ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗನ ಆದ್ಯ ಕರ್ತವ್ಯಗಳು

By Staff
|
Google Oneindia Kannada News


ಅಮ್ಮನ ಋಣಕ್ಕಿಂತಲೂ ಮಣ್ಣಿನ ಋಣ ದೊಡ್ಡದು! ಕನ್ನಡಮ್ಮನ ಉಳಿವಿಗಾಗಿ ಹೀಗೆ ಮಾಡಿ, ಇಷ್ಟು ಮಾಡಿ! ಒಂದಿಷ್ಟು ಸಲಹೆಗಳು

  • ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು
    [email protected]
Sampige Srinivasಕನ್ನಡಿಗರಾದ ನಾವು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ನಮ್ಮ ಪರಿಸರದಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ವೈಯಕ್ತಿಕವಾಗಿ ಮಾಡಬಹುದಾದ(ಮಾಡಲೇಬೇಕಾದ) ಕೆಲವು ಕನ್ನಡ ಪರ ಕೆಲಸಗಳ ಪಟ್ಟಿ ಇಲ್ಲಿದೆ. ಈ ಕೆಲಸಗಳನ್ನು ಮಾಡಲು ಯಾವ ಸಂಘಟನೆಯೂ ಬೇಕಿಲ್ಲ. ಪ್ರತಿಯಾಬ್ಬ ಕನ್ನಡಿಗನೂ ಮನಸ್ಸು ಮಾಡಿದರೆ ಸುಲಭವಾಗಿ ಮಾಡಬಹುದು.

1. ತಮ್ಮ ಸ್ನೇಹಿತರ ಜೊತೆ, ಸಾರ್ವಜನಿಕರ ಜೊತೆ ಅವರು ಯಾವುದೇ ಭಾಷಿಕರಾಗಿರಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವುದು.

ಟಿಪ್ಪಣಿ : ಬ್ಯಾಂಕುಗಳಲ್ಲಿ ವ್ಯವಹರಿಸುವಾಗ(ಚೆಕ್ಕು, ಚಲನ್‌ಗಳನ್ನು ಕನ್ನಡದಲ್ಲೇ ಬರೆಯಿರಿ), ಬಸ್ಸು/ರೈಲುಗಳ ಕಾಯ್ದಿರಿಸುವಿಕೆ ಮಾಡುವಾಗ, ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಎಲ್ಲೇ ವ್ಯವಹಾರ ಮಾಡುವಾಗ ಕನ್ನಡ ಬರವಣಿಗೆ ಉಪಯೋಗಿಸಿ, ಸಿಬ್ಬಂದಿಗಳ ಜೊತೆ ಕನ್ನಡದಲ್ಲೇ ಮಾತನಾಡಿ. ಯಾರೇ ಮನೆಗೆ ದೂರವಾಣಿ ಕರೆ/ಸಂಚಾರಿ(ಮೋಬೈಲ್‌) ಕರೆ ಮಾಡಿದರೂ ಕನ್ನಡದಲ್ಲೇ ಮಾತನಾಡಿ. ಹೀಗೆ ಪರಭಾಷಿಕರು ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಮಾಡಿ.

2. ತಮ್ಮ ಮನೆಯಲ್ಲಿ ಕನ್ನಡದ ಒಂದು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳನ್ನು ಕೊಂಡು ಓದುವುದು

ಟಿಪ್ಪಣಿ : ಬಹುಪಾಲು ಕನ್ನಡಿಗರ ಮನೆಗಳಲ್ಲಿ, ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಆಂಗ್ಲ ಪತ್ರಿಕೆಗಳನ್ನು ತರಿಸುತ್ತಾರೆ. ಇದರಿಂದ ಕನ್ನಡದ ಸುದ್ದಿಗಳು ಕನ್ನಡಿಗರಿಗೆ ತಿಳಿಯುವುದಿಲ್ಲ, ಏಕೆಂದರೆ ಕನ್ನಡ ಪರ ಸುದ್ದಿಗಳು ಆಂಗ್ಲ ಪತ್ರಿಕೆಗಳಲ್ಲಿ ಬರುವುದಿಲ್ಲ. ಈಗಾಗಲೆ ಆಂಗ್ಲಪತ್ರಿಕೆ ತರಿಸುತಿದ್ದರೆ ಅದರ ಜೊತೆ ಒಂದು ಕನ್ನಡ ಪತ್ರಿಕೆಗಾಗಿ ಇನ್ನೂ ಎರಡು ರೂಪಾಯಿ ಕೊಡಲು ನಮ್ಮ ಕನ್ನಡಿಗರಿಗೆ ಖಂಡಿತ ಸಾದ್ಯ ಇದೆ. ಮನಸ್ಸು ಮಾಡಬೇಕು ಅಷ್ಟೆ.

3. ತಮ್ಮ ಮನೆಯಲ್ಲಿ ಕನ್ನಡದ ವಾಹಿನಿಗಳನ್ನು ಕಡ್ಡಾಯವಾಗಿ ನೋಡುವುದು.

ಟಿಪ್ಪಣಿ : ಚಂದನ, ಈ ಟೀವಿ, ಉದಯ, ಉಷೆ, ಉದಯ ವಾರ್ತೆಗಳು ಈ ಐದು ವಾಹಿನಿಗಳನ್ನು ತಮ್ಮ ಟೀವಿಗಳಲ್ಲಿ ಮೊದಲಿಗೇ ಟ್ಯೂನ್‌ ಮಾಡಿಟ್ಟುಕೊಳ್ಳುವುದು.(ಉದಾ : 1. ಚಂದನ 2. ಈ ಟೀವಿ 3. ಉದಯ 4. ಉಷೆ 5. ಉದಯ ವಾರ್ತೆಗಳು ನಂತರ ಅವಶ್ಯಕತೆ ಇದ್ದರೆ ಉಳಿದ ವಾಹಿನಿಗಳು).

4. ಕನ್ನಡದ ಒಳ್ಳೆಯ ಚಲನಚಿತ್ರಗಳನ್ನು ಕಡ್ಡಾಯವಾಗಿ ನೋಡಿ ಪ್ರೋತ್ಸಾಹಿಸುವುದು.

ಟಿಪ್ಪಣಿ : ಕನ್ನಡದಲ್ಲಿ ಒಳ್ಳೆಯ ಚಿತ್ರಗಳಿಲ್ಲ ಎಂದು ಹೇಳಬೇಡಿ. ಖಂಡಿತ ಒಳ್ಳೆಯ ಚಿತ್ರಗಳು ಬರುತ್ತಿವೆ ಸ್ವಲ್ಪ ಕಣ್ಣು ತೆರೆದು ನೋಡಿ. ಬರಿ ಪರ ಭಾಷೆಯ ಚಿತ್ರಗಳ (ಅದರಲ್ಲೂ ಹಿಂದೀ ಚಿತ್ರಗಳ ಬಗ್ಗೆ) ಮಾಹಿತಿ ನಮ್ಮ ವಿದ್ಯಾವಂತ ಕನ್ನಡಿಗರಿಗೆ ತಿಳಿದಿರುತ್ತದೆ. ಕನ್ನಡ ಚಿತ್ರಗಳ ಬಗ್ಗೆ ತಿಳಿದು ಕೊಳ್ಳುವ ಮನಸಿಲ್ಲ ಅಷ್ಟೆ. ಕನ್ನಡ ಚಿತ್ರಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ ನಮ್ಮವರು. ಬೇರೆ ಭಾಷೆಯಲ್ಲೂ ಬಹಳ ಕಳಪೆ ಚಿತ್ರಗಳು ಬಂದಿವೆ/ಬರುತ್ತಿವೆ.

5. ನಿಮ್ಮ ಪರಿಸರದಲ್ಲಿ ಕನ್ನಡವನ್ನು, ಕರ್ನಾಟಕವನ್ನು ಯಾರಾದರು ಹೀಯಾಳಿಸಿದರೆ, ಅಪಮಾನ ಮಾಡಿದರೆ ಮೌನವಾಗಿ ಸಹಿಸಿ ಕೊಳ್ಳದೆ, ನಿಮಗೆ ಸಾಧ್ಯವಾದಷ್ಟು ಪ್ರತಿಭಟಿಸುವುದು.

6. ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಸಾಧ್ಯವಾದಷ್ಟು ಕನ್ನಡದವರಿಗೆ ಮೊದಲ ಪ್ರಾಶಸ್ತ್ಯ ಕೊಡುವುದು.

ಟಿಪ್ಪಣಿ : ಕನ್ನಡಿಗರ ಕಿರಾಣಿ ಅಂಗಡಿಗಳಿಗೆ ಹೋಗಿ ಮನೆಗೆ ಸಾಮಾನುಗಳನ್ನು ಕೊಂಡುಕೊಳ್ಳುವುದು, ಇತ್ಯಾದಿ. ಸ್ವಲ್ಪ ಹುಡುಕಿದರೆ ಕನ್ನಡಿಗರ ಅಂಗಡಿಗಳು ಸಿಗುವುದು ಕಷ್ಟವಲ್ಲ. ಸ್ವಲ್ಪದೂರವಾದರೂ ಪರವಾಗಿಲ್ಲ ಕನ್ನಡಿಗರ ಆಂಗಡಿಯಲ್ಲೇ ವ್ಯಾಪಾರ ಮಾಡುವ ಪಣತೊಡಿ.

7. ನೀವು ಕೊಳ್ಳುವ ಉತ್ಪನ್ನಗಳಲ್ಲಿ ಸಾಧ್ಯವಾದಷ್ಟು ಕರ್ನಾಟಕದಲ್ಲಿ(ಕನ್ನಡಿಗರು) ತಯಾರಿಸಿದ ಉತ್ಕೃಷ್ಟ ಉತ್ಪನ್ನಗಳನ್ನು ಖರೀದಿಸಿ. ಉದಾ : ಮೈಸೂರು ಸ್ಯಾಂಡಲ್‌ ಸೋಪು, ನಂದಿನಿ ಹಾಲು, ಎಂಟಿಆರ್‌ ಉತ್ಪನ್ನಗಳು ಇತ್ಯಾದಿ.

8. ಮನೆ ಕಟ್ಟುವ ಇಂಜಿನಿಯರ್‌/ ಗುತ್ತಿಗೆದಾರರಿಂದ(ಕಂಟ್ರಾಕ್ಟರ್‌) ಹಿಡಿದು ಬಡಗಿ(ಕಾರ್‌ಪೆಂಟರ್‌) ವರೆಗೂ ಸಾಧ್ಯವಾದಷ್ಟು ಕನ್ನಡಿಗರಿಗೆ ಪ್ರೋತ್ಸಾಹ ನೀಡಿ.

9. ನಮ್ಮ ಭವ್ಯ ಇತಿಹಾಸ, ಪರಂಪರೆ, ಚಾರಿತ್ರಿಕ ವ್ಯಕ್ತಿಗಳು, ಸಾಹಿತ್ಯ, ಸಾಹಿತಿಗಳು, ಕಲಾವಿದರು, ಐತಿಹಾಸಿಕ ಸ್ಥಳಗಳ ಬಗ್ಗೆ, ಪ್ರಾಕೃತಿಕ ಸ್ಥಳಗಳ ಬಗ್ಗೆ ಹೆಮ್ಮೆಯಿಂದ ಪರಭಾಷಿಕರಿಗೆ ತಿಳಿಸಿ ಕನ್ನಡದ ಕೀರ್ತಿಯ ಪತಾಕೆಯನ್ನು ಎಲ್ಲೆಡೆ ಹಾರಿಸಿ.

10. ಕೊನೆಯದಾಗಿ ಆದರೆ ಬಹಳ ಮುಖ್ಯವಾದ ಕರ್ತವ್ಯವೆಂದರೆ, ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುತ್ತಿರುವ ಪ್ರಾಮಾಣಿಕ ಕನ್ನಡ ಪರ ಸಂಘಟನೆಗಳಿಗೆ ತಮ್ಮ ತನು, ಮನ, ಧನಗಳಿಂದ ಬೆಂಬಲ ಕೊಡಬೇಕು

ಸಿರಿಗನ್ನಡಂ ಗೆಲ್ಗೆ।।
ಸಿರಿಗನ್ನಡಂ ಬಾಳ್ಗೆ।।

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X