ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಂದುವರೆಯಲಿ!

ಇಂಗ್ಲಿಷ್‌ ಮಾಧ್ಯಮದಿಂದ ಮಕ್ಕಳಲ್ಲಿ ಕನ್ನಡದ ಪ್ರೇಮ ಕಡಿಮೆಯಾಗುವ ಭೀತಿ!

ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲಿ ಅಲ್ಲಿನ ಜನಗಳು ಮತ್ತು ಸರ್ಕಾರ ಯಾವಾಗಲೂ ಯಾವ ಸರ್ಕಾರ ಬಂದರೂ ತಮ್ಮ ಭಾಷೆಯ ಬಗ್ಗೆ ಉದಾಸೀನ ಮಾಡದೇ ಆ ಭಾಷೆಯು ಬೆಳೆಯುವಂತೆ ನೋಡಿಕೊಳ್ಳುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿ ನಮ್ಮ ಜನಗಳು(ಕೆಲವರನ್ನು ಬಿಟ್ಟು) ಮತ್ತು ಸರ್ಕಾರಗಳು ಯಾವಾಗಲೂ ನಿರಾಸಕ್ತಿ ತೋರುವುದು ಸರ್ವೇ ಸಾಮಾನ್ಯವಾಗಿದೆ. ಕನ್ನಡ ನಮ್ಮ ಕರ್ನಾಟಕದ ಮಾತೃಭಾಷೆ. ಅದನ್ನು ಉಳಿಸಿ ಬೆಳೆಸುವುದು ಈ ರಾಜ್ಯದ ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಮಾತೃಭಾಷೆ ಕನ್ನಡದ ಏಳಿಗೆ ಕಷ್ಟವೆನಿಸುತ್ತದೆ.

ನಮ್ಮ ಸಾಹಿತಿಗಳು ಮತ್ತು ಕನ್ನಡ ಪರ ಸಂಘ ಸಂಸ್ಥೆಗಳು ಮಾತ್ರ ನಿರಂತರವಾಗಿ ಹೋರಾಡುತ್ತಿದ್ದಾರೆ. ಇವರ ಬಲವಂತಕ್ಕೆ ಸರ್ಕಾರ ಕೆಲವೊಮ್ಮೆ ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತದೆ. ಇದು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಆಗುತ್ತಿರುವ ಅನ್ಯಾಯ ಎಂದು ಹೇಳಿದರೆ ತಪ್ಪಾಗಲಾರದು.

ಈಗ ಮಾತೃಭಾಷೆಯಲ್ಲಿ ಶಿಕ್ಷಣದ ವಿಚಾರಕ್ಕೆ ಬರೋಣ. ಸುಮಾರು 15 ವರುಷಗಳ ಹಿಂದೆ ಇದ್ದ ಹಾಗೆ ಎರಡನೇ ಭಾಷೆ ಮತ್ತು ಮೂರನೇ ಭಾಷೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭಾಷೆ ಇದ್ದರೆ ಪರವಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ (ಮುಖ್ಯವಾಗಿ ಬೆಂಗಳೂರಿನಲ್ಲಿ ) ಇಂಗ್ಲಿಷ್‌ ಮಾಧ್ಯಮ ಶಾಲೆಗಳೇ ಹೆಚ್ಚಾಗಿವೆ. ಎಲ್ಲರೂ ಪ್ರಾರಂಭದಿಂದಲೇ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಮಕ್ಕಳಿಗೆ ಕನ್ನಡದ ಮೇಲಿನ ಪ್ರೀತಿ ಸಹಜವಾಗಿಯೇ ಕಡಿಮೆಯಾಗುತ್ತದೆ.

ನಾವು ಜನರಿಗೆ ಮತ್ತು ಶಾಲಾ ಸಂಸ್ಥೆಗಳಿಗೆ ಅವರ ಇಷ್ಟ ಬಂದ ಹಾಗೆ ಶಿಕ್ಷಣ ಮಾಧ್ಯಮಗಳನ್ನು ರೂಪಿಸಲು ಬಿಟ್ಟರೆ ಬಹು ಪಾಲು ಎಲ್ಲರೂ ಇಂಗ್ಲಿಷ್‌ ಮಾಧ್ಯಮಕ್ಕೆ ಮೊರೆಹೋಗುತ್ತಾರೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಬಲವಂತವಾಗಿ ಸರ್ಕಾರ ಸುತ್ತೋಲೆ ಹೊರಡಿಸಿ ಏಳನೇ ತರಗತಿಯವರೆಗೆ ಕರ್ನಾಟಕದಲ್ಲಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣಸಂಸ್ಥೆಗಳಲ್ಲಿ ಏಕರೂಪವಾಗಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿದರೆ ಎಲ್ಲರೂ ಕನ್ನಡವನ್ನು ಕಲಿಯುತ್ತಾರೆ ಮತ್ತು ಕನ್ನಡದ ಬೆಳವಣಿಗೆಗೆ ಸಹಾಯವಾಗುತ್ತದೆ.

ಐದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಓದಬಹುದು. ಎಂಟನೇ ತರಗತಿಯಿಂದ ಇಂಗ್ಲಿಷ್‌ ಮೀಡಿಯಂ ಅಥವಾ ಕನ್ನಡ ಮಾಧ್ಯಮ ತೆಗೆದುಕೊಳ್ಳಬಹುದು. ಸುಮಾರು ಎಪ್ಪತ್ತು ಎಂಬತ್ತು ದಶಕಗಳವರೆಗೆ ಬಹುಪಾಲು ಎಲ್ಲಾ ಶಾಲೆಗಳಲ್ಲಿ ಇದೇ ರೀತಿ ಇತ್ತು. ಆಗ ಓದಿದ ಅನೇಕ ವಿದ್ಯಾರ್ಥಿಗಳು ( ಉದಾಹರಣೆ : ಯು.ಆರ್‌. ರಾವ್‌, ರಾಜಾರಾಮಣ್ಣ, ವಿಶ್ವೇಶ್ವರಯ್ಯ, ಬಿ.ಡಿ. ಜತ್ತಿ, ನಾರಾಯಣ ಮೂರ್ತಿ) ವಿಜ್ಞಾನಿಗಳೂ, ಸಂಸ್ಥೆಗಳ ಮುಖ್ಯಸ್ಥರೂ, ಪ್ರಭಾವಿಶಾಲಿಗಳೂ ಆಗಲಿಲ್ಲವೇ. ಏಳನೇ ತರಗತಿಯವರೆಗೆ ಕನ್ನಡದಲ್ಲಿ ಕಲಿತು ನಂತರ ಇಂಗ್ಲಿಷಿನಲ್ಲಿ ಓದಿದರೆ ಎರಡೂ ಭಾಷೆಗಳಲ್ಲೂ ಪಾಂಡಿತ್ಯ ಸಾಧಿಸಬಹುದು.

ಹೀಗೆ ಸರ್ಕಾರ ಬಲವಂತ ಮಾಡದಿದ್ದರೆ ಕನ್ನಡದ ಏಳಿಗೆಗೆ ಖಂಡಿತ ತೊಂದರೆಯಾಗುತ್ತದೆ. ಕರ್ನಾಟಕ ಸರ್ಕಾರದ ಮೆದು ಧೋರಣೆಯಿಂದಲೇ ಇಂದು ಕನ್ನಡಕ್ಕೆ ಈ ಸ್ಥಿತಿ ಬಂದಿದೆ. ಜನರೂ ಸಹ ಮತ ಚಲಾಯಿಸುವಾಗ ಕನ್ನಡ ಪರ ಕೆಲಸ ಮಾಡುವವರಿಗೇ ಮತ ಚಲಾಯಿಸಬೇಕು ಮತ್ತು ಅವರಿಂದ ಈ ಸಂಬಂಧ ವಚನ ಪಡೆಯಬೇಕು. ಹೀಗೆ ಮಾಡಿದರೆ ಕನ್ನಡ ಉಳಿಯುತ್ತದೆ.

ಕನ್ನಡ ಜನರೂ ಮತ್ತು ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+