Suzuki E Access: ಹೊಸ ಸುಜುಕಿ ಇ ಆಕ್ಸೆಸ್‌ನಲ್ಲಿದೆ LFP ಬ್ಯಾಟರಿ: ದೀರ್ಘಾವಧಿ ಬಾಳಿಕೆ, ಹೆಚ್ಚು ಮೈಲೇಜ್‌ಗೆ ಉತ್ತಮ ಆಯ್ಕೆ
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೊದಲು "ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ದೂರ ಹೋಗುತ್ತದೆ?" ಎಂಬ ಪ್ರಶ್ನೆ ಪ್ರಮುಖವಾಗಿದ್ದರೆ, ಈಗ "ಬ್ಯಾಟರಿ ಎಷ್ಟು ವರ್ಷ ಬಾಳುತ್ತದೆ?" ಎಂಬುದು ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ತಂತ್ರಜ್ಞಾನ ಮತ್ತೆ ಚರ್ಚೆಗೆ ಬಂದಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಸಾಮಾನ್ಯವಾಗಿ ಎರಡು ವಿಧದ ಬ್ಯಾಟರಿ ರಸಾಯನಶಾಸ್ತ್ರ ಬಳಸಲಾಗುತ್ತದೆ. ಒಂದು ನಿಕಲ್ ಮ್ಯಾಂಗನೀಸ್ ಕೋಬಾಲ್ಟ್ (NMC) ಮತ್ತು ಲಿಥಿಯಂ ಐರನ್ ಫಾಸ್ಫೇಟ್ (LFP). ಪ್ರತಿಯೊಂದು ತಂತ್ರಜ್ಞಾನಕ್ಕೂ ತನ್ನದೇ ಆದ ಲಾಭ-ನಷ್ಟಗಳಿದ್ದರೂ, ದೀರ್ಘಾವಧಿ ಬಳಕೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಎಲ್‌ಎಫ್‌ಪಿ ಇದೀಗ ಗಮನ ಸೆಳೆಯುತ್ತಿದೆ.

ಎಲ್‌ಎಫ್‌ಪಿ ಬ್ಯಾಟರಿ: ಏನು ವಿಶೇಷ?
ಎಲ್‌ಎಫ್‌ಪಿ ಬ್ಯಾಟರಿಗಳು ದೀರ್ಘ ಜೀವಿತಾವಧಿಗೆ ಪ್ರಸಿದ್ಧ. ಸಾಮಾನ್ಯವಾಗಿ ಎನ್‌ಎಂಸಿ ಬ್ಯಾಟರಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಚಾರ್ಜಿಂಗ್ ಚಕ್ರಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದರಿಂದ ಬ್ಯಾಟರಿ ಸಾಮರ್ಥ್ಯ ಕುಸಿತ ನಿಧಾನಗತಿಯಲ್ಲಿ ನಡೆಯುತ್ತದೆ. ಹೆಚ್ಚಿನ ಉಷ್ಣ ಸ್ಥಿರತೆ ಎಲ್‌ಎಫ್‌ಪಿ ಬ್ಯಾಟರಿಯ ಮತ್ತೊಂದು ಪ್ರಮುಖ ಲಕ್ಷಣ. ಭಾರತದಲ್ಲಿ ಉಷ್ಣತೆ ಹೆಚ್ಚು ಇರುವ ಪ್ರದೇಶಗಳಲ್ಲಿ ಬ್ಯಾಟರಿ ಹೆಚ್ಚು ಬಿಸಿಯಾಗುವುದು ಒಂದು ಸವಾಲು. ಎಲ್‌ಎಫ್‌ಪಿ ತಂತ್ರಜ್ಞಾನವು ಉಷ್ಣಕ್ಕೆ ಕಡಿಮೆ ಸ್ಪಂದಿಸುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ.
ಎನ್‌ಎಂಸಿ ಬ್ಯಾಟರಿಗಳು ಆರಂಭದಲ್ಲಿ ಹೆಚ್ಚಿನ ರೇಂಜ್ ನೀಡಬಹುದಾದರೂ, ಅವುಗಳ ಸಾಮರ್ಥ್ಯ ಕುಸಿತ ವೇಗವಾಗಿರಬಹುದು. ಆದರೆ ಎಲ್‌ಎಫ್‌ಪಿ ಬ್ಯಾಟರಿಗಳು ಆರಂಭಿಕ ರೇಂಜ್ ಸ್ವಲ್ಪ ಕಡಿಮೆಯಿದ್ದರೂ, ದೀರ್ಘಾವಧಿಯಲ್ಲಿ ಸ್ಥಿರ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುತ್ತವೆ.
ದೀರ್ಘಾವಧಿ ವೆಚ್ಚದಲ್ಲಿ ಲಾಭ
ಇವಿ ಮಾಲೀಕರಿಗೆ ಬ್ಯಾಟರಿ ಬದಲಾವಣೆ ಅತ್ಯಂತ ದುಬಾರಿ ವೆಚ್ಚವಾಗಿರುತ್ತದೆ. ಎನ್‌ಎಂಸಿ ಬ್ಯಾಟರಿಯ ಸಾಮರ್ಥ್ಯ ವೇಗವಾಗಿ ಕುಸಿದರೆ, ಕೆಲ ವರ್ಷಗಳಲ್ಲಿ ರೇಂಜ್ ಗಮನಾರ್ಹವಾಗಿ ಕಡಿಮೆಯಾಗಬಹುದು. ಎಲ್‌ಎಫ್‌ಪಿ ಬ್ಯಾಟರಿಯು ನಿಧಾನಗತಿಯ ಅವನತಿಯಿಂದ ಹೆಚ್ಚು ವರ್ಷಗಳವರೆಗೆ ಸಮಾನ ರೇಂಜ್ ನೀಡುವ ಸಾಧ್ಯತೆ ಇದೆ. ಇದರಿಂದ ಬ್ಯಾಟರಿ ಬದಲಾವಣೆ ವಿಳಂಬವಾಗುತ್ತದೆ ಮತ್ತು ಒಟ್ಟು ಮಾಲೀಕತ್ವ ವೆಚ್ಚ ಕಡಿಮೆಯಾಗುತ್ತದೆ.
ಸುಜುಕಿ e-ACCESSನಲ್ಲಿ LFP ತಂತ್ರಜ್ಞಾನ
Suzuki Motorcycle India ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಸುಜುಕಿ ಇ ಆಕ್ಸೆಸ್‌ನಲ್ಲಿ (Suzuki e-ACCESS) ಈ ಎಲ್‌ಎಫ್‌ಪಿ ಬ್ಯಾಟರಿಯನ್ನು ಅಳವಡಿಸಿದೆ. ಈ ಸ್ಕೂಟರ್ 3.1 kWh ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 95 ಕಿಮೀ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಸರಾಸರಿ ಭಾರತೀಯ ಸವಾರರು ದಿನಕ್ಕೆ ಸುಮಾರು 30 ಕಿಮೀ ಪ್ರಯಾಣಿಸುವುದರಿಂದ, ಬಹುತೇಕ ಬಳಕೆದಾರರು ಮೂರು ದಿನಗಳವರೆಗೆ ಚಾರ್ಜ್ ಮಾಡದೇ ಸವಾರಿ ನಡೆಸಬಹುದು. ಈ ವಿಧಾನವು ಹೆಚ್ಚಿನ ರೇಂಜ್ ಅಂಕಿ-ಅಂಶಗಳಿಗಿಂತ ನೈಜ ಬಳಕೆಯ ಅನುಭವಕ್ಕೆ ಆದ್ಯತೆ ನೀಡುತ್ತದೆ.
ಸುರಕ್ಷತೆ ಮತ್ತು ಪರೀಕ್ಷೆಗಳು
ಇ-ಆಕ್ಸೆಸ್ ಸ್ಕೂಟರ್‌ನಲ್ಲಿ ಬ್ಯಾಟರಿಯನ್ನು ಗಟ್ಟಿಮುಟ್ಟಾದ ಅಲ್ಯೂಮಿನಿಯಂ ಕೇಸ್‌ನಲ್ಲಿ ಇರಿಸಲಾಗಿದ್ದು, ಸ್ಕೂಟರ್ ಚೌಕಟ್ಟಿನೊಳಗೆ ಸಮಗ್ರವಾಗಿ ಸಂಯೋಜಿಸಲಾಗಿದೆ. ಇದರಿಂದ ಭೌತಿಕ ಹಾನಿ ಮತ್ತು ಬೆಂಕಿ ಅಪಾಯವನ್ನು ಕಡಿಮೆ ಮಾಡಲಾಗಿದೆ. ಇದೇ ವೇಳೆ ಬ್ಯಾಟರಿ ಮತ್ತು ಸ್ಕೂಟರ್‌ಗಳು ಉಷ್ಣ-ಶೀತ ಪರೀಕ್ಷೆ, ಕಂಪನ ಪರೀಕ್ಷೆ, ಮುಳುಗುವಿಕೆ, ಕ್ರಶ್ ಮತ್ತು ಪಂಕ್ಚರ್ ಪರೀಕ್ಷೆ ಸೇರಿದಂತೆ ಕಠಿಣ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಿವೆ ಎಂದು ಕಂಪನಿ ಹೇಳಿದೆ. ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆ ಮಾಡುವಾಗ ಕೇವಲ ಗರಿಷ್ಠ ರೇಂಜ್ ಗಮನಿಸುವುದಕ್ಕಿಂತ, ಬ್ಯಾಟರಿ ಎಷ್ಟು ಕಾಲ ಸ್ಥಿರ ಕಾರ್ಯಕ್ಷಮತೆ ನೀಡುತ್ತದೆ ಎಂಬುದು ಮಹತ್ವದ್ದಾಗಿದೆ.
ಆರಂಭಿಕವಾಗಿ ಎನ್‌ಎಂಸಿ ಬ್ಯಾಟರಿ ಹೆಚ್ಚು ದೂರ ನೀಡಬಹುದು, ಆದರೆ ಕೆಲವು ವರ್ಷಗಳ ಬಳಿಕ ಎಲ್‌ಎಫ್‌ಪಿ ಬ್ಯಾಟರಿ ಸಮಾನ ಅಥವಾ ಹೆಚ್ಚು ಸ್ಥಿರ ರೇಂಜ್ ನೀಡುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಇವಿ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದೀರ್ಘಾವಧಿ ಬಾಳಿಕೆ, ಸುರಕ್ಷತೆ ಮತ್ತು ಪ್ರಾಯೋಗಿಕತೆಯ ಸಮತೋಲನ ಅತ್ಯಂತ ಮುಖ್ಯವಾಗಿದೆ. ಎಲ್‌ಎಫ್‌ಪಿ ಬ್ಯಾಟರಿ ತಂತ್ರಜ್ಞಾನ ಈ ಅಂಶಗಳಲ್ಲಿ ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. Suzuki e-ACCESS ಮೂಲಕ ಸುಜುಕಿ ದೀರ್ಘಾವಧಿ ವಿಶ್ವಾಸಾರ್ಹತೆಯನ್ನು ಒತ್ತಿ ಹೇಳುತ್ತಿದ್ದು, ನಗರ ಪ್ರಯಾಣಕ್ಕೆ ತಕ್ಕ ಪ್ರಾಯೋಗಿಕ ಎಲೆಕ್ಟ್ರಿಕ್ ಪರಿಹಾರವನ್ನು ನೀಡುವತ್ತ ಹೆಜ್ಜೆ ಇಟ್ಟಿದೆ.












Click it and Unblock the Notifications