ನಾವಿಕದಲ್ಲಿ ಮೆರವಣಿಗೆ ಊಟ ಪ್ರವಾಸ

ಮೆರವಣಿಗೆಯ ಮಂಚೂಣಿಯಲ್ಲಿ ಮಂಗಳ ಕಾರ್ಯ ಮೊಳಗಿಸುವ ನಾಗಸ್ವರ ವಾದ್ಯ ಇರುತ್ತದೆ. ಕಲಾವಿದರು ರಾಮದಾಸ್. ಮೈಸೂರು ದಸರಾ ಮೆರವಣಿಗೆಯನ್ನು ಸಾಂಕೇತಿಕವಾಗಿ ನೆನಪಿಸುವ ಸಲುವಾಗಿ ಒಂದು ಮರಿ ಆನೆಯನ್ನು ಮೆರವಣಿಗೆಗೆ ತರಲಾಗುತ್ತಿದೆ. ಮರಿಯಾನೆಯ ಉಪಸ್ಥಿತಿ ಅಮೆರಿಕಾದ ಕನ್ನಡ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗುವುದು ನಿಶ್ಚಿತ.
ಸಮಾವೇಶದಲ್ಲಿ ಕನ್ನಡ ನಾಲಗೆ ರುಚಿ ಗ್ರಂಥಿಗಳನ್ನು ಕೆಣಕುವ ಆಹಾರ ವಿಶೇಷಗಳಿರುತ್ತವೆ. ರಾಗಿ ಮುದ್ದೆ ಅವರೆಕಾಳು ಸಾರು, ಜೋಳದ ರೊಟ್ಟಿ ಕಾಯಿಪಲ್ಲೆ, ಬಿಸಿಬೇಳೆ ಅನ್ನ, ಇಡ್ಲಿ ವಡೆ, ಉಸಳಿಗಳು, ಹೋಳಿಗೆ, ಗಸಗಸೆ, ಮೈಸೂರು ಪಾಕ ಮುಂತಾದ ಭಕ್ಷಭೋಜ್ಯಗಳು ಪ್ರತಿನಿಧಿಗಳನ್ನು ಸಂತುಷ್ಟಗೊಳಿಸುವ ನೀರೀಕ್ಷೆಯಿದೆ.
ಪ್ರತಿನಿಧಿಗಳಿಗೆ ಲಾಸ್ ಏಂಜಲಿಸ್ ಮುತ್ತಮುತ್ತ ಇರುವ ಪ್ರವಾಸಿ ತಾಣಗಳನ್ನು ಪರಿಚಯಿಸುವ ಹೊರ ಸಂಚಾರ ಕಾರ್ಯಕ್ರಮ ಇದೆ. ನಾವಿಕದ ವಿಶೇಷ ಸುವಿಹಾರಿ ಬಸ್ಸುಗಳಲ್ಲಿ ಪ್ರತಿನಿಧಿಗಳು ಸ್ಯಾನ್ ಹೋಸೆ, ಸಾಕ್ರಮೆಂಟೊ, ಸ್ಯಾನ್ ಡಿಯಾಗೋ ಮತ್ತು ಫೀನಿಕ್ಸ್ ರಾಜ್ಯಗಳನ್ನು ನೋಡಬಹುದಾಗಿದೆ.
ಇಷ್ಟೆಲ್ಲ ಆಕರ್ಷಣೆಗಳ ಉದ್ದೇಶ ಬರೀ ತಿಂದು, ಕುಡಿದು, ಹಾಡಿ, ಮೋಜು ಮಸ್ತಿ ಮಾಡುವುದು ಮಾತ್ರವಲ್ಲ. ಬರಲಿರುವ ವರ್ಷಗಳಲ್ಲಿ ನಾವಿಕ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ಬೆಳೆಯಬೇಕಾಗಿದೆ. ನಾವಿಕ ಹಮ್ಮಿಕೊಂಡಿರುವ ಜ್ಞಾನ ವಿನಿಮಯ, ಆರೋಗ್ಯ ವಿನಿಮಯ, ಶಿಕ್ಷಣ ವಿನಿಮಯ ಮತ್ತು ಕರ್ನಾಟಕದ ಹಿಂದುಳಿದ ಹಳ್ಳಿಗಳನ್ನು ದತ್ತು ಪಡೆಯುವ ಯೋಜನೆಗಳು ಸಫಲವಾಗುವ ಹಾದಿಯಲ್ಲಿ ಈ ಉತ್ಸವ ಕನ್ನಡ ಜನ ಮತ್ತು ಕನ್ನಡನಾಡಿನ ಶುಭೋದಯಗಳಿಗೆ ಕಹಳೆಯಾಗಬೇಕು ಎಂದು ಹೇಳಿ ಶ್ರೀ ಅಯ್ಯಂಗಾರ್ ಲ್ಯಾಪ್ ಟಾಪ್ ಆಫ್ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ನಾವಿಕದ ನಿಯೋಜಿತ ಅಧ್ಯಕ್ಷ ಫ್ಲಾರಿಡಾದ ಕೇಶವ ಬಾಬು ಮತ್ತು ನಾವಿಕದ ಭಾರತೀಯ ಸಂಯೋಜನಾಧಿಕಾರಿ ಎಂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.











Click it and Unblock the Notifications