• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಧಾ ಮೂರ್ತಿ ಬಗ್ಗೆ ಏನಿದು ತಕರಾರು?

By Staff
|

;?

ರವಿಯಣ್ಣ , ನಿನಗೆ ಬೈಯೋದಕ್ಕೆ ಈ ವಾರ ಬೇರೆ ಯಾರೂ ಸಿಗಲಿಲ್ವೇ... ಸುಧಾ ಮೇಡಂನ ಬೈಯೋದಕ್ಕೆ ಮೊದಲು ನನ್ನ ಕೆಲವು ಸಂದೇಹಗಳಿಗೆ ಉತ್ತರ ಕೊಡ್ತೀಯಾ? -ಆರೋಗ್ಯಕರ ಸಮಾಜಕ್ಕಾಗಿ ಒಂದು ಆರೋಗ್ಯಕರ ಪತ್ರ!

  • ಭವಾನಿ ಬಿಜಲಿ, ಬೆಂಗಳೂರು

bijali_bhavani@yahoo.com

ರವಿಯಣ್ಣ,

ಸುಧಾ ಮೇಡಮ್‌ಗೆ ನೀನು ಬರೆದ ಪತ್ರ ಓದಿದೆ. ನೀನು ಹೇಳಿದ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ.

ಆದರೆ ನೀನು ಸುಧಾ ಮೇಡಮ್‌ರನ್ನು ಗುರಿ ಮಾಡಿಕೊಂಡಿದ್ದೇಕೋ ಸರಿ ಬರಲಿಲ್ಲ. ಇದಕ್ಕೆ ಕಾರಣ ನಾನು ಸಾಫ್ಟ್‌ವೇರ್‌ ಇಂಜಿನಿಯರ್‌ನ ಪತ್ನಿಯೆಂದಲ್ಲ, ನಾನೂ ಒಬ್ಬ ಸಾಫ್ಟ್‌ವೇರ್‌ ಇಂಜಿನಿಯರ್‌ ಎಂದಲ್ಲ, ಸುಧಾ ಮೇಡಮ್‌ ಅವರ ಲೇಖನಗಳನ್ನು ಓದಿ ಅರಗಿಸಿಕೊಂಡವಳು ಎಂದಲ್ಲ. ಇದಕ್ಕೆ ಕಾರಣ ನಿನ್ನ ಬೇಸರದ ಮಾತುಗಳಿಗೆ, ಪ್ರಶ್ನೆಗಳಿಗೆ ಸುಧಾ ಮೇಡಮ್‌ಗಿಂತ ಅರ್ಹರಾದವರು ಇನ್ನೂ ಇದ್ದಾರೆಂಬ ನನ್ನ ಭಿನ್ನಾಭಿಪ್ರಾಯ.

ನಾನು ಗುಲ್ಬರ್ಗಾದಲ್ಲಿ ಬೆಳೆದು, ಓದಿದವಳು. ಇದರಿಂದಾಗಿ ಬರಗಾಲವೆಂದರೇನು? ನೀರಿನ ತಾಪತ್ರಯವೆಂದರೇನು? ಧೂಳೆಂದರೇನು? ಕೆಟ್ಟ ರಸ್ತೆಗಳೆಂದರೇನು? ರಸ್ತೆಗಳೇ ಇಲ್ಲದ ಕಾಲೋನಿಗಳೆಂದರೇನು? ಅಂತ ಅನುಭವಿಸಿ ತಿಳಿದಿರುವವಳು. IT ಮಾರುತ ಬರುವ ಮುನ್ನವೂ ಬೆಂಗಳೂರನ್ನು ಕಂಡಿದ್ದೇನೆ, ಈಗಂತೂ IT industryಯಲ್ಲಿ ಇದ್ದು ಕೊಂಡೇ ಬೆಂಗಳೂರನ್ನು ಕಾಣುತ್ತಿದ್ದೇನೆ. ಬೆಂಗಳೂರು ಹಾಳಾಗುತ್ತಿರುವುದನ್ನು ನೋಡುವ ‘ಭಾಗ್ಯ’ವನ್ನೂ ಪಡೆದಿದ್ದೇನೆ, ಜೊತೆಗೆ ಹಾಳಾಗಲು ಬಿಡಬಾರದೆನ್ನುವ ಛಲವನ್ನೂ ಪಡೆದಿದ್ದೇನೆ. ನಿನ್ನ ಲೇಖನಗಳನ್ನು ಓದಿದಾಗ ಛಲಕ್ಕೆ ಇನ್ನಷ್ಟು force ಬರುತ್ತದೆ. ಬೆಂಗಳೂರಿನ ಸದ್ಯದ ಪರಿಸ್ಥಿತಿ(ದುಸ್ಥಿತಿ!) ಬಗ್ಗೆ ನೀನು ಇಷ್ಟೆಲ್ಲಾ ವ್ಯವಸ್ಥಿತವಾಗಿ ಬರೆದಿರುವಾಗ ನಾನು ಹೆಚ್ಚೇನೂ ಹೇಳಬಯಸುವುದಿಲ್ಲ.

Bhavani Bijali, Bangaloreಇನ್ನು ವಿಷಯಕ್ಕೆ ಬರುತ್ತೇನೆ. ಮೊದಲು ನಾವು ಒಂದು ಮಾತನ್ನು ಒಪ್ಪಿಕೊಳ್ಳೋಣ, ಪ್ರಪಂಚದಲ್ಲಿ ಯಾರೂ ಶೇ.100ರಷ್ಟು ಒಳ್ಳೆಯ ವ್ಯಕ್ತಿಗಳಿರುವುದಿಲ್ಲ. ಇದ್ದರೂ ಕೂಡ ಎಲ್ಲರ ದೃಷ್ಠಿಯಲ್ಲಿ ಅವರು ಒಂದೇ ರೀತಿ ಕಾಣುವುದಿಲ್ಲ. ರಾಮನನ್ನು ಸತ್ಪುರುಷ ಎನ್ನುವವರೂ ಉಂಟು, ನಿರ್ದಯಿ ಎನ್ನುವವರೂ ಉಂಟು. ಸದ್ಯಕ್ಕೆ ಸುಧಾ ಮೇಡಮ್‌ನನ್ನು ಯಾವ angleನಿಂದ ನೋಡಿದರೂ ನನಗೆ ಅವರನ್ನು ದೂರುವುದಕ್ಕೆ ಮನಸ್ಸಾಗುತ್ತಿಲ್ಲ. ಒಳ್ಳೆಯ ಮನೆತನದಿಂದ ಬಂದ ವಿದ್ಯಾವಂತೆ, ಭಾರತೀಯ ನಾರಿಯ ಪ್ರತೀಕವೆನಿಸಿಕೊಳ್ಳುವಂತಹ ವ್ಯಕ್ತಿತ್ವ, ಕೀರ್ತಿ ಸಂಪತ್ತು ಗಳಿಸಿಕೊಂಡರೂ ಪಕ್ಕದ ಮನೆ ಆಂಟಿಯ ಇಮೇಜು,

ಇನ್ಫೋಸಿಸ್‌ ಫೌಂಡೇಷನ್‌ ಮೂಲಕ ಸಾಕಷ್ಟು ಸಮಾಜ ಸುಧಾರಣೆ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವವರು. ಈಗಿನ ಪಬ್‌/ಪಾರ್ಟಿಗಳಲ್ಲಿ ಹಣ ಸುರಿಯುವ high society ಹೆಣ್ಣುಮಕ್ಕಳು, ಬಡವರ ರಕ್ತ ಹೀರಿ ಖಜಾನೆ ತುಂಬಿಸಿಕೊಳ್ಳುವ ಕಳ್ಳ ಖದೀಮ ರಾಜಕಾರಣಿಗಳು, ಯಶಸ್ವಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕೆಯಲ್ಲಿ ಹಣಗಳಿಸಿ ಹಾರಿ ಬಂದು ಲಕ್ಷಗಟ್ಟಲೇ ಹಣ ಸುರಿದು ಇಂದಿರಾನಗರದಲ್ಲೋ, ಜಯನಗರದಲ್ಲೋ ಫ್ಲ್ಯಾಟ್‌ ಖರೀದಿಸಿ, ಜುಮ್ಮೆಂದು ಕಾರುಗಳಲ್ಲಿ PVR/ಫೋರಂಗಳ ಟ್ರಿಪ್‌ ಹೊಡೆಯೋದೇ ಮೋಕ್ಷಕ್ಕೆ ಫಾರ್ಮುಲಾ ಎಂದು ತಿಳಿದಿರುವ foolish ಸಾಫ್ಟ್‌ವೇರ್‌ ಪ್ರೊಫೆಶನಲ್‌ಗಳೂ, ಇಂಥವರನ್ನೆಲ್ಲಾ ನೋಡಿದಾಗ ಸುಧಾ ಮೇಡಂ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ, ಸಾಕಷ್ಟು ಮಾಡಿದ್ದಾರೆ ಕೂಡಾ, ಈ ಸಂದರ್ಭದಲ್ಲಿ ಅವರನ್ನು ದೂಷಿಸುವುದು ತಪ್ಪು.

ವಿಪ್ರೋದ ಅಜಿಮ್‌ ಪ್ರೇಮ್‌ ಜೀ, ದೀಲಿಪ್‌ ರಂಜೇಕರ್‌ ಪ್ರಾಥಮಿಕ ಶಿಕ್ಷಣದಲ್ಲಿ ಸೈಲೆಂಟಾಗಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಇನ್ನು IT ಮಾರುತದಿಂದ ಬೆಂಗಳೂರಿಗೆ ಆಗಿರುವ ಹಾನಿ. ಬೆಂಗಳೂರಿಗೆ ಸಿಗಬೇಕಾದ ಸವಲತ್ತನ್ನು ITಗೆ ಸುರಿದು, ಬೆಂಗಳೂರಿನ ಇತರೆ ಭಾಗಗಳನ್ನು ನಿರ್ಲಕ್ಷಿಸಬೇಕೆಂದೂ, ನಮ್ಮ ಕನ್ನಡದ ಮಕ್ಕಳನ್ನು ಕಡಿಮೆ ಕೂಲಿಗೆ ದುಡಿಸಿಕೊಂಡು ಹಣ ಗಳಿಸಬೇಕೆಂದೂ, ಪಾಶ್ಚಾತ್ಯ ಸಂಸ್ಕೃತಿಯ ಪಾಪ-ಅನಿಷ್ಠಗಳನ್ನು ತಂದು ಇಲ್ಲಿ ಸುರಿಯಬೇಕೆಂದೂ ಉದ್ದೇಶ ಇಟ್ಟುಕೊಂಡು ಸುಧಾ ಮೇಡಂ ಮತ್ತು ಅವರ ಮನೆಯವರು ಇನ್ಫೋಸಿಸ್‌ ಕಟ್ಟಿದರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ತಾನೇ? ಅವರು ಒಂದು ಒಳ್ಳೆಯ ಉದ್ದೇಶವಿಟ್ಟುಕೊಂಡು, IT ಕ್ರಾಂತಿಯನ್ನು ಪ್ರಾರಂಭಿಸಲಿಕ್ಕೆಂದೇ ಇನ್ಫೋಸಿಸ್‌ ಕಟ್ಟಿದರು. ಇನ್ಫೋಸಿಸ್‌ನ ಯಶಸ್ಸು ಬೇರೇ ಕಂಪನಿಗಳಿಗೂ ಕರೆ ಕೊಟ್ಟಿತು. ಹಣ ಮತ್ತು ವಿದೇಶ ಪ್ರವಾಸದ ರುಚಿ ಕಂಡ ಮೇಲೆ IT ಕ್ಷೇತ್ರಕ್ಕೆ ಎಲ್ಲಾಕಡೆಯಿಂದ ಯದ್ವಾತದ್ವಾ ಪ್ರೋತ್ಸಾಹ ಸಿಕ್ಕಿತು.

ಸರ್ವೀಸ್‌ ಪೂರಾ ರೂ.20,000ವನ್ನು ಒಟ್ಟಿಗೆ ಕಾಣದ ಅಪ್ಪ ಪ್ರತಿ ತಿಂಗಳು ಮಗ ರೂ.40, 000 ತಂದುಕೊಟ್ಟರೆ ಇನ್ನೇನು ಮತ್ತೆ? ಎಲ್ಲರೂ BE ಮಾಡೋರೇ, ಬೆಂಗಳೂರಿಗೆ ಬಂದು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗೋರೇ. ಇನ್ಫೋಸಿಸ್‌ ಯಶಸ್ಸಿನ ನಂತರ ಕಾಲಕ್ರಮೇಣ ಬೇರೆ ಬೇರೆ ಕಂಪನಿಗಳು ಬಂದು ಪರಿಸ್ಥಿತಿ ಅದ್ವಾನವಾಯಿತು. ಬೆಂಗಳೂರಿನಲ್ಲಿ ಸಕಲ ಸೌಕರ್ಯ, ವ್ಯವಸ್ಥೆಗಳನ್ನು ಹೆಚ್ಚಿಸದೇ ಲಂಗು ಲಗಾಮಿಲ್ಲದೆ ಅನೇಕ ಕಂಪನಿಗಳಿಗೆ grant ಕೊಟ್ಟು ಸರ್ಕಾರ ಕೂಡಾ ತಪ್ಪು ಮಾಡಿತು. ಅತಿ ಶೀಘ್ರದಲ್ಲಿ ಅತಿ ಹೆಚ್ಚು ಹಣ ಸಿಗುವ ಕೆಲಸವಿರುವಾಗ ಕಡಿಮೆ ಕೂಲಿಗೆ ಯಾವನು ಚಾಕರಿ ಮಾಡುತ್ತಾನೆ? ಅಮೆರಿಕದ ಮುಖ ಇಲ್ಲದ ಕ್ಲೈಂಟಿನಿಂದ ಬೈಸಿ(ಉಗ್ಗಿಸಿ)ಕೊಂಡರೇನಂತೆ, electronics & communicationsನಲ್ಲಿ BE ಪಾಸ್‌ ಮಾಡಿ ಯಾವುದೋ Silly ಬ್ಯಾಂಕ್‌ ಅಪ್ಲಿಕೇಷನ್‌ ಸಾಫ್ಟ್‌ವೇರ್‌ ಬರೆಯುವ ಕೆಲಸಕ್ಕಾಗಿ ಕಡಿಮೆ ಕೂಲಿಗೆ ಅಮೆರಿಕೆಯಲ್ಲಿ ದುಡಿದರೇನಂತೆ, ಕೇವಲ ಇನ್ಫೋಸಿಸ್‌ನ ಎಂಪ್ಲಾಯಿಸ್‌ ಆಗಬೇಕೆಂದು ತನ್ನೆಲ್ಲ ಟ್ಯಾಲೆಂಟ್‌ ಮಾರಿಕೊಂಡು ಯಾವುದೋ ಅನಾಸಕ್ತಿಕರ, ಚಾಲೇಜಿಂಗ್‌ ಅಲ್ಲದ ಕೆಲಸ ಮಾಡಿದರೇನಂತೆ ಹಣ ಬರುತ್ತದಲ್ಲಾ ಅಷ್ಟು ಸಾಕು, ಬೆಂಗಳೂರಿನ ಪಾಶ್‌ flat ಒಂದರ ಒಡೆಯರಾದೆವಲ್ಲ ಜೀವನ ಪಾವನವಾಯಿತು ಎನ್ನುವುದು ಇಂದಿನ ಯುವಕ ಯುವತಿಯರ ಮೆಂಟಾಲಿಟಿ.

ಹಣಕ್ಕಾಗಿ, ಯಾವುದೋ ಮುಖ ಮೂತಿ ಕಾಣದ ಕ್ಲೈಂಟಿಗಾಗಿ ಸ್ವಾಭಿಮಾನವನ್ನು ಮಾರಿಕೊಳ್ಳೋದು ಇಂದಿನ ಸಾಫ್ಟ್‌ವೇರ್‌/ಕಾಲ್‌ಸೆಂಟರ್‌ ಜನರಲ್ಲಿ ಸರ್ವೇಸಾಧಾರಣವಾಗಿ ಕಾಣಬರುವ ಪ್ರವೃತ್ತಿ (ಪರಿಸ್ಥಿತಿ). ನನ್ನ ಮುಂದೇ ಓದಿಕೊಂಡಿದ್ದ, ನನ್ನ ಬಳಿ ಡೌಟ್‌ ಕೇಳಲು ಬರುತ್ತಿದ್ದ, ನನ್ನ ಅಡ್ಮೈರ್‌ ಮಾಡಿಕೊಂಡಿದ್ದ ನನ್ನ ಇಂಜಿನಿಯರಿಂಗ್‌ ಕಾಲೇಜಿನ ಜ್ಯೂನಿಯರೊಬ್ಬಳು ತಾನು ಇನ್ಫೋಸಿಸ್‌ ಸೇರಿದ ಮೇಲೊಮ್ಮೆ ಭೇಟಿಯಾಗಿದ್ದಳು. ಸಹಜವಾಗಿ ಗುಲ್ಬರ್ಗಾದ ಭಾಷೆಯಲ್ಲಿ ಮಾತನಾಡದೆ, ಬೆಂಗಳೂರು ಭಾಷೆಯಲ್ಲಿ ಅಂದರೆ ಅದೇ ಅತಿ ಹೆಚ್ಚು ಇಂಗ್ಲಿಷ್‌ ಮತ್ತೆ ಮಧ್ಯೆ ಮಧ್ಯೆ ಕನ್ನಡ ಪದಗಳನ್ನು ಬಳಸಿ ಮಾತನಾಡಿ, 5 ನಿಮಿಷಕ್ಕೆ ಮುಂಚೆ ಸಂಭಾಷಣೆ ಮುಗಿಸಿ ಮುಂದೆ ಹೋದಳು. ಸಾಫ್ಟ್‌ವೇರ್‌ ನೌಕರರು ಹೀಗೇನೇ, ಸಾಫ್ಟ್‌ವೇರ್‌ ಗಂಡುಗಳ ವರದಕ್ಷಿಣೆ ರೇಟೂ ಜಾಸ್ತೀನೇ ಅಂತ ಕೇಳಿದ್ದೆ. ಇದಕ್ಕೆಲ್ಲಾ ಸುಧಾ ಮೇಡಂ ಜವಾಬ್ದಾರಿ ಎಂದು ನನಗನ್ನಿಸಲ್ಲ. ವಯಸ್ಸು 25 ದಾಟುವ ಮುನ್ನವೇ ಸಂಬಳ 25 ಸಾವಿರ ದಾಟಿರುವ ಈ ಸಾಫ್ಟ್‌ವೇರ್‌ ಯುವಕ/ಯುವತಿಯರ ಮನೋಭಾವವೇ ಹಾಗೆ ಬದಲಾಗಿರುತ್ತದೆ. ಬೆಂಗಳೂರಿನಲ್ಲಿ ITಕಂಪನಿಗಳು ಶೀಘ್ರವಾಗಿ ಯಶಸ್ಸಿನ ದಿಗಂತವನ್ನು ತಲುಪಿದವು. ಇದರಿಂದಾಗಿ ರಾಜ್ಯದಲ್ಲಿ ಏನೇ ಪ್ರಕೃತಿ ವಿಕೋಪವಾದರೂ IT ಕಂಪನಿಗಳ ಹಣಸಹಾಯ ಕುರಿತು ನಿರೀಕ್ಷೆ ಹೆಚ್ಚಾಗಿ ಬಿಡುತ್ತದೆ. IT ಕಂಪನಿ ಮಾಲೀಕರನ್ನೇ ಮೊದಲು ಗುರಿ ಮಾಡಿ ಬಿಡುತ್ತಾರೆ. ಆದರೆ ನೆನಪಿರಲಿ ಆದಾಯ ತೆರಿಗೆ ಕಟ್ಟುವುದರಲ್ಲಿ IT ಕ್ಷೇತ್ರದವರೇ ಮುಂದು ಎಂದು. ನನ್ನ ತಂದೆ ಇಂಜಿನಿಯರಿಂಗ್‌ ಕಾಲೇಜೊಂದರಲ್ಲಿ ಪ್ರಾಧ್ಯಾಪಕರು, ಅವರ ಸಂಬಳಕ್ಕಿಂತ ನನ್ನ income tax ಜಾಸ್ತಿ!

ರವಿಯಣ್ಣ, ಸ್ವಲ್ಪ ವಿಚಾರ ಮಾಡು. IT ಕಂಪನಿಗಳಿಂದ, ಜನ ಬೆಂಗಳೂರಿನಲ್ಲಿ ಸ್ವಂತ ಮನೆ ಕಾಣುವಂತಾಯಿತು, ವಿದೇಶ ನೋಡುವಂತಾಯಿತು, ಎಷ್ಟೋ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳಲು ಅವಕಾಶಯಾಯಿತು, ಬೆಂಗಳೂರು ಎನ್ನುವುದು ಕೊಬ್ಬಿದ ಅಮೆರಿಕನ್ನರಿಗೆ ಸಿಂಹ ಸ್ವಪ್ನವಾಯಿತು(outsourcingನಿಂದಾಗಿ). ದುಷ್ಪರಿಣಾಮಗಳೂ ಇವೆ, ಇರಲಿ. ಯಾವುದೇ ಒಂದು ಮಹತ್ತರ ಯೋಜನೆಗೆ ಸಣ್ಣ ಪುಟ್ಟ ಸೈಡ್‌ ಎಫೆಕ್ಟ್ಸ್‌ ಇರೋದೇ ಅಲ್ಲವೇ? ಈಗಾಗಲೇ ಬೆಂಗಳೂರಿನ IT job opportunities ಬೆಂಗಳೂರಿನಿಂದ ಹೊರಗೆ ನಡೆದಿವೆ. ಹಿಂದೆಲ್ಲ ಅಟ್ಟಹಾಸ ಮಾಡಿದವರು ಕೆಳಗೆ ಬರುವಂತಾಗಿದೆ. ಬೆಲೆಗಳೂ ಕೂಡ stabilize ಆಗುವ ಹಂತಕ್ಕೆ ಬಂದಿವೆ. ಸ್ವಲ್ಪ ತಾಳ್ಮೆಯಿಂದ ಕಾದು ನೋಡಿದರೆ ಮತ್ತೆ ಎಲ್ಲಾ ಸುಧಾರಿಸುತ್ತವೆ. ಜಲದ ಮೇಲಿನ ಬಬುಳಿಯಂತೆ ಈ IT Industryಯ ಯಶಸ್ಸು, ಒಡೆದು ಹೋಗುವುದೊಂದು ದಿನ(ಸುಧಾರಿಸಿಕೊಳ್ಳದಿದ್ದರೆ).

ಈಗ ಸುಧಾ ಮೇಡಂನನ್ನು ಮರೆತು ಸ್ವಲ್ಪ ನಮ್ಮ ಮುಖ್ಯಮಂತ್ರಿ ಧರ್ಮೂ ದಾದಾ ಬಗ್ಗೆ ಯೋಚಿಸು. ಅವರಿಂದ ಆಗಿರುವ ಒಂದೇ ಒಂದು ಒಳ್ಳೆಯ ಬದಲಾವಣೆಯನ್ನು ಹೇಳಣ್ಣ. ಸುಧಾ ಮೇಡಂನನ್ನು ನೆನಸಿಕೊಂಡಾಗ ಬರುವ ವಿಚಾರಗಳನ್ನೂ ಧರ್ಮೂ ದಾದಾ, ಖರ್ಗೆ, ಖಂಡ್ರೆ, ಖಮರುಲ್‌ ಇಸ್ಲಾಂ, ದೇವೆಗೌಡ ಇಂಥವರನ್ನು ನೆನಸಿಕೊಂಡಾಗ ಬರುವ ವಿಚಾರಗಳನ್ನೂ ಅನಲೈಸ್‌ ಮಾಡು. ಇಂಥವರಿಂದ ಏನಾದರೂ ಒಳ್ಳೆಯದಾಗಿದೆಯೆ ನಮ್ಮ ರಾಜ್ಯಕ್ಕೆ? ರಾಜ್ಯವನ್ನು ಬಿಡು, ಧರ್ಮೂ ದಾದಾನ ಊರಾದ ಗುಲ್ಬರ್ಗಾಕ್ಕೆ ಎಷ್ಟು ಲಾಭವಾಗಿದೆ? ಗುಲ್ಬರ್ಗಾ ಬರ ಬರುತ್ತಾ ಹಾಳಾಗುತ್ತಿದೆಯೇ ಹೊರತು ಉದ್ಧಾರವೇನೂ ಆಗುತ್ತಿಲ್ಲ.ನೀರಿನ ಸಮಸ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯೇನಾಗಿಲ್ಲ. ಧರಂನಂಥವರಿಂದ ಯಾವುದಾದರೂ ಒಂದು ಒಳ್ಳೆಯ ಗುಣಮಟ್ಟದ ಶಾಲೆ/ಕಾಲೇಜು ಗುಲ್ಬರ್ಗಾದಲ್ಲಿ ಸ್ಥಾಪಿತವಾಗಿದೆಯೇ? ರಸ್ತೆಗಳು ಉದ್ಧಾರವಾಗಿವೆಯೇ? haunted houseನಂತೆ ಕಾಣುವ ಸರ್ಕಾರಿ ಶಾಲೆಯ ಕಟ್ಟಡಗಳು, ವೈಕುಂಠಕ್ಕೆ ದಾರಿುದೆನ್ನುವಂಥ ರಸ್ತೆಗಳು, ಟಾರ್‌ ರಸ್ತೆಗಳಿಲ್ಲದ ಕಾರಣ ಮಂಜಿನಂತೆ ಸದಾ ಮುಸುಕಿರುವ ಧೂಳು, ನಿರುದ್ಯೋಗಿಗಳು, ನಿರುಪಯುಕ್ತರು ನಿದ್ರೆ ಮಾಡುವ ತಾಣವಾಗಿರುವ ರೈಲ್ವೇ ಸ್ಟೇಷನ್‌, ಹನುಮಂತನ ಬಾಲದಂತೆ ನಲ್ಲಿಗಳ ಕೆಳಗಿನ ಕೊಡಗಳ ಸಾಲು, ಮಳೆುಲ್ಲದೆ ಬೇಸಾಯ ನಿಂತು ಹೋಗಿ ಬವಣೆ ಅನುಭವಿಸುತ್ತಿರುವ ಒಕ್ಕಲಿಗರು. ಇವು ಗುಲ್ಬರ್ಗಾದ ಸಮಸ್ಯೆಗಳಲ್ಲಿ ಕೆಲವು.

ನಾವೆಲ್ಲ ಧರ್ಮೂ ದಾದಾ, ಖರ್ಗೆ, ಖಂಡ್ರೆ, ಖಮರುಲ್‌ ಇಸ್ಲಾಂ ಇಂಥವರ ಕಾರನಾಮೆಗಳ ಕಥೆಗಳನ್ನು ಕೇಳಿ(ನೋಡಿ)ಕೊಂಡೇ ಬೆಳೆದವರು. ಗುಲ್ಬರ್ಗಾದ ಸಂಗಮೇಶ್ವರ ನಗರದಲ್ಲಿನ ನೂತನ ವಿದ್ಯಾಲಯ ಕಾಲೇಜಿನ ಎದುರಿಗಿರುವ ಧರ್ಮೂ ದಾದಾನ ಬಂಗಲೆಯ ವೈಭವವನ್ನು ಕಂಡವರು ನಾವು. ಇಂಥ ಗೋಮುಖ ವ್ಯಾಘ್ರಗಳಿಂದ ಒಂದಾದರೂ ಉಪಕಾರವಾಯಿತೇ ಗುಲ್ಬರ್ಗಾಕ್ಕೆ? ಪ್ರಸ್ತುತ ಗುಲ್ಬರ್ಗಾದಲ್ಲಿ ಇಷ್ಟೆಲ್ಲ ಕಷ್ಟಗಳಿದ್ದರೂ, ಗುಲ್ಬರ್ಗಾದ ಹಳ್ಳಿಗಳು ಇನ್ನೂ ನರಕ ಸದೃಶ ಪರಿಸ್ಥಿತಿಯಲ್ಲಿ ಇದ್ದರೂ ಮೊನ್ನೆ ಧರ್ಮೂ ದಾದಾ ಮಾಡಿದ್ದೇನು? ಅದ್ದೂರಿಯಾಗಿ ಮಗನ ಮದುವೆ! ತನ್ನೂರಿನ ಜನರು, ಆ ಬಡ ಒಕ್ಕಲಿಗರು ಬೆವರು/ರಕ್ತ ಸುರಿಸಿ ಬೆಳೆದ ಜೋಳದ ರೊಟ್ಟಿ ತಿಂದು ಆನೆಯಗಲದ ಮೈಬೆಳಸಿಕೊಂಡಿರುವ ಧರಂ 70,000 ಸಾವಿರ ಜನರ ಸಮ್ಮುಖದಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿ, ನಾಲ್ಕಕ್ಷರ ಓದಿದ ಕಳೆ ಕೂಡಾ ಇಲ್ಲದ so called ಡಾಕ್ಟರ್‌ ಆಗಿರುವ ಮಗನ ಮದುವೆ ಮಾಡಿದರು. ಬೇಕಿತ್ತಾ ಇದು? ಬಡಜನರ ಬವಣೆಗೆ ಮನ ಮಿಡಿಯುವ ಮಾನವನಾಗಿದ್ದರೆ ಈ ಮುಖ್ಯಮಂತ್ರಿ ಹೀಗೆಲ್ಲ ಮಾಡುತ್ತಿರಲಿಲ್ಲ. 70,000 ಹೊಟ್ಟೆ ತುಂಬಿದ, ಹೊಟ್ಟೆ ಬಂದಿರುವ ಜನರು ಬಂದು ಕುಡಿದು, ತಿಂದು, ತೇಗಿದುದರಿಂದ ಯಾರ ಜೀವನವೇನೂ ಬದಲಾಗಲಿಲ್ಲ. ಇದೇ ಹಣವನ್ನು ಹಳ್ಳಿಗಳ ಪರಿಸ್ಥಿತಿ ಸುಧಾರಿಸಲು ಮತ್ತು ನೆರೆಹಾವಳಿ ಸಂತ್ರಸ್ತರಿಗಾಗಿ ಉಪಯೋಗಿಸಿದ್ದರೆ ಧರಂ ಸಿಂಗ್‌ ತಮ್ಮ ಹೆಸರಿಗೂ, ಹೆಸರಿಟ್ಟ ಹೆತ್ತವರಿಗೂ justice ಮಾಡುತ್ತಿದ್ದರು.

ಇದರ ಮೇಲೆ ಪತ್ರಿಕೆಗಳಲ್ಲಿ ಈ ಮದುವೆ ಫ್ರಂಟ್‌ ಪೇಜ್‌ ನ್ಯೂಸ್‌. ಉತ್ತರ ಕರ್ನಾಟಕದ ಈ ಭಾಗದಲ್ಲಿ ನಡೆದ ಅತ್ಯಂತ ಸಂಭ್ರಮದ ಮದುವೆಯೆಂಬ ದಾಖಲೆ ಬೇರೇ ಇದಕ್ಕೆ. ಇದೂ ಒಂದು ದಾಖಲೇನಾ? ಅದೂ ಇಂಥ ಪರಿಸ್ಥಿತಿಯಲ್ಲಿ? ಸೊಣಕಲು ಮೈಯ ಸೊಸೆಯ ಮೈ ಮೇಲಿನ ಮಣಭಾರದ ಆಭರಣ, ಎಮ್ಮೆಯಗಲದ ಧರ್ಮಪತ್ನಿಯ ಮೈ ಮೇಲಿನ ಬಂಗಾರ, ಅಲ್ಲಿ ನೆರೆದಿದ್ದ ಇದೇ ಕ್ಯಾಟೆಗೆರಿಯ ಹೆಂಗಸರ ಮೈ ಮೇಲಿನ ಬಂಗಾರ ಎಲ್ಲಾ ಸೇರಿಸಿ ಮಾರಿದರೆ ನೆರೆ ಹಾವಳಿಯ ಪ್ರತಿಯಾಬ್ಬ ಪೀಡಿತನಿಗೂ ಮನೆ ಕಟ್ಟಿ ಕೊಡಬಹುದಿತ್ತೇನೋ? ಅಲ್ಟಿಮೇಟಾಗಿ ಆರೇಳು ಗ್ರಾಂ ಬಂಗಾರದ ತಾಳಿ ಕಟ್ಟಲು ಇಷ್ಟೆಲ್ಲ ವ್ಯಯ ಮಾಡ ಬೇಕಿತ್ತ? ಇದಕ್ಕೆಲ್ಲ ಹಣ ಅವರಪ್ಪ ಕೊಟ್ಟಿದ್ದು ಅಂತ ತಿಳಿದಿಯಾ? ಬಡಬಗ್ಗರ ಅನ್ನ (ಗುಲ್ಬರ್ಗಾದವರಾದ್ದರಿಂದ ಜೋಳದ ರೊಟ್ಟಿ) ಕದ್ದೇ ಖದೀಮನಿಗೆ ಹೊಟ್ಟೆ ಬಂದದ್ದು, ಮೈ ಪಾಪದ ಉಗ್ರಾಣವಾಗಿದ್ದು. ಇದರ ಬದಲು ತನ್ನ ಜೇಬಿನಿಂದ ನೆರೆ ಹಾವಳಿ ಪೀಡಿತರಿಗೆ ನೆರವು ಮಾಡಿ ಸಿಂಪಲ್‌ ಆಗಿ ಮಗನ ಮದುವೆ ಮಾಡಿದ್ದರೆ ಇತಿಹಾಸದಲ್ಲೇ ಮಗನ ಮದುವೆಯನ್ನು ಸಿಂಪಲ್ಲಾಗಿ ಮಾಡಿದ ಮುಖ್ಯಮಂತ್ರಿಯೆಂಬ ಗಿನ್ನಿಸ್‌ ದಾಖಲೆಯೂ, ಒಕ್ಕಲಿಗರ ಅಶೀರ್ವಾದ ಜನ್ಮ ಜನ್ಮಾಂತರಗಳಿಗೂ ದೊರಕುತ್ತಿತ್ತು. ಇದು ಒಂದು ಚಿಕ್ಕ ಉದಾಹರಣೆ. ಇಂಥವರನ್ನೆಲ್ಲ ಬಿಟ್ಟು ... ಹೋಗೀ ಹೋಗೀ ಸುಧಾ ಮೇಡಂ ಗೆ ಪತ್ರ ಬರೆದುದ್ದನ್ನು ನೋಡಿ ನನಗೆ ಬೇಜಾರಾಯಿತಣ್ಣ.

ರವಿ ಪತ್ರದ ಪೂರ್ಣ ಪಾಠ :

ಇನ್‌ಫೋಸಿಸ್‌ನ ಹೆಣ್ಣುಮಗಳು ಸುಧಾಮೂರ್ತಿ ಅವರಿಗೆ

ಮುಖಪುಟ / ಓದುಗರ ಓಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more