ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಶಿಕಾಗೊ ಸಮ್ಮೇಳನದ ಉಳಿದ ಸತ್ಯ

By Staff
|
Google Oneindia Kannada News

ಶಿಕಾಗೋ ಸಮ್ಮೇಳನ ತುಂಬಾ ಚೆನ್ನಾಗಿ ನಡೆಯಿತೆಂಬ ವರದಿಗಳು ದಟ್ಸ್ ಕನ್ನಡದಲ್ಲಿ ಪ್ರಕಟವಾಗಿವೆ. ನಿಜ. ಆದರೆ ಅದು ಅರ್ಧ ಸತ್ಯ! ಇತರ ಸಮ್ಮೇಳನಗಳಿಗಿಂತ ಇದು ಹೆಚ್ಚು ಅಚ್ಚುಕಟ್ಟಾಗಿತ್ತು ಎನ್ನುವುದಕ್ಕೆ ನಾನೂ ಸಾಕ್ಷಿ. ಆದರೆ ಇದೇ ಪರಮ ಸತ್ಯವಲ್ಲ. ಸಮ್ಮೇಳನದ ಅಂಗಳದಲ್ಲಿ ಮತ್ತು ಅಕ್ಕ - ವಿದ್ಯಾರಣ್ಯ ನೇಪಥ್ಯದಲ್ಲಿ ಅನೇಕ ಓರೆಕೋರೆಗಳಿದ್ದವು. ನಾವು ಕನ್ನಡಿಗರು ಕಲಿಯುವುದಕ್ಕಿಂತ ತಿದ್ದಿಕೊಳ್ಳುವುದು ಸಾಕಷ್ಟಿದೆ ಎನ್ನುವುದನ್ನು ಕನ್ನಡ ಪ್ರಪಂಚಕ್ಕೆ ತಿಳಿಸುವ ಉದ್ದೇಶದಿಂದ ನನ್ನ ಕೆಲವು ಅನಿಸಿಕೆಗಳನ್ನು ಈ ಮುಖಾಂತರ ಹೇಳುತ್ತಿದ್ದೇನೆ. ಅಷ್ಟೇ ವಿನಹ, ಕೆನೆಮೊಸರಲ್ಲಿ ಕಲ್ಲು ಹುಡುಕುವುದು ನನ್ನ ಧ್ಯೇಯವಲ್ಲ -ಲೇಖಕಿ

*ಪಾರಿಜಾತ, ಓರ್ವ ಅಟ್ಟೆಂಡೀ , ಶಿಕಾಗೊ

 WKC-5: Learning and unlearningದೂರದ ಕರ್ನಾಟಕದಿಂದ ಕಲಾವಿದರು, ಸಾಹಿತಿಗಳು, ಉದ್ಯಮಪತಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಲ್ಲೀತನಕ ಆಗಮಿಸಿದ್ದೇನೋ ನಿಜ. ಆದರೆ, ಬಹಳ ಮಂದಿ ಕಲಾವಿದರನ್ನು ಕರೆಸಿ, ಹಿಂದಿನ ಸಮ್ಮೇಳನಗಳಂತೆಯೇ ಯಾವ ಕಾರ್ಯಕ್ರಮವನ್ನೂ ನಿಗದಿತ ವೇಳೆಯಲ್ಲಿ ನಡೆಸಲು ಸಾಧ್ಯವಾಗದೆ, ಸಮಯಪಾಲನೆ ಮಾಡದೆ ವಿಶ್ವಕನ್ನಡ ಸಮ್ಮೇಳನದ ವೇದಿಕೆ ಅವಾಂತರದಲ್ಲಿ ಮುಳುಗುವಂತೆ ಮಾಡಿದ್ದು ಸರಿಯೇ?

ಆತಿಥೇಯ ಕೂಟ (ವಿದ್ಯಾರಣ್ಯ) ತನ್ನದೇ ಕಾರ್ಯಕ್ರಮಗಳನ್ನು ಶುಕ್ರವಾರದಿಂದಲೇ ಶುರುಹಚ್ಚಿಕೊಂಡು, ಇತರ ಕೂಟಗಳ ಕಲಾವಿದರನ್ನು ಕಾಯಿಸಿ, ನಂತರ ಬಲವಂತವಾಗಿ ವೇದಿಕೆಯನ್ನು ಬಿಟ್ಟುಕೊಡುವಂತೆ ಪದಾಧಿಕಾರಿಗಳಿಂದ ನೂಕಿಸಿಕೊಂಡು ಹೋಗಿದ್ದು, ನಮ್ಮ ಸಂಸ್ಕೃತಿಗೆ ಧಕ್ಕೆ ತರುವ ಕೆಲಸವಲ್ಲವೇ? ಉದಾಹರಣೆಗೆ; ಶ್ರೀಮತಿ ಅಲಮೇಲು ಅಯ್ಯಂಗಾರ್ ತಮ್ಮ ತಂಡದ ಜೊತೆ ಕಲಾವಿದರ ಪರಿಚಯಕ್ಕೆ ಬಂದಾಗ ಕಿರುಚಿ ವೇದಿಕೆ ಬಿಟ್ಟು ಕೊಡುವಂತೆ ಮಾಡಿದ ಪದಾಧಿಕಾರಿಯನ್ನು ಮರೆಯಲಾದೀತೆ?

ಊಟಕ್ಕೆ, ತಿಂಡಿಗೆ ಚೀಟಿಗಳಂತೂ ಇರಲಿಲ್ಲ ಮತ್ತು ಉದ್ದುದ್ದ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿರಲಿಲ್ಲ. ಇದು ನಿಜಕ್ಕೂ ಒಳ್ಳೆಯ ನಿರ್ವಹಣೆ. ಮುಂದಿನ ಸಮ್ಮೇಳನ ನಿರ್ವಾಹಕರು ಇದನ್ನು ಪರಿಸಾಲಿಸಬೇಕು. ಆದರೆ, ಚಪಾತಿ ಒಣಕಲು ರೊಟ್ಟಿಯ ಹಾಗಿತ್ತು. ಸೊಪ್ಪಿನ ಪಲ್ಯವೋ ಇಲ್ಲ ಬೆಳ್ಳುಳ್ಳಿಯ ಪಲ್ಯವೋ ಹೇಳಲು ಆಗದು. ಹೋಳಿಗೆ ಔತಣಕ್ಕೆ ಸರಿಯಾದ ಭಕ್ಷ್ಯ. ಆದರೆ, ಅದು ಸಿಹಿ ಚಪಾತಿಯಾಗಿ ಮಾರ್ಪಟ್ಟಿತ್ತು. ಇದು ಶ್ರೀಮತಿ. ಜಯಮ್ಮನವರು ತಯಾರಿಸಿದ್ದೇ ಅನ್ನುವ ಅನುಮಾನ ಎಲ್ಲರನ್ನೂ ಕಾಡಿತ್ತು.

ನೋಂದಣಿಯ ದಿನದಿಂದಲೇ ತೊಡಕುಗಳು ಎದ್ದು ಕಾಣುತ್ತಿತ್ತು. ಮುಖ್ಯದ್ವಾರದಿಂದ ನೋಂದಣಿ ಸ್ಥಳಕ್ಕೆ ಹೋಗುವಲ್ಲಿಗೆ ದಾರಿಯಾವುದೆಂದು ತಿಳಿಸಲು ಫಲಕಗಳಿರಲಿಲ್ಲ. ಬೇರೆ ಊರಿನ ಹಿರಿಯರೊಬ್ಬರು ನಮ್ಮನ್ನು ಏಳುಸುತ್ತಿನ ಕೋಟೆಯ ಮುಖಾಂತರ ನೋಂದಣಿ ಮಾಡುವ ಸಾಲಿಗೆ ಕರೆದುಕೊಂಡು ಹೋದರು. ಆತಿಥೇಯ ಕೂಟದ ಸದಸ್ಯರಾರೂ ನೋಂದಣಿ ಸಾಲಿನಲ್ಲಿ ನಿಲ್ಲುವವರೆಗೂ ಕಾಣಿಸಲಿಲ್ಲ. ಯಥಾಪ್ರಕಾರ, ಕಡೆಯ, ಮೊದಲ ಹೆಸರಿನಲ್ಲಿ ನಾಮಫಲಕಗಳನ್ನು ಹುಡುಕಿಸಿಕೊಂಡು ಸ್ಮರಣ ಸಂಚಿಕೆ ತೆಗೆದುಕೊಂಡು ಬರಲು ಅರ್ಧ ಗಂಟೆಯೇ ಹಿಡಿಯಿತು. ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರೂ ಸಹ ಅಟ್ಟೆನ್ಡೀ ( ಸಮ್ಮೇಳನದಲ್ಲಿ ಭಾಗವಹಿಸಿದವರು) ಅನ್ನುವ ಫಲಕಗಳನ್ನು ಹಾಕಿಕೊಂಡು ಓಡಾಡುತ್ತಿದ್ದರು.

ಸಮ್ಮೇಳನದ ಮೂರು ದಿನಗಳು ಸಹ ಕೆಲವೇ ಪದಾಧಿಕಾರಿಗಳು ಬೇರೆಯವರಿಂದ ಬರೆಸಿಕೊಂಡ ಭಾಷಣಗಳನ್ನು ಓದುವ ಪರಿ ಆಶ್ಚರ್ಯಮೂಡಿಸಿತು. ಇವರಾರಿಗೂ ಕನ್ನಡವೇ ಬರುವುದಿಲ್ಲವಾ ಎಂದು ಅಂಜಿಕೆಯಾಯಿತು. ಯಾಕೆಂದರೆ, ಸಮ್ಮೇಳನದ ಕಡೆಯದಿನದ ಹೊತ್ತಿಗೆ ಪದಾಧಿಕಾರಿಗಳ ಗಂಟಲು ಕಟ್ಟಿ ಬರಿ ಗೊಗ್ಗರು ದ್ವನಿ ಕೇಳುತ್ತಿತ್ತು. ಕ್ಯಾಮರಾ ಕಣ್ಣಿಗೆ ಬೀಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದ ಸೂಟು ಬೂಟುಧಾರಿಗಳು ಪ್ರಕಟನೆಗಳನ್ನು ಓದುವ ನೆಪದಲ್ಲಿ ವೇದಿಕೆಯ ಮೇಲೆ ಠಳಾಯಿಸುತ್ತಿದ್ದ ದೃಶ್ಯ ಮಾಲಿನ್ಯ ಕಿರಿಕಿರಿ ಉಂಟುಮಾಡಿತು.

ಸಮಾನಾಂತರ ಕಾರ್ಯಕ್ರಮಗಳು ಸಹ ಒಳ್ಳೆಯ ಕಲಾವಿದರದ್ದಾದ್ದರಿಂದ ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೆ ಸಿಲುಕಿಸಿತ್ತು. ಚಲನಚಿತ್ರದ ನಾಯಕ/ನಾಯಕಿಯರು ಕಣ್ಣಿಗೆ ಸುಂದರ ಬಣ್ಣ ಬಳಿದುಕೊಂಡು ಮಿಂಚುತ್ತಿರುತ್ತಾರೆ, ಆದರೆ ವೇದಿಕೆಗೆ ಬಂದರೆ ಬೆ, ಬೆ, ಬ್ಬ್ಬೇ ಅನ್ನುತ್ತಾರೆ. ಆದರೂ, 5 ಸಮ್ಮೇಳನಕ್ಕೂ ತಪ್ಪದೆ ಹಾಜರಾಗುವ ಇವರು ಏನಾದರೂ ಕುಂಟು ನೆಪವೊಡ್ಡುವುದನ್ನು ಬಿಡುವುದಿಲ್ಲ. ಈ ಬಾರಿಯ ಸಮ್ಮೇಳನ ಇದಕ್ಕೇನು ಹೊರತಾಗಿರಲಿಲ್ಲ. ನಟ ಉಪೇಂದ್ರ ಪಕ್ಕದಲ್ಲೇ ನಿಂತಿದ್ದ ಅಮರ್ ನಾಥ ಗೌಡರು ಹೇಳಿ ಕೊಡುತ್ತಿದ್ದ ಮಾತುಗಳನ್ನು ಮಕ್ಕಿಕಾಮಕ್ಕೀ ಗಿಳಿಪಾಠ ಒಪ್ಪಿಸುತ್ತಿದ್ದರು. ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಗೈರುಹಾಜರಾಗಿ ಆನಂತರ ಸಮಜಾಯಿಸಿ ನೀಡಿದ ಉಪೇಂದ್ರರ ಮಾತುಗಳನ್ನು ನಾನಂತೂ ನಂಬುವುದಿಲ್ಲ.

ಅಕ್ಕ ಐಡಲ್ ನಡೆಸುವ ಉದ್ದೇಶ ಉದಯೋನ್ಮುಖ ಕಲಾವಿದರನ್ನು ಹೆಕ್ಕಿ ತೆಗೆಯುವುದೇ ಆಗಿದೆ. ಶ್ರೀಮತಿ. ಮೇಘ ಸಾರಥಿ ಒಬ್ಬ ಹೆಸರಾಂತ ಗಾಯಕಿ. ಅವರ ಬಗ್ಗೆ ನನಗೆ ಗೌರವವಿದೆ. ಇವರನ್ನು ಪ್ರತಿ ಬಾರಿಯೂ ಪ್ರತಿಸ್ಪರ್ಧಿಯಾಗಿ ನಿಲ್ಲಿಸಿದರೆ ಉದಯೋನ್ಮುಖ ಗಾಯಕಿಯರು ಸ್ಪರ್ಧಿಸುವುದನ್ನೇ ಬಿಟ್ಟಾರು. ಯಾಕೆಂದರೆ, ಬೇರೆಯವರಿಗೆ ಅವಕಾಶಗಳೇ ಇರುವುದಿಲ್ಲ. ಗೆಲ್ಲುವವರು ಯಾರೆಂಬುದು ಖಚಿತವಾಗಿರುತ್ತೆ.

ಅಮೆರಿಕನ್ನಡಿಗರಿಂದ ಲೇಖನಗಳನ್ನು ಆಹ್ವಾನಿಸಿ, ಕರ್ನಾಟಕದ ಲೇಖಕರ ಬರಹಗಳಿಗೆ ಆದ್ಯತೆ ನೀಡದಿರುವುದು ಈ ಬಾರಿಯ ಸ್ಮರಣ ಸಂಚಿಕೆ "ಮಂಥನ "ದ ಕುಗ್ಗಳಿಕೆ. ಅಮೆರಿಕೆಯಲ್ಲಿ ಕನ್ನಡದ ಪುಸ್ತಕಗಳು ಹೆಚ್ಚಾಗಿ ಲಭ್ಯವಿಲ್ಲ. ಹಾಗಾಗಿ, ಕೆಲವು ಮಹನೀಯರು ಮತ್ತು ಮಹಿಳೆಯರು ಅವರಿವರಿಂದ ಎರವಲು ತಂದು, ಮನೆಯವರಿಂದ ಭಾರತದಿಂದ ಪುಸ್ತಕಗಳನ್ನು ತರೆಸಿಕೊಂಡು ಬರಹಗಳನ್ನು ಕಳುಹಿಸಿದ್ದಾರೆ. ಸ್ಥಳೀಯ ಕನ್ನಡ ಬರಹಗಾರರಿಗೆ ಆದ್ಯತೆ ನೀಡದಿದ್ದ ಮೇಲೆ ಅಮೆರಿಕಾದಲ್ಲಿ ಸಮ್ಮೇಳನ ಏರ್ಪಡಿಸಿ ಏನು ಬಂತು ಪ್ರಯೋಜನ? ನಾವು ಕರ್ನಾಟಕದಲ್ಲಿ ನಡೆಯುವ ಸಮ್ಮೇಳನಗಳಿಗೆ ಹೋದಾಗ ನಮಗೆ ಅಲ್ಲಿ ಅಷ್ಟು ಮರ್ಯಾದೆ ಕೊಡುತ್ತಾರಾ? ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಕಮಿಟಿಯವರು ಅನಿವಾಸಿ ಬರಹಗಾರರ ಲೇಖನಗಳನ್ನು ಕೇಳಿ ಪಡೆಯುತ್ತಾರಾ ?

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ! ಅಮೆರಿಕೆಯಲ್ಲೂ ಕಲ್ಲು, ಮುಳ್ಳು , ಹಳ್ಳ, ದಿಣ್ಣೆ ಎಲ್ಲವೂ ಇದೆ. ಕನ್ನಡ ಭಾಷೆ ಬರತ್ತೆ ಅಂತ ನಟನೆ ಮಾಡುವ ಸಾಮರ್ಥ್ಯ ಇಲ್ಲಿ ಅನೇಕರಿಗಿದೆ. ಯಾ, ಯಾ, ಎಂತಲೇ ನರ್ತಿಸಿ, ಮೈ ಪ್ರದರ್ಶನ ಮಾಡಿ ಹಲ್ಲುಕಿರಿದು, ಕೃತಕ ನಗೆ ಬೀರಿ ಬಿಗುಮಾನವನ್ನು ಪ್ರದರ್ಶಿಸುತ್ತಾರೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಲ್ಲವೆಂದು ಗೊತ್ತಿದ್ದರೂ ಕನ್ನಡದ ಮಕ್ಕಳು ಅಪ್ಪ,ಅಮ್ಮನ ಕುಮ್ಮಕ್ಕಿನಿಂದ ಕುಣಿದು ಕುಪ್ಪಳಿಸುತ್ತಾರೆ. ಇದೇನ, ಸಭ್ಯತೆ, ಇದೇನ ಸಂಸ್ಕೃತಿ ಹಾಡನ್ನು ಇವರಿಗಾಗಿಯೇ ಬರೆದಂತಿದೆ.

ಓಡಾಡುವ ಮಗು ಎಡವವುದು ಸಹಜ. ಆದರೆ ಅಮೆರಿಕದ ಅಕ್ಕನಿಗೆ 10 ವರುಷಗಳಾಗಿದ್ದರೂ ಇನ್ನೂ ಮುಗ್ಗರಿಸಿ ಬೀಳುತ್ತಿರುವುದು ವಿಷಾದದ ಸಂಗತಿ. ಅಕ್ಕಳ ಸಂಬಂಧ ಎಲ್ಲರೊಡನೆ ಸೌಹಾರ್ದಯುತವಾಗಿಲ್ಲ. ಆಂತರಿಕ ಜಗಳ ಕದನಗಳು, ಪದಾಧಿಕಾರಿಗಳ ನಡುವೆ ವಿರಸ, ಎಲ್ಲಕ್ಕಿಂತ ಮಿಗಿಲಾಗಿ ಜಾತಿಯ ಪಿಡುಗು ಎದ್ದು ಕಾಣುತ್ತಿದೆ. ಕನ್ನಡ ಕೂಟಗಳ ಆಗರವಾಗುವ ಬದಲಿಗೆ ಅಕ್ಕ ಒಂದು ಪಂಗಡದ ಕೂಟವಾಗಿ ಮಾರ್ಪಟ್ಟಿದೆ.

ಈ ಮನೋಭಾವದ ವಿಶ್ವ ಸಮ್ಮೇಳನಕ್ಕೆ ಏನು ತಾನೆ ಸಂದೇಶ ಕೊಡಲು ಸಾಧ್ಯ? ಶಿಕಾಗೋದ ಬಹಳ ಜನ ಸಮ್ಮೇಳನದ ಕಡೆ ಮುಖ ಮಾಡಿ ಕೂಡ ನಿಲ್ಲಲಿಲ್ಲ. ಅಲ್ಲಿಗೆ ಬಂದು ಸಾವಿರಾರು ಡಾಲರ್ ವ್ಯಯ ಮಾಡುವ ಬದಲಿಗೆ ಹೆಂಡತಿ ಮಕ್ಕಳೊಂದಿಗೆ 4 ದಿನ ರಜೆಯನ್ನು ಸಂತೋಷವಾಗಿ ಕಳೆದು ಬರುತ್ತೇವೆಂದು ಅನೇಕರು ಊರು ಬಿಟ್ಟು ಹೋಗಿದ್ದಿದೆ. ಜನರಿಗೆ ಮರ್ಯಾದೆ ಕೊಟ್ಟು, ಮರ್ಯಾದೆಯನ್ನು ಗಳಿಸುವುದನ್ನು ಕಲಿಯುವುದಕ್ಕೆ ಯಾವ ಚುಚ್ಚುಮದ್ದಿನ ಅವಶ್ಯಕತೆ ಇಲ್ಲ. ನಾನು ಹೇಳಿದ್ದೇ ಆಗಬೇಕು, ಬೇರೆ ಯಾರ ಮಾತನ್ನು ನಾ ಕೇಳುವುದಿಲ್ಲ ಎಂಬ ಕನ್ನಡ ನಾಯಕರ ದುರಹಂಕಾರಕ್ಕೆ ಕೊನೆ ಎಂದು?

ಕಡಲಾಚೆಯ ಊರಿನಲ್ಲಿ ವೈಭವದ ಜಾತ್ರೆ ಯನ್ನು ಸಾಕ್ಷೀಕರಿಸಲು ಪತ್ರಕರ್ತರನ್ನು, ಕನ್ನಡ ಟಿವಿ ಕ್ಯಾಮರಾಗಳನ್ನು ಆಹ್ವಾನಿಸದಿದ್ದುದು ನಿಜಕ್ಕೂ ಅಕ್ಷಮ್ಯ ಅಪರಾಧ. ನನ್ನಂತೆ ಸಮ್ಮೇಳನಾರ್ಥಿಯಾಗಿ ಪೂರ್ವದಿಂದ ಆಗಮಿಸಿದ್ದ ಶ್ರೀವತ್ಸ ಜೋಶಿ ಅವರೇ ಸಮ್ಮೇಳನದ ವರದಿಗಾರ ಹಾಗೂ ಚಿತ್ರಕಾರರ ಕೆಲಸವನ್ನು ಒಬ್ಬರೇ ನಿಭಾಯಿಸುತ್ತಿದ್ದರು. ಇಷ್ಟೊಂದು ಕಷ್ಪಪಟ್ಟು ವ್ಯವಸ್ಥೆಗೊಳಿಸಲಾಗಿದ್ದ ಸಮ್ಮೇಳನಕ್ಕೆ ಪ್ರಚಾರವೇ ಇಲ್ಲದಂತಾದುದಕ್ಕೆ ಯಾರು ಹೊಣೆ? ಕಾವೇರಿ ಕನ್ನಡ ಸಂಘದವರು 2006ರ ಸಮ್ಮೇಳನಕ್ಕೆಂದು ಅಕ್ಕ ವೆಬ್ ಸೈಟಿನಲ್ಲಿ ಪ್ರತ್ಯೇಕ ವಿಭಾಗ ನಿರ್ಮಿಸಿದ್ದರು. ವಿವರಗಳು ಬೇಕಾದಷ್ಟು ಸಿಗುತ್ತಿದ್ದವು. ಆದರೆ, ವಿದ್ಯಾರಣ್ಯದವರು ಆಲ್ ಲೈನ್ ಉಪಯೋಗವನ್ನು ಪಡೆದುಕೊಳ್ಳಲಿಲ್ಲ.

ಮುಂದೆ 2010ರ ಸಮ್ಮೇಳನ ಬಂದೇ ಬರುತ್ತದೆ. ಭಾಷೆ ಉಳಿಸಿ ಬೆಳೆಸಬೇಕಾದ ಸಂದರ್ಭದಲ್ಲಿ ಈ ಉತ್ಸವಗಳು ಮಾದರಿಯಾಗಬೇಕೇ ಹೊರತು ಮಾರಕವಲ್ಲ, ತಿಳಿಯಿರಿ. ಪದಾಧಿಕಾರಿಗಳ ಸ್ವಂತ ಲಾಲಸೆಗಳನ್ನು ಪೂರೈಸುವುದಕ್ಕಾಗಿ ಒಂದು ಸಂಸ್ಥೆ ಮೀಸಲಾಗಬಾರದು. ಎರಡು ದೇಶಗಳ ಸೌಹಾರ್ದತೆ, ಸಂಸ್ಕೃತಿ ಬೆಸೆಯುವ ಕೊಂಡಿಯಾಗಿರಲಿ ಎಂದು ಆಶಿಸುತ್ತಲೇ ಇಂಥ ಲೋಪದೋಷಗಳು ನಿವಾರಣೆ ಆಗಬೇಕೆಂದು ಸಂಬಂಧಪಟ್ಟವರಲ್ಲಿ ವಿನಮ್ರ ಅರಿಕೆ ಮಾಡಿಕೊಳ್ಳುತ್ತೇನೆ. ಪರಿಪೂರ್ಣ ಕನ್ನಡ ಸಮಾಜ ನಿರ್ಮಾಣ ಮಾಡುವ ಕಳಕಳಿ ಇದ್ದವರು, ಎಲ್ಲರಲ್ಲೂ ಒಟ್ಟಿಗೆ ಜತೆಯಾಗಿ ಕರೆದುಕೊಂಡು ಹೋಗಬಲ್ಲ ಸಾಮರ್ಥ್ಯ ಇರುವವರು ಮಾತ್ರ ಮುಂದಿನ ಸಮ್ಮೇಳನದ ಮಂಚೂಣಿಯಲ್ಲಿರಬೇಕು ಎಂದು ಆಗ್ರಹಿಸುತ್ತೇನೆ. ನಮ್ಮ ಮುಂದಿನ ಪೀಳಿಗೆಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಬಳುವಳಿಯಾಗಿ ಕೊಡದೆ, ನಮ್ಮ ಸಂಸ್ಕೃತಿಯನ್ನು ಕೊಟ್ಟು ಮುನ್ನಡೆಸೋಣ. ಜೈ ಕರ್ನಾಟಕ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X