ವಿಶ್ವಕನ್ನಡ ಸಮ್ಮೇಳನದಲ್ಲಿ ಹರಿದು ಬಂದ ‘ಕಥಾವಾಹಿನಿ’

  • ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
    [email protected]
ಕತೆ ನಮ್ಮ ಕಲ್ಪನೆಯಿಂದ ಮೂಡಿಬಂದವುಗಳಾದರೂ ಅದು ನಮ್ಮ ಬದುಕಿನ ಅನುಭವಗಳ ಫಲಗಳೇ! ನಾಲ್ಕನೆಯ ವಿಶ್ವಕನ್ನಡ ಸಮ್ಮೇಳನದಲ್ಲಿ ಲೋಕಾರ್ಪಿತವಾದ ‘ಕಥಾವಾಹಿನಿ’ಯ 13 ಕತೆಗಳೂ ಇದಕ್ಕೆ ಹೊರತಲ್ಲ. ಅಮೆರಿಕದ ವಿವಿಧ ಪ್ರಾಂತಗಳಿಂದಲೂ, ಸಿಂಗಪುರದಿಂದಲೂ ಹವ್ಯಾಸಿ ಲೇಖಕರು ಬರೆದ ಕತೆಗಳ ಕಥಾ ವಸ್ತು ಮತ್ತು ಕತೆ ಬರೆದ ಶೈಲಿಗಳು ಬೇರೆಯಾಗಿದ್ದರೂ, ಎಲ್ಲವೂ ಮಾನವ ಜೀವನವನ್ನು ಸ್ಪಂದಿಸುತ್ತವೆ. ಓದುಗರು ‘ಕಥಾವಾಹಿನಿ’ಯ ಕತೆಗಳನ್ನು ಓದುತ್ತಿದ್ದಂತೆ, ಅವುಗಳೊಳಗೆ ಕೆಲವು ಸಾಮ್ಯತೆಗಳನ್ನು ಗುರುತಿಸಬಹುದು.

‘ಸೇತುಬಂಧ’ ಎಂಬ ಕತೆಯಿಂದ ‘ಕಥಾವಾಹಿನಿ’ ಹರಿಯಲು ಪ್ರಾರಂಭವಾಗುತ್ತದೆ. ಒಬ್ಬ ಮಹಿಳೆ ತಾಯಿಯಾಗಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳುವ ವಿಷಯವೇ ಇಲ್ಲಿನ ಕಥಾವಸ್ತು. ಇದೇ ವಿಷಯವನ್ನು ಬಳಸಿದ ‘ಅರ್ಥ’ ಮತ್ತು ‘ಒಂಟಿ ಕೋಗಿಲೆ’ ಎಂಬಿನ್ನೆರಡು ಕತೆಗಳು ಈ ಸಂಕಲನದಲ್ಲಿವೆ.

ಮಂಗಳಾ ಕುಮಾರ್‌ ಬರೆದಿರುವ ‘ಅರ್ಥ’ವೆಂಬ ಕತೆಯಲ್ಲಿ ಕಥಾನಾಯಕಿ ಮಾಧವಿ ಅನಾಥಾಶ್ರಮದಲ್ಲಿ ಯಾರೋ ಬಿಟ್ಟುಹೋದ ಎರಡೇ ದಿನಗಳ ಹೆಣ್ಣು ಶಿಶು, ‘ನಿಧಿ’ಯನ್ನು ಅಡಾಪ್ಟ್‌ ಮಾಡಿಕೊಂಡು ಅಮೆರಿಕಕ್ಕೆ ಕರೆತರುತ್ತಾಳೆ. ಹದಿನೆಂಟು ವರ್ಷಗಳ ಮೇಲೆ ನಿಧಿಗೆ ಮಾಧವಿ ತನ್ನ ಹೆತ್ತ ತಾಯಿಯಲ್ಲವೆಂಬ ಅನುಮಾನ ಬಂದು, ತನ್ನ ಹೆತ್ತ ತಾಯಿಯ ಅನ್ವೇಷಣೆಗೆ ಪ್ರಾರಂಭಿಸುತ್ತಾಳೆ. ಲೈಬ್ರರಿ ಒಂದರಲ್ಲಿ ನಿಧಿಗೆ ಅಕಸ್ಮಾತ್‌ ‘ಅವಳ’ ಭೇಟಿಯಾಗುತ್ತದೆ. ಅದರಿಂದಾಗಿ ತಾಯಿ-ಮಗಳೊಳಗಿನ (ಮಾಧವಿ-ನಿಧಿ) ಸಂಬಂಧ ಸ್ವಲ್ಪ ವಿರಸಕ್ಕೆ ತಿರುಗುತ್ತದೆ.

ಕನಸಿನಲ್ಲಿ ಕಾಣಿಸಿಕೊಂಡ ‘ಅವಳು’ ಹೇಳಿದ - ‘ನನಗೆ ಅಂದು ಸಾಧ್ಯವಾಗದೇ ಹೋದದ್ದು ಇಂದಿಗೂ ಸಾಧ್ಯವಿಲ್ಲ, ಅಗತ್ಯವೂ ಇಲ್ಲ’ ಮತ್ತು ಮಾಧವಿ ಹೇಳಿದ - ‘ನನಗೆ ಬೇಕಿದ್ದುದು ಮಾತೃತ್ವದ ಅನುಭವ ಮಾತ್ರವಲ್ಲ, ನಾನೇ ಮಾತೆಯಾಗುವುದೆಂದು ಹುಡುಕುತ್ತಿದ್ದೆ. ಹುಡುಕುವ ಅಗತ್ಯ ಅಂದೂ ಇರಲಿಲ್ಲ, ಇಂದೂ ಇಲ್ಲ’ ಎಂಬ ಮಾತುಗಳೆರಡರ ಅರ್ಥದ ಅರಿವಾಗುವುದೇ ಈ ಕತೆಯ ಅರ್ಥಪೂರ್ಣ ತಿರುಳು.

ಆದರೆ, ಜ್ಯೋತಿ ಮಹದೇವ್‌ ಅವರ ‘ಒಂಟಿ ಕೋಗಿಲೆ’ಯಲ್ಲಿ ಕಥಾನಾಯಕಿ ಅನುಭವಿಸುವ ಸಂಕಟ ಬೇರೆಯಾಗಿದೆ. ತೆಂಗಿನ ಮರದ ಮೇಲೆ ಒಂಟಿಯಾಗಿ ಕುಳಿತ ಹೆಣ್ಣು ಕೋಗಿಲೆಯ ಪಾಡೇ ಅವಳದ್ದಾದಿರುತ್ತದೆ. ಗಂಡನಲ್ಲಿರುವ ದೋಷದಿಂದಾಗಿ ತಾಯಿಯಾಗಬೇಕೆಂಬ ಅವಳ ಬಯಕೆ ಕೈಗೂಡುವುದಿಲ್ಲ. ‘ಪರ ಊರಿಗೆ ರಂಗ, ತನ್ನೂರಿಗೆ ಮಂಗ’ನಂತಿರುವ ‘ಸ್ಪ್ಲಿಟ್‌ ಪರ್ಸನಾಲಿಟಿ’ ಪ್ರೊಫೆಸರ್‌ ಗಂಡನ ಅಸಭ್ಯವರ್ತನೆಯನ್ನು ತಾಳಲಾರದೆ, ಕಥಾನಾಯಕಿ ಮನೆ ಬಿಟ್ಟು ಹೋಗುತ್ತಾಳೆ.

ಕತೆಯಲ್ಲಿ ಮಿಂಚಿ ಹೋಗುವ ಇಳಿವಯಸ್ಸಿನ ಒಂದು ದಂಪತಿಗಳ ಆದರ್ಶ ಜೋಡಿ ಕತೆಗೊಂದು ಹೊಸ ಆಯಮ ನೀಡುತ್ತದೆ. ಈ ಕತೆಯಲ್ಲಿ ಬಳಸಿದ ಮಂಗಳೂರು ಮತ್ತು ಉಡುಪಿ ಪ್ರದೇಶದ ಕೆಲವೇ ಆಡು ಮಾತು ನಮ್ಮ ಗಮನ ಸೆಳೆಯುತ್ತದೆ. ‘ನುಗ್ಗೆ ಸೊಪ್ಪು ಲಾಯಕ್ಕಿಲ್ಲ; ಈ ಬಸಳೆಗಿಂತ ನನ್ನ ಹಿಡಿಸೂಡಿ (ಪೊರಕೆ) ಕಡ್ಡಿಯೇ ತೋರ ಉಂಟು ಮಾರಾಯ್ತೀ...’, ‘ನೀವು ಹೀಗೆ ಕೊರೆ ಮಾಡಿದ್ರೆ ನಾವು ಬಡವರು ಬದುಕಬೇಡ್ವಾ.....?’ ಎಂಬಿತ್ಯಾದಿ ನುಡಿಗಟ್ಟುಗಳು ಕನ್ನಡ ಭಾಷೆಯ ಪ್ರಾದೇಶಿಕ ಮಾತುಗಳ ವೈವಿಧ್ಯತೆ ಮತ್ತು ವಿಶಿಷ್ಟತೆಗಳಿಗೆ ಉದಾಹರಣೆ.

ಮನುಷ್ಯರಲ್ಲಿ ಬೆಳೆದು ಬಂದಿರುವ ‘ಅಹಂ’ ವಿಚಾರ ‘ಕೋಟೆ’ ಮತ್ತು ‘ಬಣ್ಣ ಕಳೆದುಕೊಳ್ಳುವ ಭಾವನೆಗಳು’ ಎಂಬೆರಡು ಕತೆಗಳಲ್ಲಿ ಮೂಡಿಬಂದಿದೆ. ತ್ರಿವೇಣಿಯವರ ‘ಬಣ್ಣ ಕಳೆದುಕೊಳ್ಳುವ ಭಾವನೆಗಳು’ ಎಂಬ ಕತೆಯಲ್ಲಿನ ಅಶೋಕ ಪ್ರಪಂಚವೆಲ್ಲ ತನ್ನ ಸುತ್ತಲೇ ತಿರುಗುತ್ತತೆಂಬ ‘ಅಹಂ’ ಹೊಂದಿರುವವನು. ಇದು, ಅವನು ಮದುವೆಯಯಾಗಬಯಸುವ ಚಂದನಳ ಸ್ವಾಭಿಮಾನಕ್ಕೆ ತೀರ ವಿರುದ್ಧವಾದುದು. ಈ ಕತೆಯಲ್ಲಿ ಬರುವ ‘ಎಂದೂ ಯಾರಿಗೂ ಸುಳ್ಳು ಹೇಳದ ಕನ್ನಡಿ ಚಂದನಳಿಗೂ ನೀನು ಸುಂದರಿ ಎಂದು ನಿಜವನ್ನೇ ನುಡಿಯಿತು’ - ಎಂಬ ಮಾತು ಅರ್ಥಗರ್ಭಿತವಾದುದು.

ನಯವಾಗಿ ಅಲಂಕರಿಸಿಕೊಂಡ ಚಂದನ ಕನ್ನಡಿಯ ಮುಂದೆ ನಿಂತಾಗ ಅದು ಅವಳ ಸೌಂದರ್ಯವನ್ನು ತಪ್ಪಿಲ್ಲದೆ ಪ್ರತಿಬಿಂಬಿಸುವಂತೆಯೇ, ಸ್ಪುರದ್ರೂಪಿ, ವಿದ್ಯಾವಂತ, ಶ್ರೀಮಂತನೆನಿಸಿಕೊಂಡ ಅಶೋಕನ ಬಾಹ್ಯ ರೂಪವನ್ನೂ ಪ್ರತಿಬಿಂಬಿಸಬಲ್ಲುದು. ಚಂದನಳ ಒಳಗಣ್ಣೆಂಬ ಕನ್ನಡಿಯಲ್ಲಿ ಅವನ ನಿಜಸ್ವಭಾವ ಪ್ರತಿಬಿಂಬಿಸಿದಾಗ, ತನಗೂ ಅಶೋಕನಿಗೂ ಹೊಂದಾಣಿಕೆ ಇಲ್ಲದಿರುವುದು ಅವಳಿಗೆ ಅರಿವಾಗಿ, ತಂದೆ-ತಾಯಿಯರಿಗೆ ತೀರ ನೋವುಂಟುಮಾಡಿದರೂ, ಅಶೋಕನನ್ನು ವರಿಸಲು ನಿರಾಕರಿಸುತ್ತಾಳೆ. ಹಾಗೆ ಮಾಡಿ ‘ತನ್ನತನ’ ಅಶೋಕನ ‘ಅಹಂ’ಗೆ ಬಲಿಯಾಗದಂತೆ ಉಳಿಸಿಕೊಳ್ಳುತ್ತಾಳೆ; ಮುಂದಾಗುವ ಅನಾಹುತಗಳಿಂದಲೂ ಪಾರಾಗುತ್ತಾಳೆ. ಕತೆಗೆ ಇನ್ನೂ ಹೆಚ್ಚಿನ ಆಕರ್ಷಕ ಶೀರ್ಷಿಕೆಯನ್ನು ಕೊಡಬಹುದಾಗಿತ್ತೇನೋ ಎಂದೆನಿಸಿತು.

ನಳಿನಿ ಮೈಯರ ‘ಕೋಟೆ’ಯಲ್ಲಿ ಡಾಕ್ಟರ್‌ ಕೋಲ್‌ಮನ್‌ ಎಂಬವಳು ತನ್ನ ಸುತ್ತ ‘ಅಹಂ’ ಎಂಬ ಕೋಟೆಯನ್ನೇ ರಚಿಸಿಕೊಂಡಿರುತ್ತಾಳೆ. ಅವಳ ಹೆಸರು ಕ್ಯಾತರಿನ್‌ ಎಂದಿದ್ದರೂ, ತನ್ನನ್ನು ಡಾಕ್ಟರ್‌ ಕೋಲ್‌ಮನ್‌ ಎಂತಲೇ ಕರೆದುಕೊಳ್ಳುತ್ತಾಳೆ. ಮಾನಸಿಕ ನೋವುಗಳನ್ನು ಮುಚ್ಚಿಡುವ ಅವಳ ಈ ವರ್ತನೆ ಕಥಾನಿರೂಪಕಿ ನಳಿನಿಗೆ ಮೊದಲು ತಿಳಿಯದೇ ಅವಳ ಆತ್ಮಾಭಿಮಾನವನ್ನು ಚುಚ್ಚುತ್ತದೆ. ಆದರೆ, ಕೊನೆಯಲ್ಲಿ ಡಾಕ್ಟರ್‌ ಕೋಲ್‌ಮನ್‌ ಕಟ್ಟಿಕೊಂಡ ಕೋಟೆಯ ಗೋಡೆ ಬಿರಿದು ಬಿದ್ದಾಗ, ಅಲ್ಲಿಯವರೆಗೆ ಗೋಚರಿಸದ ಅವಳ ನಿಜ ಮನುಷ್ಯತ್ವ ವ್ಯಕ್ತವಾಗುತ್ತದೆ. ಪರಿಣಾಮವಾಗಿ ನಿರೂಪಕಿ ನಳಿನಿಯ ಬಗ್ಗೆ ಈ ಹಿಂದೆ ಅವಳು ತೋರಿದ ನಿರ್ಲಕ್ಷ ಮತ್ತು ಅಹಂಕಾರದ ಭಾವನೆಗಳು ಮರೆಯಾಗಿ, ‘ನಳಿನಿ, ಕಾಲ್‌ ಮಿ ಕೇಟಿ....’ ಎಂದು ಹೇಳುತ್ತಾಳೆ. ಕತೆ ಮುಗಿಯುತ್ತಿದ್ದಂತೆ ನಳಿನಿಗೆ ತಾನು ತನ್ನ ಸುತ್ತ ನಿರ್ಮಿಸಿಕೊಂಡ ‘ಪ್ರೊಫೆನಲಿಸಮ್‌’ ಎಂಬ ಕೋಟೆಯ ಅರಿವಾದುದು ಕತೆಗೊಂದು ಅರ್ಥಪೂರ್ಣ ಮುಕ್ತಾಯವನ್ನು ದೊರಕಿಸಿದೆ.

‘ಮೌಲ್ಯ ಮಾಪನ’ ಮತ್ತು ‘ವಿಶ್ರಾಂತಿ-ವಿಭ್ರಾಂತಿ’ ಎಂಬೆರಡು ಕತೆಗಳಲ್ಲಿ ಭಾರತೀಯ ಮತ್ತು ಅಮೆರಿಕದ ಮೌಲ್ಯ ಮತ್ತು ಸಂಸ್ಕೃತಿಗಳ ಸಂಘರ್ಷವೇ ಕಥಾವಸ್ತುವಾಗಿದೆ. ನಟರಾಜರ ‘ವಿಶ್ರಾಂತಿ-ವಿಭ್ರಾಂತಿ’ಯಲ್ಲಿ ನಾಯಕ ಕೇಶವಮೂರ್ತಿ ಮತ್ತು ನಾಯಕಿ ರಮಾ ಅನುಭವಿಸಿದ ಇಂಥ ಸಂಘರ್ಷ ಸೂಕ್ಷ್ಮವಾಗಿ ವ್ಯಕ್ತವಾಗಿದೆ. ಅಮೆರಿಕದ ಬಿಡುವಿಲ್ಲದ ಜೀವನದಿಂದ ಬಿಡುಗಡೆ ಹೊಂದಿ ತನ್ನ ನಿವೃತ್ತ ಜೀವನವನ್ನು ಭಾರತದಲ್ಲಿ ಆರಾಮವಾಗಿ ಕಳೆಯಬೇಕೆಂಬ ಕೇಶವಮೂರ್ತಿಯ ಆಸೆ ಹೇಗೆ ಭಗ್ನವಾಯ್ತು ಎಂಬುದು ಕತೆಯಲ್ಲಿ ವಿವರವಾಗಿದೆ.

ಬಹಳ ಕಾಲ ಅಮೆರಿಕದಲ್ಲಿ ಜೀವನ ನಡೆಸಿದ ಆ ಗಂಡ-ಹೆಂಡಿರು ಭಾರತದ ಜೀವನ ಕ್ರಮಕ್ಕೆ ಹೊಂದಿಕೊಳ್ಳಲಾರದೆ, ತಿರುಗಿ ಅಮೆರಿಕಕ್ಕೇ ಬರುತ್ತಾರೆ. ಆದರೆ, ಅಮೆರಿಕದಲ್ಲಿ ಬೆಳೆದ ಅವರ ಮಕ್ಕಳು ಇಲ್ಲಿನ ಮೌಲ್ಯಗಳನ್ನು ತಮಗರಿವಿಲ್ಲದಂತೆ ಒಪ್ಪಿ, ಅಪ್ಪಿಕೊಂಡುದನ್ನು ನೋಡಿ ಗಂಡ-ಹೆಂಡಿರಿಬ್ಬರೂ ವಿಭ್ರಾಂತರಾಗುತ್ತಾರೆ. ಒಟ್ಟಿನಲ್ಲಿ ಅವರ ಪಾಡು ‘ಅಲ್ಲಿಯೂ ಇಲ್ಲ ಇಲ್ಲಿಯೂ ಇಲ್ಲ’ ವೆಂಬಂತಾಗುತ್ತದೆ. ಜೊತೆಗೆ, ಸ್ಟಾಕ್‌ ಮಾರ್ಕೆಟ್‌ ಕುಸಿತದಿಂದಾಗಿಯೂ, ಅವರ ಮನೆಯ ಮಾರಾಟದ ಮೌಲ್ಯದ ಕುಸಿತದಿಂದಲೂ ಕೇಶವಮೂರ್ತಿ ತನ್ನ ವಿಶ್ರಾಂತಿಗೆಂದು ಕೂಡಿಟ್ಟ ಹಣವನ್ನೂ ಸಾಕಷ್ಟು ಕಳೆದುಕೊಳ್ಳುವಂತಾಗುತ್ತದೆ. ಅಂತೂ ಹಾಯಾಗಿ ಕಳೆಯ ಬೇಕೆಂದಿದ್ದ ಅವನ ವಿಶ್ರಾಂತಿ ಜೀವನ ವಿಭ್ರಾಂತಿಯಲ್ಲಿ ಪರಿಣಮಿಸುತ್ತದೆ. ಇಲ್ಲಿ ಬರುವ ಹಲವು ಸಂದರ್ಭಗಳು ಭಾರತದಿಂದ ವಲಸೆ ಬಂದ ಹಲವರು ಎದುರಿಸುವ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ.

ವಿಶ್ವನಾಥ್‌ ಹುಲಿಕಲ್‌ ಅವರ ‘ಮೌಲ್ಯ ಮಾಪನ’ದಲ್ಲಿ ವಿವರಿಸಿದ ಸಾಂಸ್ಕೃತಿಕ ಸಂಘರ್ಷ ಬೇರೆ ರೀತಿಯದು. ಇಲ್ಲಿಯ ಶೇಷಾದ್ರಿ ಒಬ್ಬ ಆದರ್ಶವಾದಿ. ಪ್ರಾಮಾಣಿಕವಾಗಿ ಮಾಡುವ ಕೆಲಸಕ್ಕೆ ಒಂದಲ್ಲ ಒಂದು ದಿನ ಮಾನ್ಯತೆ ದೊರೆಯುತ್ತದೆ - ಎಂಬುದರಲ್ಲಿ ಅಗಾಧ ನಂಬಿಕೆ ಇಟ್ಟವ. ಆದರೆ ಆ ಮಾನ್ಯತೆ ಗಳಿಸಲು ಬಹಳಷ್ಟು ವ್ಯವಹಾರಿಕ ಚಾಕಚಕ್ಯತೆಗಳು ಅಗತ್ಯ ಎಂಬುದನ್ನು ಅವನು ತಿಳಿದಿರಲಿಲ್ಲ. ಅವನ ಸಹೋದ್ಯೋಗಿ, ಮೈಕ್‌ಗೆ ಇವನಷ್ಟು ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇಲ್ಲದಿದ್ದರೂ, ವ್ಯವಹಾರಿಕ ಚಾಕಚಕ್ಯತೆಯಿಂದ, ವರ್ಷದ ಕೊನೆಯಲ್ಲಿ ನಡೆಯುವ ಪ್ರೊಫಿಷಿಯನ್ಸಿ ಅಸೆಸ್‌ಮೆಂಟ್‌ನಲ್ಲಿ ಅವನೇ (ಮೈಕ್‌) ಹೆಚ್ಚಿನ ಲಾಭ ಪಡೆಯುತ್ತಾನೆ. ಶೇಷಾದ್ರಿ ನಂಬಿ ನಡೆದುಕೊಂಡು ಬಂದಿದ್ದ ಮೌಲ್ಯಗಳು ಅವನಿಗೆ ಕೊನೆಯಲ್ಲಿ ಕೈಕೊಡುತ್ತದೆ. ಅಮೆರಿಕದ ವ್ಯವಹಾರಿಕ ಜೀವನದಲ್ಲಿ ಹೊಂದಿಕೊಳ್ಳಲಾರದೆ ಶೇಷಾದ್ರಿ ಸೋಲನ್ನು ಒಪ್ಪಿಕೊಳ್ಳ ಬೇಕಾಗುತ್ತದೆ.

ಈ ಸಂಕಲದಲ್ಲಿ ನಾನು ಕಂಡಂತೆ ಮುಖ್ಯವಾಗಿ ಆಧುನಿಕ ಕಥಾ ವಿನ್ಯಾಸ ಬಳಸಿಕೊಂಡ ನಾಲ್ಕು ಕತೆಗಳಿವೆ. ಅವು ‘ಉರಿ’, ‘ಚಕ್ರವ್ಯೂಹ’, ‘ಧ್ಯಾನ’ ಮತ್ತು ‘ವರ್ತುಲ’. Modern Arts ನೋಡಿ, ಅದರಲ್ಲಿ ಏನೋ ವಿಶೇಷತೆಯನ್ನು ಕಾಣುವಂತೆ, ಅಥವಾ ಕಂಡೆನೆಂಬ ಭ್ರಮೆ ಮೂಡಿದಂತೆ, ಕೆಲವೊಮ್ಮೆ ಆಧುನಿಕ ಕತೆಗಳಲ್ಲಿ ಕತೆಯನ್ನು ಹುಡುಕಿ ನೋಡುವ ಸಂದರ್ಭಗಳು ಬರುತ್ತವೆ. ಗುರುಪ್ರಸಾದ ಕಾಗಿನೆಲೆಯವರ ‘ಉರಿ’ ಎಂಬ ಕತೆಯನ್ನು ಈ ಹಿನ್ನೆಲೆಯಲ್ಲಿ ನಾನು ಅರ್ಥ ಮಾಡಿಕೊಂಡಷ್ಟುದನ್ನು ಇಲ್ಲಿ ಹೇಳಬಯಸುತ್ತೇನೆ. ಊರಲ್ಲಿ ಕೋಮುವಾರು ಗಲಭೆಯಿಂದ, ಬಸ್‌ ಸ್ಟ್ಯಾಂಡಿಗೆ ಬೆಂಕಿ ಬಿದ್ದು ಉರಿಯುತ್ತಿದ್ದು, ಮುಸ್ಲಿಮರ ಆಸ್ತಿ-ಪಾಸ್ತಿಗೆ ಹೇರಳ ನಷ್ಟವಾಗುತ್ತದೆ.

ಬಸ್‌ ಸ್ಟ್ಯಾಂಡ್‌ ಉರಿಯುತ್ತಿದ್ದುದು ಜನರಲ್ಲಿ ಬೆಳೆದ ‘ದ್ವೇಷ’ವೆಂಬ ಉರಿಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುತ್ತದೆ. ಕತೆ ಮುಂದುವರಿಯುತ್ತಿದ್ದಂತೆ ಈ ಉರಿಗೆ ಬದಲಾಗಿ ಬೇರೊಂದು ‘ಉರಿ’ ನಮ್ಮ ಗಮನ ಸೆಳೆಯುತ್ತದೆ. ಅದು ನರಸಪ್ಪಯ್ಯನವರ ಮಗಳು ಗಿರಿಜ ಮತ್ತು ಮುಸ್ಲಿಮ್‌ ತರುಣ, ಜಮೀಲ್‌ ಇವರಿಬ್ಬರೊಳಗೆ ಹತ್ತಿಕೊಂಡ ಪ್ರೇಮಜ್ವಾಲೆ. ಆದರೆ ಆ ಉರಿ ಹೇಗೆ ಶಮನವಾಯ್ತು ಎಂಬುದು ಕತೆಯಲ್ಲಿ ಸ್ಪಷ್ಟವಾಗಿಲ್ಲ. ಹೊಡೆತದಿಂದಾಗಿ ಫಲಿಸಿದ ‘ಮಾರಣಾಂತಿಕ ಗಾಯ’ಗಳ ಪರಿಣಾಮವಾಗಿ ಅವನು ತೀರಿಕೊಂಡನೇ ಎಂಬುದು ಕೂಡ ನನಗೆ ಸ್ಪಷ್ಟವಾಗಿಲ್ಲ. ಆಡುಭಾಷೆಯಲ್ಲೇ ಕತೆಯ ನಿರೂಪಣೆ ಸಾಗುತ್ತಿದ್ದು, ನನಗೆ ಅದನ್ನು ಸರಾಗವಾಗಿ ಓದಿಕೊಂಡು ಹೋಗುವುದು ತುಂಬ ಕಷ್ಟವಾಯ್ತು. ಸಂಭಾಷಣೆಗಳನ್ನು ಮಾತ್ರ ಆಡುಭಾಷೆಯಲ್ಲಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು.

(ಗುರುವಾರ ಮುಂದುವರೆಯಲಿದೆ..)

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+