• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಶ್ರೀಗಂಧದಗುಡಿ’ಯಲ್ಲಿ ಕಂಡಿದ್ದು-ಕೇಳಿದ್ದು ..

By Staff
|
 • ಶ್ರೀವತ್ಸ ಜೋಶಿ; ಒರ್ಲಾಂಡೊ (ಫ್ಲಾರಿಡಾ)

sjoshim@hotmail.com

ಮೂರು ದಿನಗಳ ಒರ್ಲಾಂಡೊ ವಿಶ್ವಕನ್ನಡ ಸಮ್ಮೇಳನ ಮುಗಿದಿದೆ. ಉಳಿದಿರುವುದು ಸಮ್ಮೇಳನದ ನೆನಪುಗಳು ಮಾತ್ರ. ಅತಿಥೇಯ ಶ್ರೀಗಂಧ ಕನ್ನಡ ಕೂಟದ ಅದ್ಭುತ ಸಂಘಟನೆಯಿಂದಾಗಿ ಈ ಸಮ್ಮೇಳನದ ತುಂಬಾ ಸವಿ ನೆನಪುಗಳ ಮೆರವಣಿಗೆ. ಮೂರು ದಿನಗಳಲ್ಲಿ ಕಂಡ ಕೆಲವು ವಿಶಿಷ್ಟ ಚಿತ್ರಗಳಿಲ್ಲಿ ಅಕ್ಷರಗಳಾಗಿವೆ.

 • ‘ಕೇಳಿರಿ ಕೇಳಿರಿ... ಪ್ರಜೆಗಳೆ ಕೇಳಿರಿ... ವಿಜಯನಗರ ವೈಭವದ ಕೃಷ್ಣದೇವರಾಯ ಮಹಾರಾಜರ ಮೆರವಣಿಗೆ... ಎಂಟೂವರೆಗೆ ಸರಿಯಾಗಿ.... ಢಂ ಟ ಢಂ ಟ ಢಂ ಢಂ...’ ಕನ್ನಡದೂತನೊಬ್ಬ(ವಲ್ಲೀಶ ಶಾಸ್ತ್ರಿ , ನ್ಯೂಜೆರ್ಸಿ) ಡೈನಿಂಗ್‌ಹಾಲ್‌ಗೇ ಬಂದು, ಸಮ್ಮೇಳನಾರ್ಥಿಗಳೆಲ್ಲ ಬೆಳಗಿನ ತಿಂಡಿ ತಿನ್ನುತ್ತಿದ್ದಾಗ ನಗಾರಿ ಹೊಡೆಯುತ್ತ ಬಂದ.
 • ವಿಜಯನಗರ ಸಾಮ್ರಾಜ್ಯದ ವೈಭವ ಎಂಬ ಥೀಮ್‌ ಇದ್ದುದರಿಂದ ಮೆರವಣಿಗೆಗೊಂದು ಅದ್ಭುತ ಅಂದ, ಅರ್ಥ ಬಂದಿತ್ತು. ಮೆರವಣಿಗೆಯಲ್ಲಿ ರಾಜ ರಾಣಿ, ಮಂತ್ರಿ ವಂದಿಮಾಗಧರು, ಆಸ್ಥಾನ ವಿದ್ವಾಂಸರು, ಸಂತರು-ದಾಸರು, ಬೀದಿವ್ಯಾಪಾರಿಗಳು, ಸಾಮಾನ್ಯಪ್ರಜೆಗಳು... ನಿಜವಾಗಿಯೂ ಪೌರಾಣಿಕ ಚಿತ್ರವೊಂದರ ಪ್ರತಿರೂಪದಂತಿತ್ತು.
 • ಉದ್ಘಾಟನಾ ಸಮಾರಂಭದಲ್ಲಿ ಆಶಯಭಾಷಣ ಮಾಡಿದ ಬರಗೂರು ಉವಾಚ : ‘ಕನ್ನಡನಾಡು ಸಿರಿಗಂಧದ ಬೀಡು ಎಂದು ನಮ್ಮ ಶಾಲಾ ಮೇಷ್ಟ್ರು ಕಲ್ಸಿ ಕೊಡ್ತಿದ್ದರು. ಪುಟ್ಟ ಹುಡುಗನಾಗಿದ್ದ ನಾನೆಲ್ಲಿ ಗಂಧದ ಮರ ನೋಡಿದ್ದೆ ? ಅಷ್ಟೇಕೆ ನಮ್ಮ ಮೇಷ್ಟ್ರೂ ಗಂಧದ ಮರ ನೋಡಿರಲಿಲ್ಲ , ಆದರೂ ಗಂಧದ ನಾಡು ಎಂದು ಉರು ಹೊಡೆಯುತಿದ್ದೆವು. ಈಗ ನನಗೆ ಗೊತ್ತಾಗಿದೆ. ಗಂಧದ ನಿಜವಾದ ಸವಿ ಗೊತ್ತಿರುವುದು ಪಂಚಕೋಟಿ ಕನ್ನಡಿಗರಿಗಲ್ಲ , ಅದು ಆ ಖದೀಮ ವೀರಪ್ಪನ್‌ಗೆ!’
 • ಉದ್ಘಾಟನಾ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊಟ್ಟ ಮೊದಲು ಫ್ಲಾರಿಡಾ ಕನ್ನಡಕೂಟದ ಬಾಲಕಬಾಲಕಿಯರಿಂದ ‘ಹಚ್ಚೇವು ಕನ್ನಡದ ದೀಪ’ ಮತ್ತು ‘ಭುವನದಲ್ಲೆಲ್ಲೇ ಇದ್ದರೂ ಕನ್ನಡವೇ ನಮ್ಮುಸಿರು...’ ಸಮೂಹ ನೃತ್ಯಗಳು ಅತ್ಯಾಕರ್ಷಕವಾಗಿ ಮೂಡಿಬಂದು ಮುಂಬರುವ ಸಾಂಸ್ಕೃತಿಕ ರಸದೂಟದ ಸರ್ವಸಾರವನ್ನು ಪ್ರಕಟಪಡಿಸಿದಂತಿತ್ತು.
 • ‘ಯಮನ ಕಾಲ್‌ ಸೆಂಟರ್‌’ ಪ್ರಹಸನದಲ್ಲಿ ಯಮನಾಗಿ ವಲ್ಲೀಶ ಶಾಸ್ತ್ರಿ , ಚಿತ್ರಗುಪ್ತನಾಗಿ ಪ್ರಸನ್ನ ಅವರು ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗಿಸುವಂತೆ ನಗಿಸಿದರು. ನಾಟಕದ ವೇಳೆ ಅಲ್ಲಿ ಇಲ್ಲಿ ತಾಂತ್ರಿಕದೋಷಗಳು ಕಾಣಿಸಿದಾಗ ಈ ಇಬ್ಬರು ತಮ್ಮ ಸಮಯಸ್ಫೂರ್ತಿಯಿಂದ ಸಂಭಾಷಣೆಗಳನ್ನು ತಿರುಚಿದ ಚಾಣಾಕ್ಷತನ ಭಲೇ!
 • ಸಮೂಹ ಪ್ರಸ್ತುತಿಗಳಲ್ಲಿ ಕೆಲವೆಲ್ಲ (ಉದಾ: ವಾಷಿಂಗ್ಟನ್‌ ಡಿಸಿ ಪ್ರದೇಶದದವರ ‘ಬೆರಳ್ಗೆ ಕೊರಳ್‌’ ನಾಟಕ) ರದ್ದಾದವು. ಸೊಲೊ-ಪಫಾರ್ಮೆನ್ಸ್‌ನವರಿಗೆ ಸದವಕಾಶಗಳು ಸಿಕ್ಕಿದುವು. ಅವರೆಲ್ಲರೂ ಅದನ್ನು ಸಮರ್ಥವಾಗಿ ಬಳಸಿಕೊಂಡರು. ಶಾರದೇ ದಯತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ... ಹಾಡಿದ ಬದರಿ, ಹೂವು ಚೆಲುವೆಲ್ಲ ನಂದೆಂದಿತು... ಹಾಡಿದ ಶಶಿವಸಂತ - ಇವರೆಲ್ಲರೂ ‘ತುಂಬ ಚೆನ್ನಾಗಿತ್ತೂರಿ...’ ಅನ್ನಿಸಿಕೊಂಡರು. ಹಾಗೆ ನೋಡಿದರೆ ವೇದಿಕೆಯಲ್ಲಿ ಪ್ರಸ್ತುತಗೊಂಡ ಒಂದೇಒಂದು ಕಾರ್ಯಕ್ರಮವೂ ಕಳಪೆಮಟ್ಟದ್ದಿರಲಿಲ್ಲ. ಪ್ರಾಮಾಣಿಕ ತಾಲೀಮು ಮತ್ತು ಶ್ರೇಷ್ಠ ಗುಣಮಟ್ಟದ ಅರ್ಹತಾಪರೀಕ್ಷೆ ಇದಕ್ಕೆ ಕಾರಣವಿರಬಹುದು.
 • ಶನಿವಾರ ರಾತ್ರೆ ಊಟದ ನಂತರ ಹಾಸ್ಯ ಹೊನಲಿನಲ್ಲಿ ಭಾರತದಿಂದ ಆಗಮಿಸಿರುವ ಪ್ರೊ।ಕೃಷ್ಣೇಗೌಡ ಮತ್ತು ಅ.ರಾ.ಮಿತ್ರ ಅವರಿಂದ ಅಮೋಘ ಹಾಸ್ಯ ಕಾರ್ಯಕ್ರಮ. ಅವರಿಬ್ಬರ ನಗೆಚಾಟಿಕೆಗಳಿಗೆ ಗೇಲಾರ್ಡ್‌ ರೆಸಾರ್ಟ್‌ನ ಸಭಾಂಗಣ ತುಂಬ ನಗೆಯ ಚಂಡಮಾರುತ ! ಕೃಷ್ಣೇಗೌಡರ ‘ಬುಡುಬುಡಿಕೆಯವನ ಮಾತು’ಗಳ ವೇಗವಂತೂ ಫ್ರಾನ್ಸಿಸ್‌ (ಚಂಡಮಾರುತ) ವೇಗಕ್ಕಿಂತಲೂ ಅಧಿಕವೇನೊ ಎಂಬಂತಿತ್ತು.
 • ಎಸ್ಪಿ ಬಾಲು ರಸಮಂಜರಿ ಕಾರ್ಯಕ್ರಮ ಶನಿವಾರ ರಾತ್ರೆ ಒಂಬತ್ತುವರೆಗೆ ಆರಂಭವಾದಾಗ ಸಭಾಂಗಣವಿಡೀ ತುಂಬಿಹೋಗಿತ್ತು. 70-80ರ ದಶಕಗಳಲ್ಲಿ ಕರ್ನಾಟಕವನ್ನು ಬಿಟ್ಟು ಬಂದ ಅನಿವಾಸಿ ಕನ್ನಡಿಗರನ್ನು ಬಾಲು ತಮ್ಮ ಮೋಡಿಯ ಕಂಠದಿಂದ, ‘ಮಾಮರವೆಲ್ಲೊ ಕೋಗಿಲೆಯೆಲ್ಲೊ...’, ‘ಜೊತೆಜೊತೆಯಲಿ ಇರುವೆನು ಹೀಗೇ ಎಂದೂ...’, ‘ಅಮರ ಮಧುರ ಪ್ರೇಮ ಓ ಬಾ ಬೇಗ ಚಂದಮಾಮ...’ (ಬಾಲು ತಂಗಿ ಶೈಲಜಾ ಹಾಡಿದರು) ಇತ್ಯಾದಿ ಹಾಡುಗಳಿಂದ ತವರೂರ ಮಧುರಸ್ಮೃತಿಗಳಾಳಕ್ಕೆ ಒಯ್ದರು. ಆಲೆಮನೆ ಚಿತ್ರದ ‘ನಮ್ಮೂರ ಮಂದಾರ ಹೂವೆ...’ ಗೀತೆಯನ್ನು ಹಾಡುವಾಗ ಅವರು ಅದೇ ಸಭೆಯಲ್ಲಿ ಆಸೀನರಾಗಿದ್ದ ಕವಿ ದೊಡ್ಡರಂಗೇಗೌಡ ಅವರನ್ನು ಗೌರವಿಸುವುದನ್ನು ಮರೆಯಲಿಲ್ಲ. ಹಾಗೆಯೇ ಬಾಲು ತನ್ನ ಅಮರ ಮಧುರ ‘ಕನ್ನಡ ಪ್ರೇಮ’ವನ್ನು ಇನ್ನೊಮ್ಮೆ ಅಮೆರಿಕನ್ನಡಿಗರೆದುರು ಅರುಹುವುದನ್ನೂ ಮರೆಯಲಿಲ್ಲ. ಬಾಲು ರಸಮಂಜರಿ ಕೊನೆಕೊನೆಗಂತೂ ಸಭೆಯಲ್ಲಿ ಸಮೂಹನೃತ್ಯದ ತರಂಗಗಳನ್ನೇ ಮೂಡಿಸಿತು.
 • ಹಿರಿಯರಿಗೆ ಹಾಡು, ನೃತ್ಯ, ನಾಟಕ, ಯಕ್ಷಗಾನ, ಸಾಹಿತ್ಯ, ಸಂಗೀತ ಆಯ್ತು. ಕಿಶೋರಿಯರಿಗೆ ಮಿಸ್‌ ಅಮೆರಿಕನ್ನಡ ಸೌಂದರ್ಯಸ್ಪರ್ಧೆಯ ಉತ್ಸಾಹ ಆಯ್ತು. ಹದಿಹರೆಯದ ಬಾಲಕರಿಗೆ? ಅವರೆಲ್ಲ ತಂತಮ್ಮಲ್ಲೇ ಸಣ್ಣಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಕಾರ್ಡ್ಸ್‌, ಬಿಂಗೊ ಅದೂ ಇದೂ ಆಟ ಆಡುತ್ತ ಕಾಲಕ್ಷೇಪ ಮಾಡುತ್ತಿದುದು ಕಂಡುಬರುತ್ತಿತ್ತು.
 • ಹವಾಮಾನ ವೈಪರೀತ್ಯದಿಂದ ಒರ್ಲಾಂಡೊ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಒರ್ಲಾಂಡೊದಲ್ಲಿ ಶನಿವಾರ ರಾತ್ರೆ ಮತ್ತು ರವಿವಾರವಿಡೀ ಭಾರಿ ಮಳೆ, ಗಾಳಿ. ಒರ್ಲಾಂಡೊ, ಟಾಂಪಾ ಇತ್ಯಾದಿ ವಿಮಾನನಿಲ್ದಾಣಗಳೆಲ್ಲ ಅನಿರ್ದಿಷ್ಟ ಕಾಲ ಮುಚ್ಚಿರುವುದರಿಂದ ವಾಪಸ್‌ ಊರಿಗೆ ಹೋಗುವುದು ಹೇಗೆ ಯಾವಾಗ ಎಂಬ ಆತಂಕ ಹಲವರಿಗೆ. ವಿಮಾನಯಾನ ಸಂಸ್ಥೆಗಳಿಗೆ ಅವಿರತ ಫೋನ್‌ ಕರೆಗಳು.
 • ಫ್ರಾನ್ಸಿಸ್‌ ಹಾವಳಿಯಿಂದಾಗಿ ಎಷ್ಟೊ ಮಂದಿ ಕೊನೆಗಳಿಗೆಯಲ್ಲಿ ಪ್ರಯಾಣ ರದ್ದಾದ್ದರಿಂದ ಸಮ್ಮೇಳನಕ್ಕೆ ಬರಲಾಗಲಿಲ್ಲ. ಶುಕ್ರವಾರ ಸಂಜೆ ಸುಮಾರು 1000ದ ಆಸುಪಾಸು ಎಂದು ಅಂದಾಜಿಸಲಾಗಿದ್ದ ಸಂಖ್ಯೆ ರವಿವಾರ ಮಧ್ಯಾಹ್ನವೆನ್ನುವಾಗ 1700ಕ್ಕೆ ತಲುಪಿದ್ದು, ಇಷ್ಟೊಂದು ಪ್ರತಿಕೂಲ ಪರಿಸ್ಥಿತಿಯ ಮಟ್ಟಿಗೆ ಬಹಳ ಪ್ರಶಂಸನೀಯ ಹಾಜರಾತಿ. ಸಮ್ಮೇಳನದ ವ್ಯವಸ್ಥೆಯ ಅಚ್ಚುಕಟ್ಟನ್ನೆಲ್ಲ ಸ್ನೇಹಿತರಿಂದ, ಅಂತರ್ಜಾಲದಿಂದ ತಿಳಕೊಂಡ ಕೆಲ ಅಕ್ಕಪಕ್ಕ ರಾಜ್ಯಗಳವರು ಬಹುಶಃ ಡ್ರೈವ್‌ ಮಾಡಿಯಾದರೂ ಸರಿ ಸಮ್ಮೇಳನದಲ್ಲಿ ಭಾಗವಹಿಸೋಣ ಎಂದುಕೊಂಡು ಬಂದಿರಬಹುದು. ಒಟ್ಟಿನಲ್ಲಿ ಸಮ್ಮೇಳನ ವೈಭವಕ್ಕೆ ಅದು ಪೂರಕವೇ ಆಯಿತು.
 • ಸಮ್ಮೇಳನದಲ್ಲಿ , ಸ್ವಲ್ಪ ಮಟ್ಟಿಗೆ ಚಂಡಮಾರುತದಿಂದಾದ ತೊಂದರೆಯನ್ನು ದೂರೋಣ, ಆದರೆ ಬಹುಮಟ್ಟಿಗೆ ‘ಮಾಹಿತಿ’ಯ ಪ್ರಚುರಪಡಿಸುವಿಕೆಯ ಕೊರತೆ ತೀವ್ರವಾಗಿ ಕಾಣುತ್ತಿತ್ತು. ವೇದಿಕೆಯ ಇಕ್ಕೆಲಗಳಲ್ಲಿದ್ದ ಅಷ್ಟು ದೊಡ್ಡ ವಿಡಿಯಾಸ್ಕಿೃೕನ್‌ಗಳನ್ನು ಬಳಸಿ ಕಂಪ್ಯೂಟರ್‌ ಸಹಾಯದಿಂದ ‘ಅಪ್‌ಡೇಟೆಡ್‌ ಇನ್ಫಾರ್ಮೇಷನ್‌ ಡಿಸ್ಪ್ಲೆ’ ಮಾಡುವುದು ಕಷ್ಟವೇನೂ ಅಲ್ಲ. ಯಾರೋ ಸಭೆಯಲ್ಲಿ ‘ಫ್ಲಾರಿಡಾದಲ್ಲಿ ಡಾಕ್ಟರ್‌ ವೃತ್ತಿಯವ್ರೇ ಜಾಸ್ತೀರಿ... ಸಾಫ್ಟ್‌ವೇರ್‌ ಟೆಕಿಗಳೂ ಇದ್ದಿದ್ರೆ ಇದನ್ನೂ ನಿಭಾಯಿಸುತ್ತಿದ್ದರು...’ ಎನ್ನುತ್ತಿದ್ದರು. ಒಟ್ಟಿನಲ್ಲಿ ಮಾಹಿತಿ ನಿಯಂತ್ರಣ ಕೇಂದ್ರವೊಂದು ಇರಬೇಕಾಗಿತ್ತು.
 • ‘ಚಟ್ನಿ ಯೇನ್‌ ಚೆನ್ನಾಗಿದೇರಿ...’, ‘ಹಲಸಿನ ಕಾಯಿಯ ಹುಳಿ ಮಾಡ್ತಾರಂತ ಗೊತ್ತೇ ಇಲ್ರಿ ನಮ್ಗ... ಇದೆ ಮೊದಲ ಸಲ ತಿಂತಿದೀವ್ರಿ...’, ‘ಅನಾನಸ್‌ ಗೊಜ್ಜು ಹಚ್‌ಕೊಂಡು ಚಪಾತಿ ತಿಂದು ನೋಡ್ರಿ ಭಲೇ ರುಚಿಯಾಗಿದೆ...’ - ಊಟದ ಹಾಲ್‌ನಲ್ಲಿ ಅಸಂತೃಪ್ತಿ ಎಂಬುದರ ಕುರುಹು ಭೂತಗನ್ನಡಿ ಹಿಡಿದರೂ ಕಾಣಿಸದು. ರುಚಿಕಟ್ಟಾದ ಅಡಿಗೆ, ಅಚ್ಚುಕಟ್ಟಾದ ವ್ಯವಸ್ಥೆ , ಪ್ರಶಸ್ತವಾದ ಭಾರಿ ದೊಡ್ಡ ಡೈನಿಂಗ್‌ ಹಾಲ್‌, ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ‘ನಮಸ್ಕಾರ!’ ಎಂದು ಕನ್ನಡದಲ್ಲಿ ವಂದಿಸಿ ಆದರಿಸುತ್ತಿದ್ದ ಗೇಲಾರ್ಡ್‌ ರೆಸಾರ್ಟ್‌ನ ಡೈನಿಂಗ್‌ ಸಿಬ್ಬಂದಿವರ್ಗ - ಊಟೋಪಚಾರದ ವಿಷಯದಲ್ಲಿ ಸಮ್ಮೇಳನಕ್ಕೆ ಡಿಸ್ಟಿಂಕ್ಷನ್‌ ಕ್ಲಾಸ್‌ ಅಂಕಗಳನ್ನು ಗಳಿಸಿಕೊಟ್ಟದ್ದು.
 • ಯಕ್ಷಗಾನ ಕಲಾವಿದ ಉದ್ಯಾವರ ಮಾಧವ ಅಚಾರ್ಯ ಬಳಗ ಮತ್ತು ಖ್ಯಾತ ಭರತನಾಟ್ಯಗಾರ್ತಿ ವಸುಂಧರಾ ದೊರೆಸ್ವಾಮಿ ಅವರ ಸಹಯೋಗದಲ್ಲಿ ಪ್ರಸ್ತುತಗೊಂದ ‘ಪಾಂಚಾಲಿ’ ಯಕ್ಷಭರತ ಪ್ರಯೋಗವು ಬಹಳ ಚೆನ್ನಾಗಿ ಮೂಡಿಬಂತು. ಕರ್ಣಾನಂದಕರ ಹಿನ್ನೆಲೆ ಸಂಗೀತ, ಮಾತುಗಳಿಗೆ ಅತ್ಯದ್ಭುತ ನೃತ್ಯಾಭಿನಯ!
 • ಫ್ಲಾರಿಡಾ ಪ್ರದೇಶದ ಅಮೆರಿಕನ್ನಡಿಗ ಮಕ್ಕಳು (ಅಮೆರಿಕದಲ್ಲೇ ಹುಟ್ಟಿ ಬೆಳೆದವರು) ಮಹಾದೇವ್‌ ಭಟ್‌ ನಿರ್ದೇಶನದಲ್ಲಿ ‘ದಕ್ಷಯಜ್ಞ’ ಯಕ್ಷಗಾನವನ್ನು ಅತ್ಯುತ್ತಮವಾಗಿ ಅಭಿನಯಿಸಿ ತೋರಿಸಿದರು. ಕಣ್ಣಿಗೆ ಹಬ್ಬದಂತಿದ್ದ ಬಣ್ಣಬಣ್ಣದ ವೇಷಭೂಷಣ, ಸ್ವಚ್ಛ ಕನ್ನಡದಲ್ಲಿ ಮಾತುಗಳು ಈ ಯಕ್ಷಗಾನ ಪ್ರದರ್ಶನವನ್ನು ಉತ್ಕೃಷ್ಟವಾಗಿಸಿದುವು.
 • ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಎರಡನೇ ದಿನವೂ ಆಭರಣ ಮತ್ತು ಬಟ್ಟೆಬರೆಗಳ ಅಂಗಡಿಗಳಿಗೇ ನೂಕುನುಗ್ಗಲು. ಮೈಸೂರಿನ ಕಾವೇರಿ ಕರಕುಶಲ ಸಾಮಗ್ರಿಗಳ ಮಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಗಿರಾಕಿಗಳನ್ನಾಕರ್ಷಿಸಿತು. ಗಂಧ, ಬೀಟೆ ಮತ್ತಿತರ ಮರದ ಕೆತ್ತನೆಗಳ ದೊಡ್ಡದೊಡ್ಡ ಕಲಾಕೃತಿಗಳೆಲ್ಲ ಅದಾಗಲೇ ‘ಮಾರಾಟವಾಗಿದೆ’ ಚೀಟಿ ಅಂಟಿಸಿಕೊಂಡಿವೆ! ಮಳಿಗೆಯಿಟ್ಟ ಮಾಲಕ ಮಂಜುನಾಥ್‌ ಮಾತುಗಳಲ್ಲಿ , ಮೈಸೂರಿಂದ ಅಷ್ಟೊಂದು ಸರಂಜಾಮನ್ನು ತಂದುದಕ್ಕೆ ಸಾರ್ಥಕತೆ ಪಡೆದ ತೃಪ್ತಿಯಿತ್ತು ; ವ್ಯಾಪಾರ ಮಳಿಗೆಯವರಿಗೆಲ್ಲ ಸಮ್ಮೇಳನದ ಆಯೋಜಕರು ನೀಡಿದ ಪ್ರೋತ್ಸಾಹ, ಸಹಕಾರಗಳ ಬಗ್ಗೆ ಕೃತಜ್ಞತೆಯೂ ಇತ್ತು.
 • ಕಸ್ತೂರಿ ಶಂಕರ್‌, ಎಂ.ಎಸ್‌.ಶೀಲಾ, ಸಂಗೀತಾ ಕಟ್ಟಿ ಮೊದಲಾದ ಅಪ್ಪಟ ಕನ್ನಡಿಗ ಪ್ರತಿಭಾನ್ವಿತ ಗಾಯಕಿಯರ ಸುಗಮ ಸಂಗೀತಸಭೆಗಳು ಸಮಾಂತರ ಕಾರ್ಯಕ್ರಮವಾಗಿ ಪಕ್ಕದ ‘ನಾದ ಬ್ರಹ್ಮ’ ಸಭಾಂಗಣದಲ್ಲಿ ಅಪಾರ ಶ್ರೋತೃಗಳನ್ನು ಸೆಳೆವಲ್ಲಿ ಯಶಸ್ವಿಯಾಗಿದ್ದುವು.
 • ಮುಖ್ಯವೇದಿಕೆಯ ಸಭಾಕಾರ್ಯಕ್ರಮಗಳ ನಿರ್ವಾಹಕನಾಗಿ ಉದ್ಘೋಷಕನಾಗಿ ಕೇಶವ ಬಾಬು ಉತ್ತಮ ನಿರ್ವಹಣೆ ತೋರಿದರು. ಅವರಲ್ಲದೆ ಬೇರೆ ಒಂದಿಬ್ಬರ ಅನೌನ್ಸ್‌ಮೆಂಟ್‌ಗಳು, ಬರೆದದ್ದನ್ನೋದಿದ ಪ್ರಕಟಣೆಗಳಲ್ಲಿ ‘ಕಿಸಾ ಗೌತಮಿ’ (ಶಿವರಾಮ ಕಾರಂತ ಬರೆದ, ಫ್ಲಾರಿಡಾ ಕೂಟ ಪ್ರಸ್ತುತಪಡಿಸಿದ ನಾಟಕದ ಹೆಸರು) ‘ಕಿಸ್‌ ಗೌತಮ’ ಎಂದು ಉದ್ಘೋಷಿಸಲ್ಪಟ್ಟದ್ದು, ‘ಈ ಹಿಂದೆ ಪಶು ಸಂಗೋಪನಾ ಸಚಿವರಾಗಿದ್ದ’ ಎಂಬುದು ’ಪಶು ಬೋಧನಾ ಸಮಾಜ’ ಎಂದು ಉದ್ಘೋಷಿತವಾದದ್ದು ಇರುಸುಮುರುಸಿನ ಸಂಗತಿ ಎನ್ನುವುದಕ್ಕಿಂತಲೂ ನಾಲ್ಕೈದು ದಶಕಗಳಿಂದ ಕನ್ನಡನಾಡಿಂದ ದೂರವಿರುವ ಕೆಲ ಅಮೆರಿಕನ್ನಡಿಗರು ಸಂಭಾಷಣೆಯ ಕನ್ನಡ ಉಳಿಸಿಕೊಂಡಿದ್ದಾರಾದರೂ ಓದು-ಬರಹದ ಕನ್ನಡ ಅವರಿಗೆ ದೂರವಾಗಿದೆ ಎಂಬ ಪ್ರಾಮಾಣಿಕ ಸತ್ಯ ಎನ್ನಲಡ್ಡಿಯಿಲ್ಲ.
 • ತುಲನಾತ್ಮಕ ದೃಷ್ಟಿ ಎಲ್ಲರಲ್ಲೂ ಸ್ವಲ್ಪವಾದರೂ ಇದ್ದೇ ಇರುತ್ತೆ. ಪ್ರತಿಯಾಂದನ್ನೂ ಡೆಟ್ರಾಯಿಟ್‌ ಅಥವಾ ಹ್ಯೂಸ್ಟನ್‌ ಸಮ್ಮೇಳನಗಳಿಗೆ ಹೋಲಿಸಿಯೇ ಅಭಿಪ್ರಾಯ ವ್ಯಕ್ತಪಡಿಸಿಕೊಳ್ಳೋರು ಜಾಸ್ತಿ. ಆದರೆ ಬಹಳಷ್ಟು ವಿಷಯಗಳಲ್ಲಿ ಈ ಸಮ್ಮೇಳನವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ ಜನ. ಎಷ್ಟೆಂದರೆ ಕೆಲವರೆಲ್ಲ 2006ರ ಸಮ್ಮೇಳನವನ್ನೂ ‘ಶ್ರೀಗಂಧ’ವೇ ನಡೆಸಿಕೊಡಲಿ ಎಂದು ಆಶಯವನ್ನು ವ್ಯಕ್ತಪಡಿಸುವಷ್ಟು ! ಅದರ ಸಾಧ್ಯಾಸಾಧ್ಯತೆಗಳೆಲ್ಲ ಹೇಗೇ ಇರಲಿ, ಈ ಸಮ್ಮೇಳನದ ಮಟ್ಟಿಗಂತೂ ಶ್ರೀಗಂಧ ಕನ್ನಡಿಗರ ಅಹರ್ನಿಶಿ ದುಡಿತ, ತಾದಾತ್ಮ್ಯ ಶ್ರಮಕ್ಕೆ ಅತ್ಯುತ್ತಮ ಫಲ ಸಿಕ್ಕಿದೆ. ಇನ್ನು, ಮೊಸರಲ್ಲಿ ಕಲ್ಲು ಹುಡುಕುವವರು ಎಲ್ಲಿಲ್ಲ ಹೇಳಿ. ಗಂಧದಂತೆ ಸವೆದು ಬೇರೆಯವರಿಗೆ ‘ಸುಗಂಧವಾದ ಶ್ರೀಗಂಧ’ ತಂಡಕ್ಕೆ ಸರಳವಾದ ಒಂದೇ ಮಾತು - ಅಮೋಘ ಸಾಧನೆ ನಿಮ್ಮದು; ಮೆಚ್ಚುಗೆಯಾಯ್ತು !

ಕನ್ನಡ ಬೆಳಗಲಿ, ಬೆಳೆಯಲಿ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more