ಬ್ರಾಹ್ಮೀ ಸಿದ್ಧಿ , ನಿಮಗೆ ಸಿದ್ಧಿಸಬೇಕೆ?
;?
ತಾನು ಬೆಳೆಸುವ ಪ್ರತೀ ಸಸ್ಯವೂ ತನಗೆ ಹೆಚ್ಚಿನ ಹಣ ತರಬೇಕು! ಎನ್ನುವ ವ್ಯಾಪಾರೀ ಮನೋಭಾವ ಕೃಷಿಕರಲ್ಲಿದೆ ಎನ್ನುವ ಈ ಓದುಗರು, ನಮ್ಮ ಜನರಿಗೆ ಹಿತ್ತಲಲ್ಲಿರುವ ಅಮೂಲ್ಯ ಗಿಡಗಳತ್ತ ಕನಿಷ್ಠ ಪ್ರಜ್ಞೆ ಇಲ್ಲದಿರುವ ಬಗ್ಗೆ ವಿಷಾದಿಸಿದ್ದಾರೆ. ಬ್ರಾಹ್ಮಿ ಬಗ್ಗೆ ಇತ್ತೀಚೆಗೆ ಮೂಡಿ ಬಂದ ಲೇಖನಕ್ಕೆ ಅವರು ಬರೆದಿರುವ ಖುಷಿ-ಟಿಪ್ಪಣಿಯಲ್ಲೂ ಮಹತ್ವದ ಅಂಶಗಳಿವೆ.
- ಎಸ್. ಮಧುಸೂದನ ಪೇಜತ್ತಾಯ (ಚಿಕ್ಕಮಗಳೂರು ಜಿಲ್ಲೆ, ಬಾಳೆಹೊಳೆ)
[email protected]
ವಿಚಿತ್ರಾನ್ನದ ನೂರ ಐವತ್ತಾರನೇ ಬರಹದಲ್ಲಿ ಬ್ರಾಹ್ಮಿ ಸಸ್ಯದ ಬಗ್ಗೆ ಬಹಳಷ್ಟು ವಿವರ ತಿಳಿಸಿದಕ್ಕೆ ವಂದನೆಗಳು. ಇದುವರೆಗೆ ಗೊತ್ತಿಲ್ಲದ ಹಲವಾರು ವಿಷಯಗಳು ತಿಳಿದವು.
ನನ್ನ ಎಳವೆಯಲ್ಲಿ ‘ರಾಮತೀರ್ಥ ಬ್ರಾಹ್ಮೀ ತೈಲ ’ ಎಂಬ ಕೇಶ ತೈಲ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಭಾರತದಲ್ಲಿ ಇತ್ತೀಚೆಗೆ ಬ್ರಾಹ್ಮಿಸೊಪ್ಪಿನ ಕ್ಯಾಪ್ಸೂಲ್ ತಯಾರಿಸಿ ಮಾರಾಟ ಮಾಡುವ ಪ್ರಯತ್ನಗಳು ನಡೀತಾ ಇವೆ. ಇವನ್ನು ಸೇವಿಸಿದರೆ, ಜ್ಞಾಪಕ ಶಕ್ತಿಯು ವೃದ್ಧಿ ಹೊಂದುವುದು ಎಂದು ಆ ಕಂಪೆನಿಗಳು ಪ್ರಚಾರ ನಡೆಸುತ್ತಿವೆ.
ನಾನು ಒಬ್ಬ ಹಿರಿಯ ಆಯುರ್ವೇದ ಪಂಡಿತರಿಂದ ತಿಳಿದಂತೆ, ಹೆಚ್ಚಿನ ಸಾಧನೆ ಬಯಸುವ ಆಯುರ್ವೇದ ವೈದ್ಯರು ‘ಬ್ರಾಹ್ಮೀ ಸಿದ್ಧಿ ’ ಎಂಬ ಸಿದ್ಧಿಯನ್ನು ಮಾಡಿಕೊಳ್ಳುವ ಪದ್ಧತಿ ಇದೆಯಂತೆ.
ಅವರ ಪ್ರಕಾರ, ಸಾಧಕನು ಬೆಳಗಿನ ನಾಲ್ಕು ಗಂಟೆಯ ಸಮಯಕ್ಕೆ ಹುಟ್ಟುಡುಗೆಯಲ್ಲಿ ಬ್ರಾಹ್ಮಿ ಸಸ್ಯವು ಬೆಳೆದ ಸ್ಥಳಕ್ಕೆ ದೀಪ ಉಪಯೋಗಿಸದೇ ನಡೆದು ಹೋಗಿ, ಒಂದು ಬ್ರಾಹ್ಮಿ ಗಿಡವನ್ನು ಸಮೂಲವಾಗಿ ತನ್ನ ಹಲ್ಲಿನಿಂದಲೇ ಕಿತ್ತು, ಅಗಿದು ನುಂಗಿ, ತನ್ನ ವಾಸಸ್ಥಾನಕ್ಕೆ ವಾಪಸಾಗಿ, ಬೆಳಗು ಆಗುವ ತನಕ ಬ್ರಾಹ್ಮೀ ಜಪವನ್ನು ಮಾಡಬೇಕಂತೆ.
ಈ ವಿಧಿಯನ್ನು ಯಾವ ಅಡಚಣೆ, ಆತಂಕ ಅಥವಾ ಬೆದರಿಕೆಗಳು ಕಂಡು ಬಂದರೂ, ಬಿಡದೇ ನಲ್ವತ್ತೆರಡು ದಿನ ಅನೂಚಾನವಾಗಿ ಪರಿಪಾಲಿಸಿದರೆ, ಆ ವೈದ್ಯನಿಗೆ ‘ಬ್ರಾಹ್ಮೀ ಸಿದ್ಧಿ’ ದೊರೆಯುವುದಂತೆ.
‘ಈ ಸಿದ್ಧಿಯನ್ನು ಪಡೆದ ವೈದ್ಯರು ಅತೀ ಶೀಘ್ರಮತಿಗಳಾಗುತ್ತಾರೆ ಮತ್ತು ಬ್ರಾಹ್ಮಿ ಸಸ್ಯದ ಉಪಯೋಗ ಉಳ್ಳ ಎಲ್ಲಾ ಔಷಧಗಳೂ ಅವರ ಹಸ್ತದಿಂದ ಕೊಡಲ್ಪಟ್ಟಾಗ ಪೂರ್ಣ ಪರಿಣಾಮವನ್ನು ನೀಡುತ್ತವೆ ’ ಎಂದು ಅವರು ಹೇಳಿದ್ದರು.
ಈ ವಿಚಾರದ ಸತ್ಯಾಸತ್ಯತೆ ನನಗೆ ತಿಳಿಯದು. ಆದರೆ, ನನಗೆ ಸದರಿ ವಿಚಾರ ತಿಳಿಸಿದ ಹಿರಿಯ ಆಯುರ್ವೇದ ವೈದ್ಯರು, ‘ಬ್ರಾಹ್ಮೀ ಸಿದ್ಧಿ’ ಮಾಡಿಕೊಂಡಿದ್ದರಂತೆ. ಅವರು ತಮ್ಮ ಹಸ್ತಗುಣಕ್ಕೆ ಹೆಸರುವಾಸಿ ಆಗಿದ್ದರು.
ವಿನೋದ್ ಖಾಡಿಲ್ಕರ್ ಅವರ ‘ಉಳಚ್ಚಿಲ್’ನ ಸಸ್ಯಗಳ ಭಾವ ಚಿತ್ರಗಳು ನಗರವಾಸಿಗಳಿಗೆ ಮಾತ್ರವೇನು? ಇಂದಿನ ಗ್ರಾಮೀಣ ಜನರಿಗೂ ಮುದವನ್ನು ನೀಡುತ್ತಿವೆ.
ಹಳ್ಳಿಗಳಲ್ಲೂ ‘ರೈತ ಜನಾಂಗದವರ ಗಿಡ ಮರ ಹೂವು ಹಣ್ಣುಗಳ ಮೇಲಿನ ವ್ಯಾಮೋಹವು ದಿನೇ ದಿನೇ ಕಡಿಮೆಯಾಗುತ್ತಿದೆ. ತಾನು ಬೆಳೆಸುವ ಪ್ರತೀ ಸಸ್ಯವೂ ತನಗೆ ಹೆಚ್ಚಿನ ಹಣ ತರಬೇಕು! ’ ಎನ್ನುವ ಈ ಕಾಲದ ಕೃಷಿಕರ ವ್ಯಾಪಾರೀ ಮನೊಭಾವವು ಇದಕ್ಕೆ ಕಾರಣ ಎಂಬುದು ಕಹಿ ಸತ್ಯ.
ನಾವು ಖಾಡಿಲ್ಕರ್ ಅವರ ಆಲ್ಬಂನಲ್ಲಿ ನೋಡಿದ ಹೆಚ್ಚಿನ ಸಸ್ಯಗಳು ಹಳ್ಳಿಗಳಲ್ಲೂ ಇಂದು ಅಪರೂಪವಾಗುತ್ತಿವೆ. ಖಾಡಿಲ್ಕರ್ ಅವರಿಗೆ ನಮ್ಮ ಧನ್ಯವಾದ ತಿಳಿಸಿರಿ. ರಿಚಿ ಲಸ್ರಾದೋ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.












Click it and Unblock the Notifications