ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯಗೋಷ್ಠಿ; ಆಹ್ವಾನ

ಮುಖ್ಯವೇದಿಕೆಯಲ್ಲಿ ಇವರುಗಳ ಭಾಷಣವನ್ನು ಕೇಳುವ ಸದವಕಾಶ ನಮ್ಮೆಲ್ಲರಿಗೂ ದೊರಕಲಿದೆ. ಅದೇ ರೀತಿ, ಸಮಾನಾಂತರ ವೇದಿಕೆಗಳಲ್ಲಿ ಸಾಹಿತ್ಯ ಸಲ್ಲಾಪ, ಕವಿಗೋಷ್ಠಿ, ವಿಚಾರಸಂಕಿರಣ ಮತ್ತು ಸಾಹಿತಿಗಳೊಂದಿಗೆ ಸಭಾಸದರ ಸಂವಾದ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಅಮೆರಿಕದಲ್ಲಿ ನೆಲಸಿರುವ ಹಾಗು ಕರ್ನಾಟಕದಿಂದ ಬರುವ ಕನ್ನಡ ಬರಹಗಾರರು ಈ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಚ್ಛಿಸುವವರು ಕೆಳಗೆ ನಮೂದಿಸಿರುವ ವಿಳಾಸಕ್ಕೆ ವಿ-ಅಂಚೆ ಕಳುಹಿಸುವುದರ ಮೂಲಕ ತಮ್ಮ ಇಂಗಿತವನ್ನು ವ್ಯಕ್ತಪಡಿಸಬೇಕೆಂದು ಸಾಹಿತ್ಯ ಸಮಿತಿ ಈ ಮೂಲಕ ಕೋರುತ್ತದೆ. ದಯವಿಟ್ಟು ಗಮನಿಸಿ: ಈಗಾಗಲೇ ತಮ್ಮ ಆಶಯವನ್ನು ವ್ಯಕ್ತಪಡಿಸಿದವರೂ ಸಹ ಮತ್ತೊಮ್ಮೆ ನಮ್ಮನ್ನು ಸಂಪರ್ಕಿಸಬೇಕಾಗಿ ವಿನಂತಿ. (ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ಯಾವ ಗೋಷ್ಠಿಯಲ್ಲಿ ಭಾಗವಹಿಸಲು ಇಷ್ಟ, ಏನನ್ನು ಓದುವಿರಿ/ಮಂಡಿಸುವಿರಿ, ಇತ್ಯಾದಿ ವಿವರಗಳನ್ನು ಕೊಡಲು ಮರೆಯದಿರಿ.)
ಗೋಷ್ಠಿಗಳಲ್ಲಿ, ಸ್ವಂತ ಕವನಗಳನ್ನು, ಚುಟುಕಗಳನ್ನು, ಲಘು ಪ್ರಬಂಧಗಳನ್ನು, ಅಥವಾ ವೈಚಾರಿಕ ಪ್ರಬಂಧಗಳನ್ನು ಮಂಡಿಸಲು ಅವಕಾಶವಿರುತ್ತದೆ. ಉದಾಹರಣೆಯ ರೂಪದಲ್ಲಿ: 'ನನ್ನ ಮೆಚ್ಚಿನ ಬರಹಗಾರ;" 'ನಾನು ಇತ್ತೀಚೆಗೆ ಓದಿದ ಸ್ವಾರಸ್ಯಕರ ಪುಸ್ತಕ;" 'ನನ್ನನ್ನು ರೋಮಾಂಚನಗೊಳಿಸುವ ಕವಿತೆ;" 'ನಾನು ಮೆಚ್ಚಿದ ಚಲನಚಿತ್ರ;" 'ನಾನು ನೋಡಿದ ಉತ್ತಮ ನಾಟಕ;" 'ಅಮೆರಿಕದಲ್ಲಿ ಕನ್ನಡ;" 'ಮಕ್ಕಳಿಗೆ ಕನ್ನಡ ಕಲಿಸುವ ಬಗೆ;" 'ದೊಡ್ಡವರಿಗೆ ಕನ್ನಡ ಕಲಿಸುವ ಬಗೆ;" 'ಅಮೆರಿಕದ ಕನ್ನಡ ಸಂಘಗಳಲ್ಲಿ ಕನ್ನಡ ಚಟುವಟಿಕೆಗಳು;" 'ಕನ್ನಡದಲ್ಲಿ ಹಾಸ್ಯ;" 'ಅಮೆರಿಕದಲ್ಲಿ/ಭಾರತದಲ್ಲಿ ನಿವೃತ್ತಿಜೀವನದ ಸವಾಲುಗಳು"(ಸಾಂಸಾರಿಕ ಜೀವನದ ರಸಮಯ ಸನ್ನಿವೇಶಗಳ ಚಿತ್ರಣವೇ ಹೊರತು ಸಮಾಜಶಾಸ್ತ್ರದ ದೃಷ್ಟಿಯಿಂದ ಗಂಭೀರ ಚರ್ಚೆ ಅಲ್ಲ!)
ಹೀಗೆ ಒಂದೇ, ಎರಡೇ? ನಿಮ್ಮ ಸೃಜನಶೀಲ ಮನಸ್ಸಿನಲ್ಲಿ ಹುಟ್ಟಬಹುದಾದ ಯಾವುದೇ ವಿಚಾರವನ್ನು ಭಟ್ಟಿ ಇಳಿಸಿ ಐದಾರು ನಿಮಿಷಗಳಲ್ಲಿ ಸಹೃದಯ ಸಭಾಸದರೊಂದಿಗೆ ಹಂಚಿಕೊಳ್ಳಲು ನಿಮಗೆ ಆಸೆಯಿದ್ದರೆ, ಇದೋ, ನಾವು ಒದಗಿಸುತ್ತೇವೆ ನಿಮಗೆ ಒಂದು ಸುವರ್ಣಾವಕಾಶ! ಉಪಯೋಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ! ಬರಹ ಯಾವುದೇ ಆದರೂ ಅದು ಸಾಹಿತ್ಯಾತ್ಮಕವಾಗಿರಬೇಕೆಂಬುದು ನಮ್ಮ ಆಶಯ.
ಒಟ್ಟು ಎಷ್ಟು ಗೋಷ್ಠಿಗಳು? ತಲಾ ಎಷ್ಟೆಷ್ಟು ನಿಮಿಷಗಳು? 'ಏನೇನು ನಿರ್ಬಂಧಗಳು?"--ಇವೇ ಮುಂತಾದ ನಿಮ್ಮ ಸಹಜ ಕುತೂಹಲದ ಪ್ರಶ್ನೆಗಳಿಗೆ ಈಗಲೇ ನಿರ್ದಿಷ್ಟವಾದ ಜವಾಬುಕೊಡುವುದು ಕಷ್ಟ, ಏಕೆಂದರೆ, ಎಷ್ಟು ಮಂದಿ ಉತ್ಸಾಹ ತೋರುತ್ತಾರೋ ನೋಡಿಕೊಂಡು ನಮ್ಮ ಯೋಜನೆಯನ್ನು ಚೂಪುಗೊಳಿಸಿ, ನಂತರ ನಿಮ್ಮ ಕಾಲದ ಇತಿ-ಮಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಸಾಧ್ಯವಾದಷ್ಟೂ ಹೆಚ್ಚು ಮಂದಿಗೆ ಅವಕಾಶ ನೀಡಲು ಪ್ರಯತ್ನಿಸುತ್ತೇವೆ.
ಎಲ್ಲಕ್ಕಿಂತ ಮೊದಲು, ಕೆಳಕಂಡವರನ್ನು ಕೂಡಲೆ ನೀವು ಸಂಪರ್ಕಿಸಿ ಭಾಗವಹಿಸುವ ನಿಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ. ಹ್ಞಾ, ಮುಖ್ಯವಾದ ಒಂದು ನಿರ್ಬಂಧವಿದೆ, ಅದೇನೆಂದರೆ --ಸಮ್ಮೇಳನದಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಸಾಹಿತ್ಯಗೋಷ್ಠಿಗಳಲ್ಲಿ ಅವಕಾಶ! ಇನ್ನೂ ನೋಂದಾಯಿಸಿಕೊಂಡಿಲ್ಲವೇ? ಕೂಡಲೇ ನೋಂದಾಯಿಸಿಕೊಳ್ಳಿ. ಸದವಕಾಶವನ್ನು ಕಳೆದುಕೊಂಡು ಮರುಗಬೇಡಿ! ತ್ವರೆ ಮಾಡಿ.
ಸಾಹಿತ್ಯ ಸಮಿತಿಯ ಪರವಾಗಿ,
ಮೈ.ಶ್ರೀ. ನಟರಾಜ
ವಿ-ಅಂಚೆಯ ವಿಳಾಸ: [email protected]











Click it and Unblock the Notifications