ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಭಕ್ತರಿಗೆ ಒಂದೆರಡು ಪ್ರಶ್ನೆಗಳು!

By Staff
|
Google Oneindia Kannada News
ಎಸ್ಪಿಯವರನ್ನು ಕುರಿತ ಪೂರ್ಣಿಮಾರ ಪತ್ರವನ್ನು ಓದಿ ಬಹಳ ನೋವಾಯಿತು. ಪ್ರಾಯಶಃ ಮನುಷ್ಯನ ಸ್ವಭಾವವೇ ಹಾಗೆ - ಎಲ್ಲರಲ್ಲೂ, ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವಾಗಿನ ಸಂತೋಷ, ಬೇರೊಬ್ಬರ ಬೆನ್ನು ತಟ್ಟಿದರೆ ಸಿಗಲಾರದು. ಹುಡುಕಿದರೆ ನೂರಾರು ಹುಳುಕುಗಳು ನಮ್ಮೆಲ್ಲರಲ್ಲೂ ಸಿಗುತ್ತವೆ.

ಎಸ್ಪಿಯವರು ತಮಗೆ ಕನ್ನಡದಲ್ಲಿ ಸಿಕ್ಕಷ್ಟು ಆದರ, ಗೌರವ ಮತ್ತೆ ಯಾವ ಭಾಷೆಯಲ್ಲೂ ಸಿಕ್ಕಿಲ್ಲ ಎಂದು ಪದೇ ಪದೇ ಹೇಳಿದ್ದಾರೆ - ಮೊನ್ನೆಯಷ್ಟೇ ಅಲ್ಲ, ಹಲವಾರು ಬಾರಿ. ಅವನ್ನೆಲ್ಲ ಪೂರ್ಣಿಮಾರಂತಹ ಸಹೃದಯರು ಮರೆತದ್ದು ಹೇಗೆ ? ಕಲೆಗೆ, ಅದರಲ್ಲೂ ಸಂಗೀತಕ್ಕೆ ಭಾಷೆಯ ಪರಿಮಿತಿ ಬೇಕಿಲ್ಲ. ಅಂದಹಾಗೆ, ಮನೆಯಲ್ಲಿ ತಮಿಳನ್ನು ಮಾತನಾಡುತ್ತಿದ್ದ ಮಾಸ್ತಿ, ಪು.ತಿ.ನ ಅವರನ್ನೆಲ್ಲ ಎಲ್ಲಿಡೋಣ ಕನ್ನಡ ಭಕ್ತರೆ ?

ಅತಿ ವಿನಯವು ಧೂರ್ತ ಲಕ್ಷಣವಾಗಿರಲೇ ಬೇಕಿಲ್ಲ. ಎಸ್ಪಿಯವರು ಇಳಯರಾಜನಿಂದ ಹಿಡಿದು, ರಾಜಕುಮಾರರವರೆಗೆ ಎಲ್ಲರನ್ನೂ ಹೊಗಳೀ ಹೊಗಳೀ ಅಟ್ಟಕ್ಕೆ ಏರಿಸಿಟ್ಟರು. ಅಂತಹ ಪ್ರಶಂಸೆಯ ಮಾತುಗಳಲ್ಲಿ ಹಲವು ಅಸತ್ಯಗಳು, ಹಲವು ಉತ್ಪ್ರೇಕ್ಷೆಗಳಿರಬಹುದು. ಅವುಗಳನ್ನು ಕೇಳಿಸಿಕೊಂಡು ನಕ್ಕುಬಿಡುವುದಷ್ಟೆ ನಮ್ಮ ಕೆಲಸ ಎಂದು ನನ್ನ ನಂಬಿಕೆ. ನಾವಲ್ಲಿ ಸೇರಿದ್ದು ಎಸ್ಪಿಯವರ ಹಾಡುಗಳನ್ನು ಕೇಳಲು, ಅಷ್ಟೆ.

ಇನ್ನು ಮಲ್ಲಿಕಾರ್ಜುನನ ಸರದಿ. ಆತ ಬಹಳ ಒಳ್ಳೆಯ ಗಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಸ್ಪಿಯರ ಗುಂಪು ಕನ್ನಡ ಸಮ್ಮೇಳನಕ್ಕಾಗಿಯೇ ಅಮೆರಿಕೆಗೆ ಬಂದದ್ದಲ್ಲ. ಅವರ ಹಲವಾರು ಕಾರ್ಯಕ್ರಮಗಳಲ್ಲಿ ಇದೂ ಒಂದು. ಅವರು ಪ್ರತಿಯೊಂದು ಭಾಷೆಯ ಕಾರ್ಯಕ್ರಮಕ್ಕೆ ಹೋದಾಗಲೂ ಆಯಾಯು ರಾಜ್ಯದ ಹಾಡುಗಾರರನ್ನು ಕರೆದುಕೊಂಡು ಹೋಗಬೇಕೇನು ? ಇದು ಹಾಸ್ಯಾಸ್ಪದ.

ಇಳಯರಾಜರನ್ನೂ, ರಾಜಕುಮಾರರನ್ನೂ ಎಷ್ಟು ಹೊಗಳಿದರೋ, ಅದೇ ಧಾಟಿಯಲ್ಲಿ ಎಸ್ಪಿಯವರು ಮಲ್ಲಿಕಾರ್ಜುನನನ್ನೂ ಹೊಗಳಿದರು. ಇಷ್ಟೊತ್ತಿಗಾಗಲೆ ಎಸ್ಪಿಯವರ ಸ್ವಭಾವ ನಮಗೆಲ್ಲ ಮನದಟ್ಟಾಗಿರಬೇಕು. ಮಲ್ಲಿಕಾರ್ಜುನನನ್ನು ‘‘ಕನ್ನಡದಲ್ಲಿ ಮುಂದೆ ತರುವ’’ ಯಾವ ಅಂಶವೂ ನನಗೆ ಕಾಣಲಿಲ್ಲ.

ಎಸ್ಪಿಯಂತಹ ಧನ್ಯರನ್ನು ಪ್ರಶ್ನಿಸಿ ಅಗೌರವಿಸುವುದು ಎಸ್ಪಿಯವರಿಗಲ್ಲ, ಕನ್ನಡಿಗರಿಗೇ ಅವಮಾನ. ತಪ್ಪು ಹುಡುಕಬೇಕಾದರೆ, ಬೇಕಾದಷ್ಟು ಜನರು ಸಿಗುತ್ತಾರೆ. ನಮ್ಮ ಕನ್ನಡದ ‘‘ಕಣ್ಮಣಿ’’ಗಳಾದ ನಟ ಮುರಳಿ ಹಾಗೂ ಗಾಯಕ(?) ಗುರುಕಿರಣರು ಕೆಟ್ಟ ಇಂಗ್ಲಿಷಿನಲ್ಲಿ ಪದೇ ಪದೇ ಮಾತನಾಡುತ್ತಿದ್ದರಲ್ಲ, ಅದಕ್ಕೇನನ್ನೋಣ ?

ಕನ್ನಡದ ಕಲಾವಿದರನ್ನು ಬೆಂಬಲಿಸುವುದು ಖಂಡಿತ ಸರಿ. ಹಾಗೆಂದ ಮಾತ್ರಕ್ಕೆ ಎಸ್ಪಿ, ಎಸ್‌. ಜಾನಕಿ, ಚಿತ್ರ ಎಲ್ಲರನ್ನೂ ಕನ್ನಡ ನಾಡಿನಿಂದ ಹೊರದೂಡಬೇಕೆಂದೇನಿಲ್ಲ. ಅವರು ಕನ್ನಡಕ್ಕೆ ಮಾಡಿರುವ ಸೇವೆಯನ್ನು ನೆನೆದು ಗೌರವಿಸುವುದು ನಮ್ಮ ಕರ್ತವ್ಯ. ಕನ್ನಡದ ಕಲಾವಿದರು ಬೇರೆ ಭಾಷೆಗಳಲ್ಲಿ ಮಿಂಚಿದಾಗ ಹಿಗ್ಗಿ ಹೀರೇಕಾಯಿಯಾಗುವ ನಾವು, ಬೇರೆಯವರು ಕನ್ನಡಕ್ಕೆ ಬಂದಾಗ ಸಹಿಸಲಾಗುವುದಿಲ್ಲ ಅಂದರೆ ಹೇಗೆ ?

ಗಾಯಕರು, ನಟ ನಟಿಯರನ್ನು ಬಿಡಿ. ನಾವು ಇಷ್ಟು ಸಂಕುಚಿತ ಮನೋಭಾವದವರಾಗಿಬಿಟ್ಟರೆ ಬೇಂದ್ರೆ, ಮಾಸ್ತಿಯವರೆಲ್ಲ ಕನ್ನಡದವರೇ ಅಲ್ಲ, ಅವರ ಜ್ಞಾನಪೀಠ ವಾಪಸ್ಸು ತೆಗೆದುಕೊಳ್ಳಿ ಎನ್ನುವ ಕಾಲವೂ ಬಂದೀತು. ಎಷ್ಟು ದುರದೃಷ್ಟಕರ.

ನುಡಿ-ಕಿಡಿ :

ಕನ್ನಡದಲ್ಲಿ ಬೇರೆ ಇನ್ಯಾರೂ ಪ್ರಬುದ್ಧ ಗಾಯಕರೇ ಇಲ್ವಾ?
ಎಸ್ಪಿ ಬಾಲು ಮತ್ತು ಕನ್ನಡ ಪ್ರೇಮಿಗಳ ದುಂಬಾಲು
ನಮ್ಮವರಿಗಿಂತ ಬಾಲು ಸಾವಿರಪಟ್ಟು ಮೇಲು!

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X