ಶಾಲಾ-ಕಾಲೇಜು ಸಮವಸ್ತ್ರ ನಿಯಮದಲ್ಲಿ ಮಹತ್ವದ ಬದಲಾವಣೆ: ಹಿಜಾಬ್, ಜನಿವಾರ, ರುದ್ರಾಕ್ಷಿ ಧರಿಸಲು ಸರ್ಕಾರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಗ್ರಾಸವಾಗಿದ್ದ, 2022ರ ಫೆಬ್ರವರಿ 05ರಂದು ಹೊರಡಿಸಲಾಗಿದ್ದ ಸಮವಸ್ತ್ರ ಕುರಿತಾದ ಆದೇಶವನ್ನು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ. ಇದರ ಬೆನ್ನಲ್ಲೇ, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಲು ಅಧಿಕೃತವಾಗಿ ಅನುಮತಿ ನೀಡಿ ಹೊಸ ನಿರ್ದೇಶನಗಳನ್ನು ಹೊರಡಿಸಿದೆ.

2026ರ ಮೇ 13ರಂದು ಹೊರಡಿಸಲಾಗಿರುವ ಹೊಸ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ತಮ್ಮ ನಿಯಮಾನುಸಾರ ಸಮವಸ್ತ್ರವನ್ನು ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರಿಸಲಿವೆ. ಆದರೆ, ಈ ಸಮವಸ್ತ್ರದ ಜೊತೆಗೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ ಹಾಗೂ ತಲೆವಸ್ತ್ರ ಅಥವಾ ಹಿಜಾಬ್ ಧರಿಸಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಅಳವಡಿಸಿಕೊಂಡಿರುವ ವಸ್ತ್ರ ಸಂಹಿತೆಯ ನಿಯಮಗಳನ್ನು ಸಹ ಪರಿಶೀಲಿಸಿ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.

Karnataka Government

ಸಮವಸ್ತ್ರದೊಂದಿಗೆ ಇಂತಹ ನಂಬಿಕೆ ಆಧಾರಿತ ಸಂಕೇತಗಳನ್ನು ಧರಿಸಿರುವ ಏಕೈಕ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಎಚ್ಚರಿಸಿದೆ. ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸಲು ಇರುವ ಪ್ರಮುಖ ಸಾಧನವಾಗಿದೆ. ಆದ್ದರಿಂದ, ಸೀಮಿತ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾರಿಗೂ ಶಿಕ್ಷಣದ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರ ಪ್ರತಿಪಾದಿಸಿದೆ.

ಷರತ್ತುಗಳು ಅನ್ವಯ

ಸರ್ಕಾರವು ನೀಡಿರುವ ಈ ಅನುಮತಿಯಲ್ಲಿ ಕೆಲವು ಸ್ಪಷ್ಟ ಷರತ್ತುಗಳಿದೆ. ವಿದ್ಯಾರ್ಥಿಗಳು ಧರಿಸುವ ಸಾಂಪ್ರದಾಯಿಕ ಸಂಕೇತಗಳು ಶಾಲಾ ಸಮವಸ್ತ್ರಕ್ಕೆ ಪೂರಕವಾಗಿರಬೇಕೇ ಹೊರತು, ನಿಗದಿತ ಸಮವಸ್ತ್ರವನ್ನು ಬದಲಿಸುವ ಅಥವಾ ಮಾರ್ಪಡಿಸುವಂತಿರಬಾರದು. ಅಲ್ಲದೆ, ಇವು ಶಾಲೆಯ ಶಿಸ್ತು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗುರುತಿಸುವಿಕೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಬಾರದು. ಯಾವುದೇ ವಿದ್ಯಾರ್ಥಿಯನ್ನು ಇಂತಹ ಸಂಕೇತಗಳನ್ನು ಧರಿಸುವಂತೆ ಒತ್ತಾಯಿಸುವಂತಿಲ್ಲ ಹಾಗೂ ಬಲವಂತವಾಗಿ ತೆಗೆಯುವಂತೆ ಸೂಚಿಸುವಂತಿಲ್ಲ. ಆದರೆ, ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಾಧಿಕಾರಗಳು ನಿಗದಿಪಡಿಸುವ ವಸ್ತ್ರ ಸಂಹಿತೆ ನಿಯಮಗಳು ಅನ್ವಯವಾಗಲಿವೆ.

ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳ ವಿರೋಧವಲ್ಲ, ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವುದಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮಗಳ ಬಗ್ಗೆ ಸಮಾನ ನಿಲುವು ಹೊಂದಿರಬೇಕು. ಈ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳು ಕೇವಲ ಬೋಧನಾ ಕೇಂದ್ರಗಳಾಗದೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ಸಮಾನತೆ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC), ಕಾಲೇಜು ಆಡಳಿತ ಮಂಡಳಿಗಳು ಯಾವುದೇ ವಿದ್ಯಾರ್ಥಿಯೊಂದಿಗೆ ತಾರತಮ್ಯದಿಂದ ವರ್ತಿಸಿ ಅವಮಾನ ಮಾಡಬಾರದು. ಜಗಜ್ಯೋತಿ ಬಸವಣ್ಣನವರ "ಇವ ನಮ್ಮವ" ಎಂಬ ಉದಾತ್ತ ತತ್ವದಡಿ ಎಲ್ಲರನ್ನೂ ಒಳಗೊಳ್ಳುವ ನಿಲುವನ್ನು ಅಳವಡಿಸಿಕೊಂಡು ಶಿಸ್ತು ಕಾಪಾಡಬೇಕು ಎಂದು ಸರ್ಕಾರ ಸೂಚಿಸಿದೆ. ಈ ಆದೇಶಕ್ಕೆ ವಿರುದ್ಧವಾಗಿರುವ ಹಿಂದಿನ ಎಲ್ಲಾ ಸುತ್ತೋಲೆಗಳು ಮತ್ತು ಸಂಸ್ಥೆಯ ನಿರ್ದೇಶನಗಳು ಅನೂರ್ಜಿತಗೊಳ್ಳಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಆದೇಶದ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+