keyboard_backspace

ಪ್ರೆಟೋಲ್ ಬಂಕ್ ಗಳಲ್ಲಿ 25 ಎಂಎಲ್ ದೋಖಾ ಕರಾಮತ್ತು !

Google Oneindia Kannada News

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಕದಿಯುವ ಚಿಲ್ಲರೆ ವಹಿವಾಟಿನ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿ ಐದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಂಡರೆ ಕನಿಷ್ಠ 25 ಎಂ.ಎಲ್ ಕದಿಯುವ ಅವ್ಯವಹಾರಕ್ಕೆ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆಯ ಕೆಲ ಅಧಿಕಾರಿಗಳೇ ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೇಂದ್ರ ಸರ್ಕಾರ ಸುತ್ತೋಲೆ ಪ್ರಕಾರ, ಪೆಟ್ರೋಲ್ ಅಥವಾ ಡೀಸೆಲ್ ಬಂಕ್ ಗಳಿಗೆ ಗ್ರಾಹಕರು ಎಷ್ಟು ಲೀಟರ್ ಖರೀದಿಸುತ್ತಾರೋ ಅಷ್ಟು ಲೀಟರ್ ಕಡ್ಡಾಯವಾಗಿ ವಾಹನಗಳಿಗೆ ತುಂಬಿಸಬೇಕು. ಐದು ಎಂ.ಲ್. ಜಾಸ್ತಿ ಹಾಕಿದರೆ ಸಂಬಂಧ ಪಟ್ಟ ಕಂಪನಿ ತುಂಬಿ ಕೊಡುತ್ತದೆ. ಆದರೆ ಪರಿಸ್ಥಿತಿ ಆಗಿಲ್ಲ. ಪ್ರತಿ ಐದು ಲೀಟರ್ ಗೆ ಕನಿಷ್ಠ 25 ಎಂ.ಎಲ್ ಕಡಿಮೆ ಹಾಕುವ ಚಿಲ್ಲರೆ ವಹಿವಾಟಿಗೆ ಇಲಾಖೆ ಅಧಿಕಾರಿಗಳೇ ಆಸ್ಪದ ನೀಡಿದ್ದಾರೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ವರ್ಷಕ್ಕೊಮ್ಮೆ ಎಲ್ಲಾ ಪೆಟ್ರೋಲ್ ಬಂಕ್ ಗಳನ್ನು ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳು ತಪಾಸಣೆ ನಡೆಸಬೇಕು. ವ್ಯತ್ಯಾಸ ಕಂಡು ಬಂದರೆ ಅವರ ವಿರುದ್ಧ ಕೇಸು ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕು. ವರ್ಷಕ್ಕೊಮ್ಮೆ ಪೆಟ್ರೋಲ್ ಬಂಕ್ ಗಳಲ್ಲಿ ಸತ್ಯಾಪನೆ ನಡೆಸುವಾಗ ಒಂದು ಎಂ.ಎಲ್ ಕೂಡ ವ್ಯತ್ಯಾಸ ಇಲ್ಲದಂತೆ ಸೆಟ್ ಮಾಡಿ ಬರಬೇಕು.ಆದರೆ ಸತ್ಯಾಪನೆ ವೇಳೆಯಲ್ಲಿಯೇ 25 ಎಂ.ಎಲ್ ಕಡಿಮೆಗೆ ಸೆಟ್ ಮಾಡಿ ಬರುತ್ತಾರೆ ಎನ್ನಲಾಗಿದೆ. ಇದಾದ ನಂತರ ಮೇಲಾಧಿಕಾರಿಗಳು ಹೋಗಿ ಪರಿಶೀಲಿಸಿದರೂ ಏನೂ ಕ್ರಮ ಜರುಗಿಸದ ಅಸಹಾಯಕ ಉಂಟಾಗುತ್ತದೆ. ಇದರಿಂದ ಪೆಟ್ರೋಲ್ ಬಂಕ್ ಗಳ ಚಿಲ್ಲರೆ ವ್ಯಹವಾರ ರಾಜ್ಯದಲ್ಲಿ ದೊಟ್ಟ ಮಟ್ಟದಲ್ಲಿ ಬೆಳೆದು ನಿಂತಿದೆ.

ತಾಂತ್ರಿಕ ಸಮಸ್ಯೆ:

ತಾಂತ್ರಿಕ ಸಮಸ್ಯೆ:

ರಾಜ್ಯದ ಪೆಟ್ರೋಲ್ ಬಂಕ್ ಗಳು ಹೊಸ ಕಥೆಯನ್ನೇ ಬಿಚ್ಚಿಡುತ್ತವೆ. ಯಾವುದೇ ಬಂಕ್ ಪರಿಶೀಲಿಸಲಿ ಪ್ರತಿ ಐದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿದರೆ, ಕನಿಷ್ಠ 25 ಎಂ.ಎಲ್. ಕಡಿಮೆ ಬರುತ್ತದೆ. ಅಳತೆ ಮಾಡುವಾಗ ಇಷ್ಟು ಕಡಿಮೆ ಬಂದರೆ ಪಂಪ್ ನಿರ್ವಹಣೆಯಿಂದ ಇದನ್ನು ಪರಿಗಣಿಸಬಹುದು ಎಂಬ ಸಬೂಬು ಕೊಟ್ಟು ಅಧಿಕಾರಿಗಳೇ ಯಾವುದೇ ಕ್ರಮ ಜರುಗಿಸಲು ಮುಂದಾಗಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಅಕ್ರಮ ಸಂಪಾದನೆ ಕಾರ್ಯದಲ್ಲಿ ಕೆಲ ಪೆಟ್ರೋಲ್ ಬಂಕ್ ಗಳು ನಿರತವಾಗಿವೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ಹೆಚ್ಚಾಗಿ ಈ ರೀತಿಯ ವಹಿವಾಟು ನಡೆಸುತ್ತವೆ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಇಲಾಖೆಯ ಕೆಲವು ಅಧಿಕಾರಿಗಳು ಪೆಟ್ರೋಲ್ ಬಂಕ್ ಮಾಲೀಕರ ಮುಲಾಜಿಗೆ ಒಳಗಾಗಿ ತಪ್ಪೆಂದು ಗೊತ್ತಿದ್ದರೂ ಇಂತದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿ ಐದು ಲೀಟರ್ ಗೆ 25 ಎಂ.ಎಲ್ ಕದ್ದರೆ ?:

ಪ್ರತಿ ಐದು ಲೀಟರ್ ಗೆ 25 ಎಂ.ಎಲ್ ಕದ್ದರೆ ?:

ಸಾಮಾನ್ಯವಾಗಿ ಒಂದು ಪೆಟ್ರೋಲ್ ಬಂಕ್ ನಲ್ಲಿ ದಿನಕ್ಕೆಅಂದಾಜು 20 ರಿಂದ 30 ಸಾವಿರ ಲೀಟರ್ ವಹಿವಾಟು ನಡೆಸುತ್ತದೆ ಎಂದಿಟ್ಟುಕೊಳ್ಳೋಣ. 30 ಸಾವಿರ ಲೀಟರ್ ಗೆ ಕನಿಷ್ಠ 150 ಲೀಟರ್ ದಿನಕ್ಕೆ ಉಳಿತಾಯವಾಗುತ್ತದೆ. ಮಾಸಿಕ ಲೆಕ್ಕ ಹಾಕಿದರೆ 4500 ಲೀಟರ್ ಆಗುತ್ತದೆ. ಪ್ರತಿ ಲೀಟರ್ ಪೆಟ್ರೋಲ್ ದರ 85 ರೂ. ಅಂತ ಇಟ್ಟುಕೊಂಡರೂ, ಮಾಸಿಕ 3.82 ಲಕ್ಷ ರೂಪಾಯಿ ಸಿಗುತ್ತದೆ. ಇದು ಕೇವಲ ಪ್ರತಿ ಲೀಟರ್ ಗೆ ಸರಾಸರಿ ಐದು ಎಂ.ಎಲ್. ಉಳಿಸಿಕೊಂಡು ಮಾಡುವ ಚಿಲ್ಲರೆ ವ್ಯವಹಾರದ ಕರಾಮತ್ತು. ಕನಿಷ್ಠ ಒಂದು ಲೀಟರ್ ಗೆ ಐದು ಎಂಎಲ್ ಕಡಿಮೆ ಬಂದರೆ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಯಾವ ವಾಹನ ಸವಾರರು ಐದು ಎಂ.ಎಲ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಂಕ್ ಮಾಲೀಕರನ್ನು ಪ್ರಶ್ನೆ ಮಾಡುವುದಿಲ್ಲ. ಇದೇ ಇವತ್ತಿನ ಪೆಟ್ರೋಲ್ ಬಂಕ್ ಗಳ ಅಸಲಿ ವ್ಯವಹಾರದ ಗುಟ್ಟು ಎಂಬುದನ್ನು ಪೆಟ್ರೋಲ್ ಬಂಕ್ ನ ಮಾಲೀಕರೊಬ್ಬರೇ ಹೇಳುತ್ತಾರೆ.

ಪೆಟ್ರೋಲ್ ಬಂಕ್ ವಿವರ:

ಪೆಟ್ರೋಲ್ ಬಂಕ್ ವಿವರ:

ಕರ್ನಾಟಕದಲ್ಲಿ ಎಲ್ಲಾ ಕಂಪನಿಗೆ ಸೇರಿದ ಒಟ್ಟು ಪ್ರೆಟ್ರೋಲ್ ಬಂಕ್ ಗಳ ಸಂಖ್ಯೆ 12681. ಬಂಕ್ ಗಳ ಮೀಟರ್ ಕಾಲ ಕಾಲಕ್ಕೆ ಸತ್ಯಾಪನೆ ಮಾಡಲಿಕ್ಕೆರಾಜ್ಯದಲ್ಲಿ 45 ಅಧಿಕಾರಿಗಳನ್ನು ಇಲಾಖೆ ನಿಯೋಜಿಸಿದೆ. ಐದು ಎಂಎಲ್ ಚಿಲ್ಲರೆ ವಹಿವಾಟಿನಿಂದ ಒಂದು ಬಂಕ್ ತಿಂಗಳಿಗೆ ಸರಾಸರಿ 4500 ಲೀಟರ್ ಇಂಧನ ಉಳಿತಾಯವಾಗುತ್ತದೆ. ಇನ್ನು ರಾಜ್ಯದಲ್ಲಿರುವ ಹನ್ನೆರಡು ಸಾವಿರ ಬಂಕ್ ಗಳ ವ್ಯವಹಾರ ಲೆಕ್ಕಹಾಕಿದರೆ ವಹಿವಾಟು ಮೊತ್ತ ಕೋಟಿಗಳ ಗಡಿ ದಾಟುತ್ತದೆ. ಪೆಟ್ರೋಲ್ ಬಂಕ್ ಸತ್ಯಾಪನೆ ಮಾಡುವ ಅಧಿಕಾರಿಗಳು ಕೆಎಎಸ್ ಗ್ರೇಡ್ ಅಧಿಕಾರಿಗಳೇ. ಸರ್ಕಾರಕ್ಕೆ ಅಂಕಿ ಅಂಶ ಕೊಡುವ ಸಲುವಾಗಿ ಪೆಟ್ರೋಲ್ ಬಂಕ್ ಗಳನ್ನು ಪರಿಶೀಲಿಸಿದ ವರದಿಗಳನ್ನು ಕಾಲ ಕಾಲಕ್ಕೆ ಸಲ್ಲಿಸುತ್ತಾರೆ. ಆದರೆ ಪೆಟ್ರೋಲ್ ಬಂಕ್ ಗಳಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸತ್ಯಾಪನೆ ಮಾಡಿ ತಪ್ಪಿತಸ್ಥ ಬಂಕ್ ಗಳ ವಿರುದ್ಧ ಕ್ರಮ ತೆಗೆದುಕೊಂಡ ನಿದರ್ಶನಗಳು ಸದ್ಯದ ಮಟ್ಟಿಗೆ ಕಾಣುತ್ತಿಲ್ಲ. ಅಧಿಕಾರಿಗಳ ಕಣ್ಣೆದುರೇ ಲೀಟರ್ ಗೆ ಐದು ಎಂ.ಎಲ್ ಕಡಿಮೆ ಬರುವ ಚಿಲ್ಲರೆ ವಹಿವಾಟು ನಡೆದರೂ ಏನೂ ಕ್ರಮಕ್ಕೆ ಮುಂದಾಗಿಲ್ಲ.ಅಚ್ಚರಿ ಏನೆಂದರೆ ಯಾವುದೇ ಕ್ರಮ ಜರುಗಿಸಿದರೂ ಅದರ ಸಣ್ಣ ವಿವರವೂ ಮಾಧ್ಯಮಗಳಿಗೆ ನೀಡದೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪವಿದೆ. ಅಳತೆ ಮತ್ತು ತೂಕದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿವುದು, ಅಳತೆ ಮತ್ತು ತೂಕದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವುದೇ ಇಲಾಖೆಯ ಧ್ಯೇಯ. ಆದರೆ ಪೆಟ್ರೋಲ್ ಬಂಕ್ ಮಾಲೀಕರ ಲಾಬಿ ಹಾಗೂ ಮುಲಾಜಿಗೆ ಒಳಗಾಗಿ ಚಿಲ್ಲರೆ ವ್ಯವಹಾರಕ್ಕೆ ಕೆಲ ಅಧಿಕಾರಿಗಳು ಆಸ್ಪದ ನೀಡಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ.

ಸಿಸಿಬಿ ದಾಳಿಯೇ ವಿಫಲಗೊಳಿಸಿದ ತೂಕ ! :

ಸಿಸಿಬಿ ದಾಳಿಯೇ ವಿಫಲಗೊಳಿಸಿದ ತೂಕ ! :

ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಕದಿಯುವ ದಂಧೆಯನ್ನು ಬಯಲಿಗೆ ಎಳೆಯಲು ಸಿಸಿಬಿ ಪೊಲೀಸರು ದಾಳಿ ನಡೆಸುವ ಮಾಹಿತಿ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೋರಿಕೆ ಮಾಡಿ ಸಿಸಿಬಿ ಕಾರ್ಯಾಚರಣೆ ವಿಫಲಗೊಳಿಸಿರುವ ಸಂಗತಿ ಬಹಿರಂಗವಾಗಿದೆ. ಸಿಸಿಬಿ ಪೊಲೀಸರು ಮತ್ತು ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳು ಪೆಟ್ರೋಲ್ ಬಂಕ್ ಗಳಲ್ಲಿ ಅಳವಡಿಸಿದ್ದಾರೆ ಎನ್ನಲಾದ ಚೀಟಿಂಗ್ ಚಿಪ್ ವಿರುದ್ಧ ಜಂಟಿ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು. ಅಚ್ಚರಿ ಏನೆಂದರೆ ಸಿಸಿಬಿ ಪೊಲೀಸರು ದಾಳಿ ನಡೆಸುವ ಮೊದಲೇ ದಾಳಿಯ ವಿವರಗಳು ಪೆಟ್ರೋಲ್ ಬಂಕ್ ಮಾಲೀಕರ ಮೊಬೈಲ್ ಗಳಿಗೆ ರವಾನೆಯಾಗಿವೆ. ಹೊರತಾಗಿ ಸಿಸಿಬಿ ಪೊಲೀಸರು ಕೆಲವು ಪೆಟ್ರೋಲ್ ಬಂಕ್ ಗಳನ್ನು ಪರಿಶೀಲಿಸಿದ್ದಾರೆ. ಆಷ್ಟರಲ್ಲಿ ಎಚ್ಚೆತ್ತ ಕೆಲ ಪೆಟ್ರೋಲ್ ಬಂಕ್ ಮಾಲೀಕರು ಪಂಪ್ ಗಳನ್ನು ಬಿಚ್ಚಿ ರಿಪೇರಿಯಾಗಿವೆ ಎಂಬ ನಾಮ ಫಲಕ ಹಾಕಿದ್ದಾರೆ. ಸಾಮಾನ್ಯವಾಗಿ ರಿಪೇರಿಯಾಗಿರುವ ಪೆಟ್ರೋಲ್ ಗನ್ ಪರಿಶೀಲಿಸುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಹೋದ ದಾರಿಗೆ ಸುಂಕವಿಲ್ಲದೇ ಸಿಸಿಬಿ ಪೊಲೀಸರು ವಾಪಸು ಬಂದಿದ್ದಾರೆ. ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳಿಂದಲೇ ಮಾಹಿತಿ ಸೋರಿಕೆಯಾಗಿರುವ ಸಂಶಯ ಹುಟ್ಟು ಕೊಂಡಿದೆ.

ನೆರೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಗಳಿಗೆ ಚಿಪ್ ಅಳವಡಿಸಿ ಪೆಟ್ರೋಲ್ ಕದಿಯುವ ದಂಧೆಯನ್ನು ಪೊಲೀಸರು ಬಯಲಿಗೆ ಎಳೆದಿದ್ದರು. ಕರ್ನಾಟಕದಲ್ಲೂ ಅಂತಹ ಚಿಪ್ ಅಳವಡಿಸಿದ್ದಾರೆ ಎಂಬ ಮಾಹಿತಿಯನ್ನು ತೆಲಂಗಣಾ ಪೊಲೀಸ್ ಆಯುಕ್ತ ಸಜ್ಜನರ್ ಬಹಿರಂಗ ಪಡಿಸಿದ್ದರು. ಇಷ್ಟಾಗಿಯೂ ರಾಜ್ಯದಲ್ಲಿ ಅಳತೆ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ಈ ಕುರಿತ ಸಮಗ್ರ ಮಾಹಿತಿ ಸಂಗ್ರಹಿಸಿದ್ದರು. ಪೆಟ್ರೋಲ್ ಪಂಪ್ ಮೀಟರ್ ಸತ್ಯಾಪನೆ ತಾಂತ್ರಿಕ ಅಂಶವಾಗಿರುವ ಕಾರಣ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳ ಸಹಾಯ ಕೇಳಿದ್ದರು. ಆದರೆ ಸಿಸಿಬಿ ಪೊಲೀಸರು ದಾಳಿ ಮೊದಲೇ ಮಾಹಿತಿ ಬಹಿರಂಗವಾಗಿದೆ.

ಪೆಟ್ರೊಲ್ ಬಂಕ್ ಮಾಲೀಕರು ಬಿಚ್ಚಿಟ್ಟ ಸತ್ಯ:

ಪೆಟ್ರೊಲ್ ಬಂಕ್ ಮಾಲೀಕರು ಬಿಚ್ಚಿಟ್ಟ ಸತ್ಯ:

ಸಿಸಿಬಿ ಪೊಲೀಸರು, ಇಲಾಖೆಯವರು ದಾಳಿ ನಡೆಸಿದರೂ ಏನೂ ಆಗಲಿಲ್ಲ. ಮೊನ್ನೆ ಎಲ್ಲಾ ದಾಳಿ ಮಾಡಿದರು. ಪಂಪ್ ಗಳ ಬಗ್ಗೆ ಒಂದು ಸರಿ ಪರಿಶೀಲಿಸಿ ಇಟ್ಟುಕೊಳ್ಳಿ. ಸಾಮಾನ್ಯವಾಗಿ ಐದು ಎಂಎಲ್ ಕಡಿಮೆ ಇದ್ದರೆ ಏನೂ ಆಗಲ್ಲ. ಕನಿಷ್ಠ 25 ಎಂ.ಎಲ್ ಕಡಿಮೆ ಇದ್ದರೆ ಏನೂ ಆಗಲ್ಲ ಎಂಬುದನ್ನು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಸತ್ಯ ಬಹಿರಂಗ ಪಡಿಸಿದ್ದಾರೆ. ಅದೂ 20 ಎಂ.ಎಲ್ ಕಡಿಮೆ ಬಂದರೆ ರೀ ಕ್ಯಾಲಿಬರೇಷನ್ ಮಾಡ್ತೀವಿ ಎಂದು ಹೇಳಿ. ಏನೂ ಸಮಸ್ಯೆ ಆಗಲ್ಲ ಎನ್ನುವ ಮೂಲಕ ಕನಿಷ್ಠ ಐದು ಲೀಟರ್ ಗೆ 25 ಎಂ.ಎಲ್ ಕಡಿಮೆ ಬಂದರೆ ಏನೂ ಆಗಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಸಚಿವರು ಗಮನ ಹರಿಸುವರೇ ? :

ಸಚಿವರು ಗಮನ ಹರಿಸುವರೇ ? :

ಅಳತೆ ಮತ್ತು ಮಾಪನ ಇಲಾಖೆಯ ಸಚಿವ ಕೆ.ಗೋಪಾಲಯ್ಯ ಅವರ ವ್ಯಾಪ್ತಿಗೆ ಬರುತ್ತದೆ. ಅಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಆಗಿರುವ ಅವರು ಆಹಾರ ವಿತರಣೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಹೀಗಾಗಿ ತೂಕದ ಇಲಾಖೆಯ ಬಗ್ಗೆ ಹೆಚ್ಚು ತೆಲ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಲೀಟರ್ ಗೆ ಸರಾಸರಿ ಐದು ಎಂಎಲ್ ಕಡಿಮೆ ಹಾಕುವ ಚಿಲ್ಲರೆ ವಹಿವಾಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸುವರೇ ? ಪೆಟ್ರೋಲ್ ಬಂಕ್ ಗಳ ಅಕ್ರಮ ಬಯಲಿಗೆ ಎಳೆಯಲು ಮುಂದಾಗಿರುವ ಸಿಸಿಬಿ ಪೊಲೀಸರು ಈ ಸಂಗತಿ ಬಗ್ಗೆ ಗಮನ ಹರಿಸುವರೇ ಕಾದು ನೋಡಬೇಕಿದೆ.

English summary
Petrol bunks cheating 25 ML per 5 litre across karnataka, alleges senior officials involved in the scam. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X