• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುದ್ದಣ ಸೀಮೋಲ್ಲಂಘನಮಾಡಿ ವಿದೇಶಗಳಿಗೂ ಹೋಗಲಿದ್ದಾನೆ!

By Staff
|
  • ನಂದಳಿಕೆ ಬಾಲಚಂದ್ರರಾವ್‌, ಮಂಗಳೂರು
Nandalike Balachandraಮುದ್ದಣ ಕವಿಯ ಹೆಸರೇ ಕನ್ನಡಿಗರ ಮೈಯಲ್ಲಿ ಪುಳಕವನ್ನುಂಟು ಮಾಡುವಂತಹದು. ಹೊಸಗನ್ನಡ ಕಾಲದಲ್ಲಿ ಹಳಗನ್ನಡದಲ್ಲಿ ಕಾವ್ಯನಿರ್ಮಿತಿ ಮಾಡಿ, ಅತಿಪ್ರತಿಭಾವಂತನಾದರೂ ಹೆಸರಿಗೆ ಅಪೇಕ್ಷಿಸದೆ, ತನ್ನನ್ನು ತಾನು ಮರೆಮಾಡಿಕೊಂಡು, ಕನ್ನಡ ತಾಯಿಗೆ ಕಾಣಿಕೆಯಿಟ್ಟು ಮೂವತ್ತೊಂದರ ಹರೆಯದಲ್ಲೇ ಕಾಣದ ಲೋಕಕ್ಕೆ ಸಂದ ಧೀ ಮಂತ ಕವಿ- ಮುದ್ದಣ.

ಲೋಕಾಪವಾದಕ್ಕೆ ಗುರಿಯಾದೆನೆಂಬ ಕೊರಗಿನಿಂದ ತನ್ನ ಅತ್ಯಂತ ಪ್ರೀತಿಪಾತ್ರ ಪತ್ನಿಯನ್ನೂ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದ ರಾಮ ಮಾಡುವ ಅಶ್ವಮೇಧಯಾಗ, ಗರ್ಭಿಣಿ ಸೀತೆ ಪರಿತ್ಯಕ್ತೆಯಾಗಿ ಮಕ್ಕಳನ್ನು ಪಡೆಯುವುದು, ವಾಲ್ಮೀಕಿ ಮುನಿಗಳ ಅನುಗ್ರಹ, ಆದರ್ಶ ಕುಟುಂಬ ವ್ಯವಸ್ಥೆ, ವೈಯಕ್ತಿಕ ಜೀವನದ ಆಸೆ-ನಿರಾಸೆಗಳು, ಧರ್ಮದ ಆಧಾರದಿಂದ ಬರುವ ನಾನಾ ಸಮಸ್ಯೆಗಳು, ಕೊನೆಗಾಗುವ ಮಂಗಳ-ಇವೆಲ್ಲವುಗಳ ಸೊಗಸಾದ ಕಥನರೂಪದ ಗದ್ಯಕಾವ್ಯ ‘‘ಶ್ರೀರಾಮಾಶ್ವಮೇಧ’’.

ಕವಿಯ ವ್ಯಕ್ತಿತ್ವವೇ ಇಮ್ಮೆಯ್ವಡೆದು ಮುದ್ದಣ ಮನೋರಮೆಯೆಂಬ ದಂಪತಿಯಾಗಿ ಕವಿ ವಿಮರ್ಶಕರಾಗಿ ಕವಿಸಹೃದಯರೆಂಬ ಸರಸ್ವತೀ ತತ್ತ್ವದ ಎರಡು ಮುಖಗಳಾಗಿ ಕಾಣಿಸಿಕೊಂಡು ಓದುಗರಿಗೆ ಕಾವ್ಯದ ಸೂಕ್ಷ್ಮಗಳನ್ನೂ ರಸವತ್ತತೆಯನ್ನೂ ಮನಗಾಣಿಸಿ ರಸಾನಂದಗೊಳಿಸುವ ನವೀನತಂತ್ರವೆಂಬುದು ‘ಮುದ್ದಣ’ನಾದ ನಂದಳಿಕೆ ಲಕ್ಷ್ಮೀನಾರಾಯಣಯ್ಯನ ಕೊಡುಗೆ.

ಕನ್ನಡ ಕಾವ್ಯದ ಹೊಸಕಾಲವನ್ನು ಕೂಗಿ ಹೇಳಿದ ಮುಂಗೋಳಿಯೆಂಬ ಬಿರುದು ಮುದ್ದಣನಿಗೆ. ನಮ್ಮ ಹಿರಿಯ ಸಮಕಾಲೀನರ ಜತೆಗೆ ಒಡನಾಡಿದ, ನಮ್ಮ ಉಡುಪಿಯ ಬೋರ್ಡ್‌ ಹೈಸ್ಕೂಲ್‌, ಕ್ರಿಶ್ಚಿಯನ್‌ ಹೈಸ್ಕೂಲ್‌ಗಳಲ್ಲಿ ಅಧ್ಯಾಪಕನಾಗಿ ದುಡಿದ, ಉಡುಪಿಯ ರಸ್ತೆಗಳಲ್ಲೇ ಸುಳಿದಾಡಿದ ಲಕ್ಷ್ಮೀನಾರಾಯಣಯ್ಯ ಅಜ್ಞಾತವಾಗುಳಿದು, ಹಳಗನ್ನಡದ ರಸವದ್‌ಗದ್ಯ ರಚನೆಯು ಮುದ್ದಣ ಪ್ರಸಿದ್ಧನಾಗಿ, ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಗಣನೀಯನಾದುದು ವಿಚಿತ್ರ ವಿದ್ಯಮಾನ. ಸಮಕಾಲೀನನೂ ಪ್ರಾಚೀನನಾಗಿ, ಪಂಪ ರನ್ನ ಜನ್ನ ಪೊನ್ನ- ಮುಂತಾದ ಹಳಗನ್ನಡದ ಕವಿ ಮಹೋದಯರ ಸಹಪಂಕ್ತಿಯಲ್ಲಿ ವಿರಾಜಮಾನನಾದುದು ನಂದಳಿಕೆ ಲಕ್ಷ್ಮೀನಾರಯಣಯ್ಯನೊಬ್ಬನಿಗೇ ಸಂದ ಗೌರವ.

Muddana19ನೆಯ ಶತಮಾನದ ಅಂತ್ಯದಲ್ಲಿ ಉದಯವಾಗಿ 20ನೆಯ ಶತಮಾನದ ಹೊಸಲಲ್ಲಿ ಅಸ್ತನಾದ ಮುದ್ದಣನು ಹಳೆಯ ಮತ್ತು ಹೊಸ ಸಾಹಿತ್ಯಗಳ ಸಂಧಿಸಮಯದ ಸಂಕೇತವಾಗಿದ್ದನು. ನಮ್ಮ ಈ ಮುದ್ದಣ ತನ್ನ ಮೂವತ್ತೊಂದು ವರ್ಷಗಳ ಅಲ್ಪಾಯುಸ್ಸಿನ ಅವಧಿಯಲ್ಲೇ ಎಷ್ಟೊಂದು ಕೃತಿಗಳನ್ನು ರಚಿಸಿದ ನೋಡಿ: ರತ್ನಾವತೀ ಕಲ್ಯಾಣ ಮತ್ತು ಕುಮಾರವಿಜಯ (ಯಕ್ಷಗಾನ ಪ್ರಸಂಗಗಳು), ಅದ್ಭುತ ರಾಮಾಯಣ(ಶಾಕ್ತ ಸಂಪ್ರದಾಯದ ರಾಮಾಯಣದ ಗದ್ಯ ಕಾವ್ಯ) , ರಾಮಪಟ್ಟಾಭಿಷೇಕ (ವಾರ್ಧಕಷಟ್ಪದಿಯಲ್ಲಿ ಪದ್ಯ ಕಾವ್ಯ) ಮತ್ತು ರಾಮಾಶ್ವಮೇಧ (ಪದ್ಮಪುರಾಣದ ಶೇಷರಾಮಾಯಣವನ್ನು ಮುಖ್ಯವಾಗಿ ಆಕರವಾಗಿರಿಸಿಕೊಂಡ ಗದ್ಯಕಾವ್ಯ), ಗೋದಾವರೀ (ಕಾದಂಬರಿಯ ಕೆಲವು ಪರಿಚ್ಛೇದಗಳು), ಭಗವದ್ಗೀತೆ-ರಾಮಾಯಣಗಳ ಭಾಗಗಳ ಕನ್ನಡ ಅನುವಾದ, ಕಾಮಶಾಸ್ತ್ರವನ್ನು ಕುರಿತ ಒಂದು ಗ್ರಂಥ, ಕೆಲವು ಸಂಶೋಧನಾತ್ಮಕ ಲೇಖನಗಳನ್ನು ಇವನು ಬರೆದಿದ್ದಾನೆ.

ಕವಿಯ ಮೇರುಕೃತಿ ‘‘ಶ್ರೀರಾಮಾಶ್ವಮೇಧ’’. ಇದರ ಸೊಗಸು ಸೌಂದರ್ಯಗಳ ಸಕಲ ವಿವರವನ್ನೂ ತೆರೆದಿರಿಸಿ ಅಧ್ಯಯನೇಚ್ಛುಗಳಿಗೆ, ಭಾಷಾಭ್ಯಾಸನಿರತರಿಗೆ, ಕಾವ್ಯವಿದ್ಯಾಸಕ್ತರಿಗೆ ಕಾವ್ಯದ ಸಕಲ ಪ್ರಯೋಜನವನ್ನೂ ಒದಗಿಸಿಕೊಡುವ ಉದ್ದೇಶದಿಂದ ಕನ್ನಡದ ಹಿರಿಯ ವಿದ್ವಾಂಸರಾದ ದಿವಂಗತ ತೆಕ್ಕುಂಜ ಗೋಪಾಲ ಕೃಷ್ಣ ಭಟ್ಟರು ಟಿಪ್ಪಣಿಸಾರಸಮೇತರಾಗಿ ಶ್ರೀರಾಮಾಶ್ವಮೇಧವನ್ನು ಸಿದ್ಧಗೊಳಿಸಿದರು. ಇದರಲ್ಲಿ ಮೂಲ ಶ್ರೀರಾಮಾಶ್ವಮೇಧ, ಟಿಪ್ಪಣಿ ವಿವರಣೆಗಳು, ಹೊಸಗನ್ನಡ ಅನುವಾದ -ಇವು ಮೂರೂ ಸೇರಿದ್ದು ಕಾವ್ಯ ವ್ಯಾಖ್ಯಾನ ಪರಂಪರೆಯಲ್ಲಿ ಈ ಕೃತಿಗೆ ವಿಶಿಷ್ಟ ಸ್ಥಾನವಿದೆ.

ಈ ಟಿಪ್ಪಣಿಗಳ ಸಾರಸಮೇತ ‘‘ಶ್ರೀರಾಮಾಶ್ವಮೇಧ’’ವು 1972 ರಲ್ಲಿ ಮುದ್ರಿತವಾಗಿತ್ತು; ಈಗ ಪ್ರತಿಗಳು ಲಭ್ಯವಿಲ್ಲ. ಈ ಕೃತಿಯನ್ನು ಬರಿದೆ ಪುನಃಮುದ್ರಿಸುವ ಬದಲು, ಹೊಸ ಅಧ್ಯಯನಗಳ ಹಿನ್ನೆಲೆಯಿಂದ ಅವಶ್ಯವಿದ್ದಲ್ಲಿ ಹೊಸ ಟಿಪ್ಪಣಿಗಳನ್ನೂ ಸೇರ್ಪಡೆಗೊಳಿಸಿ, ಅನುಬಂಧಗಳನ್ನೂ ಸೇರಿಸಿ, ಅಂತರರಾಷ್ಟ್ರೀಯ ಚಿತ್ರ ಕಲಾವಿದ ಗಂಜೀಪ ರಘುಪತಿ ಭಟ್ಟರ ರೇಖಾಚಿತ್ರದೊಂದಿಗೆ ಪುನಃಸಂಪಾದಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ; ಈ ಸಂಪಾದನಕಾರ್ಯವನ್ನು ಕನ್ನಡ ತುಳು ಸಾಹಿತ್ಯಕ್ಷೇತ್ರದಲ್ಲಿಯೂ ಯಕ್ಷಗಾನ ಕ್ಷೇತ್ರದಲ್ಲಿಯೂ ಶಾಸ್ತ್ರಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ದುಡಿದಿರುವ ಪ್ರಾಧ್ಯಾಪಕ ಡಾ।। ಪಾದೇಕಲ್ಲು ವಿಷ್ಣು ಭಟ್ಟರು ವಹಿಸಿದ್ದಾರೆ; ಕೃತಿಯು ಸರ್ವಾಂಗಸುಂದರವಾಗಿ ಹೊರಬರಬೇಕೆಂಬ ಉದ್ದೇಶವಿದೆ.

ಈ ಸತ್ಕೃತಿಯು ಸುವರ್ಣ ಕರ್ನಾಟಕ ಆಚರಣೆಯ ಸುಸಂದರ್ಭದಲ್ಲಿ ಎಲ್ಲ ಕನ್ನಡಿಗರಿಗೂ ಕೈಗೆಟುಕಿನ ಬೆಲೆಗೆ ದೊರಕಬೇಕೆಂಬ ನಮ್ಮ ಸದುದ್ದೇಶ. ಇದಕ್ಕಾಗಿ ನಂದಳಿಕೆ ಲಕ್ಷ್ಮೀನಾರಾಯಣಯ್ಯನ ಸಮಕಾಲೀನ ಸಹಪಾಠಿ ದಿವಂಗತ ನಂದಳಿಕೆ ದೇವರಾವ್‌, ಬಿ.ಎ.ಎಲ್‌.ಟಿ. ಅವರ ಸುಪುತ್ರರಾದ ನಿವೃತ್ತ ಐ.ಎ.ಎಸ್‌. ಅಧಿಕಾರಿ ಎನ್‌.ಡಿ. ಜಗನ್ನಾಥರಾವ್‌ ಅವರು ಈ ಕೃತಿಯ ಪ್ರಕಾಶನದ ಆರ್ಥಿಕ ಭಾರವನ್ನು ಹೊತ್ತುಕೊಂಡು ಒಂದು ಸಾರಸ್ವತ ಸೇವೆಗೆ ಅಣಿಯಾಗಿದ್ದಾರೆ. ಸುವರ್ಣ ಕರ್ನಾಟಕಕ್ಕೆ ಮೆರುಗು ಬರಲು ನಮ್ಮ ಕನ್ನಡಿಗರು ಕನ್ನಡದ ಶ್ರೇಷ್ಠ ಸಾಹಿತ್ಯಕೃತಿಗಳನ್ನು ಅಭಿಮಾನದಿಂದಕೊಂಡು ಕೈಗೆತ್ತಿಕೊಂಡು ಅಧ್ಯಯನ ಮಾಡಬೇಕಿದೆ. ಅದಕ್ಕೆ ಅವಕಾಶವೊದಗಿಸಿಕೊಡುತ್ತಿರುವ ಈ ಸಂದರ್ಭದಲ್ಲಿ ಜನತೆ ಎನ್‌.ಡಿ.ಜಗನ್ನಾಥರಾವ್‌ ಅವರಿಗೆ ಕೃತಜ್ಞವಾಗಿರಬೇಕಿದೆ.

ಹತ್ತು ಮಂದಿ ಹಿರಿಯರಿಗೆ ಮುದ್ದಣ ಪುರಸ್ಕಾರ ಪ್ರಶಸ್ತಿ ಪ್ರದಾನ, ಮುದ್ದಣನ ಯಕ್ಷಗಾನ ಕೃತಿಗಳ ಅರ್ಥಸಹಿತ ಪ್ರಕಟನೆ, ಮುದ್ದಣ ರಚಿತ ಪ್ರಸಂಗದ ತಾಳಮದ್ದಳೆ ಧ್ವನಿಸುರುಳಿ, ಮುದ್ದಣನ ಸಂಪ್ರದಾಯದ ಹಾಡುಗಳ ಧ್ವನಿಸುರುಳಿ -ಹೀಗೆ ಮುದ್ದಣನ ಹೆಸರಿನಲ್ಲಿ ಹಲವು ಪ್ರಕಟಣೆಗಳನ್ನು ಈಗಾಗಲೇ ಮಾಡುವ ಅವಕಾಶ ನನಗೊದಗಿದೆ. ‘‘ಮುದ್ದಣ ಪ್ರಕಾಶನ’’ ಎಂಬ ಹೆಸರಿನಿಂದ ಮೂರು ಪುಸ್ತಕಗಳನ್ನು ಪ್ರಕಟಿಸಲಾಗಿದೆ.

ಇತ್ತೀಚೆಗೆ, ಮುದ್ದಣ ಬದುಕು-ಬರೆಹ (ಕವಿ ಜಯರಾಮ ಕಾರಂತ್‌, ಪ್ರಧಾನಸಂಪಾದಕತ್ವದಲ್ಲಿ), ಮುದ್ದಣನಿಗೆ ನಮನ ಗ್ರಂಥ, ನಂದಳಿಕೆಯ ನಂದಾದೀಪಗಳು, ನಂದಳಿಕೆಯ ನಂದನ- ಮುಂತಾದವು ಈವರೆಗೆ ಪ್ರಕಟವಾಗಿವೆ. ಮುದ್ದಣ ಸ್ಮಾರಕ ಮಿತ್ರ ಮಂಡಳಿಯ ಹೆಸರಿನಲ್ಲಿ ನಂದಳಿಕೆಯ ಊರಿನ ಸರ್ವಾಂಗೀಣ ನಾಗರಿಕ ಅನುಕೂಲಗಳ ಅಭಿವೃದ್ಧಿಗಾಗಿ ಕಳೆದ 25 ವರ್ಷಗಳಿಂದ ಶ್ರಮಿಸಿದ ಧನ್ಯತಾಭಾವ ಮತ್ತು ಸಂತೃಪ್ತಿ ನಮಗಿದೆ.

ಮುದ್ದಣನ ಹೆಸರಿನಲ್ಲಿ ಕವಿಸೇವೆ, ಕಾವ್ಯಸೇವೆ, ಜನಸೇವೆ ನಡೆಸಿಕೊಂಡು ಬಂದ ನನಗೆ ಇದೀಗ ಸುವರ್ಣ ಕರ್ನಾಟಕ ವರ್ಷದಲ್ಲಿ ಈ ಸಾಹಿತ್ಯ ಸೇವೆಯಲ್ಲಿ ಈ ಗ್ರಂಥ ಪ್ರಕಾಶನದ ಸಂಯೋಜಕನಾಗಿ ಕೈಂಕರ್ಯದ ಅವಕಾಶ ಒದಗಿ ಬಂದಿದ್ದು, ನನ್ನೆಲ್ಲ ಸಾಧನೆಗಳನ್ನು ಕವಿಮುದ್ದಣನ ಹೆಸರಿಗೆ ಸಮರ್ಪಿಸಿದಂತೆ ಇದನ್ನೂ ಈ ಹೆಸರಿಗೇ ಸಮರ್ಪಿಸುತ್ತೇನೆ. ಜನತೆ ಪುನಃಪುನಃ ಮುದ್ದಣನನ್ನು ನೆನೆಯಬೇಕೆಂಬುದಕ್ಕಾಗಿಯೇ ಈ ಕೃತಿಯನ್ನು ತಾವೆಲ್ಲರೂ ಕೊಂಡುಕೊಳ್ಳಬೇಕೆಂಬ ವಿನಂತಿ ನನ್ನದು. ಸುವರ್ಣ ಕರ್ನಾಟಕದ ವಿಶೇಷ ಸಂದರ್ಭದಲ್ಲಿ ಮತ್ತು ಮುದ್ದಣ ಪ್ರಕಾಶನದ ದಶಮಾನೋತ್ಸವದ ಸವಿನೆನಪಿಗಾಗಿ ಈ ಕೃತಿಯನ್ನು ಎಲ್ಲರಿಗೆ ಒದಗಿಸಿಕೊಡುವುದು ನಮ್ಮ ಗುರಿ. ಇದಕ್ಕಾಗಿ, ಒಟ್ಟು ಇನ್ನೂರು ಪುಟಕ್ಕೂ ಮೀರಿ ಬರಲಿರುವ ಈ ಪುಸ್ತಕಕ್ಕೆ ಎಲ್ಲರ ಕೈಗೂ ಎಟುಕುವ ವಿಶೇಷ ರಿಯಾಯಿತಿ ದರವನ್ನಿರಿಸಿ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪುಸ್ತಕ ಪ್ರಸಾರ ಮಾಡುವ ಉದ್ದೇಶವಿದೆ.

ಸೆಪ್ಟಂಬರ್‌ ತಿಂಗಳಿನಲ್ಲಿ ಅಮೆರಿಕಾದ ವಾಷಿಂಗ್‌ಟನ್‌ ಡಿ.ಸಿ.ಯಲ್ಲಿ ಯಲ್ಲಿ ನಡೆಯಲಿರುವ ನಾಲ್ಕನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಈ ಗ್ರಂಥವನ್ನು ಲೋಕಾರ್ಪಣೆ ಮಾಡುವ ಉದ್ದೇಶವಿದೆ. ಅದಕ್ಕಾಗಿ ಸಂಬಂಧಪಟ್ಟವರೊಂದಿಗೆ ಪತ್ರವ್ಯವಹಾರ ಮಾಡುತ್ತಿದ್ದೇವೆ. ಇದರೊಂದಿಗೆ, ಕಾಲಾವಕಾಶ ದೊರಕಿದರೆ, ಭಾರತದ ಹಲವೆಡೆ ನಡೆಸಿರುವಂತೆ ಮುದ್ದಣನ ಬಾಳು-ಸಾಹಿತ್ಯಕೃಷಿಯ ಬಗ್ಗೆ ಚಿತ್ರ-ಪುಸ್ತಕ-ಆಡಿಯೋ ವಿಡಿಯೋ-ಪ್ರದರ್ಶನಗಳನ್ನೂ ಅಲ್ಲಿ ವಿದೇಶದ ಕನ್ನಡಿಗರಿಗೆ ತೋರಿಸುವ ಹಂಬಲವಿದೆ. ಒಟ್ಟಿನಲ್ಲಿ ಮುದ್ದಣನಿಗೆ ಸೀಮೋಲ್ಲಂಘನ ಮಾಡಿಸುವುದೇ ನಮ್ಮ ಗುರಿ.

ಮುಖ್ಯವಾಗಿ ಉಳಿದೊಡಂ ಅಳಿದೊಡಂ ಬಟ್ಟೆದೋರಿಪ ಈ ರಸಭರಿತ ರಾಮಾಶ್ವಮೇಧ ಮೇರುಕೃತಿ ನಿಮ್ಮ ಮನೆ ಮನಗಳಲ್ಲಿರಲೆಂದು ವಿನಂತಿಪೂರ್ವಕವಾದ ಹಾರೈಕೆ. ಈ ಕನ್ನಡ ಸೇವಕನ ನುಡಿಗೆ ಮನ್ನಣೆ ನೀಡುವಿರೆಂದು ವಿಶ್ವಾಸ ಹೊಂದಿದ್ದೇನೆ. ಪುಸ್ತಕ ಪ್ರೇಮಿಗಳು ನನ್ನನ್ನು ಸಂಪರ್ಕಿಸಬಹುದು.

ವಿಳಾಸ :

ನಂದಳಿಕೆ ಬಾಲಚಂದ್ರರಾವ್‌,

ಗೌರವ ನಿರ್ದೇಶಕರು, ಮುದ್ದಣ ಪ್ರಕಾಶನ,

‘ಮುದ್ದಣ ಚಾವಡಿ’, ಚರ್ಚ್‌ ರಸ್ತೆ,

ಬಿಜೈ, ಮಂಗಳೂರು- 575 004

ದೂರವಾಣಿ-2495495,

ಮೊಬೈಲ್‌: 94481-44495

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more