
Psychology: ನಿಮ್ಮ ಮೆದುಳಿನಲ್ಲೊಂದು ಗಾಡ್ ಸ್ಪಾಟ್ ಇರಬಹುದೆ?
ಮನುಷ್ಯ ಮಿದುಳು ವಿಸ್ಮಯಗಳ ಮಹಾಗುಡಾಣ. ಅದರಲ್ಲಿ ಎನಿದೆ, ಎನಿಲ್ಲ ಎಂದು ತಿಳಿಯುವುದೂ ಕಷ್ಟವೇ. ನೋಡಿದ್ದು, ಕೇಳಿದ್ದು, ಕಾಣಿಸದಿದ್ದದ್ದು, ಕಲ್ಪಿಸಿಕೊಂಡಿದ್ದು..., ಹೀಗೆ ಅದೆಷ್ಟೋ ಸಾವಿರ ಸಂಗತಿಗಳ ಸಂಪುಟಗಳು ಮಿದುಳಿನ ಕೋಶಗಳಲ್ಲಿ ಗೊತ್ತಾಗದಂತೆ ನೆಲೆಸಿರುತ್ತವೆ. ಇದರಿಂದ ಅದೇನೇನೋ ವಿಷಯಗಳು ಹೇಗೋ, ಯಾಕೋ, ಯಾವಾಗಲೋ ಹೊರಬಂದುಬಿಡುತ್ತವೆ, ಅಥವಾ ಬೇಕೆಂದರೂ ಬಾರದೇ ಅದೆಲ್ಲೋ ಕಳೆದು ಹೋಗಿರುವಂತೆಯೆ ಇದ್ದುಬಿಡುತ್ತದೆ.
ಇಷ್ಟೆಲ್ಲಾ ಅಸ್ಪಷ್ಟತೆ, ಗಹನತೆಯ ನಡುವೆಯೂ ವ್ಯಕ್ತಿಯ ಆಸೆ ಅಭಿಲಾಶೆ, ಬೇಗುದಿ, ಉಲ್ಲಾಸಗಳನ್ನು ಹೊರತರಬಲ್ಲ ಗುಣ ಹೇರಳವಾಗಿರುವಂತಹ ಸ್ಥಳ ಈ ಹಿಡಿಗಾತ್ರದ ಮನುಷ್ಯ ಅಂಗ, ಮಿದುಳು. ಇಂತಹದೊಂದು ಜಾಗದಲ್ಲಿ "ದೈವ" ಸ್ಥಾನವೂ(ಗಾಡ್ ಸ್ಪಾಟ್) ಇರಬಹುದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು ಕೆಲ ನರಮನೋತಜ್ಞರಲ್ಲಿ. ಅದೂ ಕೂಡ ಅಚ್ಚರಿಯ ಪ್ರಶ್ನೆಯೇ ಸರಿ.
ಮಿದುಳಿನಲ್ಲಿಡಗಿರುವ ಮನೋಸಾಮರ್ಥ್ಯಗಳದೆಷ್ಟೋ ಇರುವುದನ್ನು ಗುರುತಿಸಿರುವ ನರಶಾಸ್ತ್ರದ ತಜ್ಞರಿಗೆ ಇಂತಹದೊಂದು ಕಲ್ಪನೆ ಬಂದಿದ್ದೇ ಮಿದುಳಿನ ಕುತೂಹಲಕಾರಿ ಕಾರ್ಯಶೀಲತೆಯ ಪರಿಣಾಮವಾಗಿ. ಮಿದುಳನ್ನು ಕಾಡುವ, ಕೊರೆಯುವ ರೋಗ, ರುಜಿನಗಳತ್ತ ಗಮನ ಹರಿಸುವ ಅಗತ್ಯವೇ ಹೆಚ್ಚಾಗಿರುವಂತಹ ಸಮಯದಲ್ಲಿ ಮನುಷ್ಯ ಕುಲದ ಉಗಮದೊಂದಿಗೆಯೇ ಹುಟ್ಟಿಕೊಂಡಿರುವ ದೇವರು, ರಿಲಿಜಿನ್‌ಗಳ ಮೂಲ ಸ್ಥಾನ ಮಿದುಳು ಎನ್ನುವ ಊಹೆಯೊಂದಿಗೆ ಆರಂಭವಾಯಿತು ಸಂಶೋಧನೆಯೊಂದು.
ಕಳೆದ ದಶಕದ ಅಂಚಿನಲ್ಲಿ ಆರಂಭವಾದ ಈ ಸಂಶೋಧನೆಯ ಪ್ರಾಗಲ್ಪನೆಯಂತೆ ಮಿದುಳಿನ ಮುಖ್ಯ ವಲಯ-ಕೋಶಗಳೆಲ್ಲವನ್ನು ಜಾಲಾಡಿಸಲಾಯಿತು. ಆದರೆ ಎಲ್ಲಿಯೂ ʻದೈವʼ ಸ್ಥಾನ ಗೋಚರಿಸಿದ್ದಿದ್ದಾಗ ದೈವಕ್ಕಿಲ್ಲ ಮಿದುಳಿನಲ್ಲಿ ನಿರ್ದಿಷ್ಟ ಸೈಟು( ನೊ ಗಾಡ್ ಸ್ಪಾಟ್ ಇನ್ ದ ಬ್ರೇನ್) ಎಂಬುವ ತೀರ್ಮಾನ ಗಟ್ಟಿಯಾಯಿತು. ಹಾಗೆಂದ ಮಾತ್ರಕ್ಕೆ ದೈವಕ್ಕೆ ಅಸ್ಥಿತ್ವವಿಲ್ಲ ಎನ್ನುವುದಲ್ಲ. ದೈವ ಭಾವಗಳಿಗೆ ವ್ಯಕ್ತಿ ಮಿದುಳಿನಲ್ಲಿ ಮೀಸಲಾದ ಒಂದು ಜಾಗವಿಲ್ಲ ಎನ್ನುವುದಷ್ಟೇ.
ಅಂದ ಮೇಲೆ ಮನುಷ್ಯನ ಭಾವನೆಗಳ ಆಳ ಮತ್ತು ವಿಸ್ತಾರವನ್ನು ಗುರುತಿಸುವುದು, ಶೋಧಿಸುವುದು ಈಗಿರುವ ವಿಜ್ಞಾನದ ತಂತ್ರಗಳಿಂದ ಸಾಧ್ಯವಾಗಿಲ್ಲವಷ್ಟೇ. ಆದರೇ ಇಂತಹದೊಂದು ಸಂಶೋಧನೆಯ ಸುದ್ಧಿಗೆ ಮಾಧ್ಯಮಗಳು ಮುಗಿಬಿದ್ದು ಅದಕ್ಕೊಂದು ಮಹಾಪ್ರಚಾರ(ಅಪಚಾರ)ಕ್ಕೆ ಅವಕಾಶ ಕಲ್ಪಿಸಿದ್ದಂತೂ ಸತ್ಯ.
ಮಿದುಳಿನಲ್ಲಿ ದೈವ ಸ್ಥಾನವಿದ್ದ ಪಕ್ಷದಲ್ಲಿ ಅದನ್ನ ಹದಗೆಡುವಂತೆ ಮಾಡುವ ಚಾಕಚಕ್ಯತೆಯೂ ಕೆಲವರಲ್ಲಿ ಹುಟ್ಟಿಕೊಳ್ಳುವುದು. ಅದ್ಯಾಕೋ ಈ ಕ್ಷಣದಲ್ಲಿ ನೆಪೋಲಿಯನ್ ಬೊನೋಪಾರ್ಟೆ ಒಂದೆಡೆ ಹೇಳಿದ್ದ ಮಾತು ನೆನಪಿಗೆ ಬರುತ್ತಿದೆ, "ಜನತೆಯನ್ನು ತೆಪ್ಪಗಿರಿಸಬಲ್ಲ ಅತ್ಯುತ್ತಮ ವಸ್ತುವೆಂದರೆ, ರಿಲಿಜಿನ್ ಎಂದು. ಆದರಿಂದು ನಮ್ಮ ಸುತ್ತಾಮುತ್ತಾ ಎದ್ದು ಕಾಣಿಸುತ್ತಿರುವ ಸಂಗತಿಯು ಜನತೆ ನೆಮ್ಮದಿಯನ್ನು ಹಾಳುಮಾಡುತ್ತಿರುವ ರಿಲಿಜಿನ್ ವಿಷಯಗಳು.
ನಂಬಿಕೆ, ಆಚರಣೆಗಳಿಂದ ಹುಟ್ಟುವ ರಿಲಿಜಿಸ್ ನಡೆನುಡಿಗಳು ಮುಖ್ಯವಾಗಿ ಮಿದುಳಿಗೂ ರಿಲಿಜಿನ್, ದೈವ ಕಲ್ಪನೆಗಳಿಗೂ ಇರಬಹುದಾದ ಸಂಬಂಧದಲ್ಲಿ ಮುಖ್ಯ ಪಾತ್ರವಹಿಸುವುದು ನಂಬಿಕೆ ಮತ್ತು ಆಚರಣೆಗಳು. ಕುಟುಂಬ, ಸಮುದಾಯಗಳು ಇದರಲ್ಲಿ ಭಾಗಿಯಾದಷ್ಟು ಇದರ ಪ್ರಸರಣ ಮತ್ತು ಪ್ರೇರಣಾ ಬಲವೂ ಹೆಚ್ಚುತ್ತದೆ. ಮನುಷ್ಯ ಸಾಮಾಜಿಕ ಜೀವಿಯಾಗಿರುವುದರಿಂದ ನಂಬಿಕೆ, ಆಚರಣೆಗಳಿಗೆ ಹೆಚ್ಚು ಮಾನ್ಯತೆ, ಅನುಕರಣೆಯ ವರ್ತನೆಗಳು ಬಲಗೊಳ್ಳುತ್ತಲೇ ಮುಂದುವರೆಯುವುದು.
ಇಂತಹ ಅನುಸರಣೆಯ ವರ್ತನೆಗಳಿಂದ ಲಾಭವೇ ಹೆಚ್ಚಾಗಿದ್ದ ಪಕ್ಷದಲ್ಲಿ ನಂಬಿಕೆಗಳು ಮತ್ತಷ್ಟು ಗಾಢವಾಗುವುದಲ್ಲದೆ, ಅಂತಹ ಭಾವಗಳನ್ನು ಸಾಮೂಹಿಕವಾಗಿ ರಕ್ಷಿಸುವ ತಂತ್ರಗಳೂ ಹುಟ್ಟಿಕೊಳ್ಳುವುದು.
ಅಂದ ಮೇಲೆ ವ್ಯಕ್ತಿ ಮಿದುಳಿನ ವಲಯಗಳು, ಈ ನಮೂನೆಯ ವರ್ತನೆಗಳು ಹೊರಗಡೆಯಿಂದಲೇ ಗಟ್ಟಿಯಾದೆಂತೆಲ್ಲ, ಒಂದಿಲ್ಲೊಂದು ರೀತಿಯಲ್ಲಿ ವಿನೂತನ ಕಂಪನಗಳ ಮೂಲಕ ಬಲಪಡಿಸುವುದು. ಕನ್ನಡದ ಮನೆಮಾತು ʻಸಂಕಟ ಬಂದಾಗ ವೆಂಕಟರಮಣʼ ಎನ್ನುವುದರ ಅರ್ಥವೂ ಇದೇ ಆಗಿರುತ್ತದೆ. ಕಷ್ಟಗಳು, ಸಮಸ್ಯೆಗಳು ಗ್ರಹಿಸಲು, ಬಗೆಹರಿಸಲು ಅಸಾಧ್ಯವೆನಿಸಿದಾಗ ಇಂತದೊಂದು ಶಕ್ತಿಯ ನೆರವು,ಬೆಂಬಲ ಮಾನಸಿಕ ಸಮತೋಲನವನ್ನು ಕಾಪಾಡುವುದಕ್ಕೆ ಪ್ರೋತ್ಸಾಹಿಸುತ್ತದೆ.
ಇಂತಹ ಸಂಕಷ್ಟ, ಸಂಕಟದ ಸಮಯದಲ್ಲಿ ಸಮಾಜ,ಸಂಸ್ಥೆ, ಸರಕಾರಗಳು ನಿಷ್ಠೆಯಿಂದ ಮುಂದಾದಾಗ ದೈವ, ರಿಲಿಜಿನ ನಂಬಿಕೆಗಳು ಹಿನ್ನೆಲೆಗೆ ಸರಿಯುತ್ತವೆ. ಯುರೋಪಿನ ಮುಂದುವರೆದ ಕೆಲವು ದೇಶಗಳು ಮತ್ತು ಜಪಾನಿನಲ್ಲಿಯೂ ರಿಲಿಜಿನ್ ಅನುಯಾಯಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿವೆ ಎನ್ನುತ್ತವೆ ಸಮೀಕ್ಷೆಗಳು.
ಧರ್ಮಾಂಧತೆ ಎನ್ನುವ ಉದ್ರಿಕ್ತ ಮಾನಸಿಕತೆ ವಿಜ್ಞಾನ, ತಂತ್ರಜ್ಞಾನದ ಮುನ್ನಡೆಯು ವ್ಯಕ್ತಿ ಮತ್ತು ಸಮುದಾಯಗಳ ಹಿತವನ್ನು ಹೆಚ್ಚಿಸುತ್ತಿರುವುದರ ಪರಿಣಾಮವಾಗಿ ವ್ಯಕ್ತಿಯ ಮನಸು ಕೊಂಚ ಆರಾಮವಾಗಿರುವುದನ್ನು ಅನುಭವಿಸುವಂತಾಗಿದೆ. ಆದರೂ ಸಹ ಜನಹಿತವೆನ್ನು ಹೆಚ್ಚಿಸುವ ದೇಶಗಳು ಹೆಚ್ಚಾಗುತ್ತಿಲ್ಲ. ಆಧುನಿಕತೆಯ ಲಾಭ ಕೆಲವರಿಗಷ್ಟೇ ಸೀಮಿತ. ಹೀಗಾಗಿಯೇ ದೈವದ ಕಡೆಯೇ ಅಸಹಾಯಕ ಮನಸುಗಳು ವಾಲುತ್ತಿರುವುದು.
ಜೊತೆಯಲ್ಲಿ, ನಾವೇ ದೇವರ ಧೂತರು ಎಂದು ಧೂರ್ತತೆಯನ್ನೇ ಪ್ರದರ್ಶಿಸುತ್ತಿರವವರೂ ಹೆಚ್ಚಾಗುತ್ತಿದ್ದಾರೆ. ಈ ನಮೂನೆಯ ಮತಾಂಧತೆಯ ಸ್ಥಿತಿಯಂತೂ ಖಂಡಿತವಾಗಿಯೂ ಮಿದುಳಿನ ಸೌಮ್ಯ ವಲಯಗಳನ್ನು ಅತಿಕ್ರಮಿಸಿ ಆರೋಗ್ಯವಂತ ಸಮಾಜಕ್ಕೆ ಸದಾ ಕೇಡು ಬಗೆಯುವ ಸ್ಥಿತಿಯನ್ನು ತರುತ್ತದೆ. ಇಂತಹ ಉದ್ರಿಕ್ತ ಮಾನಸಿಕತೆಯನ್ನು ಪೋಷಿಸುತ್ತಿರುವ ಬಲಗಳು ಮಿದುಳಿನ ಹೊರಗಡೆಯಿಂದಲೇ ಆಗುತ್ತಿರವುದರತ್ತವೂ ಸಂಶೋಧನೆಯ ಆಸಕ್ತಿಗಳು ಹರಿಯಬೇಕು.