳಿಕೆಯನ್ನು ಗಮನಿಸುತ್ತಾ, ಅನುಕರಿಸುತ್ತಾ, ಅವರ ನಿರ್ದೇಶನಗಳನ್ನು ಪಾಲಿಸುತ್ತಾ ಕಲಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಭಾಷೆಯೇ ಮಾತೃಭಾಷೆ.

ಮುಂದಿನ ಹಂತದಲ್ಲಿ ಮಗು, ತನ್ನ ಸುತ್ತಲಿನ ಪರಿಸರ - ಸಮಾಜ, ಇವುಗಳನ್ನು ನೋಡುತ್ತಾ, ಅಕ್ಕಪಕ್ಕದ ಜನರ, ನೆಂಟರಿಷ್ಟರ ನಡವಳಿಕೆಗಳನ್ನು ಗಮನಿಸುತ್ತಾ ಕಲಿಯುತ್ತದೆ. ಈ ಹಂತದಲ್ಲಿ ಮಗು ಬೆಳೆಯುವ ಪರಿಸರದ ಭಾಷೆ ಪ್ರಮುಖ ಸ್ಥಾನ ಪಡೆಯುತ್ತದೆ. ಅಂದರೆ ಕಲಿಕೆಯ ಮೊದಲ ಹಂತದಲ್ಲಿ ಮಗುವಿಗೆ, ಪ್ರಪಂಚ ಪರಿಚಯ - ಮಾತೃಭಾಷೆ ಮತ್ತು ಪಾರಿಸಾರಿಕ ಭಾಷೆಯಲ್ಲಿ ಆಗುತ್ತದೆ.

ಮಗು ಮೂರು ವರ್ಷದ ಆಸುಪಾಸಿಗೆ ಬಂದಾಗ, ಚಿತ್ರಗಳನ್ನು ಗುರುತಿಸುವ, ಒಂದಕ್ಕೂ ಮತ್ತೊಂದಕ್ಕೂ ಇರುವ ವ್ಯತ್ಯಾಸಗಳನ್ನು ಗುರುತಿಸಲು ಶಕ್ತವಾಗುತ್ತದೆ. ಮತ್ತು ಆಗಲೇ ಅದಕ್ಕೆ ಲಿಪಿಯ ಪರಿಚಯವಾಗುತ್ತದೆ. ನಂತರದ ಹಂತವೇ ಶಾಲಾ ಪ್ರವೇಶ ಮತ್ತು ವ್ಯವಸ್ಥಿತವಾದ ಶಿಕ್ಷಣ ಪದ್ಧತಿಯ ಕಲಿಕಾ ಪ್ರಕ್ರಿಯೆಗೆ ಮಗು ಒಳಗಾಗುತ್ತದೆ. ಈಗ ಮಗುವಿಗೆ ಯಾವ ಶಿಕ್ಷಣ ದೊರಕಿಸಿಕೊಡುವುದು ಉತ್ತಮ ಎಂಬುದನ್ನು ನಿರ್ಧರಿಸುವ ಹೊಣೆ, ಅದರ ತಂದೆ ತಾಯಿಯರ ಹೆಗಲಿಗೆ ಬೀಳುತ್ತದೆ ಎಂಬುದು ಸತ್ಯವೇ ಆದರೂ, ಇಡೀ ಸಮಾಜ ಇದಕ್ಕೆ ಜವಾಬ್ದಾರಿಯಾಗ ಬೇಕಾಗುತ್ತದೆ. ಶಿಕ್ಷಣದ ಭಾಷಾ ಮಾಧ್ಯಮ ಯಾವುದಾಗಿರಬೇಕು? ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ.

ಪ್ರಪಂಚದ ಅನೇಕ ಶ್ರೇಷ್ಠ ಭಾಷಾ ವಿಜ್ಞಾನಿಗಳು ಈ ವಿಷಯದಲ್ಲಿ ದಶಕಗಳ ಕಾಲ ನಡೆಸಿದ ಸಂಶೋಧನೆಗಳನ್ನು ಇಲ್ಲಿ ಈಗ ಪ್ರಸ್ತಾಪಿಸುವುದು ಸೂಕ್ತವೆಂದು ತೋರುತ್ತದೆ.

1. ಮಕ್ಕಳಿಗೆ ಪ್ರಪಂಚದ ಪರಿಚಯ ಬಾಲ್ಯದಲ್ಲಿ ಆಗುವುದು ಅದರ ಮಾತೃಭಾಷೆಯಲ್ಲಿಯೆ. ಹೀಗಾಗಿ, ಶಿಕ್ಶಣವನ್ನು ಮಾತೃ ಭಾಷೆಯಲ್ಲಿ ನೀಡುವುದು ಅತ್ಯಂತ ಉತ್ತಮ ವಿಧಾನ.

2. ಪ್ರಾಥಮಿಕ ಹಂತದ ಶಿಕ್ಷಣ - ಪ್ರಪಂಚದ, ಪದಗಳ, ವಸ್ತುಗಳ ಪರಿಚಯವನ್ನು ನೀಡುವುದೇ ಆಗಿರುತ್ತದೆ. ಮಗು, ಈ ಎಲ್ಲವನ್ನೂ ಮೊದಲಬಾರಿಗೆ ತಿಳಿದುಕೊಳ್ಳುತ್ತಿರುವುದರಿಂದ, ಅದು ಈಗಾಗಲೆ ಸ್ವಲ್ಪವಾದರೂ ತಿಳಿದಿರುವ ಭಾಷೆಯಲ್ಲಿ ತಿಳಿಸುವುದು ಸೂಕ್ತ.

3. ಮಗುವಿನ ಕಲಿಕೆ, ಪರಭಾಷೆಯಲ್ಲಾದರೆ, ಅದಕ್ಕೆ ಮಾತೃ ಭಾಷೆಯಲ್ಲಿ ಕಲಿಯಲು ಬೇಕಾಗುವ ಸಮಯಯದ ಸುಮಾರು ಏಳು ಪಟ್ಟು ಹೆಚ್ಚು ಸಮಯ ವ್ಯಯವಾಗುತ್ತದೆ.

ಏನಿದರ ಅರ್ಥ? ಆಂಗ್ಲ ಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡುತ್ತಾ, ನಾವು ಭ್ರಮಿಸುತ್ತಾ ಇರುವುದು ಏನೆಂದರೆ, ನಮ್ಮ ಮಗು ಬುದ್ಧಿವಂತ ಮಗುವಾಗುತ್ತದೆ ಎಂದು. ವಾಸ್ತವದಲ್ಲಿ, ಮಾತೃಭಾಷೆಯಲ್ಲಿ ಚಿಂತಿಸಲು, ಯೋಚಿಸಲು ಆಗದ ಮಗು, ತನ್ನ ಕ್ರಿಯಾತ್ಮಕತೆಯನ್ನು ಕಳೆದುಕೊಳ್ಳುತ್ತದೆ.

ಕನ್ನಡ ಮಾಧ್ಯಮದಲ್ಲಿ ಕಲಿತ ಅನೇಕ ಸ್ನೇಹಿತರ ಒಂದು ಆತಂಕವೆಂದರೆ - ನಮಗೆ ಯೋಗ್ಯತೆ, ಜಾಣತನ ಎಲ್ಲಾ ಇದ್ದೂ ಕೇವಲ ಇಂಗ್ಲಿಷ್‌ ಭಾಷೆ ಬಾರದೆ ಹೋಗಿದ್ದಕ್ಕಾಗಿ ಅವಕಾಶವಂಚಿತರಾಗಬೇಕಾಯ್ತು. ನಮ್ಮ ಮಕ್ಕಳಿಗೂ ಕನ್ನಡ ಮಾಧ್ಯಮದಲ್ಲಿ ಕಲಿಸಿದರೆ ಹೀಗೆಯೇ ಕಷ್ಟ ಆಗಬಹುದು ಎಂಬ ಭಯ.

ಆದರೆ ನಮ್ಮ ಕೆರಿಯರ್‌ನಲ್ಲಿ ಒಂದು ಹಂತ ತಲುಪಿದ ನಂತರ, ಹಿಂತಿರುಗಿ ನೋಡಿದರೆ, ಈ ಹಂತ ತಲುಪಲು, ನಮ್ಮ ಆಲೋಚನಾ ಶಕ್ತಿ, ಸಾಮಾನ್ಯ ಜ್ಞಾನ - ಥಳುಕು ಬಳುಕಿನ ಭಾಷಾ ಜ್ಞಾನಕ್ಕಿಂತ ಅತ್ಯಂತ ಪ್ರಯೋಜನಕಾರಿ ಎಂಬುದು ಮನವರಿಕೆಯಾಗುತ್ತದೆ.

ಭಾಷೆ ಒಂದು - ಸಂವಹನ ಮಾಧ್ಯಮ. ಭಾಷೆಯೇ ಜ್ಞಾನವಲ್ಲ. ಭಾಷೆ ಕಲಿಸುವ ವ್ಯಾಮೋಹದಲ್ಲಿ, ಜ್ಞಾನ ಕಲಿಕೆಗೆ ಪೆಟ್ಟು ನೀಡುವುದು ಸರಿಯೇ? ಮೊದಲಿಗೆ ವಿಷಯ ಗ್ರಹಿಕೆ, ಕಲಿಕೆ ಮುಖ್ಯವಾದಲ್ಲಿ , ಮಗು ಅದನ್ನು ಅತ್ಯುತ್ತಮವಾಗಿ ಯಾವ ಮಾಧ್ಯಮದ ಮೂಲಕ ಕಲಿಯಲು ಸಾಧ್ಯವೋ ಆ ಮಧ್ಯಮದ ಮುಖೇನ ಕಲಿಸುವುದು ಸೂಕ್ತ ಅಲ್ಲವೇ?

ಸ್ವಲ್ಪ ಯೋಚಿಸಿ. ಕನ್ನಡದಲ್ಲಿ ಆನೆಯ ಚಿತ್ರ ಮುಂದಿಟ್ಟುಕೊಂಡು, ಆನೆ ಎಂಬುದಾಗಿ ಕಲಿತರೆ ಸಾಕು. ಅದನ್ನೇ ಇಂಗ್ಲಿಷ್‌ನಲ್ಲಿ ಅದರ ಸ್ಪೆಲ್ಲಿಂಗ್‌ ಸಮೇತ ಕಲಿಯಬೇಕಾಗುತ್ತದೆ.

ಹೀಗೆ ಮಗುವಿನ ಕಲಿಕಾ ಶಕ್ತಿಗೆ, ಅನಗತ್ಯವಾದ ಒತ್ತಡ ಹಾಕಿ ಆ ಶಕ್ತಿಯನ್ನು ಮೊಟುಕುಗೊಳಿಸುವ ಅಧಿಕಾರ ಯಾವ ತಂದೆ ತಾಯಿಗೂ ಇಲ್ಲ. ಇಂತಹ ಒತ್ತಡಕ್ಕೆ ಸಿಕ್ಕ ಮಗು, ಕಲಿಯುವಿಕೆ ಎಂಬುದಕ್ಕಿಂತ ಹೆಚ್ಚಾಗಿ, ಪರೀಕ್ಷಾ ದೃಷ್ಟಿಯಿಂದ ಓದುವ, ವಿಷಯಗಳನ್ನು ಅರ್ಥ ಮಾಡಿಕೊಳ್ಳು ವುದಕ್ಕಿಂತಾ ಹೆಚ್ಚಾಗಿ ಪದಗಳನ್ನು ನೆನಪಿನಲ್ಲಿಡುವ ಸರ್ಕಸ್ಸಿನಲ್ಲಿ ತೊಡಗುತ್ತವೆ.

ಹಾಗಾದರೆ, ಇಂಗ್ಲಿಷ್‌ನ ಅವಶ್ಯಕತೆ ಇಲ್ಲವೇ ? ಖಂಡಿತಾ ಒಂದು ಭಾಷೆಯಾಗಿ ಇಂಗ್ಲಿಷನ್ನು ಕಲಿಯುವುದು ತಪ್ಪಲ್ಲಾ. ಆದರೆ ಇಂಗ್ಲಿಷ್‌ನ ಮೂಲಕ ಗಣಿತ, ಇತಿಹಾಸ, ವಿಜ್ಞಾನಗಳನ್ನು ಪ್ರಾರಂಭಿಕ ಹಂತದಲ್ಲಿ ಕಲಿಯುವುದು ತಪ್ಪು. ಒಮ್ಮೆ ಮೂಲಭೂತ ವಿಷಯಗಳು ಮನದಟ್ಟಾಗಬೇಕೆಂದರೆ, ಮಾತೃ ಭಾಷೆಯೇ ಅತ್ಯಂತ ಪರಿಣಾಮಕಾರಿ ಎಂಬುದು ಶಿಕ್ಷಣ ತಜ್ಞರ ಅಭಿಮತ.

ಇಂಗ್ಲಿಷ್‌ ಮಾಧ್ಯಮದಲ್ಲಿ ಮಕ್ಕಳಿಗೆ ಆರಂಭದಿಂದಲೇ ಶಿಕ್ಷಣ ಕೊಡಿಸುವ ಮೂಲಕ, ನಾವು ಕನ್ನಡ ಓದಲು, ಬರೆಯಲು ಬಾರದ, ಓದಿನ ಮೂಲಕ ನಾಡಿನ ಹಿರಿಮೆ ಅರಿಯುವ ಅವಕಾಶದಿಂದ ವಂಚಿತರಾದ, ಕನ್ನಡ ಬರೀ ಮಾತನ್ನಾಡಲು ಬರುವ ಕನ್ನಡಿಗ ಪೀಳಿಗೆಯ ಉಗಮಕ್ಕೆ ಕಾರಣರಾಗುತ್ತೇವೆ. ಆದ್ದರಿಂದ ತಂದೆ-ತಾಯಂದಿರು ಕನ್ನಡ ಅಭಿಮಾನದಿಂದ ಅಲ್ಲವಾದರೂ ತಮ್ಮ ಮಕ್ಕಳ ಒಳಿತಿಗಾಗಿಯಾದರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಬಗ್ಗೆ ಯೋಚಿಸಬೇಕು!

English summary
Kannada must be compulsory at the kindergarten stage itself, from classes I to VII and later in higher education too, says Anand.G.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X