• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು

By Staff
|

ನಿಮಗೆಲ್ಲಾ ಈಗಾಗಲೇ ತಿಳಿದಿರುವಂತೆ, ಬರಲಿರುವ ಸೆಪ್ಟೆಂಬರ್‌ 1, 2 ಮತ್ತು 3ರಂದು ಕಾವೇರಿ ಕನ್ನಡಸಂಘದ ಸಹಯೋಗದಲ್ಲಿ ನಾಲ್ಕನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನ, ಬಾಲ್ಟಿಮೋರ್‌ ಕನ್‌ವೆನ್‌ಷನ್‌ ಕೇಂದ್ರದಲ್ಲಿ ನಡೆಯಲಿದೆ. ಈ ಬಗ್ಗೆ, ಮತ್ತು ಆ ಮೂರು ದಿನಗಳ ಸಮಗ್ರ ಕಾರ್ಯಕ್ರಮಗಳ ಪಕ್ಷಿನೋಟವನ್ನು ಈಗಾಗಲೇ ದಟ್ಸ್‌ಕನ್ನಡ.ಕಾಮ್‌ನಲ್ಲಿ ಓದಿರುವಿರಿ.

ಸಮ್ಮೇಳನದಲ್ಲಿ ಸಂಗೀತ, ನೃತ್ಯ, ನಾಟಕ, ಸಿನಿಮಾ ಮೊದಲಾದ ಕಾರ್ಯಕ್ರಮಗಳ ಜೊತೆಗೆ, ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಮಗಳನ್ನು ಯೋಜಿಸಿದ್ದೇವೆ ಎಂದು ಆ ಪ್ರಕಟಣೆಯಲ್ಲಿ ತಿಳಿಸಲಾಗಿದೆಯಷ್ಟೆ. ಅವುಗಳಿಗೆ ಸಂಬಂಧಪಟ್ಟ ಹಲವು ವಿವರಗಳನ್ನೂ ಸೂಚನೆಗಳನ್ನು ತಿಳಿಸುವುದೇ ಈ ಬರಹದ ಉದ್ದೇಶ.

ನಿಮಗೀಗಾಗಲೇ ತಿಳಿದಿರುವಂತೆ, ಸಮ್ಮೇಳನದ ಸಂಪಾದಕ ಮಂಡಲಿಯು ಹಗಲಿರುಳು ಸತತವಾಗಿ ದುಡಿದು, ಪದ್ಯವಿಭಾಗ (ಕವಿತಾವಾಹಿನಿ) ಮತ್ತು ಗದ್ಯವಿಭಾಗ (ಪ್ರಬಂಧವಾಹಿನಿ)ಗಳನ್ನೊಳಗೊಂಡ 'ಸುವರ್ಣವಾಹಿನಿ" ಎಂಬ ಸ್ಮರಣ ಸಂಚಿಕೆಯನ್ನು ಸಿದ್ಧಪಡಿಸುತ್ತಿದೆ. ಇದಲ್ಲದೇ, ಒಂದು ಕಥಾಸಂಕಲನ (ಕಥಾವಾಹಿನಿ) ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಲೇಖನಗಳ ಸಂಗ್ರಹ (ತಂತ್ರ-ವಿಜ್ಞಾನವಾಹಿನಿ)ಗಳನ್ನೂ ಬಿಡಿ ಬಿಡಿಯಾದ ಸಂಪುಟಗಳಾಗಿ ಸಿದ್ಧಪಡಿಸುತ್ತಿದೆ.

ಅವಲ್ಲದೇ, ಉದಯೋನ್ಮುಖ ಬರಹಗಾರರಿಗಾಗಿ ಏರ್ಪಡಿಸಿದ ಕಾದಂಬರಿ ಸ್ಪರ್ಧೆಯಲ್ಲಿ ಗೆದ್ದ 'ಭರದ್ವಾಜ" ಎಂಬ ಕಾದಂಬರಿಯೊಂದನ್ನೂ ಪ್ರಕಟಿಸುತ್ತಿದೆ. ಈ ಎಲ್ಲ ಹೊತ್ತಗೆಗಳನ್ನು ಮತ್ತಿತರ ಪುಸ್ತಕಗಳನ್ನೂ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳ ಸಮಕ್ಷಮದಲ್ಲಿ ಇತರ ಆಹ್ವಾನಿತ ಸಾಹಿತಿಗಳ ಸಹಕಾರದೊಂದಿಗೆ ನಡೆಸುವ ಏರ್ಪಾಟಾಗಿದೆ.

ಮುಖ್ಯವೇದಿಕೆಯಲ್ಲಿ ನಡೆಯುವ ಮಿತವಾದ ಸಾಹಿತ್ಯಿಕ ಚಟುವಟಿಕೆಗಳಲ್ಲದೇ, ಸಮಾನಾಂತರ ವೇದಿಕೆಗಳಲ್ಲಿ ನಡೆಯುವ ಸಾಹಿತ್ಯಿಕ ಚಟುವಟಿಕೆಗಳಲ್ಲಿ, ಮುಖ್ಯವಾಗಿ -ಕವಿಗೋಷ್ಠಿ, ತಾಂತ್ರಿಕ ಮತ್ತು ವೈಜ್ಞಾನಿಕ ಬರಹಗಳ ಬೆಳವಣಿಗೆಯ ಬಗ್ಗೆ ವಿಚಾರಸಂಕಿರಣ, ಬಿಡುಗಡೆಯಾದ ಪುಸ್ತಕಗಳ ಚರ್ಚೆ ಮುಂತಾದವನ್ನು ಪರಿಶೀಲಿಸುತ್ತಿದ್ದೇವೆ.

ಆಹ್ವಾನಿತರಾಗಿ ಬರುವ ಭಾರತದ ಕವಿಗಳು, ಬರಹಗಾರರು ಮತ್ತು ಇಲ್ಲಿ ಅರಳುತ್ತಿರುವ ಪ್ರತಿಭೆಗಳನ್ನೂ ಒಳಗೊಂಡ ಬರಹಗಾರರಿಗೆಲ್ಲ ಪ್ರಾತಿನಿಧ್ಯ ಕೊಡುವುದು ಮತ್ತು ಸಾಧ್ಯವಾದಷ್ಟು ಆಸಕ್ತರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಉದ್ದೇಶ. ಸಾಕಷ್ಟು ಆಸಕ್ತರು ಒದಗಿದರೆ, ಚುಟುಕು ಕವಿತೆಗಳಿಗೇ ಮೀಸಲಾದ ಒಂದು ಗೋಷ್ಠಿಯನ್ನೂ ಏರ್ಪಡಿಸುವ ಆಸೆ ನಮಗಿದೆ.

ನಮಗಿರುವ ಕಾಲಮಿತಿಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ಕೆಳಕಂಡ ಈ ಸೂಚನೆ/ನಿಯಮಗಳನ್ನು ದಯವಿಟ್ಟು ಗಮನಿಸಿ :

  • ಮೊದಲನೆಯದಾಗಿ, ಈ ಗೋಷ್ಠಿಗಳಲ್ಲಿ ಭಾಗವಹಿಸುವವರು ಸಮ್ಮೇಳನದ ಆಹ್ವಾನಿತ ಅತಿಥಿಗಳಾಗಿರಬೇಕು ಅಥವಾ ಸಮ್ಮೇಳನದಲ್ಲಿ ಮುಂಗಡವಾಗಿ ನೋಂದಾಯಿಸಿಕೊಂಡಿರಬೇಕು.
  • ಎರಡನೆಯದಾಗಿ, ತಾವು ಮಂಡಿಸುವ ವಿಷಯದಬಗ್ಗೆ ಅಥವಾ ಓದುವ ಕವನ/ಪ್ರಬಂಧದ ಬಗ್ಗೆ, ಚರ್ಚಿಸಲಿರುವ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ವ್ಯವಸ್ಥಾಪಕರಿಗೆ ಜುಲೈ 20, 2006ರ ಮುಂಗಡ ತಲುಪಿರಬೇಕು.
  • ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಮಾಡಲು ಇಚ್ಛೆಯುಳ್ಳವರು ತಮ್ಮ ಪುಸ್ತಕದ ಪ್ರತಿಯನ್ನು ನಮ್ಮ ವಿಳಾಸಕ್ಕೆ ಕೂಡಲೇ ತಲುಪಿಸಬೇಕು. ಹಿಂದೆಲ್ಲೂ ಬಿಡುಗಡೆಯಾಗದ ಪುಸ್ತಕಗಳಿಗೆ ಮೊದಲ ಆದ್ಯತೆ. 2006ರಲ್ಲಿ ಪ್ರಕಟವಾದ ಪುಸ್ತಕಗಳು ಮರುಬಿಡುಗಡೆಗೆ ಬಂದಲ್ಲಿ ಅವಕ್ಕೆ ಎರಡನೇ ಆದ್ಯತೆ. ಪುಸ್ತಕ ಬರೆದ ಕವಿ/ಬರಹಗಾರ ಉಪಸ್ಥಿತರಿರಲೇಬೇಕು.
  • ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ತಮಗೆ ನಿಗದಿ ಮಾಡಿದ ಕಾಲದ ಮಿತಿಯನ್ನು ತಪ್ಪದೇ ಗೌರವಿಸಬೇಕು. ಕೊನೇಘಳಿಗೆಯಲ್ಲಿ ಬಂದು ಕೇಳಿಕೊಂಡರೆ ಕಾಲಾವಕಾಶವನ್ನು ಕೊಡುವುದು ಸಾಧ್ಯವಾಗುವುದಿಲ್ಲವೆಂಬ ಸಂಚಾಲಕರ ಕಷ್ಟವನ್ನು ಮನಗಂಡು, ಆಸಕ್ತರು ಸಾಧ್ಯವಾದಷ್ಟು ಬೇಗ (ಅಂತೂ ಜುಲೈ 20ರ ಮೊದಲು) ತಮ್ಮ ಇಚ್ಛೆಯನ್ನು ಬರಹದ ಯಾ ಈ-ಮೈಲ್‌ ಮೂಲಕ ತಿಳಿಸಿ ದೃಢಪಡಿಸಿಕೊಳ್ಳಬೇಕೆಂದು ಕೋರಿಕೆ.
  • ಬೇರೆ ಬೇರೆ ಘಟಕಗಳಿಗೆ ಬೇರೆ ಬೇರೆ ಸೂಕ್ತ ವ್ಯಕ್ತಿಗಳನ್ನು ಅಧ್ಯಕ್ಷರಾಗುವಂತೆ ಕೇಳಿಕೊಳ್ಳಲಾಗುವುದು. ಅದೇರೀತಿ, ಬೇರೆ ಬೇರೆ ಘಟಕಗಳನ್ನು ನಡೆಸಿಕೊಡಲು ಬೇರೆ ಬೇರೆ ನಿರೂಪಕರನ್ನು ಕೇಳಿಕೊಳ್ಳಲಾಗುವುದು. ಈ ರೀತಿ ಭಾಗವಹಿಸಲು ಇಚ್ಛೆಯುಳ್ಳವರು (ಭಾರತದಿಂದ ಈಗಾಗಲೇ ಆಗಮಿಸಿರುವ, ಅಮೇರಿಕದ ಭೇಟಿಯಲ್ಲಿರುವ ಬರಹಗಾರರೂ ಸಹ) ವ್ಯವಸ್ಥಾಪಕರನ್ನು ಕೂಡಲೇ ಸಂಪರ್ಕಿಸಬೇಕೆಂದು ಕೋರಿಕೆ

ಕೊನೆಯದಾಗಿ, ಯಾವ ಘಟಕಕ್ಕೆ ಎಷ್ಟು ಸಮಯ, ಒಬ್ಬೊಬ್ಬರಿಗೆ ಎಷ್ಟು ಸಮಯ ಎಂಬ ತೀರ್ಮಾನವನ್ನು ಜುಲೈ ಕೊನೆಯ ಭಾಗದಲ್ಲಿ ಮಾಡಲಾಗುವುದು ಮತ್ತು ಪಾಲ್ಗೊಳ್ಳುವವರಿಗೆ ಮುಂಗಡವಾಗಿ ತಿಳಿಸಲಾಗುವುದು. ಒಟ್ಟು ದೊರಕುವ ಸಮಯ, ಎಷ್ಟು ಜನರು ವಿವಿಧ ಗೋಷ್ಠಿಗಳಿಗೆ ನೋಂದಾಯಿಸಿಕೊಳ್ಳುವರೋ ಅದನ್ನು ಅವಲಂಬಿಸಿರುತ್ತದೆಯಾದರೂ, ಸಾಹಿತ್ಯಿಕ ಚಟುವಟಿಕೆಗಳಿಗೆ ಸುಮಾರು ಒಂದೊಂದು ಘಂಟೆಯ ನಾಲ್ಕು ಘಟಕಗಳನ್ನು (ಶನಿವಾರ ಬೆಳಗ್ಗೆ ಎರಡು ಘಂಟೆ ಮತ್ತು ಭಾನುವಾರ ಮಧ್ಯಾಹ್ನ ಎರಡು ಘಂಟೆ) ಕಾದಿರಿಸುವ ಯತ್ನ ನಡೆಯುತ್ತಿದೆ.

ಈಗಾಗಲೇ ಅನೌಪಚಾರಿಕವಾಗಿ ಕೋರಿಕೆ ಸಲ್ಲಿಸಿರುವವರೂ ಕೂಡ ಮತ್ತೊಮ್ಮೆ ಈ-ಮೈಲ್‌ ಕಳುಹಿಸುವುದರ ಮೂಲಕ ತಮ್ಮ ಬೇಡಿಕೆಯನ್ನು ಸ್ಥಿರೀಕರಿಸಿಕೊಳ್ಳಬೇಕೆಂದು ಕೋರುತ್ತೇವೆ. ಊಟೋಪಚಾರ ಮೊದಲಾದ ಸಂಭ್ರಮಗಳ ನಡುವೆ ಸಾಹಿತ್ಯದ ರಸಗವಳವೂ ದೊರಕಬೇಕಾದರೆ ಭಾಗವಹಿಸುವ ಆಸಕ್ತರೂ ಪ್ರೇಕ್ಷಕರೂ ಹೆಚ್ಚು ಸಂಖ್ಯೆಯಲ್ಲಿ ಮುಂದೆಬಂದರೆ ಮಾತ್ರ ಸಾಧ್ಯ ಎಂಬ ಅಂಶವನ್ನು ತಮ್ಮ ಮುಂದಿಡ ಬಯಸುತ್ತೇವೆ.

ಇಂತು, ತಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುವ,

ಮೈ.ಶ್ರೀ. ನಟರಾಜ

ಸಾಹಿತ್ಯಿಕ ವ್ಯವಸ್ಥಾಪಕ,

ಅಕ್ಕ ವಿಶ್ವಕನ್ನಡ ಸಮ್ಮೇಳನ-2006

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more