• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕಾಗೋ ಕನ್ನಡ ಸಮ್ಮೇಳನದ ನಾಡಿಮಿಡಿತ

By ಲೇಖನ : ಶಾಮ್
|
World Kannada Conference 2008 volunteers
ದೊಡ್ಡ ಚಿತ್ರಕ್ಕಾಗಿ ಫೋಟೊ ಮೇಲೆ ಕ್ಲಿಕ್ಕಿಸಿ
ಬೆಂಗಳೂರು, ಆ.21 : ಉತ್ತರ ಅಮೆರಿಕಾದ ಹಿರಿಯ ಕನ್ನಡ ಸಂಘಗಳಲ್ಲಿ ಶಿಕಾಗೋದಲ್ಲಿ ನೆಲೆಗೊಂಡಿರುವ ವಿದ್ಯಾರಣ್ಯ ಕನ್ನಡವೂ ಒಂದು. ಕರ್ನಾಟಕದಿಂದ ಇಲಿನಾಯ್ ರಾಜ್ಯಕ್ಕೆ ವಲಸೆ ಬಂದವರು ಹಾಗೂ ಇಲ್ಲೇ ಹುಟ್ಟಿ ಬೆಳೆಯುತ್ತಿರುವ ಕರ್ನಾಟಕ ಜನಾಂಗೀಯ ಮಕ್ಕಳ ಭಾಷೆ ಮತ್ತು ಸಂಸ್ಕೃತಿಯ ಆಶೋತ್ತರಗಳನ್ನು ಬಿಂಬಿಸುವುದು ವಿದ್ಯಾರಣ್ಯದ ಪ್ರಮುಖ ಧ್ಯೇಯ. ಕನ್ನಡ ಸದಸ್ಯರ ಸದಸ್ಯತ್ವ ಶುಲ್ಕ ಮತ್ತು ಆಸಕ್ತರು ನೀಡುವ ಕಾಣಿಕೆಗಳಿಂದ ಕನ್ನಡ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ವಿದ್ಯಾರಣ್ಯ ಕನ್ನಡ ಕೂಟ ಲಾಭೋದ್ದೇಶವಿಲ್ಲದ ಸಂಸ್ಥೆ. ಈ ಕನ್ನಡ ಕೂಟ 1973ರಲ್ಲಿ ಆರಂಭವಾಯಿತು. 1987ರಲ್ಲಿ ರಜತ ಮಹೋತ್ಸವವನ್ನೂ ಆಚರಿಸಿಕೊಂಡಿತು.

ಇತರ ಕನ್ನಡ ಕೂಟಗಳಂತೆಯೇ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ಹಬ್ಬಹರಿದಿನಗಳ ನಿಮಿತ್ತ, ಸಂದರ್ಭೋಚಿತವಾಗಿ ಕನ್ನಡಮುಖಿ ಕಾರ್ಯಕ್ರಮಗಳನ್ನು ವಿದ್ಯಾರಣ್ಯ ಹಮ್ಮಿಕೊಳ್ಳುತ್ತದೆ. ಯಾವ ಕಾರ್ಯಕ್ರಮ ಮಿಸ್ ಆದರೂ ವಿನಾಯಕ ಚತುರ್ಥಿ, ಯುಗಾದಿ ಹಾಗೂ ನರಕ ಚತುರ್ದಶಿ- ಬಲಿಪಾಡ್ಯಮಿ ಹಬ್ಬದ ಪೂಜೆ ಮತ್ತು ಹೋಳಿಗೆ ಊಟ ಮಾತ್ರ ತಪ್ಪುವುದಿಲ್ಲ. ಇವೆಲ್ಲದರ ಜತೆಗೆ, ಕನ್ನಡ ಭಾಷೆಯೇ ಮೂಲಮಂತ್ರವಾಗಿಟ್ಟುಕೊಂಡು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿ ಬರವಿಲ್ಲ. ಮುಖ್ಯವಾಗಿ, ಕನ್ನಡದ ಮಕ್ಕಳಲ್ಲಿ ಕನ್ನಡಾಭಿಮಾನ ಬಿತ್ತುವುದು ಮತ್ತು ಹಿರಿಯ ನಾಗರಿಕರಿಗೆ ಕನ್ನಡಮಯ ವಾತಾವರಣವನ್ನು ಸೃಷ್ಟಿಸಿ ಮನೋಲ್ಲಾಸ ಉಂಟುಮಾಡುವುದೇ ವಿದ್ಯಾರಣ್ಯ ಕನ್ನಡ ಕೂಟದ ಕೈಂಕರ್ಯ.

ಸದಾ ಸಾಂಸ್ಕೃತಿಕ ಚಟುವಟಿಕೆಗಳ ಗುಂಗಿನಲ್ಲಿಯೇ ಇರುವುದು ತರವಲ್ಲ ಎಂದು ನಂಬಿರುವ ಅಮೆರಿಕಾದ ಕೆಲವೇ ಕನ್ನಡ ಕೂಟಗಳಲ್ಲಿ ವಿದ್ಯಾರಣ್ಯವೂ ಒಂದಾಗಿದೆ ಎನ್ನುವ ಸಂಗತಿ ಗಮನಾರ್ಹ. 1993ರಲ್ಲಿ ವಿದ್ಯಾರಣ್ಯ ಸದಸ್ಯರೆಲ್ಲ ಕಲೆತು ದತ್ತಿ ಸಂಸ್ಥೆಯೊಂದನ್ನು ಆರಂಭಿಸಿದರು. ಕೈಲಾದಷ್ಟು ನಿಧಿ ಸಂಗ್ರಹಣೆ ಮಾಡಿದ ನಂತರ, ವಿದ್ಯಾರಣ್ಯ ದತ್ತಿನಿಧಿಯ ನೇತಾರರು ಗುರುತಿಸುವ ಕರ್ನಾಟಕದಲ್ಲಿರುವ ಅರ್ಹ ಸಂಸ್ಥೆಗಳಿಗೆ ದೇಣಿಗೆ ನೀಡುವುದು ವಾಡಿಕೆ. ಹೀಗೆ, ಸಮಾಜಸೇವೆ ಮಾಡುವಲ್ಲಿ ನಿರತವಾಗುವಾಗ ಧರ್ಮ, ಜಾತಿ, ಸ್ವಜನ ಭೇದಭಾವ ಮಾಡಬಾರದೆಂಬುದು ದತ್ತಿನಿಧಿ ನಿರ್ವಾಹಕರ ಸಂಕಲ್ಪ.

ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರು ಕರ್ನಾಟಕದ ನಾನಾ ಭಾಗಗಳಿಂದ ಇಲ್ಲಿಗೆ ಬಂದು ಸೇರಿದವರಾಗಿದ್ದಾರೆ. ನಾನಾ ಜಾತಿ, ಉಪಜಾತಿ ವರ್ಗಗಳಿಗೆ ಅವರು ಸೇರಿದ್ದಾರಾದರೂ ಕನ್ನಡತನ ಮೆರೆಯಬೇಕೆಂಬ ಉತ್ಸಾಹದಲ್ಲಿ ಅನ್ಯಮತವಿಲ್ಲ. "ನಾವೆಲ್ಲ ಒಂದು, ವಿದ್ಯಾರಣ್ಯವಾಯಿತು ಇಂದು" ಎನ್ನುವುದೇ ಗಾಯಿತ್ರಿ ಮಂತ್ರವಾಗಬೇಕು ಎಂದು ಹಂಬಲಿಸುವ ಒಂದು ವರ್ಗದ ಕನ್ನಡಿಗರ ವಿಶಾಲ ಮನೋಭಾವವೇ ವಿದ್ಯಾರಣ್ಯದ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಲ್ಲ. ಕೂಟದ ಸದಸ್ಯರಲ್ಲಿ ಪ್ರತಿಭಾವಂತರನೇಕರಿರುವರು. ಸಾಹಿತಿಗಳು, ಗಾಯಕರು, ಪ್ರವಚನಕಾರರು, ನೃತ್ಯಗಾತಿಯರು, ಬರಹಗಾರರು, ಸಂಘಟನಾಚತುರರು ಇರುವರು. ಸಂಘವು "ಸಂಗಮ" ಎನ್ನುವ ಕನ್ನಡ ಪತ್ರಿಕೆಯನ್ನು ಹೊರತರುತ್ತದೆ. ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಪ್ರಕಟವಾಗುವ ಸಂಚಿಕೆಗಳಲ್ಲಿ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರ ಬರಹಗಳು, ಭಾವಚಿತ್ರಗಳು, ರೇಖಾ ಚಿತ್ರಗಳು, ಸಂಘದ ಬರಲಿರುವ ಕಾರ್ಯಕ್ರಮ ಸೂಚನಾ ಪತ್ರ ಮತ್ತು ಸಂದೇಶಗಳು ದಾಖಲಾಗುತ್ತವೆ.

ಈ ಪರಿಯ ಹಿನ್ನೆಲೆ ಹೊಂದಿರುವ ವಿದ್ಯಾರಣ್ಯ ಕನ್ನಡ ಕೂಟ ಈ ಋತುವಿನಲ್ಲಿ "ವರ್ಲ್ಡ್ ಫೇಮಸ್ ಇನ್ ಕನ್ನಡ ವರ್ಲ್ಡ್" ಆಗಲು ಹೊರಟಿದೆ. ಎರಡು ವರ್ಷಕ್ಕೊಮ್ಮೆ ಅಕ್ಕ ಸಂಸ್ಥೆ ಆಯೋಜಿಸುವ ವಿಶ್ವ ಕನ್ನಡ ಸಮ್ಮೇಳನದ ಆತಿಥ್ಯವನ್ನು ಈ ಬಾರಿ ವಿದ್ಯಾರಣ್ಯ ಹೊತ್ತುಕೊಂಡಿದೆ. ಭಾರಿ ಪ್ರಮಾಣದಲ್ಲಿ ಸಂಪತ್ತು ಮತ್ತು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಡಿಮ್ಯಾಂಡ್ ಮಾಡುವ ವಿಶ್ವ ಸಮ್ಮೇಳನದ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸುವ ಶಕ್ತಿ ನಮ್ಮ ಸಂಘಕ್ಕಿದೆಯೇ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೂಟದ ಸದಸ್ಯರು ಆತ್ಮಾವಲೋಕನ ಮಾಡಿಕೊಂಡದ್ದೂ ಉಂಟು. ಸಮ್ಮೇಳನಕ್ಕೆ ಆತಿಥೇಯವಾಗುವ ಬಗ್ಗೆ ಚರ್ಚೆ, ವಿಚಾರ ಮಂಥನ, ಕೊನೆಗೆ ಮತದಾನವೂ ಆಗಿಹೋಗಿ ಅಂತಿಮವಾಗಿ ಶಿಕಾಗೋದಲ್ಲಿ ಕನ್ನಡ ಚಪ್ಪರ ಹಾಕಲು ನಿರ್ಧಾರವಾಯಿತು.

ಸಮ್ಮೇಳನಕ್ಕಾಗಿ ಸುಮಾರು 25ರಿಂದ 27 ಸಮಿತಿ, ಉಪಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಯಕ್ರಮಗಳನ್ನು ಸಾಂಗವಾಗಿಸುವ ಜವಾಬ್ದಾರಿ ಉಪಸಮಿತಿಗಳ ಹೆಗಲ ಮೇಲಿದ್ದರೆ, ಸಮ್ಮೇಳನದ ಒಟ್ಟಾರೆ ಯಶಸ್ಸು ಅಥವಾ ಅಪಯಶಸ್ಸು ಸಮ್ಮೇಳನಕ್ಕಾಗಿ ನೇಮಿಸಲಾಗಿರುವ ಮೂರು ಮಂದಿ ಸಂಯೋಜನಾಧಿಕಾರಿಗಳ ತಲೆಮೇಲಿದೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೂ ಹಾಗೂ ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರಕೋಪಗಳಿಗೂ ಅದೇನೋ ಒಂದು ಬಗೆಯ ನಂಟು. 2002ರ ಡೆಟ್ರಾಯಿಟ್ ಸಮ್ಮೇಳನ ನಡೆಯುವಾಗ ಕರ್ನಾಟಕದಲ್ಲಿ ವೀರಪ್ಪನ್ ಹಾವಳಿ, ಕನ್ನಡ ಕುಲಕಂಠೀರವನ ಅಪಹರಣ. 2004ರ ಫ್ಲಾರಿಡಾದ ಆರ್ಲ್ಯಾಂಡೋ ಸಮ್ಮೇಳನದ ಸಮಯಕ್ಕೆ ಸರಿಯಾಗಿ ಕರ್ನಾಟಕದಲ್ಲಿ ಕೆಟ್ಟ ಬರಗಾಲ, ಅದೇ ಹೊತ್ತಿಗೆ ದಕ್ಷಿಣ ಅಮೆರಿಕಾದಲ್ಲಿ ಅಬ್ಬರದ ಚಂಡಮಾರುತಗಳ ಉಪಟಳ. 2006 ರ ಬಾಲ್ಟಿಮೋರ್ ಅಕ್ಕ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅಧ್ವಾನ ಮೈತ್ರಿ ಸರಕಾರದ ಉಪದ್ವ್ಯಾಪ.

ಪ್ರಸಕ್ತ ಶಿಕಾಗೋ ಸಮ್ಮೇಳನದ ಸಂದರ್ಭಕ್ಕೆ ಸರಿಯಾಗಿ, ಇಲ್ಲಿ ಕರ್ನಾಟಕದಲ್ಲಿ ಮಳೆಯ ಅಟ್ಟಹಾಸ. ಮಳೆ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ, ಪರಿಹಾರ ವ್ಯವಸ್ಥೆ ಮಾಡಬೇಕಾದ ಅನಿವಾರ್ಯ. ಅಲ್ಲಿ, ಅಮೆರಿಕೆಯಲ್ಲಿ ಗೋತಾ ಹೊಡೆಯುತ್ತಿರುವ ಮಾರುಕಟ್ಟೆ ಸ್ಥಿತಿಗತಿ. ಆರು ಡಾಲರಿಗೆ ಒಂದು ಕೆಜಿ ಸೋನಾ ಮಸೂರಿ ಅಕ್ಕಿ ತಂದು ಸಂಸಾರ ತೂಗಿಸಬೇಕಾದ ಸ್ಥಿತಿ. ಟೈಂ ಹೀಗಿರುವಾಗ, ತಲಾ 9000 ರೂ. ನೊಂದಾವಣೆ ಶುಲ್ಕ, ವಿಮಾನ ಪ್ರಯಾಣ ಶುಲ್ಕ, ಲೇಬರ್ ಡೇ ಮುಗಿದ ಮಾರನೇ ದಿವಸವೇ ಶಾಲೆಗಳು ಆರಂಭವಾಗುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸವರಣೆ ಮಾಡಬೇಕಾದ ಜವಾಬ್ದಾರಿಗಳನ್ನೆಲ್ಲ ಇಟ್ಟುಕೊಂಡು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ಮಧ್ಯಮವರ್ಗಕ್ಕೆ ಸೇರಿದ ಅಮೆರಿಕನ್ನಡಿಗರಿಗೆ ಸುಲಭದ ತುತ್ತಲ್ಲ. ಈ ಎಲ್ಲ ಮತ್ತು ಇನ್ನಿತರ ಕಾರಣಗಳಿಂದಾಗಿ ಈ ಬಾರಿ ನೊಂದಾವಣೆ ಡೆಸ್ಕ್‌ನಲ್ಲಿ ಆಯೋಜಕರು ನಿರೀಕ್ಷಿಸಿದಷ್ಟು ಭರಾಟೆ ಕಂಡುಬಂದಿಲ್ಲ. (ಇನ್ನೂ ಇದೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more