ವಿಶ್ವ ಕನ್ನಡ ಸಮ್ಮೇಳನಕ್ಕೊಂದು ಸುಂದರ ಅಪ್ಲಿಕೇಷನ್
ಬೆಂಗಳೂರು, ಮೇ.20: ವಿಶ್ವ ಕನ್ನಡ ಸಮ್ಮೇಳನ 2014 ಸಮಿತಿ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಷನ್ ಅನ್ನು ಲೋಕಾರ್ಪಣೆ ಮಾಡಿದೆ. ಈ ಅಪ್ಲಿಕೇಷನ್ ಮೂಲಕ ಸಮ್ಮೇಳನ ಕುರಿತಂತೆ ಎಲ್ಲಾ ಮಾಹಿತಿಗಳನ್ನು ನಿಮ್ಮ ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ.
ಆಂಡ್ರಾಯ್ಡ್ ಆಧಾರಿತ ಫೋನ್ ಉಳ್ಳವರು ಗೂಗಲ್ ಪ್ಲೇ ನಲ್ಲಿ iAKKA 2014 ಎಂದು ಸರ್ಚ್ ಮಾಡಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಮೊಬೈಲ್ ಅಪ್ಲಿಕೇಷನ್ ಐಫೋನ್, ಟ್ಯಾಬ್ಲೆಟ್ ಗಳಲ್ಲೂ ಕಾರ್ಯ ನಿರ್ವಹಿಸುತ್ತದೆ.
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರನ್ನು ಒಂದೆಡೆ ಬೆಸೆಯುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಅಕ್ಕ ಸಂಸ್ಥೆ ಈಗ ತಂತ್ರಜ್ಞಾನದ ಮೂಲಕ ಎನ್ನಾರೈ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. 8ನೆ ಅಕ್ಕ ವಿಶ್ವ ಸಮ್ಮೇಳನ ಸಾಧನೆ, ಸಂಭ್ರಮ, ಸಂಕಲ್ಪದ ಸಮಾಗಮವಾಗಲಿದೆ ಎಂದು ಅಕ್ಕ ಸಂಸ್ಥೆ ಅಧ್ಯಕ್ಷ ಹಳೆಕೋಟೆ ಎನ್. ವಿಶ್ವಾಮಿತ್ರ ಅವರು ಹೇಳಿದ್ದಾರೆ.

ಹೊರನಾಡಿನ ಕನ್ನಡಿಗರ ಅತಿ ದೊಡ್ಡ ಸಂಸ್ಥೆಯಾದ 'ಅಕ್ಕ' ಅಮೆರಿಕನ್ನಡಿಗರ ಆಶೋತ್ತರಗಳನ್ನು, ಕನ್ನಡ ನಾಡಿನ ನಡೆ, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸಂಸ್ಥೆ. ಉತ್ತರ ಅಮೆರಿಕದಲ್ಲಿನ ಕನ್ನಡಿಗರ ಮತ್ತು ಕರ್ನಾಟಕದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಯೋಗ್ಯವಾದ ವೇದಿಕೆಗಳನ್ನು ಅಕ್ಕ ಕಳೆದ 15 ವರ್ಷಗಳಿಂದ ಒದಗಿಸುತ್ತಿದೆ ಎಂದು ಅಕ್ಕ ಅಧ್ಯಕ್ಷ ಎಚ್.ಎನ್ ವಿಶ್ವಾಮಿತ್ರ ತಿಳಿಸಿದ್ದಾರೆ.
iAKKA 2014 ಅಪ್ಲಿಕೇಷನ್ ಮೂಲಕ ಅಕ್ಕ ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಬಹುದು, ಸಮ್ಮೇಳನದ ವೇಳಾಪಟ್ಟಿ, ರಿಯಲ್ ಟೈಮ್ ಉದ್ಘೋಷಣೆಗಳು, ಮುಂಬರುವ ಕಾರ್ಯಕ್ರಮಗಳು, ಸಮ್ಮೇಳನ ಕುರಿತಂತೆ ವಿಡಿಯೋಗಳು, ಫೇಸ್ ಬುಕ್ ಮೂಲಕ ನೋಂದಾಯಿಸಿಕೊಳ್ಳುವುದು, ಫೇಸ್ ಬುಕ್ ಗ್ರೂಪ್, ಅಕ್ಕ ವೆಬ್ ತಾಣಕ್ಕೆ ಲಿಂಕ್, ಸಮ್ಮೇಳನ ನಡೆಯುವ ತಾಣದ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.












Click it and Unblock the Notifications