ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾಗೋ ಸಮ್ಮೇಳನಕ್ಕೆ ಅಕ್ಕ ಪದಾಧಿಕಾರಿಗಳ ವೀಳ್ಯ

By Staff
|
Google Oneindia Kannada News

AKKA president Ramesh Gowdaಶಿಕಾಗೋ ವಿಶ್ವ ಕನ್ನಡ ಸಮ್ಮೇಳನ-2008 ನಾನಾ ಮೂಲೆಗಳಲ್ಲಿರುವ ಸಮಸ್ತ ಕನ್ನಡಿಗರ ಆಸಕ್ತಿಯ ಕೇಂದ್ರಬಿಂದುವಾಗಿದೆ. ಸಮ್ಮೇಳನದ ಯಶಸ್ಸಿಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತು ಅವರೊಂದಿಗೆ ಆಹ್ವಾನಿತ ಗಣ್ಯರು, ಉದ್ಯಮ ಕ್ಷೇತ್ರದ ಪ್ರಮುಖರು ಹಾಗು ನಾನಾ ಸಾಹಿತಿ, ಕಲಾವಿದರು ಸಮ್ಮೇಳನಕ್ಕೆ ಆಗಮಿಸುವರು ಎಂಬ ಸಂತಸದಲ್ಲಿ ಉತ್ತರ ಅಮೆರಿಕದ ಕನ್ನಡಿಗರು ಅದ್ಧೂರಿ ಸ್ವಾಗತ ನೀಡುವುದಕ್ಕೆ ಎದುರು ನೋಡುತ್ತಿದ್ದಾರೆ.

ಈ ಸಮ್ಮೇಳನ "ವಿಶ್ವ ಕನ್ನಡಿಗರ ಪರಂಪರೆ - ಪ್ರತಿಭೆ" ಪ್ರತಿಬಿಂಬಿಸುವುದಷ್ಟೆ ಆಗಿರಬೇಕು ಎಂದು ಈ ಬಾರಿಯ ಸಮ್ಮೇಳನದ ಒಟ್ಟಾರೆ ಸ್ವರೂಪವನ್ನು ಕಲ್ಪಿಸಿಕೊಂಡಾಗ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಲಾವಿದರು, ಉದ್ಯಮಿಗಳು ಹಾಗು ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡಿಗರು ಆಗಮಿಸುವರು ಹಾಗೂ ನಮ್ಮ ಉದ್ದೇಶ, ಗುರಿ ಸಾಧನೆಗಳನ್ನು ಆತ್ಮೀಯವಾಗಿ ಅಪ್ಪಿಕೊಳ್ಳುವರು ಎಂದು ಭಾವಿಸಿರಲಿಲ್ಲ. ಕನ್ನಡ ಭಾಷೆ-ಕಲೆ-ಸಂಸ್ಕೃತಿಯ ಇತಿಹಾಸದಲ್ಲಿ, ಇಷ್ಟೊಂದು ಪ್ರಮಾಣದಲ್ಲಿ ಕನ್ನಡಿಗರು ವಿದೇಶದ ನೆಲೆಯೊಂದರಲ್ಲಿ ಸೇರುತ್ತಿರುವುದು ಬಹುಶಃ ಇದೇ ಮೊದಲಿರಬೇಕು. ನಮಗೆ ಈ ಸಮ್ಮೇಳನ ಮೂರುದಿನಗಳ ಬದಲಿಗೆ ಐದು ದಿನಗಳ ಅವಧಿಯ ಸಮ್ಮೇಳನ ಆಗಿದ್ದಲ್ಲಿ ಚೆನ್ನಾಗಿರುತಿತ್ತೇನೋ ಎಂದನಿಸುತ್ತಿದೆ. ಇದಕ್ಕೆ ಕಾರಣ ಇಲ್ಲಿಗೆ ಆಗಮಿಸುವ ಪ್ರತಿಭಾವಂತರ ಸಾಗರದಲ್ಲಿ ಇನ್ನಷ್ಟು ನಾವು ಮಿಂದು ಆನಂದಿಸಬಹುದಿತ್ತೇನೋ ಎಂಬ ಮಹದಾಸೆ.

ಮೊಟ್ಟ ಮೊದಲ ಬಾರಿಗೆ, ನಮ್ಮ ಕರ್ನಾಟಕದ ಇತಿಹಾಸದ ವೈಭವ ಸಾರುವ, ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಸಮ್ಮೇಳನ ಮುಖ್ಯ ಸಭಾಂಗಣದ ಬಲಭಾಗದಲ್ಲಿ ಕಂಗೊಳಿಸಲಿವೆ. ಹಾಗೆಯೆ, ಆಧುನಿಕ ಜಗತ್ತಿಗೆ ಕರ್ನಾಟಕದ ಕೊಡುಗೆ ಕೂಡ ಇದರೊಂದಿಗೆ ಮಿಂಚುವುದು ಈ ಬಾರಿಯ ಇಲ್ಲಿಯ ವಿಶೇಷ. ಸಮ್ಮೇಳನಕ್ಕೆ ಆಗಮಿಸುವ ಹಿರಿ ಕಿರಿಯರಿಗೆಲ್ಲ ಅತ್ಯಾಧುನಿಕ ದೃಶ್ಯ ಶ್ರವ್ಯ ಮಾಧ್ಯಮಗಳು ಆಕರ್ಷಿಸಲಿವೆ. ಅಷ್ಟೆ ಅಲ್ಲ, ವಿಸ್ಮಯ ಲೋಕಕ್ಕೆ ಕರೆದೊಯ್ಯುವ "ದಿಢೀರ್" ಕಾರ್ಯಕ್ರಮವೊಂದು ಮೂಡಿಬರಲಿದೆ! ಹಾಗೆಯೆ, ಶಾಸ್ತ್ರೀಯ ಸಂಗೀತ ಪ್ರಿಯರಿಗಂತು ಹಬ್ಬ. ಪಿಟೀಲು ವಿದ್ವಾಂಸರಾದ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್, ಕಾಸರವಳ್ಳಿ ಸಹೋದರಿಯರ ಕಾರ್ಯಕ್ರಮಗಳು, ಪಂಡಿತ್ ಪರಮೇಶ್ವರ್ ಭಟ್ ಅವರಿಂದ ಹಿಂದೂಸ್ತಾನಿ ಸಂಗೀತ, ಓಂಕಾರನಾಥ್ ಹವಾಲ್ದಾರ್ ಜತೆಗೆ ಅನೇಕ ಸಂಗೀತ ವಿದ್ವಾಂಸರು ತಮ್ಮ ಸಂಗೀತ ಸುಧೆಯನ್ನು ಉಣಬಡಿಸುವರು. ಇನ್ನು ಅನೇಕ ಮಂದಿ ಸುಗಮ ಸಂಗೀತ ಕಲಾವಿದರು ಮನತಣಿಸಲು ಕರ್ನಾಟಕದಿಂದಷ್ಟೆ ಅಲ್ಲ ಉತ್ತರ ಅಮೆರಿಕದಿಂದಲೂ ಸಾಲುಸಾಲಾಗಿ ಇದ್ದಾರೆ.

ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಮತ್ತೂರ್ ಕೃಷ್ಣಮೂರ್ತಿ, ಎಸ್.ಎಲ್.ಭೈರಪ್ಪ, ಚಂದ್ರಶೇಖರ ಕಂಬಾರ, ಜಯಂತ ಕಾಯ್ಕಿಣಿ, ಕುಂ. ವೀರಭದ್ರಪ್ಪ ಮತ್ತು ಇತರರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಾಹಿತ್ಯ ಗೋಷ್ಠಿ, ಚರ್ಚೆ, ಪರಸ್ಪರ ವಿಚಾರ ವಿನಿಮಯ ಇವೆಲ್ಲ ಮುಖ್ಯ ಕಾರ್ಯಕ್ರಮಗಳು ಆಕರ್ಷಿಸಲಿವೆ. ಜತೆಗೆ ಹೊಸ ಪುಸ್ತಕಗಳ ಮತ್ತು ಸಿಡಿಗಳ ಬಿಡುಗಡೆ ಇದ್ದೇ ಇರುತ್ತವೆ. ಇವುಗಳ ಪೈಕಿ ನಮ್ಮ ಸದಸ್ಯರಾದ ನಾಗಭೂಷಣ್ ಮೂಲ್ಕಿ ಅವರ ಕವನ ಸಂಕಲನ ಕೂಡ ಒಂದು ಎಂದು ಹೇಳಲು ಸಂತಸ ಆಗುತ್ತದೆ. ಯಕ್ಷಗಾನ ಯಾವತ್ತಿಗೂ ಉತ್ತರ ಅಮೆರಿಕರನ್ನು ಆಕರ್ಷಿಸಿಕೊಂಡೇ ಬಂದಿದೆ. ಈ ಪ್ರಾಚೀನ ಕಲೆಯನ್ನು ಎರಡು ತಂಡಗಳು ಪ್ರದರ್ಶಿಸುತ್ತಿರುವುದು ಮತ್ತೊಂದು ವಿಶೇಷ. ಅರ್ಪಿತ ಹೆಗ್ಡೆ, ಸುಂದರ್ ರಾವ್ ಮತ್ತು ಪಂಜಜೆ ಅವರ ತಂಡಗಳು ಇವೆರಡು ಎಂದು ಹೆಸರಿಸಲು ಖುಷಿ ಅನಿಸುತ್ತದೆ. ಹಾಗೆಯೇ ನೃತ್ಯ ವಿಭಾಗದಲ್ಲಿ ವಿವಿಧ ಶಾಸ್ತ್ರೀಯ ಹಾಗು ಮಿಶ್ರಿತ ಕಲೆಗಳು ಸೇರುವುದು ಇಲ್ಲಿ ಮುಖ್ಯ ಆಗುತ್ತದೆ. ಇವುಗಳ ಪೈಕಿ ಧಾರವಾಡದ ಸೀತಾ ಚಪ್ಪರ್ ಅವರ ತಂಡದವರಿಂದ ಕಾರ್ಯಕ್ರಮವಿದೆ.

ಹಲವಾರು ನಾಟಕಗಳ ಪೈಕಿ ನಿರ್ದೇಶಕ ನಾಗಾಭರಣ ಅವರ ತಂಡದವರಿಂದ "ಜೋಕುಮಾರಸ್ವಾಮಿ" ಮತ್ತು ಹಾಸ್ಯ ನಾಟಕಗಳಲ್ಲಿ "ದೇಸಿ ಡಿಲೆಮ", "ಮಾಯಾವಿ ಸರೋವರ", "ದಂಡಿ ಮ್ಯಾನ್ ರಿಟರ್ನ್ಸ್", "ಜೀವನ ಸಂಜೀವನ" ಮತ್ತಿತ್ತರವು ಸೇರಿವೆ. ಹೆಸರಾಂತ ಕಲಾವಿದರಿಂದ ಏಕಪಾತ್ರಾಭಿನಯವೂ ಇದೆ. ಹಾಸ್ಯಲೋಕ ಇಲ್ಲಿಯ ಕನ್ನಡಿಗರನ್ನು ಹೆಚ್ಚಿಗೆ ಆಕರ್ಷಿಸುವ ಕಾರ್ಯಕ್ರಮ. ವೃತ್ತಿಪರ ಕಲಾವಿದರಾದ ಕೃಷ್ಣೇಗೌಡ, ಗುಂಡೂರಾವ್, ಅವರಿಂದ ಕಾರ್ಯಕ್ರಮಗಳು, ದಯಾನಂದರ ಅಣುಕು ಇವೆಲ್ಲ ಸೇರಿ ಕಾರ್ಯಕ್ರಮ ಕಳೆಕಟ್ಟುತ್ತದೆ.

ಈ ಸಮ್ಮೇಳನಕ್ಕೆ ಆತಿಥ್ಯ ವಿದ್ಯಾರಣ್ಯ ಕನ್ನಡ ಕೂಟ(ವಿಕೆಕೆ)ದ್ದು. ಹೀಗಾಗಿ ಸಮ್ಮೇಳನದ ಪ್ರಾರಂಭ ಹಾಗು ಸಮಾರೋಪಕ್ಕೆ ತಮ್ಮದೇ ಆದ ರೀತಿಯಲ್ಲಿ ವಿಕೆಕೆ ಸದಸ್ಯರು ಕಾರ್ಯಕ್ರಮಗಳನ್ನು ಹೆಣೆದಿದ್ದಾರೆ. ಸುಮಾರು 50ಕ್ಕೂ ಹೆಚ್ಚಿನ ಕಲಾವಿದರಿಂದ ಫ್ಯಾಷನ್ ಷೋ ಇದೆ. ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸುವ ಫ್ಯಾಷನ್ ಷೋ ಎಲ್ಲರ ಮನ ಗೆಲ್ಲಲಿದೆ.

ಸಮ್ಮೇಳನದ ಮೂರು ದಿನಗಳ ಸಂಜೆಗಳು ಸುಮಧುರ ಅನುಭವಗಳನ್ನು ಕೊಡಲಿವೆ. ಶುಕ್ರವಾರ ಆಗಸ್ಟ್ 29ರಂದು ಬಿ.ವಿ.ರಾಜಶೇಖರ್ ತಂಡದವರಿಂದ ಜಾನಪದ ಗೀತೆಗಳ ರಸದೌತಣ, ಸೇಂಟ್.ಲೂಯಿಸ್‌ನ ಕಸ್ತೂರಿ ನೃತ್ಯ ಅಕಾಡೆಮಿಯಿಂದ ಬ್ಯಾಲೆ, ಶನಿವಾರ ಸಂಜೆ ಹೆಸರಾಂತ ಚಿತ್ರ ಕಲಾವಿದರಾದ ರಮೇಶ್ ಅರವಿಂದ್, ಪುನೀತ್ ರಾಜಕುಮಾರ್, ಉಪೇಂದ್ರ, ಪ್ರಿಯಾಂಕ, ಪೂಜಾ ಗಾಂಧಿ, ತಾರಾ, ಶ್ರೀನಾಥ್, ಮಾಸ್ಟರ್ ಧನುಷ್, ಜಗದೀಶ್ ಮತ್ತು ಇತರರು ಅದ್ಭುತ ಮನರಂಜನಾ ಕಾರ್ಯಕ್ರಮ ಕೊಡಲಿದ್ದಾರೆ. ಮತ್ತೆ ಎಲ್ಲರ ಮನ ಗೆಲ್ಲುವ ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ 2 ಗಂಟೆಗಳ ಸಂಗೀತ ಕಾರ್ಯಕ್ರಮವಿದೆ.

ಕೊನೆಯದಾಗಿ ಭಾನುವಾರ ರಾತ್ರಿ ಸಿ.ಅಶ್ವತ್ ಅವರಿಂದ "ಕನ್ನಡವೇ ಸತ್ಯ" ಸಂಗೀತ ಕಾರ್ಯಕ್ರಮ ಉತ್ತರ ಅಮೆರಿಕದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡಿಗರ ಹೃದಯ ಸೂರೆಗೊಳ್ಳಲಿದೆ. ಸಮ್ಮೇಳನದಲ್ಲಿ ಉದ್ದಿಮೆಗಳಿಗೆ ಸಂಬಂಧಿಸಿದ ಚಿಂತನೆ- ಚರ್ಚೆಗಳು ಹಾಗು ಈ ನಿಟ್ಟಿನ ಹಲವು ಕಾರ್ಯಕ್ರಮಗಳು ಈ ವೇದಿಕೆಯನ್ನು ಅಲಂಕರಿಸಲಿವೆ. ಭಾಷಣಕಾರರ ಪೈಕಿ ಸಾಮ್ ಪಿಟ್ರೋಡ, ನಾಗರಾಜ್, ಡಾ.ವಿವೇಕ್ ಜವಳಿ ಇತರರು ಮುಖ್ಯವಾಗಿ ಇರುವರು. ಮುಖ್ಯಮಂತ್ರಿ ಅವರೊಂದಿಗೆ ಉದ್ಯಮಿಗಳನ್ನು ಔತಣಕೂಟದಲ್ಲಿ ಸೇರಿಸಿ-ಚರ್ಚೆಗೆ ಅವಕಾಶ ಮಾಡಿಕೊಡುವ ಕಾರ್ಯಕ್ರಮವಿದೆ. ಮಹಿಳೆಯರ ವೇದಿಕೆಗಳಲ್ಲಿ ಆಹ್ವಾನಿತ ಮಹಿಳಾ ತಜ್ಞರಿಂದ ಸಲಹೆ-ಸೂಚನೆಗಳು ಇರುತ್ತವೆ. ಇದರಲ್ಲಿ ಮಾನಸಿಕ ಹಾಗು ದೈಹಿಕ ಶಿಕ್ಷಣಕ್ಕೆ ಸೇರಿದವು ಹಲವು.

ಅಧ್ಯಾತ್ಮಿಕ ವೇದಿಕೆಯಲ್ಲಿ ಡಾ.ಓಂಕಾರ್ ಅವರು ಯೋಗ ಮತ್ತು ಪ್ರಾಣಾಯಾಮ ಕುರಿತಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಕನ್ನಡಿಗರಲ್ಲಿ ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿನ ವಿಚಾರಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಅಮೆರಿಕ ಹಾಗು ಭಾರತದ ಹೆಸರಾಂತ ವೈದ್ಯರುಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಮಿಗಿಲಾಗಿ ಈ ದಿನ ಜಾಗತಿಕವಾಗಿ ಚರ್ಚೆಯಲ್ಲಿರುವ ವಿಷಯ-ವಿಚಾರಗಳನ್ನು ನಿರಂತರ ವೈದ್ಯಕೀಯ ಶಿಕ್ಷಣ ಉಪನ್ಯಾಸ ಮಾಲೆಗಳಲ್ಲಿ ಅಡಕಗೊಳಿಸಲಾಗಿದೆ.

ಸಮ್ಮೇಳನದ ಆವರಣದಲ್ಲಿ ಸುಮಾರು 100 ಮಳಿಗೆಗಳು ತೆರೆದಿರುತ್ತವೆ. ನಾನಾ ವಸ್ತುಗಳ ಮಾರಾಟಕ್ಕೆ ಇಲ್ಲಿ ಅವಕಾಶವಿದೆ. ಇಲ್ಲಿ ಕರ್ನಾಟಕ ಮತ್ತು ಉತ್ತರ ಅಮೆರಿಕದವರಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಕ್ಕ ಹಿಂದಿನಿಂದಲೂ ವಿಶೇಷ ಪರಂಪರೆಯನ್ನು ಸೃಷ್ಟಿಸಿದೆ. ದತ್ತಿ-ದಾನ ನೀಡುವಲ್ಲಿ ಎತ್ತಿದ ಕೈ ಎಂದು ಹೆಸರುವಾಸಿ ಆಗಿರುವ ಅಕ್ಕ, ವಿಶ್ವ ಕನ್ನಡ ಸಮ್ಮೇಳನ 2006ರಲ್ಲಿ ಅಂದರೆ, ಬಾಲ್ಟಿಮೋರ್ ಸಮ್ಮೇಳನದಲ್ಲಿ ಶಂಕರ ಐ ಫೌಡೇಷನ್ ಗಾಗಿ 70,000 ಡಾಲರುಗಳಷ್ತು ಹಣ ಸಂಗ್ರಹಿಸಿತ್ತು. ಅದರ ನಂತರ ಆ ಮೊತ್ತವನ್ನು 1,00,000 ಡಾಲರುಗಳಿಗೆ ಹೆಚ್ಚಿಸಿ ಕೊಟ್ಟಿದ್ದು ಒಂದು ದಾಖಲೆ. ಇದರಿಂದಾಗಿ ಈ ಫೌಂಡೇಷನ್ ನ ನಿರ್ಮಾಣಕ್ಕೆ ತುಂಬಾ ಅನುಕೂಲ ಆಯಿತು. ಈ ಆಸ್ಪತ್ರೆ ಬೆಂಗಳೂರು ಸುತ್ತುಮುತ್ತಲಿನ ಹಳ್ಳಿಗರಿಗೆ ಕಡಿಮೆ ವೆಚ್ಚದಲ್ಲಿ ಔಷಧೋಪಚಾರ ನೀಡಲು ಅನುಕೂಲ ಆಗಿದೆ.

ಇದೇ ಸಂದರ್ಭದಲ್ಲಿ ಈ ಬಾರಿಯ ಅಕ್ಕ ಸಂಸ್ಥೆಗೆ ಅಪೂರ್ವ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಚಿರಋಣಿ ಆಗಿದ್ದೇವೆ. ಇಲ್ಲಿಗೆ ಕರ್ನಾಟಕದಿಂದ ಆಗಮಿಸಲಿರುವ ಪ್ರತಿನಿಧಿಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಹೆಚ್ಚಿಗೆ ಪ್ರತಿನಿಧಿಗಳು ಇಲ್ಲಿಗೆ ಆಗಮಿಸಲು ಅನುಕೂಲ ಆಗುವ ರೀತಿಯಲ್ಲಿ ವೀಸಾ ನೀಡುತ್ತಿರುವ ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಅವರಿಗೆ ನಾವು ಆಭಾರಿ ಆಗಿದ್ದೇವೆ.

ಸಂದರ್ಶಕರಲ್ಲಿ ಮನವಿ : ಸಮ್ಮೇಳನಕ್ಕೆ ಕರ್ನಾಟಕದಿಂದ ಆಗಮಿಸಲಿರುವ ಸಂದರ್ಶಕರಲ್ಲಿ ಮನವಿ ಏನೆಂದರೆ, ಪ್ರತಿನಿಧಿಗಳು 7,000 ರೂಪಾಯಿಗಳನ್ನು ತಮ್ಮ ಹೆಸರುಗಳ ನೋಂದಣಿಗೆ ಕೊಡಬೇಕು. ಹೆಸರು ನೋಂದಾಯಿಸಿಕೊಳ್ಳುವವರಿಗೆ ನಿರಂತರ ವೈದ್ಯಕೀಯ ಶಿಕ್ಷಣ ಹಾಗು ಉದ್ಯೋಗ ವೇದಿಕೆಗಳಿಗೆ ಪ್ರವೇಶ ಹೊರತುಪಡಿಸಿ ಮಿಕ್ಕೆಲ್ಲ ಕಾರ್ಯಕ್ರಮಗಳಿಗೆ ಅವಕಾಶ ಮಾಡಿ ಕೊಡಲಾಗುವುದು. ಈ ಶುಲ್ಕ ಪಾವತಿಸಿದವರಿಗೆ ಶುಕ್ರವಾರ ರಾತ್ರಿ ಭೋಜನ, ಶನಿವಾರ, ಭಾನುವಾರಕ್ಕೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗು ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗುವುಧು. ಇನ್ನು ಉಳಿದುಕೊಳ್ಳಲು ಅವರವರೇ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು. ಹೊಟೇಲುಗಳ ಪಟ್ಟಿಯನ್ನು ಅಕ್ಕ ವೆಬ್ ಸೈಟ್ ನಲ್ಲಿ ಕೊಡಲಾಗಿದೆ. ಸಮ್ಮೇಳನಕ್ಕೆ ಬರುವವರು ಮೊದಲೇ ಈ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಈ ಅಕ್ಕ ಸಮ್ಮೇಳನದ ಸವಿ ನೆನಪನ್ನು ತಾಯ್ನಾಡಿಗೆ ಕೊಂಡೊಯ್ಯಲು ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೋ ಅವುಗಳನ್ನು ನಾವು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಿಮ್ಮೆಲ್ಲರ ಬರುವಿಗಾಗಿ ಎದುರು ನೋಡುತ್ತಿರುವ.

ರಮೇಶ್ ಗೌಡ, ಅಧ್ಯಕ್ಷರು, ಅಕ್ಕ

ಮೋಕ್ಷಗುಂಡಂ ಜಯರಾಮ್ : ಸಂಚಾಲಕರು
ಶಿವಮೂರ್ತಿ ಕೀಲಾರ : ಸಂಚಾಲಕರು
ವಾಸಂತಿ ಗೌಡ : ಸಂಚಾಲಕರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X