• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನ-2 : ಚಂಡಮಾರುತವನ್ನು ಮೆಟ್ಟಿ ನಿಂತ ಕನ್ನಡ ಮಲಯಮಾರುತ

By Staff
|

* ಎಸ್‌.ಕೆ. ಶಾಮಸುಂದರ, ಶ್ರೀವತ್ಸ ಜೋಶಿ

ಒರ್ಲಾಂಡೊ -ಫ್ಲಾರಿಡಾ

ಸೂರ್ಯರಶ್ಮಿಯ ನಾಡು ಎಂದೇ ಪ್ರಸಿದ್ಧವಾದ ಫ್ಲಾರಿಡಾ ರಾಜ್ಯದ ಒರ್ಲಾಂಡೊ ನಗರದಲ್ಲಿ ಉತ್ತರ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಏರ್ಪಡಿಸಿರುವ ಮೂರನೆ ವಿಶ್ವಕನ್ನಡ ಸಮ್ಮೇಳನ ಶನಿವಾರ ಸೆ.4ರಂದು ಬೆಳಿಗ್ಗೆ (ಸ್ಥಳೀಯ ಕಾಲಮಾನ) ವಿಧ್ಯುಕ್ತವಾಗಿ ಆರಂಭವಾಯಿತು.

ಯಾವುದೇ ಕ್ಷಣದಲ್ಲಿ ಫ್ರಾನ್ಸಸ್‌ ನಾಮಾಂಕಿತ ಚಂಡಮಾರುತವು ಅಪ್ಪಳಿಸುವ ಭೀತಿಯ ನೆರಳಿನಲ್ಲಿಯೇ ಸಮ್ಮೇಳನ ತೆರೆದುಕೊಂಡಿತು. ಸಮ್ಮೇಳನವನ್ನು ನಡೆಸಬೇಕೆ ಅಥವಾ ಮುಂದೂಡಬೇಕೆ ಎಂಬ ಗೊಂದಲದ ಪರಿಸ್ಥಿತಿಗೆ ಈಡಾಗಿದ್ದ ಆತಿಥೇಯ ಶ್ರೀಗಂಧ ಕನ್ನಡ ಕೂಟ (ಫ್ಲಾರಿಡಾ) ಮತ್ತು ಅಕ್ಕ ಆಡಳಿತ ಮಂಡಳಿ ಸಮ್ಮೇಳನವನ್ನು ಯೋಜಿಸಿದಂತೆ ನಡೆಸುವ ತೀರ್ಮಾನವನ್ನು ಕೈಗೊಂಡಿತು. ಇದಕ್ಕೆ ಎರಡು ಕಾರಣಗಳುಂಟು. ಅಪಾರ ವೆಚ್ಚವನ್ನು ಸಮ್ಮೇಳನಕ್ಕೆ ತೊಡಗಿಸಿರುವುದು ಒಂದು, ದೂರದ ಊರುಗಳಿಂದ, ದೇಶಗಳಿಂದ ಪ್ರತಿನಿಧಿಗಳು, ಗಣ್ಯರು ಮತ್ತು ಆಹ್ವಾನಿತರು ಅದಾಗಲೇ ಸಮ್ಮೇಳನಕ್ಕೆ ತಾಣಕ್ಕೆ ಬಂದು ತಲುಪಿದ್ದು ಇನ್ನೊಂದು. ಎಂತಹ ಚಂಡಮಾರುತವನ್ನೂ ತಡೆದುಕೊಳ್ಳಬಲ್ಲ ಸಾಮರ್ಥ್ಯದ ಬೃಹತ್‌ ಕಟ್ಟಡವುಳ್ಳ 'ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌"ನಲ್ಲಿ ಸಮ್ಮೇಳನ ಆಯೋಜಿತವಾಗಿರುವುದೂ ಇನ್ನೊಂದು ಪ್ರಮುಖ ಕಾರಣ.

ಸಮ್ಮೇಳನ ಉದ್ಘಾಟನೆಯಾಗುವ ಮುನ್ನ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ಮೆರವಣಿಗೆ ಸಮ್ಮೇಳನದ ಸಂಭ್ರಮಕ್ಕೆ ನಾಂದಿಯಾಯಿತು. ವಿಜಯನಗರ ಸಾಮ್ರಾಜ್ಯದ ಗತವೈಭವವೇ ಈ ಮೆರವಣಿಗೆಯ ರೂಪಕವಾಗಿದ್ದು ಅದಕ್ಕೆ ಹೆಚ್ಚಿನ ಮೆರುಗು ಮತ್ತು ಅರ್ಥವನ್ನು ಕೊಟ್ಟಿತು. ಅಮೆರಿಕದಾದ್ಯಂತದ ವಿವಿಧ ಪ್ರಾದೇಶಿಕ ಕನ್ನಡಕೂಟಗಳ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಸಾಲುಗಟ್ಟಿ ಹೊರಟರು. ಕೃಷ್ಣದೇವರಾಯ ಮತ್ತು ಆತನ ಆಸ್ಥಾನ ವಿದ್ವಾಂಸರು, ರಾಜಪರಿವಾರ ಮತ್ತು ಪ್ರಜಾವರ್ಗವೇ ಅಲ್ಲಿ ಮೂರ್ತಗೊಂಡಿತ್ತು. ಮುತ್ತುರತ್ನಗಳನ್ನು ಬಳ್ಳದಿಂದ ಅಳೆದು ಮಾರಿದ ಖ್ಯಾತಿಯ ದೇವರಾಯನ ಮೆರವಣಿಗೆ ಸಮಾಪ್ತಿಯಾದುದು ಭವ್ಯವಾದ ಸಭಾಂಗಣದಲ್ಲಿ. ವೇದಿಕೆಯಲ್ಲಿ ಅದಾಗಲೇ ವೇದಘೋಷ ಮೊಳಗುತ್ತಿತ್ತು. ಜತೆಜತೆಗೆ ಆಹ್ವಾನಿತ ಗಣ್ಯರನ್ನು ಸ್ವಾಗತಿಸಿ ವೇದಿಕೆಗೆ ಕರೆದೊಯ್ಯುವ ಭಾರತೀಯ ಶೈಲಿಯ ಶಿಷ್ಟಾಚಾರಗಳು ತಾನೇತಾನಾಗಿ ಕಂಡುಬಂದಿತು.

Micky and Mini become Shri and Shrimatiಸಮ್ಮೇಳನಾಧ್ಯಕ್ಷೆ ಡಾ।ರೇಣುಕಾ ರಾಮಪ್ಪ ಅವರ ಸ್ವಾಗತಭಾಷಣದಿಂದ ಆರಂಭವಾದ ಸಮಾರಂಭದಲ್ಲಿ ಪಾಲ್ಗೊಂಡವರು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ (ಜೆಡಿಎಸ್‌), ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಎಸ್‌.ಎಂ.ಕೃಷ್ಣ (ಕಾಂಗ್ರೆಸ್‌), ಹ್ಯೂಸ್ಟನ್‌ನ ಕಾನ್ಸುಲೇಟ್‌ ಜನರಲ್‌ ಸ್ಕಂದ್‌ ಟಯಾಲ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ , ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಮತ್ತು ಅಕ್ಕ ಅಧ್ಯಕ್ಷ ಡಾ।ಕುದೂರು ಮುರಳಿ. ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ।ರಾಮಪ್ಪ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟ ನಂತರ ಸಾಂಪ್ರದಾಯಿಕ ಜ್ಯೋತಿ ಬೆಳಗುವ ಕಾರ್ಯಕ್ರಮದೊಂದಿಗೆ ಮೂರನೆ ವಿಶ್ವಕನ್ನಡ ಸಮ್ಮೇಳನ ಅಧಿಕೃತವಾಗಿ ಅನಾವರಣಗೊಂಡಿತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಅನಿವಾಸಿ ಕನ್ನಡಿಗರ ಕನ್ನಡತನದ ಹಂಬಲವನ್ನು ಮನಸಾರೆ ಕೊಂಡಾಡಿದರು. ಕನ್ನಡ ಭಾಷಾಭಿಮಾನ, ತನಗೆ ತಾನೇ ಸಾಟಿಯಾದ ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪತ್ತಿನ ಬಗ್ಗೆ ಹೆಮ್ಮೆ ಅಭಿಮಾನಗಳನ್ನೂ ಅವರು ಪುನರುಚ್ಚರಿಸಿದರು. ಹೆಮ್ಮೆಯಷ್ಟೆ ನಮ್ಮ ಬಂಡವಾಳವಾಗಬಾರದು, ಪ್ರಗತಿಪಥದತ್ತ ರಾಜ್ಯವನ್ನು ಕೊಂಡೊಯ್ಯುವುದರಲ್ಲಿ ಅನಿವಾಸಿ ಕನ್ನಡಿಗರ ಪಾತ್ರ ಇವತ್ತು ಮುಖ್ಯವಾಗಬೇಕು ಎಂದು ಉಪಮುಖ್ಯಮಂತ್ರಿ ಆಶಿಸಿದರು.

'ದೇಶ ಯಾವುದೇ ಇರಲಿ, ಯಾವ ಪ್ರಜೆ ತನ್ನ ದೇಶದಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ವ್ಯವಸ್ಥೆ ಬಲಗೊಳ್ಳುವುದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾನೊ ಆತ ಆದರ್ಶ ಪ್ರಜೆ ಎನಿಸಿಕೊಳ್ಳುತ್ತಾನೆ; ಅಂತಹ ಪ್ರಜೆಗಳು ನೀವಾಗಿ" ಎಂದು ಕರೆಕೊಟ್ಟವರು ಕಾನ್ಸುಲೇಟ್‌ ಜನರಲ್‌ ಸ್ಕಂದ್‌ ಟಾಯಲ್‌. ತಾಂತ್ರಿಕ ಕ್ಷೇತ್ರದಲ್ಲಿ ಪ್ರಬುದ್ಧಮಾನಕ್ಕೆ ಬಂದಿರುವ ಬೆಂಗಳೂರು ಮತ್ತು ಜನಸಂಖ್ಯೆಯ ಒತ್ತಡದಿಂದ ಮೂಲಭೂತ ಸೌಕರ್ಯಗಳಿಲ್ಲದೆ ತತ್ತರಿಸುತ್ತಿರುವ ಕರ್ನಾಟಕದ ಒಳನಾಡಿನ ಬೆಳವಣಿಗೆ ಪ್ರತಿಯಾಬ್ಬ ಅನಿವಾಸಿ ಕನ್ನಡಿಗನ ಧ್ಯೇಯವಾಗಿರಬೇಕೆಂದ ಟಯಾಲ್‌, ಬೆಳವಣಿಗೆ ಮತ್ತು ಬಡತನದ ನಡುವೆ ಹುಯ್ದಾಡುತ್ತಿರುವ ದ್ವಂದ್ವದತ್ತ ಬೆಟ್ಟುತೋರಿಸಿದರು.

ಸಮ್ಮೇಳನದ ಆಶಯಭಾಷಣವನ್ನು ಮಾಡಿದವರು ಬರಗೂರು ರಾಮಚಂದ್ರಪ್ಪ . ಆರ್ಥಿಕ ಸಂಬಂಧಗಳೇ ಮೇಲ್ಗೈ ಪಡೆದ ದೇಶಗಳಲ್ಲಿ ಮನುಷ್ಯ ಸಂಬಂಧಗಳನ್ನು ಬೆಸುಗೆ ಹಾಕಲು ಸಹಕಾರಿಯಾಗುವ ಇಂತಹ ಸಮ್ಮೇಳನಗಳು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆಯೆಂದು ಬರಗೂರು ಅಭಿಪ್ರಾಯಪಟ್ಟರು. 'ಅಮೆರಿಕ ನಿಮ್ಮ ಭೂಗೋಳ, ಕರ್ನಾಟಕ ನಿಮ್ಮ ಚರಿತ್ರೆ; ಅಮೆರಿಕ ನಿಮ್ಮ ವಾಸ್ತವ, ಕರ್ನಾಟಕ ನಿಮ್ಮ ಆದರ್ಶ; ಅಮೆರಿಕ ನಿಮ್ಮ ದೇಹ, ಕರ್ನಾಟಕ ನಿಮ್ಮ ಮನಸ್ಸು - ಇದೊಂದು ತಾಕಲಾಟ. ಈ ತಾಕಲಾಟವನ್ನು ಗೆಲ್ಲುವುದೇ ಕನ್ನಡದ ವಿವೇಕ ಎಂದು ಅವರು ಪ್ರತಿಪಾದಿಸಿದರು. ಕನ್ನಡತನವನ್ನು ಉಳಿಸಿ ಬೆಳೆಸಲು ನೀವಿಲ್ಲಿ ಶ್ರಮಿಸುತ್ತಿದ್ದೀರಿ, ಆ ಕೆಲಸವನ್ನು ನಾವು ಬೆಂಗಳೂರಿನಲ್ಲಿ ಮಾಡಬೇಕಾಗಿದೆ. ನಮ್ಮ ನಾಡಿನ ಚರಿತ್ರೆ ಮತ್ತು ವೈಭವಗಳನ್ನು ಸ್ಮೃತಿಪಟಲದಲ್ಲಿ ಜೀವಂತವಾಗಿಡಲು ಸಂಭ್ರಮಿಸುವುದರ ಜತೆಗೆ ತವರು ಕರ್ನಾಟಕದ ಇವತ್ತಿನ ಸವಾಲುಗಳನ್ನು ಮೆಟ್ಟಿನಿಲ್ಲುವ ತಹತಹ ಕನ್ನಡಿಗನೊಬ್ಬನಿಗೆ ಇರಬೇಕು. ಕರ್ನಾಟಕ ಇತಿಹಾಸದುದ್ದಕ್ಕೂ ಅನೇಕಾನೇಕ ಸವಾಲುಗಳನ್ನು, ಪರಕೀಯರ ದಬ್ಬಾಳಿಕೆಗಳನ್ನು ನುಂಗಿಕೊಂಡು ಬಂದಿದೆ. ಜಗತ್ತಿನ ಜ್ಞಾನ ಜೀವನಶೈಲಿ ಮತ್ತು ಮನೋಧರ್ಮವನ್ನು ತನ್ನತನದ ಒಂದು ಭಾಗವಾಗಿ ಮಾಡಿಕೊಂಡ ವಿಶಿಷ್ಟ ಛಾಪು ಕರ್ನಾಟಕದ್ದು. ಯಾವುದನ್ನು ಸ್ವೀಕರಿಸಬೇಕು ಯಾವುದನ್ನು ನಿರಾಕರಿಸಬೇಕು ಎಂಬ ಔಚಿತ್ಯಪ್ರಜ್ಞೆಯನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡವರು ಕನ್ನಡಿಗರು. ಇದನ್ನು ನಾನು ಕನ್ನಡದ ವಿವೇಕ ಎಂದು ಕರೆಯುತ್ತೇನೆ. ಕನ್ನಡದ ವಿವೇಕವೇ ವಿಶ್ವ ವಿವೇಕವೂ ಹೌದು. ಬರಗೂರರ ನಿರರ್ಗಳ ವಾಗ್ಝರಿಗೆ, ವ್ಯಾಖ್ಯಾನಕ್ಕೆ ನಿಬ್ಬೆರಗಾದ ಅನಿವಾಸಿ ಕನ್ನಡಿಗರು ಎದ್ದುನಿಂತು ಕರತಾಡನ ಮಾಡಿದರು.

ಇದೇ ಸಂದರ್ಭದಲ್ಲಿ , ವಿಶ್ವಕನ್ನಡ ಸಮ್ಮೇಳನವನ್ನು ಆಯೋಜಿಸಿದ ಶ್ರೀಗಂಧ ಕನ್ನಡ ಕೂಟ ಮತ್ತು ಅಕ್ಕ ಪದಾಧಿಕಾರಿಗಳಾದ ರೇಣುಕಾ ರಾಮಪ್ಪ , ಕುದೂರು ಮುರಳಿ ಮತ್ತು ಅಮರನಾಥ ಗೌಡ ಇವರನ್ನು ಕರ್ನಾಟಕ ಸರಕಾರದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಉದ್ಘಾಟನಾ ಸಮಾರಂಭದ ನಂತರ ಸಮ್ಮೇಳನದಲ್ಲಿ ಸಾಹಿತ್ಯ, ಸಂಗೀತ, ಸಿನೆಮಾ, ನೃತ್ಯ ಪ್ರದರ್ಶನ ಕಾರ್ಯಕ್ರಮಗಳು ದಿನವಿಡೀ ನಡೆದುವು. ದಿನದ ಕಾರ್ಯಕ್ರಮಗಳ ಪ್ರಧಾನ ಆಕರ್ಷಣೆಯಾಗಿ ಶನಿವಾರ ಸಂಜೆ 'ಎದೆ ತುಂಬಿ ಹಾಡುವ" ಎಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ತಂಡದವರಿಂದ ಜನಪ್ರಿಯ ಚಲನಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮ ಸಮ್ಮೇಳನಾರ್ಥಿಗಳಿಗೆ ಮುದ ಕೊಟ್ಟಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more