Explained: ಬೆನ್ನಿಗೆ ಚೂರಿ ಹಾಕಿದ ಎನ್‌ಡಿಎ ಜೊತೆ ಸೇರುವುದಿಲ್ಲ ಅಕಾಲಿದಳ
ಚಂಡೀಗಢ, ನವೆಂಬರ್ 27: ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆಯಲ್ಲಿ ಕಾಂಗ್ರೆಸ್ ಒಡತೆ ಮನೆಯಾಗಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಆಮ್ ಆದ್ಮಿ ಪಕ್ಷ ಮತದಾರರಿಗೆ ಭರವಸೆಗಳ ಮಹಾಪೂರವನ್ನು ಹರಿಸುತ್ತಿದೆ. ಇದರ ಮಧ್ಯೆ ಹೊಸ ಪಕ್ಷ ಕಟ್ಟಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಗ್ಗೆ ಬಿಜೆಪಿ ಯಾವ ನಿಲುವು ತಾಳಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಬೆಳವಣಿಗೆಗಳಿಂದ ಶಿರೋಮಣಿ ಅಕಾಲಿ ದಳದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದಕ್ಕೆ ಪಕ್ಷದ ನಾಯಕ ಸುಖ್ಬೀರ್ ಬಾದಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಭಜಿತ ಕಾಂಗ್ರೆಸ್ ಮತ್ತು ದುರ್ಬಲ ಆಪ್ ನಿಂದಾಗಿ ತಮ್ಮ ಪಕ್ಷಕ್ಕೆ ಲಾಭವಾಗಲಿದೆ ಎಂದಿದ್ದಾರೆ.
ಕಳೆದ ವರ್ಷ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮೈತ್ರಿಕೂಟದಿಂದ ಹೊರ ನಡೆದಿರುವ ಶಿರೋಮಣಿ ಅಕಾಲಿ ದಳವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ಕ್ಕೆ ಹಿಂತಿರುಗುವುದಿಲ್ಲ ಎಂದು ಸುಖ್ಬೀರ್ ಬಾದಲ್ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶದಲ್ಲಿ ಅವರು ಚುನಾವಣೆ ಮತ್ತು ಮುಂದಿನ ರಾಜಕೀಯ ನಡೆಯ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.
ಶಿರೋಮಣಿ ಅಕಾಲಿ ದಳದ ನಾಯಕ ಸುಖ್ಬೀರ್ ಬಾದಲ್ ಸಂದರ್ಶನ:
ಪ್ರಶ್ನೆ: ವಿವಾದಿತ ಕೃಷಿ ಕಾನೂನುಗಳ ರದ್ದತಿಯ ನಂತರ ವಿಷಯಗಳು ಬದಲಾಗಿವೆಯೇ?
ಸುಖ್ಬೀರ್ ಬಾದಲ್ ಉತ್ತರ: ಕಾನೂನುಗಳಿಂದಾಗಿ ಸ್ವಲ್ಪ ಉದ್ವಿಗ್ನತೆ ಇತ್ತು. ಜನರು ಆಂದೋಲನದ ಹಾದಿಯಲ್ಲಿದ್ದರು. ಪ್ರತಿನಿತ್ಯ ಪ್ರತಿಭಟನೆಗಳು ನಡೆಯುತ್ತಿದ್ದವು, ಆದರೆ ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ.
ಪ್ರಶ್ನೆ: ಆದರೆ ರೈತರು ಎಂಎಸ್‌ಪಿಗೆ ಬೇಡಿಕೆ ಇಡುತ್ತಿದ್ದಾರೆ. ಇದು ನ್ಯಾಯಯುತ ಬೇಡಿಕೆ ಎಂದು ನಿಮಗೆ ಅನಿಸುತ್ತದೆಯೇ?
ಸುಖ್ಬೀರ್ ಬಾದಲ್ ಉತ್ತರ: ಒಬ್ಬ ರೈತ ದೇಶವನ್ನು ಪೋಷಿಸುತ್ತಾನೆ. ಅವರಿಗೆ ಬೆಲೆಯ ಬಗ್ಗೆ ಭರವಸೆ ಇಲ್ಲದಿದ್ದರೆ ಮತ್ತು ನೀವು ಯಾವುದೇ ಉತ್ಪನ್ನದ ಗರಿಷ್ಠ ಚಿಲ್ಲರೆ ಬೆಲೆಯನ್ನು ನೋಡಿದರೆ, MSP ಹೊಂದಲು ಏಕೆ ಮುಖ್ಯ ಎಂಬುದು ನಿಮಗೆ ಅರ್ಥವಾಗುತ್ತದೆ. ರೈತರು ಖರೀದಿಗೆ ಸರ್ಕಾರವನ್ನು ಅವಲಂಬಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಶಿಫಾರಸು ಮಾಡಿದ್ದರು.

ಪ್ರಶ್ನೆ: ಶಿರೋಮಣಿ ಅಕಾಲಿ ದಳವು ಅಧಿಕಾರಕ್ಕೆ ಬರುತ್ತದೆ ಎಂದು ನೀವು ವಿಶ್ವಾಸ ಹೊಂದಿದ್ದೀರಾ?
ಸುಖ್ಬೀರ್ ಬಾದಲ್ ಉತ್ತರ: ಅಕಾಲಿಗಳದ್ದು 100 ವರ್ಷಗಳಷ್ಟು ಹಳೆಯ ಪಕ್ಷ. ಸುಳ್ಳು ಪ್ರಚಾರ ಮತ್ತು ಸುಳ್ಳು ಭರವಸೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಂದು ನಾವು ಸೋತಿದ್ದೇವೆ, ಆದರೆ ಆಗಲೂ ನಮ್ಮ ಶೇಕಡವಾರು ಮತಗಳು ಹಾಗೇ ಉಳಿದಿದ್ದವು. ಎಎಪಿ ಕುಸಿದಿದೆ ಮತ್ತು ಕಾಂಗ್ರೆಸ್ ಮತ್ತು ಅಕಾಲೀಸ್ ನಡುವಿನ ಅಂತರ ಕಡಿಮೆಯಾಗಿದೆ.
ಪ್ರಶ್ನೆ: ಕಾಂಗ್ರೆಸ್‌ನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ನಿಮ್ಮ ಎದುರಾಳಿ ಅಮರಿಂದರ್ ಸಿಂಗ್ ಈಗ ಕಾಂಗ್ರೆಸ್‌ನಲ್ಲಿ ಇಲ್ಲ. ಇದು ನಿಮಗೆ ಸಹಾಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ?
ಸುಖ್ಬೀರ್ ಬಾದಲ್ ಉತ್ತರ: ನಾನು ಈ ರೀತಿ ಏನನ್ನೂ ಯೋಚಿಸುವುದಿಲ್ಲ. ಮತಗಳ ವಿಭಜನೆ ನಡೆಯಲಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದ ಹಲವರು ಕ್ಯಾಪ್ಟನ್ ತಂಡಕ್ಕೆ ಸೇರಲಿದ್ದಾರೆ. ಕಾಂಗ್ರೆಸ್‌ನಲ್ಲಿ ಭಾರೀ ಒಳಜಗಳ ನಡೆಯುತ್ತಿದೆ. ಚನ್ನಿ ಸಿಎಂ ಆಗಿ ಕೆಲಸ ಮಾಡಲು ಬಿಡುತ್ತಿಲ್ಲ, ಬದಲಿಗೆ ಸರ್ಕಾರವನ್ನು ಹೇಗೆ ನಡೆಯಬೇಕು ಎಂಬುದನ್ನು ನವಜೋತ್ ಸಿಂಗ್ ಸಿಧು ನಿರ್ದೇಶಿಸುತ್ತಿದ್ದಾರೆ.
ಪ್ರಶ್ನೆ: ಅಡ್ವೊಕೇಟ್ ಜನರಲ್ ವಿರುದ್ಧದ ಸಮಸ್ಯೆ ನಂತರ ಅವರು ರಾಜಿ ಮಾಡಿಕೊಂಡಿದ್ದಾರಾ?
ಸುಖ್ಬೀರ್ ಬಾದಲ್ ಉತ್ತರ: ಪ್ರತಿಯೊಬ್ಬ ವಕೀಲರಿಗೂ ವೃತ್ತಿಪರ ಹಕ್ಕು ಇರುತ್ತದೆ. ಯಾರಾದರೂ ಅವರ ಬಳಿಗೆ ಹೋಗಬಹುದು. ವಕೀಲರು ವಕೀಲರೇ, ಆದ್ದರಿಂದ ಅವರು ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ತಪ್ಪಾಗಿದೆ. ಸಿಧು ಕೂಡ ಬಿಜೆಪಿ ಜೊತೆಗೆ ಇದ್ದಿದ್ದರಿಂದ ರಾಜಿ ಎನ್ನಬಹುದು.
ಪ್ರಶ್ನೆ: ದಲಿತರ ಮತಗಳನ್ನು ಸೆಳೆಯುವ ನಿರೀಕ್ಷೆಯಲ್ಲಿ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ. ಆದರೆ ಈಗ ಕಾಂಗ್ರೆಸ್ ದಲಿತ ಸಿಎಂ ಎಂದು ಬಿಂಬಿಸುತ್ತಿದೆ. ಅದರಿಂದ ನಿಮಗೆ ಕಠಿಣ ಸವಾಲು ಎದುರಾಗಬಹುದೇ?
ಸುಖ್ಬೀರ್ ಬಾದಲ್ ಉತ್ತರ: ಇಲ್ಲವೇ ಇಲ್ಲ. ಅವರು ನಿಜವಾಗಿಯೂ ಮುಖ್ಯಮಂತ್ರಿಯೇ? ಅವರು ಕಾಂಗ್ರೆಸ್‌ನ ಆಯ್ಕೆಯೇ? ಅವರು ಅಲ್ಲಿಗೆ ಬಂದು ಕೇವಲ ಎರಡು ತಿಂಗಳಾಗಿದೆ. ಅವರಿಗೆ ಕೆಲಸ ಮಾಡಲು ಅನುಮತಿ ಇದೆಯೇ? ಚನ್ನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ನಾನು ಕಾಂಗ್ರೆಸ್‌ಗೆ ಸವಾಲು ಹಾಕುತ್ತೇನೆ.
ಪ್ರಶ್ನೆ: ಸಿಧು ನಿಮಗೆ ಸವಾಲು ಎಂದು ಭಾವಿಸುತ್ತೀರಾ?
ಸುಖ್ಬೀರ್ ಬಾದಲ್ ಉತ್ತರ: ಇಲ್ಲ, ಅವರು ಸವಾಲೇ ಅಲ್ಲ. ಅವರು ಕಾಂಗ್ರೆಸ್‌ಗೆ ಸವಾಲಾಗಿದ್ದಾರೆ. ಅವರ ಬಗ್ಗೆ ಕಾಂಗ್ರೆಸ್ ಚಿಂತಿಸಬೇಕಿದೆ.
ಪ್ರಶ್ನೆ: ಆಪ್ ಬಗ್ಗೆ ಏನು ಹೇಳುತ್ತೀರಿ?
ಸುಖ್ಬೀರ್ ಬಾದಲ್ ಉತ್ತರ: ಎಎಪಿ 2017ರಲ್ಲಿ ಕಾಣಿಸಿಕೊಂಡ ಗುಳ್ಳೆಯಂತಿದ್ದು, ಪ್ರತಿ ವರ್ಷವೂ ಅವು ಕಡಿಮೆಯಾಗುತ್ತಿವೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಭೆಗಳಲ್ಲಿ ಕೇವಲ 300 ಜನರಿದ್ದು, ನಿಮಗೆ ಅಲ್ಲಿ ಯಾವುದೇದಾರೂ ರೀತಿ ಅಲೆ ಕಂಡು ಬಂದಿದೆಯೇ?.
ಪ್ರಶ್ನೆ: ನೀವು ಎನ್‌ಡಿಎ ತೊರೆಯಲು ಇದ್ದ ಕಾರಣ ಬದಲಾಗಿದೆ. ನೀವು ಮತ್ತೆ ಅದನ್ನು ಸೇರಿಕೊಳ್ಳುತ್ತೀರಾ?
ಸುಖ್ಬೀರ್ ಬಾದಲ್ ಉತ್ತರ: ಇಲ್ಲ, ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದರು. ಅವರು ನಮಗೆ ಹೇಳದೇ ಈ ಕಾನೂನು ತಂದರು. ಇದು ಕೇವಲ ಸಂಪುಟ ಅಂಶವಾಗಿದ್ದು, ನಂತರ ಈ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ನಮಗೆ ಹೇಳಿದ್ದರು. ಆದರೆ ಅದು ಎಂದಿಗೂ ಆ ಬಗ್ಗೆ ಚರ್ಚೆ ನಡೆಸಲಿಲ್ಲ. ಅವರು ನಮ್ಮ ಬಗ್ಗೆ ಗಮನ ಹರಿಸಲು ಎಂದಿಗೂ ಚಿಂತಿಸಲಿಲ್ಲ. ನಾವು ಎಂದಿಗೂ ಅವರ ಬಳಿಗೆ ಹಿಂತಿರುಗಲು ಸಾಧ್ಯವಿಲ್ಲ.
ಪ್ರಶ್ನೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಗ್ಗೆ ಏನು ಹೇಳುತ್ತೀರಿ? ನೀವು ಎಂದಾದರೂ ಅವರೊಂದಿಗೆ ಕೈಜೋಡಿಸುತ್ತೀರಾ?
ಸುಖ್ಬೀರ್ ಬಾದಲ್ ಉತ್ತರ: ಕ್ಯಾಪ್ಟನ್ ಅಮರೀಂದರ್ ಸಿಂಗ್ ಯಾವಾಗಲೂ ಬಿಜೆಪಿ ಬಗ್ಗೆ ಸಾಪ್ಟ್ ಕಾರ್ನರ್ ಹೊಂದಿದ್ದಾರೆ. ಬಿಜೆಪಿಯವರು ಕೂಡ ಅವರನ್ನು ನೆಚ್ಚಿಕೊಂಡಿದ್ದು, ಕ್ಯಾಪ್ಟನ್ ರಾಜಕೀಯದ ಆಟಗಳನ್ನು ಆಡುತ್ತಿದ್ದಾರೆ, ಆದರೆ ನಮಗೆ ಅದು ಸಾಧ್ಯವಿಲ್ಲ. ಕಾಂಗ್ರೆಸ್ ನಿಂದ ಪಡೆದ ಎಲ್ಲ ಗೌರವಗಳಿಗೆ ಅವರು ಅರ್ಹರಾಗಿದ್ದಾರೆ, ಆದರೆ ಅವರು ಯಾವತ್ತೂ ಯಾವುದೇ ಕೆಲಸಗಳನ್ನು ಮಾಡಿಲ್ಲ.
ಪ್ರಶ್ನೆ: ನಿಮ್ಮ ವಿರುದ್ಧದ ಪ್ರಕರಣಗಳನ್ನು ತೆರೆಯಲಾಗುತ್ತಿದ್ದು, ಸಿಧು ಹೇಳಿದ್ದನ್ನ ಕೇಳಿದ್ದೀರಾ?
ಸುಖ್ಬೀರ್ ಬಾದಲ್ ಉತ್ತರ: ಅವರ ಬಳಿ ಪುರಾವೆಗಳಿದ್ದರೆ ನನ್ನನ್ನು ಬಂಧಿಸಲಿ. ಅವರು ಮಜಿಥಿಯಾ ವಿರುದ್ಧ ಮಾದಕವಸ್ತು ಆರೋಪಗಳನ್ನು ಸಾಬೀತುಪಡಿಸಬಹುದೇ? ಇದು ರಾಜಕೀಯ ಪ್ರೇರಿತವಷ್ಟೇ.
ಪ್ರಶ್ನೆ: ನೀವು ಕ್ಯಾಪ್ಟನ್ ಬಗ್ಗೆ ವಿಷಾದಿಸುತ್ತೀರಾ?
ಸುಖ್ಬೀರ್ ಬಾದಲ್ ಉತ್ತರ: ಇಲ್ಲ, ನಾನು ಹೇಳಿದಂತೆ ಅವರು ಅದಕ್ಕೆ ಅರ್ಹರಾಗಿದ್ದಾರೆ. ಕಾಂಗ್ರೆಸ್ ನಿರ್ದಯವಾಗಿದೆ ಎಂಬುದನ್ನು ಹೇಳಲು ಬಯಸುತ್ತೇನೆ. ನಾಳೆ ಸಿಧುರನ್ನೂ ಕೂಡಾ ಅವರು ಹೊರಹಾಕಲಿದ್ದಾರೆ. ಸದ್ಯ ಸಿಧುಗೆ ಸಿಎಂ ಆಗುವ ಆಸೆಯಿದ್ದು, ಮುಂದೊಂದು ದಿನ ಸ್ವಂತ ಪಕ್ಷ ಕಟ್ಟಬೇಕಾಗುತ್ತದೆ.












Click it and Unblock the Notifications